Hassan Scandal : ಪ್ರಜ್ವಲ್ ರೇವಣ್ಣ ಬಂಧನಕ್ಕೆ ವಾರೆಂಟ್ ಹೊರಡಿಸಿದ ಬೆಂಗಳೂರು ನ್ಯಾಯಾಲಯ
May 19, 2024 12:33 AM IST
ಪ್ರಜ್ವಲ್ ರೇವಣ್ಣ ಅವರಿಗೆ ಬಂಧನ ವಾರೆಂಟ್ ಜಾರಿಯಾಗಿದೆ.
- ಹಾಸನ ಸಂಸದ ಪ್ರಜ್ವಲ್ ರೇವಣ್ಣ( Prajwal Revanna) ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನ ನ್ಯಾಯಾಲಯವು ಬಂಧನದ ವಾರೆಂಟ್ ಅನ್ನು ಜಾರಿಗೊಳಿಸಿದೆ.
ಬೆಂಗಳೂರು: ಸತತ ಮೂರು ವಾರಗಳಿಂದ ವಿದೇಶದಲ್ಲಿ ಅಡಗಿಕೊಂಡು ಲೈಂಗಿಕ ದೌರ್ಜನ್ಯದ ಪ್ರಕರಣಗಳ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಬೆಂಗಳೂರಿನ ನ್ಯಾಯಾಲವು ಬಂಧನದ ವಾರೆಂಟ್ ಜಾರಿಗೊಳಿಸಿದೆ. ವಾರೆಂಟ್ ಜಾರಿ ಹಿನ್ನೆಲೆಯಲ್ಲಿ ರೇವಣ್ಣ ಅವರ ಬಂಧನಕ್ಕೆ ರೆಡ್‌ಕಾರ್ನರ್ ನೊಟೀಸ್ ಅನ್ನು ವಿಶೇಷ ತನಿಖಾ ತಂಡ ಜಾರಿಗೊಳಿಸುವ ಸಾಧ್ಯತೆಯಿದೆ. ಈಗಾಗಲೇ ಲುಕ್‌ಔಟ್ ನೊಟೀಸ್ ಹಾಗೂ ಬ್ಲೂಕಾರ್ನರ್ ಮಾಹಿತಿ ಜಾರಿಗೊಳಿಸಲಾಗಿತ್ತು. ಯಾವುದೇ ದೇಶದಲ್ಲಿದ್ದರೂ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಲು ಇದರಿಂದ ಸಹಕಾರಿಯಾಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯದ ಆರೋಪಗಳಿ ಕೇಳಿ ಬರುವ ಮುನ್ನವೇ ಅಂದರೆ ಏಪ್ರಿಲ್ 27ರಂದು ದೇಶದಿಂದ ಪರಾರಿಯಾಗಿದ್ದರು. ಮರುದಿನವೇ ಪ್ರಜ್ವಲ್ ಹಾಗೂ ರೇವಣ್ಣ ವಿರುದ್ದ ಹೊಳೆ ನರಸೀಪುರದಲ್ಲಿ ಲೈಂಗಿಕ ದೌರ್ಜನ್ಯದ ಪ್ರಕರಣಗಳು ದಾಖಲಾಗಿದ್ದವು. ಆನಂತರ ಅತ್ಯಾಚಾರಕ್ಕೆ ಸಂಬಂಧಿಸಿ ಎರಡು ಪ್ರಕರಣಗಳು ಪ್ರಜ್ವಲ್ ವಿರುದ್ದ ದಾಖಲಾಗಿವೆ.
ಆನಂತರ ಎಸ್‌ಐಟಿ ರಚನೆಯಾಗಿ ನೊಟೀಸ್ ಜಾರಿಗೊಳಿಸಿದರೂ ಪ್ರಜ್ವಲ್ ಹಾಜರಾಗದೇ ಒಂದು ವಾರದ ಸಮಯವನ್ನು ವಕೀಲರ ಮೂಲಕ ಕೇಳಿಕೊಂಡಿದ್ದರು. ವಾರದ ನಂತರವೂ ಬಂದಿರಲಿಲ್ಲ. ಈಗಾಗಲೇ ನಿಯಮಾವಳಿಯಂತೆಯೇ ಲುಕ್ ಔಟ್ ನೊಟೀಸ್, ಬ್ಲೂಕಾರ್ನರ್ ನೊಟೀಸ್ ಜಾರಿಗೊಳಿಸಿದ್ದರೂ ಪ್ರಜ್ವಲ್ ಬಂದಿರಲಿಲ್ಲ. ಎರಡು ಬಾರಿ ಟಿಕೆಟ್ ಬುಕ್ ಮಾಡಿಸಿ ರದ್ದು ಮಾಡಿದ್ದು ಕಂಡು ಬಂದಿತ್ತು.
ಈ ಪ್ರಕರಣದಲ್ಲಿ ವಿಚಾರಣೆ ನಡೆಸುತ್ತಿರುವ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯವು ಪ್ರಜ್ವಲ್ ರೇವಣ್ಣ ಅವರ ಪ್ರಕರಣಗಳ ಈವರೆಗಿನ ಸ್ಥಿತಿಗತಿ ವರದಿಯನ್ನು ಕೇಳಿತ್ತು. ಬಳಿಕ ಎಸ್‌ಐಟಿ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅವರು ಈಗಾಗಲೇ ಪ್ರಜ್ವಲ್ ಅವರಿಗೆ ನೊಟೀಸ್‌ಗಳನ್ನು ಜಾರಿಗೊಳಿಸಲಾಗಿದೆ. ಅವರು ವಿಚಾರಣೆಗೂ ಹಾಜರಾಗಿಲ್ಲ. ಅವರ ಬಂಧನಕ್ಕೆ ಜಾರ್ಜ್ ಶೀಟ್ ಅಗತ್ಯವಿಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ವಿಚಾರಣೆ ನಡೆಸಿದ ನ್ಯಾಯಾಧೀಶರು ಪ್ರಜ್ವಲ್ ವಿರುದ್ದ ಅರೆಸ್ಟ್ ವಾರೆಂಟ್ ಜಾರಿಗೊಳಿಸಲು ಸೂಚಿಸಿತು.
ಸಿಬಿಐ ಮೂಲಕ ಮುಂದುವರಿಕೆ
ಈ ಪ್ರಕರಣದಲ್ಲಿ ಇನ್ನು ರೆಡ್‌ಕಾರ್ನರ್ ನೊಟೀಸ್ ಜಾರಿಗೊಳಿಸುವುದು ಬಾಕಿಯಿದೆ. ನ್ಯಾಯಾಲಯವು ಬಂಧನ ವಾರೆಂಟ್‌ಗೆ ಅನುಮತಿ ನೀಡಿರುವುದರಿಂದ ಈಗ ರೆಡ್‌ಕಾರ್ನರ್ ನೊಟೀಸ್ ಜಾರಿ ಸುಲಭವಾಗಲಿದೆ. ಇದಕ್ಕಾಗಿ ಸಿಬಿಐ ನೆರವನ್ನು ಕರ್ನಾಟಕ ವಿಶೇಷ ತನಿಖಾ ತಂಡ ಪಡೆಯಬೇಕಾಗುತ್ತದೆ. ಸಿಬಿಐ ಮೂಲಕವೇ ರೆಡ್ ಕಾರ್ನರ್‌ನೊಟೀಸ್ ಜಾರಿಯಾಗಲಿದೆ. ಇದಾದ ನಂತರ ಇಂಟರ್ ಪೋಲ್ ನೆರವಿನೊಂದಿಗೆ ಪ್ರಜ್ವಲ್ ಇರುವಿಕೆ ಪತ್ತೆ ಮಾಡಿ ಬಂಧಿಸಲು ಸಹಕಾರಿಯಾಗಲಿದೆ ಎನ್ನುವುದು ಪೊಲೀಸ್ ಮೂಲಗಳ ವಿವರಣೆ.
ಇದಲ್ಲದೇ ಪ್ರಜ್ವಲ್ ರೇವಣ್ಣ ಸಂಸದರಾಗಿರುವ ಕಾರಣದಿಂದ ಹೊಂದಿರುವ ಡಿಪ್ಲೊಮೆಟಿಕ್ ಪಾಸ್‌ಪೋರ್ಸ್ ಕೂಡ ರೆಡ್‌ಕಾರ್ನರ್ ನೊಟೀಸ್ ಜಾರಿಯಾದರೆ ರದ್ಧಾಗಲಿದೆ. ಆಗ ಪಾಸ್‌ಪೋರ್ಟ್ ಇಲ್ಲದೇ ಬಂಧನವೂ ಸುಲಭವಾಗಬಹುದು ಎನ್ನಲಾಗುತ್ತಿದೆ.
ಮಾಹಿತಿ ಸಂಗ್ರಹ
ಮತ್ತೊಂದೆಡೆ ತಲೆ ಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣ ಎಲ್ಲಿದ್ದಾರೆ ಎನ್ನುವ ಕುರಿತಾಗಿ ಎಸ್‌ಐಟಿಯ ತಂಡವೊಂದು ಮಾಹಿತಿ ಕಲೆ ಹಾಕುತ್ತಿದೆ. ರೇವಣ್ಣ ಖಾತೆಗಳ ಮೂಲಕ ಹಣದ ವಹಿವಾಟು ನಡೆದಿರುವ ಕುರಿತಾಗಿಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಎಸ್‌ಐಟಿಗೆ ಲಭಿಸಿರುವ ಮಾಹಿತಿಯ ಪ್ರಕಾರ ಪ್ರಜ್ವಲ್ ರೇವಣ್ಣ ಜರ್ಮನಿಯಿಂದ ಲಂಡನ್‌ಗೆ ತೆರಳಿರುವ ಮಾಹಿತಿಯಿದೆ. ಅಲ್ಲಿರುವ ಇಬ್ಬರು ಸ್ನೇಹಿತರೊಂದಿಗೆ ರೈಲಿನಲ್ಲಿ ಸಂಚರಿಸಿದ್ದಾರೆ ಎನ್ನಲಾಗುತ್ತಿದ್ದು. ಇನ್ನಷ್ಟು ವಿವರ ಕಲೆ ಹಾಕಲಾಗುತ್ತಿದೆ.
ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.