logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ನೀರಿನ ಸಮಸ್ಯೆ; ಊಟ ಮಾಡಿ ಕೈ ತೊಳೆಯಲೂ ನೀರಿಲ್ಲ, ಸರ್ಕಾರಿ ಶಾಲೆಗಳನ್ನು ಮುಚ್ಚುವ ಸಾಧ್ಯತೆ

ಬೆಂಗಳೂರು ನೀರಿನ ಸಮಸ್ಯೆ; ಊಟ ಮಾಡಿ ಕೈ ತೊಳೆಯಲೂ ನೀರಿಲ್ಲ, ಸರ್ಕಾರಿ ಶಾಲೆಗಳನ್ನು ಮುಚ್ಚುವ ಸಾಧ್ಯತೆ

Umesh Kumar S HT Kannada

Mar 08, 2024 12:16 PM IST

ಬೆಂಗಳೂರು ನೀರಿನ ಸಮಸ್ಯೆ (ಸಾಂಕೇತಿಕ ಚಿತ್ರ)

  • ಬೆಂಗಳೂರಿನ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಕೆಲವು ಶಾಲೆಗಳು ತಾತ್ಕಾಲಿಕವಾಗಿ ಮುಚ್ಚಿವೆ. ಸರ್ಕಾರಿ ಶಾಲೆಗಳಿಗೂ ನೀರಿನ ಕೊರತೆ ಕಾಡಿದ್ದು, ಅನಿವಾರ್ಯವಾಗಿ ಶಾಲೆಗೆ ರಜೆ ಘೋಷಿಸಬೇಕಾದ ಪರಿಸ್ಥಿತಿ ಎದುರಿಸುತ್ತಿವೆ. ಈ ರೀತಿ ಆಗುತ್ತಿರುವುದೆಲ್ಲಿ ಎಂಬುದರ ವಿವರ ಇಲ್ಲಿದೆ.

ಬೆಂಗಳೂರು ನೀರಿನ ಸಮಸ್ಯೆ (ಸಾಂಕೇತಿಕ ಚಿತ್ರ)
ಬೆಂಗಳೂರು ನೀರಿನ ಸಮಸ್ಯೆ (ಸಾಂಕೇತಿಕ ಚಿತ್ರ) (LM )

ಬೆಂಗಳೂರು: ಬೇಸಿಗೆ ಆರಂಭಕ್ಕೂ ಮುನ್ನವೇ ರಾಜ್ಯದಲ್ಲಿ ಬರಗಾಲ ಎದುರಾಗಿದ್ದು, ರಾಜಧಾನಿ ಬೆಂಗಳೂರಿನಲ್ಲಿ ನೀರಿಗಾಗಿ ಪರದಾಟ ಆರಂಭವಾಗಿದೆ. ಅಪಾರ್ಟ್‌ಮೆಂಟ್‌ಗಳು, ಕೈಗಾರಿಕೆಗಳು ಮಾತ್ರವಲ್ಲದೆ ಶಾಲೆಗಳಿಗೂ ಇದರ ಬಿಸಿ ತಟ್ಟಿದೆ. ನೀರಿನ ಕೊರತೆಯಿಂದ ಖಾಸಗಿ ಶಾಲೆಗಳು ಮಾತ್ರವಲ್ಲದೆ ಇದೀಗ ಸರ್ಕಾರಿ ಶಾಲೆಗಳನ್ನೂ ಕೂಡ ಮುಚ್ಚುವ ಪರಿಸ್ಥಿತಿ ಎದುರಾಗಿದೆ.

ಟ್ರೆಂಡಿಂಗ್​ ಸುದ್ದಿ

ಬೆಂಗಳೂರು: ಹೆಚ್ಚು ಹಣ ವಸೂಲಿ ಮಾಡಲು ಮುಂದಾದ ಓಲಾ ಕ್ಯಾಬ್‌ ಚಾಲಕ, ಹೊಸ ವಂಚನಾ ಕ್ರಮ ಪತ್ತೆ ಹಚ್ಚಿದ ಮಹಿಳೆ

ಬೆಂಗಳೂರು ಜಲ ಮಂಡಳಿ ಫೋನ್ ಇನ್ ಕಾರ್ಯಕ್ರಮ ಇಂದು ಬೆಳಗ್ಗೆ 9.30ಕ್ಕೆ, ಕುಂದುಕೊರತೆ, ಅಹವಾಲು ಸಲ್ಲಿಸಲು ಫೋನ್ ನಂಬರ್ ಇಲ್ಲಿದೆ..

ಕರ್ನಾಟಕ ಹವಾಮಾನ ಮೇ 17; ದಕ್ಷಿಣ ಕನ್ನಡ, ಮೈಸೂರು, ಮಂಡ್ಯ ಸೇರಿ 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌, ಉಳಿದೆಡೆ ಮಳೆ ಮುನ್ಸೂಚನೆ

Belagavi News: ಚಾಲುಕ್ಯ ರೈಲಿನಲ್ಲಿ ಟಿಕೆಟ್‌ ತಪಾಸಣೆ ವೇಳೆ ಇರಿದ ಪ್ರಯಾಣಿಕ. ಸಿಬ್ಬಂದಿ ಸಾವು, ಆರೋಪಿ ಪರಾರಿ

ಬೆಂಗಳೂರಿನಲ್ಲಿ ಈಗಾಗಲೇ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದೆ. ವಾರಾಂತ್ಯದ ವೇಳೆ 37 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆಯಿದೆ. ಬೇಸಿಗೆ ಆರಂಭಕ್ಕೂ ಮುನ್ನವೇ ಬಿಸಿಲಿನ ತಾಪದ ಜೊತೆ ದಿನಬಳಕೆಯ ನೀರಿಗೆ ತತ್ವಾರ ಎದುರಾಗಿದ್ದು ಜನರನ್ನು ಸಂಕಷ್ಟಕ್ಕೆ ತಳ್ಳಿದೆ. ಹೀಗಾಗಿ ಸರ್ಕಾರಿ ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚಬೇಕಾದ ಪರಿಸ್ಥಿತಿ ಎದುರಾಗಬಹುದು ಎಂದು ಹಲವರು ಕಳವಳ ವ್ಯಕ್ತಪಡಿಸಿದ್ದಾರೆ.

ನೀರಿನ ಸಮಸ್ಯೆಯ ಕಾರಣದಿಂದ ಬೆಂಗಳೂರು ಬನ್ನೇರುಘಟ್ಟ ರಸ್ತೆಯಲ್ಲಿರುವ ಅಭಿಕ್ ಅಕಾಡೆಮಿ ಎನ್ನುವ ಖಾಸಗಿ ಶಾಲೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ನೀರಿನ ಸಮಸ್ಯೆಯಿಂದಾಗಿ ಶಾಲೆಯನ್ನು ಸೋಮವಾರದವರೆಗೆ ಮುಚ್ಚಲಾಗುವುದು. ಬೋರ್‌ವೆಲ್ ಬತ್ತಿ ಹೋಗಿದೆ. ನೀರಿನ ಟ್ಯಾಂಕರ್‌ ಗಳಿಗೆ ಮನವಿ ಮಾಡಿದ್ರೂ, ನಮಗೆ ಪಡೆಯಲು ಸಾಧ್ಯವಾಗಿಲ್ಲ. ನೀರಿಲ್ಲದೆ ಶಾಲೆಯನ್ನು ಮುನ್ನಡೆಸಲು ಸಾಧ್ಯವಿಲ್ಲ. ಹೀಗಾಗಿ ಸಮಸ್ಯೆ ಬಗೆಹರಿಯುವವರೆಗೆ ತಾತ್ಕಾಲಿಕವಾಗಿ ಬಂದ್ ಮಾಡಲು ನಿರ್ಧರಿಸಿದ್ದೇವೆ ಎಂದು ಅಕಾಡೆಮಿಯ ಸಂಸ್ಥಾಪಕ ಇಂದ್ರಾ ರಾಜು ಅವರು ತಿಳಿಸಿದ್ದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಹೊಸಕೆರೆಹಳ್ಳಿ ಸರ್ಕಾರಿ ಶಾಲೆಗಳಿಗೂ ನೀರಿನ ಸಮಸ್ಯೆ

ಈ ಮಧ್ಯೆ ಸರ್ಕಾರಿ ಶಾಲೆಗಳಲ್ಲೂ ಕೂಡ ನೀರಿಗಾಗಿ ಪರದಾಟ ಶುರುವಾಗಿದೆ. ಹೊಸಕೆರೆಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬೋರ್‌ವೆಲ್‌ ನೀರಿಲ್ಲದ ಕಾರಣ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಸಲು ಶಿಕ್ಷಕರು ಹರಸಾಹಸ ಪಡುತ್ತಿದ್ದಾರೆ.

ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ನೀರಿನ ಸಮಸ್ಯೆ ಎದುರಿಸುತ್ತಿರುವ ನಮ್ಮ ವಿಭಾಗದ ವ್ಯಾಪ್ತಿಯ ಸರ್ಕಾರಿ ಶಾಲೆಗಳಿಗೆ ನೆರವು ನೀಡುತ್ತಿದ್ದೇವೆ. ಹೊಸಕೆರೆಹಳ್ಳಿ ಸರಕಾರಿ ಶಾಲೆ ಮಾತ್ರ ಬಿಕ್ಕಟ್ಟು ಎದುರಿಸುತ್ತಿದ್ದು, ಪರ್ಯಾಯ ಮೂಲಗಳನ್ನು ಕಂಡುಕೊಳ್ಳಲು ಮುಂದಾಗಿದ್ದೇವೆ. ನೀರಿನ ಸಮಸ್ಯೆಯಿಂದಾಗಿ ನಾವು ಶಾಲೆಯನ್ನು ಮುಚ್ಚುತ್ತಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ದಕ್ಷಿಣ ಉಪನಿರ್ದೇಶಕ ರಾಜಶೇಖರ್ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.

ಬೋರ್‌ವೆಲ್‌ ಬತ್ತಿ ಹೋಗಿದ್ದು, ನೀರಿಲ್ಲದೆ ಸಂಕಷ್ಟ ಎದುರಾಗಿದೆ. ಶಾಲೆಗೆ ನೀರು ಪೂರೈಕೆಯ ಬೇಡಿಕೆಯನ್ನು ಪೂರೈಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಮತ್ತೊಂದು ಬೋರ್‌ವೆಲ್ ಕೊರೆಯಿಸುವಂತೆ ನಾವು ಮನವಿ ಮಾಡಿದ್ದೇವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನು, ನೀರಿನ ಸಮಸ್ಯೆ ಎಷ್ಟಿದೆಯೆಂದರೆ ಕುಡಿಯಲು ನೀರು ಸಿಗುತ್ತಿಲ್ಲ. ಊಟ ಮಾಡಿ ಕೈತೊಳೆಯಲು ಕೂಡ ನೀರಿಲ್ಲ, ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆಯಾಗುತ್ತಿಲ್ಲ ಎಂದು ಹೊಸಕೆರೆಹಳ್ಳಿಯಲ್ಲಿರುವ ಸರ್ಕಾರಿ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಹೇಳಿದ್ದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಕೆರೆಗಳ ನಗರದಲ್ಲೀಗ ಕೆರೆಗಳೇ ಇಲ್ಲ, ಜೋಸೆಫ್ ಹೂವೆರ್ ಖೇದ

ಒಂದು ಕಾಲದಲ್ಲಿ ‘ಕೆರೆಗಳ ನಗರ’ ಎಂದು ಗುರುತಿಸಲ್ಪಟ್ಟಿದ್ದ ಬೆಂಗಳೂರು ಈಗ ಕೆರೆಗಳೇ ಇಲ್ಲದ ನಗರವಾಗಿದೆ. ಇಲ್ಲಿ 285 ಸಣ್ಣ ಮತ್ತು ದೊಡ್ಡ ಜಲಮೂಲಗಳನ್ನು ಹೊಂದಿತ್ತು. ಈಗಾಗಲೇ ಹಲವಾರು ಕೆರೆಗಳು ನಾಶವಾಗಿದ್ದು, ಅದರ ಮೇಲೆ ಕಟ್ಟಡಗಳು ನಿಂತಿವೆ. ಇನ್ನುಳಿದಿರುವ ಕೆರೆಗಳ ಪಾಡಂತೂ ಶೋಚನೀಯವಾಗಿದೆ. ಸರ್ಕಾರವು ಈ ಬಗ್ಗೆ ಮುತುವರ್ಜಿ ತೋರಿದ್ದರೆ ಇಂದು ಬೆಂಗಳೂರಿಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಸಂರಕ್ಷಣಾವಾದಿ ಜೋಸೆಫ್ ಹೂವರ್ ಎಂಬುವವರು ತಿಳಿಸಿದ್ದಾಗಿ ಎನ್‌ಡಿಟಿವಿ ವರದಿ ಹೇಳಿದರ.

ಈ ಮಧ್ಯೆ, ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ ಎಂದು ಬೆಂಗಳೂರು ಜಿಲ್ಲಾಧಿಕಾರಿ ದಯಾನಂದ ಕೆಎ ಸುತ್ತೋಲೆಯಲ್ಲಿ ತಿಳಿಸಿದ್ದಾರೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ನೀರು ದುರ್ಬಳಕೆ ತಡೆಯುವುದಕ್ಕಾಗಿ 6 ಚಟುವಟಿಕೆಗಳನ್ನು ನಿಷೇಧಿಸಿದೆ. ನೀರು ದುರ್ಬಳಕೆ ಕಂಡರೆ 1916ಕ್ಕೆ ಕರೆ ಮಾಡಿ ತಿಳಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ನೀರು ದುರ್ಬಳಕೆಗೆ ಕನಿಷ್ಠ ದಂಡ 5,000 ರೂಪಾಯಿ ಎಂದು ಅದು ಎಚ್ಚರಿಸಿದೆ.

(ವರದಿ - ಪ್ರಿಯಾಂಕಾ, ಬೆಂಗಳೂರು)

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ