logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ನೀರಿನ ಸಮಸ್ಯೆಗೆ ಪರಿಹಾರ ಉಪಕ್ರಮ ಪ್ರಕಟಿಸಿದ ಜಲ ಮಂಡಳಿಗೆ ಪ್ರತಿ ತಿಂಗಳು 15 ಕೋಟಿ ರೂ ಕೊರತೆ

ಬೆಂಗಳೂರು ನೀರಿನ ಸಮಸ್ಯೆಗೆ ಪರಿಹಾರ ಉಪಕ್ರಮ ಪ್ರಕಟಿಸಿದ ಜಲ ಮಂಡಳಿಗೆ ಪ್ರತಿ ತಿಂಗಳು 15 ಕೋಟಿ ರೂ ಕೊರತೆ

Umesh Kumar S HT Kannada

Mar 29, 2024 03:08 PM IST

google News

ಬೆಂಗಳೂರು ಜಲ ಮಂಡಳಿ ಕಚೇರಿ ಮತ್ತು ಲೋಗೋ (ಸಾಂಕೇತಿಕ ಚಿತ್ರ)

  • ಬೆಂಗಳೂರಿನ ನೀರಿನ ಸಮಸ್ಯೆ ಒಂದೆಡೆ ತೀವ್ರವಾಗಿದೆ. ಇದನ್ನು ನಿರ್ವಹಿಸುವುದಕ್ಕಾಗಿ ಬೆಂಗಳೂರು ಜಲ ಮಂಡಳಿಯು ತನ್ನ ಆದಾಯ ಮೀರಿದ ಚಟುವಟಿಕೆಗಳನ್ನು ಹೊಂದಿದ್ದು, ಹೊಸ ಯೋಜನೆ, ಉಪಕ್ರಮಗಳಿಗೆ ಹಣ ಹೊಂದಿಸುವ ವಿಚಾರ ಮುನ್ನೆಲೆಗೆ ಬಂದಿದೆ.

ಬೆಂಗಳೂರು ಜಲ ಮಂಡಳಿ ಕಚೇರಿ ಮತ್ತು ಲೋಗೋ (ಸಾಂಕೇತಿಕ ಚಿತ್ರ)
ಬೆಂಗಳೂರು ಜಲ ಮಂಡಳಿ ಕಚೇರಿ ಮತ್ತು ಲೋಗೋ (ಸಾಂಕೇತಿಕ ಚಿತ್ರ)

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನ ನೀರಿನ ಸಮಸ್ಯೆ ಈ ಬಾರಿ ಗಂಭೀರವಾಗಿದ್ದು, ಜನ ಪರದಾಡುವಂತಾಗಿದೆ. ಬೆಂಗಳೂರು ಸ್ಥಳೀಯಾಡಳಿತ ಸಂಸ್ಥೆ ಬಿಬಿಎಂಪಿಗೆ ಚುನಾವಣೆ ಆಗಿಲ್ಲದ ಕಾರಣ, ಅಧಿಕಾರಿಗಳೇ ಎಲ್ಲವನ್ನೂ ಗಮನಿಸುತ್ತಿದ್ದು, ರಾಜ್ಯ ಸರ್ಕಾರ ಕೂಡ ಮುತುವರ್ಜಿವಹಿಸುತ್ತಿದೆ.

ಈ ನಡುವೆ, ಬೆಂಗಳೂರಿನ ಬೀಕರ ನೀರಿನ ಸಮಸ್ಯೆಯ ಪರಿಹಾರಕ್ಕಾಗಿ ಅನೇಕ ಉಪಕ್ರಮಗಳನ್ನು ರಾಜ್ಯ ಸರ್ಕಾರ, ಬಿಬಿಎಂಪಿ, ಬೆಂಗಳೂರು ಜಲ ಮಂಡಳಿಗಳು ಘೋಷಿಸಿವೆ. ಬೆಂಗಳೂರಿನ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ ಮೇಲೆ ನಿಗಾವಹಿಸುವ ಬೆಂಗಳೂರು ಜಲ ಮಂಡಳಿಯ ಹೊಣೆಗಾರಿಕೆ ಹೆಚ್ಚು. ಹೀಗಾಗಿ ಅದು ಹೊಸದಾಗಿ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಕೆರೆಗಳಿಗೆ ನೀರು ತುಂಬಿಸುವುದು, ಸಮುದಾಯ ಮಳೆ ನೀರು ಕೊಯ್ಲು ಸೇರಿ ಹಲವು ಉಪಕ್ರಮಗಳನ್ನು ಘೋ‍ಷಿಸಿದೆ.

ವಿಶೇಷ ಎಂದರೆ ಬಿಬಿಎಂಪಿ ಈ ಸಲದ ಬಜೆಟ್‌ನಲ್ಲಿ ಬೆಂಗಳೂರಿನ ನೀರಿನ ಸಮಸ್ಯೆ ಪರಿಹಾರಕ್ಕೆ ಎಂದು 131 ಕೋಟಿ ರೂಪಾಯಿ ಮೀಸಲಿಟ್ಟಿದೆ. ಕೊಳವೆ ಬಾವಿ ಕೊರೆಯಿಸುವುದಕ್ಕೆ ಬೆಂಗಳೂರು ಜಲಮಂಡಳಿಗೆ ಸೂಚಿಸಿದೆ. ಆರ್ಥಿಕ ಸಂಕಷ್ಟದಲ್ಲಿರುವ ಬೆಂಗಳೂರ ಜಲಮಂಡಳಿಯ ಮೇಲೆ ಬೆಂಗಳೂರಿನ ಒಂದೂವರೆ ಕೋಟಿ ನಾಗರಿಕರಿಗೆ ಕುಡಿಯುವ ನೀರು ಪೂರೈಸುವ ಹೊಣೆಗಾರಿಕೆ ಇದೆ.

ಹೊಸ ಉಪಕ್ರಮ ಜಾರಿಗೊಳಿಸಲು ಜಲ ಮಂಡಳಿ ಬಳಿ ಹಣವಿದೆಯೇ

ಸಂಸ್ಕರಿಸಿದ ನೀರು ಕೆರೆಗಳಿಗೆ ತುಂಬಿಸಿ ಅಂತರ್ಜಲ ವೃದ್ಧಿಗೆ ಯೋಜನೆ  ರೂಪಿಸುತ್ತೇವೆ, ಸಮುದಾಯ ಮಳೆ ನೀರು ಕೊಯ್ತು ಯೋಜನೆ ಅನುಷ್ಠಾನ ಮಾಡುತ್ತೇವೆ, ಹೊಸ ತಂತ್ರಜ್ಞಾನ ಬಳಸುತ್ತೇವೆ ಎಂದೆಲ್ಲ ಹೇಳುತ್ತಿರುವ ಬೆಂಗಳೂರು ಜಲ ಮಂಡಳಿಗೆ ಇದಕ್ಕೆಲ್ಲ ಹಣ ಎಲ್ಲಿಂದ ಬರುತ್ತದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ.

ಆದಾಗ್ಯೂ, ಸಾಮಾಜಿಕ ಕಾರ್ಪೊರೇಟ್ ಹೊಣೆಗಾರಿಕೆ ಮೂಲಕ ಕೆಲವು ಉಪಕ್ರಮ ಜಾರಿಗೊಳಿಸಲು ಜಲ ಮಂಡಳಿ ಉತ್ಸಾಹ ತೋರಿದೆ ಎಂದು ಹೇಳಲಾಗುತ್ತಿದೆಯಾದರೂ, ಪ್ರತಿ ತಿಂಗಳ ಕೆಲಸ ಕಾರ್ಯಗಳ ನಿರ್ವಹಣೆಯೇ ಕಷ್ಟವಾಗಿದೆ. ಇದಕ್ಕೆ ಹಣದ ಕೊರತೆ ಸದಾ ಕಾಡುತ್ತಿದೆ.

ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಮಾನದಂಡ ಪ್ರಕಾರವೇ ಬೆಂಗಳೂರಿನಲ್ಲಿ 32 ತ್ಯಾಜ್ಯ ನೀರು ಶುದ್ಧೀಕರಣ ಘಟಕ ಸ್ಥಾಪಿಸಲಾಗಿದೆ. ಇದರ ನಿರ್ವಹಣೆ, ಕೆಲವು ಘಟಕಗಳ ಉನ್ನತೀಕರಣಕ್ಕೂ ಬೆಂಗಳೂರು ಜಲ ಮಂಡಳಿ ಬಳಿ ಹಣವಿಲ್ಲ. ಹೀಗಾಗಿ, ಹಂತ ಹಂತವಾಗಿ ಮೇಲ್ದರ್ಜೆ ಏರಿಸುವ ಕಾರ್ಯ ಮಾಡುತ್ತಿದೆ. ಹೀಗಿರುವಾಗ ಹೊಸ ಯೋಜನೆಗಳಿಗೆ ಎಲ್ಲಿಂದ ಹಣ ತೆಗೆದುಕೊಂಡು ಬರಲಿದೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

ಬೆಂಗಳೂರು ಜಲ ಮಂಡಳಿಗೆ ಪ್ರತಿ ತಿಂಗಳೂ 15 ಕೋಟಿ ಕೊರತೆ

ಬೆಂಗಳೂರು ಜಲ ಮಂಡಳಿಯು ಮಹಾನಗರದಲ್ಲಿ ಜಲಮಂಡಳಿಯು 10 ಲಕ್ಷಕ್ಕೂ ಹೆಚ್ಚು ನೀರಿನ ಸಂಪರ್ಕಗಳನ್ನು ಹೊಂದಿದೆ. ನೀರಿನ ಶುಲ್ಕದ ರೂಪದಲ್ಲಿ ತಿಂಗಳಿಗೆ 131 ಕೋಟಿ ರೂಪಾಯಿಯನ್ನು ಜಲ ಮಂಡಳಿ ಸಂಗ್ರಹಿಸುತ್ತಿದೆ. ಇದರಲ್ಲಿ 68 ಕೋಟಿ ರೂಪಾಯಿ ವಿದ್ಯುತ್ ಬಿಲ್‌ಗೆ ಪಾವತಿ ಮಾಡುತ್ತಿದೆ. ಇನ್ನು 40 ಕೋಟಿ ರೂಪಾಯಿ ಅಧಿಕಾರಿ, ಸಿಬ್ಬಂದಿ ವೇತನಕ್ಕೆ ವ್ಯಯವಾಗುತ್ತಿದೆ. ಉಳಿದಂತೆ 10 ಕೋಟಿ ರೂಪಾಯಿ ಸಾಲ ಮರುಪಾವತಿಗೆ ಹೋಗುತ್ತದೆ. ಎಸ್‌ಟಿಪಿಗಳ ನಿರ್ವಹಣೆಗಾಗಿ 15 ಕೋಟಿ ರೂಪಾಯಿ ಖರ್ಚಾಗುತ್ತದೆ.

ಇನ್ನು ಬೆಂಗಳೂರು ಜಲ ಮಂಡಳಿಯ ಕಚೇರಿ ನಿರ್ವಹಣೆ, ಆಡಳಿತಕ್ಕೆ 2 ಕೋಟಿ ರೂಪಾಯಿ, ನೀರು ಸಂಸ್ಕರಣಾ ಘಟಕದ ನಿರ್ವಹಣೆಗೆ 2.5 ಕೋಟಿ ರೂಪಾಯಿ, ಇತರೆ ನಿರ್ವಹಣಾ ವೆಚ್ಚಕ್ಕೆ 7.5 ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ. ಇವೆಲ್ಲವನ್ನೂ ಲೆಕ್ಕಹಾಕಿದರೆ, ಮಂಡಳಿಗೆ ಬರುತ್ತಿರುವ 131 ಕೋಟಿ ರೂಪಾಯಿ ಆದಾಯಕ್ಕಿಂತ 15 ಕೋಟಿ ರೂಪಾಯಿ ಹೆಚ್ಚು ಖರ್ಚು ಆಗುತ್ತಿರುವು ಕಂಡುಬಂದಿದೆ. ಹೀಗಾಗಿ ನಿರ್ವಹಣೆಗೆ ಸಂಬಂಧಿಸಿದ ಹಣ ಪಾವತಿ ಎರಡು ತಿಂಗಳು ವಿಳಂಬವಾಗಿ ಪಾವತಿಯಾಗುತ್ತಿದೆ ಎಂದು ಜಲ ಮಂಡಳಿ ಮೂಲಗಳು ತಿಳಿಸಿವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ