logo
ಕನ್ನಡ ಸುದ್ದಿ  /  ಕರ್ನಾಟಕ  /  Kannada Pustaka Habba: ನ.1ರಿಂದ ರಾಷ್ಟ್ರೋತ್ಥಾನ ಸಾಹಿತ್ಯದ 3ನೇ ಕನ್ನಡ ಪುಸ್ತಕ ಹಬ್ಬ, ಕನ್ನಡ ರಾಜ್ಯೋತ್ಸವ ವಿಶೇಷ ಕಾರ್ಯಕ್ರಮಗಳು

Kannada Pustaka Habba: ನ.1ರಿಂದ ರಾಷ್ಟ್ರೋತ್ಥಾನ ಸಾಹಿತ್ಯದ 3ನೇ ಕನ್ನಡ ಪುಸ್ತಕ ಹಬ್ಬ, ಕನ್ನಡ ರಾಜ್ಯೋತ್ಸವ ವಿಶೇಷ ಕಾರ್ಯಕ್ರಮಗಳು

HT Kannada Desk HT Kannada

Oct 31, 2023 06:43 PM IST

ಬೆಂಗಳೂರಿನ ರಾಷ್ಟ್ರೋತ್ಥಾನ ಸಾಹಿತ್ಯದಿಂದ 3ನೇ ಕನ್ನಡ ಪುಸ್ತಕ ಹಬ್ಬ.

  • ಕನ್ನಡ ರಾಜ್ಯೋತ್ಸವದ ಸಂಭ್ರಮಕ್ಕೆ ಪೂರಕವಾಗಿ ಬೆಂಗಳೂರಿನ ರಾಷ್ಟ್ರೋತ್ಥಾನ ಸಾಹಿತ್ಯ 3ನೇ ವರ್ಷದ ಕನ್ನಡ ಪುಸ್ತಕ ಹಬ್ಬವನ್ನು ಆಯೋಜಿಸಿದೆ. ಇದು ನವೆಂಬರ್ 1ರಿಂದ ಡಿಸೆಂಬರ್ 3ರ ತನಕ ನಡೆಯಲಿದ್ದು, ಈ ಹಬ್ಬದ ವಿವರ ಇಲ್ಲಿದೆ.

ಬೆಂಗಳೂರಿನ ರಾಷ್ಟ್ರೋತ್ಥಾನ ಸಾಹಿತ್ಯದಿಂದ 3ನೇ ಕನ್ನಡ ಪುಸ್ತಕ ಹಬ್ಬ.
ಬೆಂಗಳೂರಿನ ರಾಷ್ಟ್ರೋತ್ಥಾನ ಸಾಹಿತ್ಯದಿಂದ 3ನೇ ಕನ್ನಡ ಪುಸ್ತಕ ಹಬ್ಬ.

ಬೆಂಗಳೂರು: ರಾಷ್ಟ್ರೋತ್ಥಾನ ಸಾಹಿತ್ಯದ 3ನೇ ಕನ್ನಡ ಪುಸ್ತಕ ಹಬ್ಬ ನವೆಂಬರ್ 1 (ಬುಧವಾರ) ರಿಂದ ಡಿಸೆಂಬರ್ 3ರ ತನಕ ನಡೆಯಲಿದೆ. ಈ ಹಬ್ಬಕ್ಕೆ ನವೆಂಬರ್ 1ರಂದು ಬೆಳಗ್ಗೆ 11 ಗಂಟೆಗೆ 'ಸಂಸ್ಕಾರಭಾರತಿ'ಯ ಪ್ರಾಂತ ಅಧ್ಯಕ್ಷ, ಜನಪ್ರಿಯ ನಟ-ನಿರ್ದೇಶಕ ಸುಚೇಂದ್ರಪ್ರಸಾದ್ ಚಾಲನೆ ನೀಡಲಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Bus Accident: ಫ್ಲೈ ಓವರ್‌ಗೆ ಹಾರಿದ ಸಾರಿಗೆ ಬಸ್‌ ಪ್ರಯಾಣಿಕರು ಪಾರಾಗಿದ್ದೇ ರೋಚಕ; ನೆಲಮಂಗಲದಲ್ಲಿ ಸಿನಿಮಾ ಸ್ಟಂಟ್ ನಂತೆ ಸಂಭವಿಸಿದ ಅಪಘಾತ

Hassan Scandal: 100 ಕೋಟಿ ರೂ. ಆಫರ್ ವಿಚಾರವನ್ನು ಎಸ್‌ಐಟಿ ನೋಡಿಕೊಳ್ಳುತ್ತೆ, ದೇವರಾಜೇಗೌಡ ಜೈಲಲ್ಲೇ ಇರ್ತಾರೆ: ಗೃಹ ಸಚಿವ

Hassan Scandal : ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ

Wildlife News: ಹುಲಿ ಉಗುರು ಪ್ರಕರಣ, ವನ್ಯಜೀವಿಗಳ ಅಂಗಾಂಗ ಹಸ್ತಾಂತರ ಇನ್ನಷ್ಟು ವಿಳಂಬ ಸಾಧ್ಯತೆ

ವಿಜಯಕರ್ನಾಟಕ' ಪತ್ರಿಕೆಯ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ ಹಾಗೂ 'ಪ್ರಜ್ಞಾಪ್ರವಾಹ'ದ ರಾಷ್ಟ್ರೀಯ ಸಹ-ಸಂಯೋಜಕರಾದ ರಘುನಂದನ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

33 ದಿನಗಳ ಕನ್ನಡ ಪುಸ್ತಕ ಹಬ್ಬದಲ್ಲಿ ಏನೇನು ಕಾರ್ಯಕ್ರಮ

ರಾಷ್ಟೋತ್ಥಾನ ಸಾಹಿತ್ಯವು ನವೆಂಬರ್ ತಿಂಗಳು ಪೂರ್ತಿ ಆಯೋಜಿಸುತ್ತಿರುವ 'ಕನ್ನಡ ಪುಸ್ತಕ ಹಬ್ಬ' ಈ ಬಾರಿ ನವೆಂಬರ್ 1ರಿಂದ ಡಿಸೆಂಬರ್ 3ರ ವರೆಗೆ ನಡೆಯಲಿದೆ. 33 ದಿನಗಳ ಕಾಲ ನಡೆಯಲಿರುವ ಈ ಹಬ್ಬದಲ್ಲಿ ಪ್ರತಿದಿನ ಬೆಳಗ್ಗೆ 9.00ರಿಂದ ರಾತ್ರಿ 8.00ರವರೆಗೆ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟದ ಜೊತೆಗೆ ವಿವಿಧ ರೀತಿಯ ಸಾಂಸ್ಕೃತಿಕ, ಸಾಹಿತ್ಯಕ ಚಟುವಟಿಕೆಗಳೂ ನಡೆಯಲಿವೆ.

ಕನ್ನಡ ರಾಜ್ಯೋತ್ಸವದ ಪ್ರಯುಕ್ತ 2021ರಿಂದ ನವೆಂಬರ್‌ನಲ್ಲಿ ಒಂದು ತಿಂಗಳ ಕನ್ನಡ ಪುಸ್ತಕ ಪ್ರದರ್ಶನ ಮತ್ತು ಮಾರಾಟವನ್ನು ಆಯೋಜಿಸಿತ್ತು. ಅಲ್ಲಿಂದೀಚೆಗೆ ಪ್ರತಿ ವರ್ಷ ಕನ್ನಡ ಪುಸ್ತಕ ಹಬ್ಬ ನಿರಂತರ ನಡೆದಿದೆ.

ನವೆಂಬರ್ 1ರಿಂದ ಡಿಸೆಂಬರ್ 3ರ ವರೆಗೆ 33 ದಿನಗಳ ಕಾಲ, ಪ್ರತಿದಿನ ಬೆಳಗ್ಗೆ 9.00ರಿಂದ ರಾತ್ರಿ 8.00 ಗಂಟೆಯವರೆಗೆ ನಡೆಯುವ ಪುಸ್ತಕ ಪ್ರದರ್ಶನಕ್ಕೆ ಉಚಿತ ಪ್ರವೇಶ ಇರಲಿದೆ. ಪ್ರತೀ ವಾರಾಂತ್ಯದ ದಿನಗಳಲ್ಲಿ ವಿಶೇಷ ಉಪನ್ಯಾಸ, ಸಂವಾದ ಕಾರ್ಯಕ್ರಮಗಳು ನಡೆಯಲಿದ್ದು, ವಾರದ ದಿನಗಳಲ್ಲಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ಆಯೋಜನೆಗೊಂಡಿವೆ. ಮಕ್ಕಳಿಗಾಗಿ, ಮಹಿಳೆಯರಿಗಾಗಿ ಕೆಲವು ಸ್ಪರ್ಧೆಗಳೂ ನಡೆಯಲಿದ್ದು, ಪುಸ್ತಕಗಳ ಲೋಕಾರ್ಪಣ ಕಾರ್ಯಕ್ರಮಗಳೂ ನಡೆಯಲಿವೆ.

ಈ ಕಾರ್ಯಕ್ರಮಗಳಲ್ಲಿ ಡಾ|| ಗುರುರಾಜ ಕರಜಗಿ, ರವಿ ಹೆಗಡೆ (ಸಂಪಾದಕರು, ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್), ಸ್ವಾಮಿ ನಿತ್ಯಸ್ಥಾನಂದಜೀ ಮಹಾರಾಜ್ (ಅಧ್ಯಕ್ಷರು, ಬೆಂಗಳೂರು ರಾಮಕೃಷ್ಣ ಆಶ್ರಮ), ದಿವಾಕರ ಹೆಗಡೆ, ಡಾ|| ಬಿ. ವಿ. ವಸಂತಕುಮಾರ್, ಡಾ|| ಅಜಕ್ಕಳ ಗಿರೀಶ್ ಭಟ್, ಅದ್ದಂಡ ಕಾರ್ಯಪ್ಪ, ಡಾ|| ಟಿ. ಆರ್. ಅನಂತರಾಮು, ಶತಾವಧಾನಿ ಡಾ|| ಆರ್. ಗಣೇಶ್, ಪ್ರೊ|| ಷಣ್ಮುಖ, ಡಾ|| ವಿ. ಬಿ. ಆರತಿ, ಅಜಿತ್ ಹನಮಕ್ಕನವರ್ ಮೊದಲಾದವರು ಉಪನ್ಯಾಸ, ಸಂವಾದಗಳನ್ನು ನಡೆಸಿಕೊಡಲಿದ್ದಾರೆ.

ಕನ್ನಡ ಪುಸ್ತಕ ಹಬ್ಬದಲ್ಲಿ ಕನಿಷ್ಠ 10% – 50%ರ ವರೆಗೂ ರಿಯಾಯಿತಿ

ಕನ್ನಡ ಪುಸ್ತಕ ಹಬ್ಬದಲ್ಲಿ ರಾಷ್ಟೋತ್ಥಾನ ಸಾಹಿತ್ಯದ ಪ್ರಕಟನೆಗಳಷ್ಟೇ ಅಲ್ಲದೆ, ಕನ್ನಡದ ಪ್ರಮುಖ ಲೇಖಕರ ಕೃತಿಗಳೂ ರಿಯಾಯಿತಿ ದರದಲ್ಲಿ ದೊರೆಯಲಿವೆ. ಕನ್ನಡದ ಬಹುತೇಕ ಎಲ್ಲ ಪ್ರಕಾಶಕರ ಪ್ರಕಟನೆಗಳೂ ಲಭ್ಯವಿರಲಿದ್ದು ಕನಿಷ್ಠ 10% – 50%ರ ವರೆಗೂ ರಿಯಾಯಿತಿ ದೊರೆಯಲಿದೆ. ಪುಸ್ತಕ ಹಬ್ಬಕ್ಕೆ ಭೇಟಿನೀಡುವ ಪ್ರತಿಯೊಬ್ಬರಿಗೂ ಕೂಪನ್ ಭರ್ತಿಮಾಡಿ, ಪ್ರತಿದಿನದ 'ಲಕ್ಕಿ ಡ್ರಾ'ದಲ್ಲಿ ಭಾಗವಹಿಸಲು ಅವಕಾಶವಿದೆ. ಪ್ರತಿದಿನವೂ ಡ್ರಾ ಮಾಡಿ ವಿಜೇತರಿಗೆ 'ಪುಸ್ತಕ ಬಹುಮಾನ' ನೀಡಲಾಗುವುದು ಎಂದು ರಾಷ್ಟ್ರೋತ್ಥಾನ ಸಾಹಿತ್ಯದ ಪ್ರಕಟಣೆ ತಿಳಿಸಿದೆ.

ರಾಷ್ಟ್ರೋತ್ಥಾನ ಸಾಹಿತ್ಯದ ಪುಸ್ತಕಗಳು

'ರಾಷ್ಟ್ರೋತ್ಥಾನ ಸಾಹಿತ್ಯ' ಕಳೆದ ಐವತ್ತೆಂಟು ವರ್ಷಗಳಿಂದ ಕನ್ನಡ ಪುಸ್ತಕ ಪ್ರಕಟನೆಯ ಕ್ಷೇತ್ರದಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸಿಕೊಂಡು ಬಂದಿದೆ. ಇತಿಹಾಸ, ರಾಷ್ಟ್ರೀಯತೆ, ವ್ಯಕ್ತಿತ್ವ ವಿಕಾಸ, ಜೀವನಚರಿತ್ರೆ, ವ್ಯಕ್ತಿಚಿತ್ರಗಳು, ಪರಿಸರ, ಅರ್ಥಶಾಸ್ತ್ರ, ಯೋಗ, ಆರೋಗ್ಯ ಹೀಗೆ ಹಲವು ವಿಷಯ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ವಿವಿಧ ಪ್ರಕಾರಗಳಲ್ಲಿ ಇದುವರೆಗೆ 270ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದೆ. ಮಕ್ಕಳಿಗಾಗಿಯೇ ವಿಶೇಷವಾಗಿ ರೂಪಿಸಲಾದ 'ಭಾರತ-ಭಾರತಿ ಪುಸ್ತಕ ಸಂಪದ'ದ ಮೂಲಕ ಇದುವರೆಗೂ ಕನ್ನಡದಲ್ಲಿ 600 ಪುಸ್ತಕಗಳು ಇಂಗ್ಲಿಷಿನಲ್ಲಿ 225 ಪುಸ್ತಕಗಳು ಪ್ರಕಟವಾಗಿವೆ. ಈ ಪುಸ್ತಕಗಳ ಮೂಲಕ ಮಕ್ಕಳಿಗೆ ಭಾರತದ ಐತಿಹಾಸಿಕ-ಪೌರಾಣಿಕ- ಸಾಹಿತ್ಯಕ-ಸಾಂಸ್ಕೃತಿಕ-ಸಾಮಾಜಿಕ ಮಹಾಪುರುಷರನ್ನು ಪರಿಚಯಿಸುವ ಪ್ರಯತ್ನ ಮಾಡಲಾಗಿದೆ.

ಪುಸ್ತಕ ಪ್ರಕಟನೆಗಳ ಜೊತೆಜೊತೆಗೇ ಅನ್ಯಾನ್ಯ ಪ್ರಕಾಶಕರು ಕಾಲಕಾಲಕ್ಕೆ ಪ್ರಕಟಿಸುವ ಸದಭಿರುಚಿಯ ಸಾಹಿತ್ಯಪ್ರಸಾರದಲ್ಲೂ ರಾಷ್ಟೋತ್ಥಾನ ಸಾಹಿತ್ಯವು ತೊಡಗಿಕೊಂಡಿದ್ದು, ಬೆಂಗಳೂರಿನಲ್ಲಿ 3 ಮಾರಾಟ ಮಳಿಗೆಗಳನ್ನು ಹೊಂದಿದೆ. ಉಪನ್ಯಾಸ, ಸಂವಾದ, ಪುಸ್ತಕ ಲೋಕಾರ್ಪಣ ಕಾರ್ಯಕ್ರಮಗಳು, ಪುಸ್ತಕ ಪ್ರದರ್ಶನ ಮತ್ತು ಮಾರಾಟ, ವಿಚಾರಸಂಕಿರಣ ಹೀಗೆ ಹಲವು ರೀತಿಯ ಚಟುವಟಿಕೆಗಳ ಮೂಲಕ ರಾಜ್ಯದಾದ್ಯಂತ ಕನ್ನಡ ಪುಸ್ತಕಗಳ ಪ್ರಚಾರ-ಪ್ರಸಾರ ಮಾಡುವುದಲ್ಲದೆ, ಸದಭಿರುಚಿಯ ಸಾಹಿತ್ಯ ಓದುಗರನ್ನು ಪ್ರೋತ್ಸಾಹಿಸುವ ಕೆಲಸವನ್ನೂ ರಾಷ್ಟೋತ್ಥಾನ ಸಾಹಿತ್ಯವು ನಿರಂತರವಾಗಿ ನಡೆಸಿಕೊಂಡು ಬಂದಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ