ಲೋಕಸಭಾ ಚುನಾವಣೆ ನಾಳೆ ಮತದಾನ, ಬೆಂಗಳೂರಲ್ಲಿ ಇಂದು ಸಂಚಾರ ದಟ್ಟಣೆ, ಸುಗಮ ಸಂಚಾರಕ್ಕೆ ಪರ್ಯಾಯ ಮಾರ್ಗ ಸಲಹೆ ನೀಡಿದ ಪೊಲೀಸರು
May 06, 2024 11:47 AM IST
ಲೋಕಸಭಾ ಚುನಾವಣೆ ನಾಳೆ ಮತದಾನ ಇರುವ ಕಾರಣ ಬೆಂಗಳೂರಲ್ಲಿ ಇಂದು ಸಂಚಾರ ದಟ್ಟಣೆ ಉಂಟಾಗಲಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಎಚ್ಚರಿಸಿದ್ದಾರೆ.
ಲೋಕಸಭಾ ಚುನಾವಣೆ ನಾಳೆ (ಮೇ 7) ಮತದಾನ ನಡೆಯಲಿದ್ದು, ಊರಿಗೆ ಹೋಗುವವರು ಮೆಜೆಸ್ಟಿಕ್ ಕಡೆಗೆ ಹೋಗುತ್ತಿರುವ ಕಾರಣ ಬೆಂಗಳೂರಲ್ಲಿ ಇಂದು ಸಂಚಾರ ದಟ್ಟಣೆ ಉಂಟಾಗಲಿದೆ. ಹೀಗಾಗಿ ಸುಗಮ ಸಂಚಾರಕ್ಕೆ ಪರ್ಯಾಯ ಮಾರ್ಗದ ಸಲಹೆಯನ್ನು ಪೊಲೀಸರು ನೀಡಿದ್ದಾರೆ.
ಬೆಂಗಳೂರು: ಲೋಕಸಭೆ ಚುನಾವಣೆ ಕರ್ನಾಟಕದಲ್ಲಿ ಎರಡನೇ ಹಂತದ ಮತದಾನ ನಾಳೆ (ಮೇ 7) ನಡೆಯಲಿದ್ದು, ಬೆಂಗಳೂರಿನಲ್ಲಿರುವ ವಿವಿಧ ಜಿಲ್ಲೆಯವರು ಇದಕ್ಕಾಗಿ ಊರಿಗೆ ಹೊರಟಿದ್ದಾರೆ. ಹೀಗಾಗಿ ಸಂಚಾರ ದಟ್ಟಣೆ ಉಂಟಾಗಲಿದ್ದು, ಸುಗಮ ಸಂಚಾರಕ್ಕೆ ಪರ್ಯಾಯ ಮಾರ್ಗ ಬಳಸುವಂತೆ ಬೆಂಗಳೂರು ಸಂಚಾರ ಪೊಲೀಸರು ಸಲಹೆ ನೀಡಿದ್ದಾರೆ.
ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ನಾಳೆ (ಮೇ 7) ಮತದಾನ ನಡೆಯಲಿದೆ. ಭಾರತೀಯ ರೈಲ್ವೆ ಹೆಚ್ಚುವರಿ ರೈಲು ಸಂಚಾರ, ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್ ಸಂಚಾರ ವ್ಯವಸ್ಥೆ ಮಾಡಿದ್ದು, ಲೋಕಸಭಾ ಚುನಾವಣೆ ನಿಮಿತ್ತ ಸಾರ್ವಜನಿಕರು ಸ್ವಂತ ಊರುಗಳಿಗೆ ತೆರಳಲು ಮೆಜೆಸ್ಟಿಕ್/ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಆಗಮಿಸುತ್ತಿದ್ದಾರೆ. ಹೀಗಾಗಿ, ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣೆಯ ವ್ಯಾಪ್ತಿಯ ಮೆಜೆಸ್ಟಿಕ್ ಸುತ್ತಮುತ್ತ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು/ವಾಹನ ಸವಾರರು ಬದಲಿ ರಸ್ತೆ ಮಾರ್ಗವನ್ನು ಬಳಿಸಿಕೊಂಡು ತೆರಳುವಂತೆ ಬೆಂಗಳೂರು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
ಬೆಂಗಳೂರು ಟ್ರಾಫಿಕ್ ಬದಲಿ/ಪರ್ಯಾಯ ಮಾರ್ಗ
1) ಜೆ.ಸಿ. ರಸ್ತೆ ಮತ್ತು ರಾಜಾರಾಮಮೋಹನ್ ರಾಯ್ ರಸ್ತೆ ಕಡೆಯಿಂದ ಮೈಸೂರು ಬ್ಯಾಂಕ್ ಮೂಲಕ ರಾಜಾಜೀನಗರಕ್ಕೆ ಹೋಗುವವರು ಬದಲಿ ಮಾರ್ಗವಾದ ಪ್ಯಾಲೇಸ್ ರಸ್ತೆ, ಚಾಲುಕ್ಯ ಸರ್ಕಲ್, ರೇಸ್ ಕೋರ್ಸ್ ರಸ್ತೆ ಮೂಲಕ ತೆರಳಬಹುದು.
2) ರಾಜಾರಾಮಮೋಹನ್ ರಾಯ್ ರಸ್ತೆ ಮಾಗಡಿ ರಸ್ತೆಗೆ ಕಡೆಗೆ ಹೋಗುವವರು ಹಡನ್ ಸರ್ಕಲ್, ಕೆ.ಜಿ.ರಸ್ತೆಗೆ ಬರುವ ಬದಲು ಎನ್.ಆರ್. ವೃತ್ತ, ಟೌನ್ ವೃತ್ತ, ಮಾರ್ಕೆಟ್ ಸರ್ಕಲ್ ರಾಯನ್ ಸರ್ಕಲ್, ಸಿರ್ಸಿ ಸರ್ಕಲ್ ಮೂಲಕ ಮಾಗಡಿ ರಸ್ತೆಗೆ ತೆರಳಬಹುದು.
ಭಾರತೀಯ ರೈಲ್ವೆಯಿಂದ ವಿಶೇಷ ರೈಲು ಸಂಚಾರ
ನೈಋತ್ಯ ರೈಲ್ವೆ ಕೆಎಸ್‌ಆರ್ ಬೆಂಗಳೂರು ಮತ್ತು ಹುಬ್ಬಳ್ಳಿ ನಡುವೆ ಸೋಮವಾರ (ಮೇ 6) ವಿಶೇಷ ರೈಲು ಸಂಚಾರ ಒದಗಿಸಿದೆ. ರೈಲು ಸಂಖ್ಯೆ 07391 ಇಂದು (ಮೇ 6) ರಾತ್ರಿ 11 ಗಂಟೆಗೆ ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣದಿಂದ ಹೊರಟು ಮಾರನೇ ದಿನ (ಮೇ 7) ಬೆಳಗ್ಗೆ 7.55ಕ್ಕೆ ಹುಬ್ಬಳ್ಳಿ ತಲುಪಲಿದೆ. ಈ ರೈಲಿಗೆ ಬೆಂಗಳೂರು ಕಂಟೋನ್ಮೆಂಟ್, ತುಮಕೂರು, ದಾವಣಗೆರೆ, ಹರಿಹರ, ಹಾವೇರಿ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಇದೆ.
ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗವು, ಹುಬ್ಬಳ್ಳಿ ಮತ್ತು ಅರುಣಾಚಲ ಪ್ರದೇಶದ ನಹರ್ಲಗುನ್ ನಡುವೆ ಐದು ಟ್ರಿಪ್ ವಿಶೇಷ ರೈಲನ್ನು ಓಡಿಸಲಿದೆ. ರೈಲು ಸಂಖ್ಯೆ 07387 ಹುಬ್ಬಳ್ಳಿಯಿಂದ ಮೇ 8 ರಿಂದ ಜೂನ್ 5 ರವರೆಗೆ ಬುಧವಾರ ಮಧ್ಯಾಹ್ನ 12.05 ಕ್ಕೆ ಹೊರಟು ಮೂರನೇ ದಿನ ರಾತ್ರಿ 11 ಗಂಟೆಗೆ ನಹರ್‌ಲಾಗುನ್ ತಲುಪಲಿದೆ.
ಇದೇ ರೀತಿ, ರೈಲು ಸಂಖ್ಯೆ 07388 ಮೇ 11 ರಿಂದ ಜೂನ್ 8 ರವರೆಗೆ ಶನಿವಾರ ರಾತ್ರಿ 11 ಗಂಟೆಗೆ ನಹರ್ಲಗುನ್‌ನಿಂದ ಹೊರಟು ನಾಲ್ಕನೇ ದಿನ ಬೆಳಿಗ್ಗೆ 9 ಗಂಟೆಗೆ ಹುಬ್ಬಳ್ಳಿ ತಲುಪಲಿದೆ. ಈ ರೈಲು ಗದಗ, ಹೊಸಪೇಟೆ, ಗುಂತಕಲ್, ಗುಂಟೂರು, ವಿಜಯನಗರ, ಭುವನೇಶ್ವರ, ಖುರ್ದಾ ರಸ್ತೆ, ಖರಗ್‌ಪುರ, ನ್ಯೂ ಜಲ್ಪೈಗುರಿ, ನ್ಯೂ ಬೊಂಗೈಗಾಂವ್ ಮತ್ತು ರಂಗಪರ ಉತ್ತರದಲ್ಲಿ ನಿಲುಗಡೆ ಹೊಂದಿದೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.