logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಕಬ್ಬನ್ ಪಾರ್ಕ್ 10 ಮಹಡಿ ಕಟ್ಟಡ ನಿರ್ಮಾಣ; ಪ್ರತಿಭಟನೆ ಕಾರಣ ನಿರ್ಧಾರ ಕೈಬಿಟ್ಟ ಸರ್ಕಾರ

ಬೆಂಗಳೂರು ಕಬ್ಬನ್ ಪಾರ್ಕ್ 10 ಮಹಡಿ ಕಟ್ಟಡ ನಿರ್ಮಾಣ; ಪ್ರತಿಭಟನೆ ಕಾರಣ ನಿರ್ಧಾರ ಕೈಬಿಟ್ಟ ಸರ್ಕಾರ

Umesh Kumar S HT Kannada

Feb 13, 2024 11:40 AM IST

google News

ಬೆಂಗಳೂರು ಕಬ್ಬನ್ ಪಾರ್ಕ್‌ನಲ್ಲಿ 10 ಮಹಡಿ ಕಟ್ಟಡ ನಿರ್ಮಾಣ ವಿರೋಧಿಸಿ ಪ್ರತಿಭಟನೆ ಕಾರಣ ನಿರ್ಧಾರವನ್ನು ಸರ್ಕಾರ ಕೈಬಿಟ್ಟಿದೆ. ಇನ್ನೊಂದೆಡೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ 6 ಪಥದ ಹೆದ್ದಾರಿ ನಿರ್ಮಾಣಕ್ಕೂ ವಿರೋಧ ವ್ಯಕ್ತವಾಗಿದೆ.

  • ಬೆಂಗಳೂರು ಕಬ್ಬನ್ ಪಾರ್ಕ್ 10 ಮಹಡಿ ಕಟ್ಟಡ ನಿರ್ಮಾಣ ಮಾಡಲು ಕರ್ನಾಟಕ ಸರ್ಕಾರ ಮುಂದಾಗಿತ್ತು. ಈ ಯೋಜನೆ ಘೋಷಿಸಿದ ಬೆನ್ನಿಗೆ ಪ್ರತಿಭಟನೆ ವ್ಯಕ್ತವಾದ ಕಾರಣ ನಿರ್ಧಾರವನ್ನು ಸರ್ಕಾರ ಕೈಬಿಟ್ಟಿದೆ. 10 ಮಹಡಿ ಕಟ್ಟಡ ನಿರ್ಮಾಣಕ್ಕೆ ಬೇರೆ ಜಾಗ ಹುಡುಕಾಟ ಶುರುಮಾಡಿದೆ.

ಬೆಂಗಳೂರು ಕಬ್ಬನ್ ಪಾರ್ಕ್‌ನಲ್ಲಿ 10 ಮಹಡಿ ಕಟ್ಟಡ ನಿರ್ಮಾಣ ವಿರೋಧಿಸಿ ಪ್ರತಿಭಟನೆ ಕಾರಣ ನಿರ್ಧಾರವನ್ನು ಸರ್ಕಾರ  ಕೈಬಿಟ್ಟಿದೆ. ಇನ್ನೊಂದೆಡೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ 6 ಪಥದ ಹೆದ್ದಾರಿ ನಿರ್ಮಾಣಕ್ಕೂ ವಿರೋಧ ವ್ಯಕ್ತವಾಗಿದೆ.
ಬೆಂಗಳೂರು ಕಬ್ಬನ್ ಪಾರ್ಕ್‌ನಲ್ಲಿ 10 ಮಹಡಿ ಕಟ್ಟಡ ನಿರ್ಮಾಣ ವಿರೋಧಿಸಿ ಪ್ರತಿಭಟನೆ ಕಾರಣ ನಿರ್ಧಾರವನ್ನು ಸರ್ಕಾರ ಕೈಬಿಟ್ಟಿದೆ. ಇನ್ನೊಂದೆಡೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ 6 ಪಥದ ಹೆದ್ದಾರಿ ನಿರ್ಮಾಣಕ್ಕೂ ವಿರೋಧ ವ್ಯಕ್ತವಾಗಿದೆ. (PC @Bnglrweatherman)

ಬೆಂಗಳೂರು: ಕಬ್ಬನ್ ಪಾರ್ಕ್‌ನ ಆವರಣದಲ್ಲಿರುವ ಹಳೆಯ ಚುನಾವಣಾ ಆಯೋಗದ ಕಚೇರಿ ಜಾಗದಲ್ಲಿ 10 ಅಂತಸ್ತಿನ ಸಂಕೀರ್ಣ ನಿರ್ಮಿಸುವ ಪ್ರಸ್ತಾವನೆಯನ್ನು ಕರ್ನಾಟಕ ಸರ್ಕಾರ ಅಂಗೀಕರಿಸಿದೆ. ಆದರೆ ಈ ಯೋಜನೆಗೆ ಪ್ರತಿಭಟನೆ ವ್ಯಕ್ತವಾದ ಕಾರಣ, ಈಗ 10 ಅಂತಸ್ತಿನ ಸಂಕೀರ್ಣ ನಿರ್ಮಾಣಕ್ಕೆ ಹೊಸ ಜಾಗ ಹುಡುಕಲು ಮುಂದಾಗಿದೆ.

ಪ್ರಸ್ತಾವನೆಯ ಪ್ರಕಾರ, ಕಬ್ಬನ್ ಪಾರ್ಕ್‌ನಲ್ಲಿ ಪ್ರೆಸ್‌ಕ್ಲಬ್‌ಗೆ ತಾಗಿಕೊಂಡಿರುವ ಚುನಾವಣಾ ಆಯೋಗದ ಕಚೇರಿಯ ಹಳೆಯ ಕಟ್ಟಡ ತೆರವುಗೊಳಿಸಿ ಅಲ್ಲಿ 10 ಅಂತಸ್ತಿನ ಕಟ್ಟಡ ನಿರ್ಮಿಸಲು ತೀರ್ಮಾನಿಸಲಾಗಿತ್ತು. ಇದು ಹೈಕೋರ್ಟ್‌ ಆವರಣದಲ್ಲೇ ಇದೆ. ಇದಕ್ಕೆ ಕಬ್ಬನ್ ಪಾರ್ಕ್‌ನ ಕಾಲ್ನಡಿಗೆಗಾರರ ಗುಂಪು ವಿರೋಧ ವ್ಯಕ್ತಪಡಿಸಿದೆ. ಅದೇ ರೀತಿ ರಾಜಕೀಯವಾಗಿ ಬಿಜೆಪಿಯಿಂದಲೂ ಪ್ರತಿಭಟನೆ ವ್ಯಕ್ತವಾಗಿದೆ.

ಬೃಹತ್ ಸಂಕೀರ್ಣ ನಿರ್ಮಾಣಕ್ಕೆ ಮರ ಕಡಿಯಲು ವಿರೋಧ

ಬೃಹತ್ ಸಂಕೀರ್ಣ ನಿರ್ಮಾಣ ಮಾಡಬೇಕಾದರೆ ಅಲ್ಲಿ ಬಹಳ‍ಷ್ಟು ಮರಗಳನ್ನು ಕಡಿಯಬೇಕಾಗಬಹುದು ಎಂಬ ಕಾರಣಕ್ಕೆ ಜನ ವಿರೋಧ ವ್ಯಕ್ತಪಡಿಸತೊಡಗಿದ್ದಾರೆ.

ಕಬ್ಬನ್ ಪಾರ್ಕಿನಲ್ಲಿ ಯಾವುದೇ ಮರಗಳನ್ನು ಕಡಿಯದೇ ಕಟ್ಟಡ ನಿರ್ಮಿಸುವುದಾದರೆ ಅದಕ್ಕೆ ಅಡ್ಡಿ ಇಲ್ಲ ಎಂದು ಕರ್ನಾಟಕ ಹೈಕೋರ್ಟ್‌ 2019ರಲ್ಲಿ ತೀರ್ಪು ನೀಡಿತ್ತು. ಪ್ರಸ್ತಾವಿತ ಕಟ್ಟಡ ನಿರ್ಮಾಣದಿಂದ ಸಂಚಾರ ದಟ್ಟಣೆ ಮತ್ತು ಪರಿಸರಕ್ಕೆ ಹಾನಿ ಎಂದು ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲೂ ಪ್ರತಿರೋಧ

ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ.ಮೋಹನ್ ಅವರು ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಕಬ್ಬನ್ ಪಾರ್ಕ್‌ನಲ್ಲಿ 10 ಅಂತಸ್ತಿನ ಅನೆಕ್ಸ್ ನಿರ್ಮಿಸುವ ಕಾಂಗ್ರೆಸ್ ಸರ್ಕಾರದ ಪ್ರಸ್ತಾವನೆಯು ನಮ್ಮ ನಗರದ ಹಸಿರಿಗೆ ಧಕ್ಕೆಯಾಗಿದೆ. ಬೆಂಗಳೂರಿನ ಅಚ್ಚುಮೆಚ್ಚಿನ ಶ್ವಾಸಕೋಶದ ಜಾಗವನ್ನು ರಕ್ಷಿಸಬೇಕು. ಕಾಂಕ್ರೀಟ್ ದೈತ್ಯಾಕಾರದಿಂದ ಉಸಿರುಗಟ್ಟಿಸಬಾರದು. ಪ್ರತಿಯೊಬ್ಬ ಬೆಂಗಳೂರಿಗರು ಈ ಹಸಿರು ನರಮೇಧವನ್ನು ಕಟುವಾಗಿ ವಿರೋಧಿಸಬೇಕು ಮತ್ತು ನಿಲ್ಲಿಸಬೇಕು ಎಂದು ಹೇಳಿದ್ದಾರೆ.

ಇದೇ ವೇಳೆ, ಉದ್ಯಮಿ ಕಿರಣ್ ಮಜುಂದಾರ್ ಶಾ ಅವರು ಕೂಡ ಟ್ವೀಟ್ ಮಾಡಿದ್ದು, ಪರಿಸರಕ್ಕೆ ಹಾನಿಯುಂಟುಮಾಡುವ ಕಟ್ಟಡಗಳನ್ನು ನಿರ್ಮಿಸುವ ಬದಲು ಆನ್‌ಲೈನ್ ಮತ್ತು ವರ್ಚುವಲ್ ನ್ಯಾಯಾಲಯ ವ್ಯವಸ್ಥೆಗಳನ್ನು ಬಳಸುವಂತಹ ಚಿಂತನೆಯ ವಿಧಾನವನ್ನು ಹೈಕೋರ್ಟ್‌ಗಳು ಅಳವಡಿಸಿಕೊಳ್ಳಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಬೆಂಗಳೂರು ಉಳಿಸಿ ಅಭಿಯಾನ

ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಮೇಲೆ 6 ಲೇನ್ ಫ್ಲೈಓವರ್ ನಿರ್ಮಾಣದ ಪ್ರಸ್ತಾವನೆ ಇದ್ದು, ಅದಕ್ಕೂ ಸಾರ್ವಜನಿಕರಿಂದ, ಪರಿಸರ ಪ್ರೇಮಿಗಳಿಂದ ವಿರೋಧ ವ್ಯಕ್ತವಾಗಿದೆ.

ಪ್ರಸ್ತಾವಿತ ಯೋಜನೆಗಾಗಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ 1288 ಮರಗಳನ್ನು ಕಡಿಯಬೇಕಾಗುತ್ತದೆ. ಹೀಗಾಗಿ, ಪ್ರಸ್ತಾವಿತ 6-ಲೇನ್ ಫ್ಲೈಓವರ್ ಅನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದೊಳಗೆ ನಿರ್ಮಿಸುವುದನ್ನು ಕೈಬಿಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇದೇ ರೀತಿ, ಕಬ್ಬನ್ ಪಾರ್ಕ್‌ ಬೆಂಗಳೂರಿಗೆ ಆಮ್ಲಜನಕ ಒದಗಿಸುವ ಅತಿದೊಡ್ಡ ಪ್ರದೇಶ. ಅಲ್ಲಿ ಕಟ್ಟಡ ನಿರ್ಮಾಣ ಮಾಡುವುದನ್ನು ನಿಲ್ಲಿಸಬೇಕು. ಸರ್ಕಾರವು 1975 ರಲ್ಲಿ ಕರ್ನಾಟಕ ಸರ್ಕಾರಿ ಉದ್ಯಾನವನ (ಸಂರಕ್ಷಣೆ) ಕಾಯ್ದೆಯನ್ನು ತಂದಾಗಿನಿಂದ ಕಬ್ಬನ್ ಪಾರ್ಕ್‌ನಲ್ಲಿ ಯಾವುದೇ ನಿರ್ಮಾಣ ಚಟುವಟಿಕೆಗಳು ನಡೆದಿಲ್ಲ. ಇದರ ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

(This copy first appeared in Hindustan Times Kannada website. To read more like this please logon to kannada.hindustantime.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ