Puttur News: ಕರ್ನಾಟಕದಲ್ಲಿ ಬಿಜೆಪಿ ಸೋಲು, ನಳಿನ್ ಕುಮಾರ್ ಕಟೀಲು, ಸದಾನಂದ ಗೌಡರ ಭಾವಚಿತ್ರಕ್ಕೆ ಚಪ್ಪಲಿ ಹಾರ, ಇಬ್ಬರ ಬಂಧನ
May 15, 2023 08:32 PM IST
Puttur News: ಕರ್ನಾಟಕದಲ್ಲಿ ಬಿಜೆಪಿ ಸೋಲು, ನಳಿನ್ ಕುಮಾರ್ ಕಟೀಲು, ಸದಾನಂದ ಗೌಡರ ಭಾವಚಿತ್ರಕ್ಕೆ ಚಪ್ಪಲಿ ಹಾರ, ಪುತ್ತಿಲ ಖಂಡನೆ
- Karnataka Election Result: ಬಿಜೆಪಿ ಹೀನಾಯ ಸೋಲು ಅನುಭವಿಸಿದ್ದಕ್ಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಒಂದೆಡೆಯಾದರೆ, ಕೆಲ ಕಿಡಿಗೇಡಿಗಳು ಪುತ್ತೂರಲ್ಲಿ ಡಿ.ವಿ.ಎಸ್ ಮತ್ತು ನಳಿನ್ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿದ್ದಾರೆ. ಇದನ್ನು ಕಾಂಗ್ರೆಸ್ ಶಾಸಕ, ಬಿಜೆಪಿ ನಾಯಕರು ಮಾತ್ರವಲ್ಲ, ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ಖಂಡಿಸಿದ್ದಾರೆ.
ಮಂಗಳೂರು: ಪುತ್ತೂರಲ್ಲಿ ಬಿಜೆಪಿ ಕಾರ್ಯಕರ್ತರ ಬಂಡಾಯದ ಬಳಿಕ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿದ್ದ ಅರುಣ್ ಕುಮಾರ್ ಪುತ್ತಿಲ ಮತ್ತು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರ ತೀವ್ರ ಸ್ಪರ್ಧೆಯನ್ನು ಎದುರಿಸಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಗೆದ್ದಿದ್ದರು. ಇಲ್ಲಿ ಬಿಜೆಪಿ ಮೂರನೇ ಸ್ಥಾನ ಪಡೆಯಿತು. ಚುನಾವಣೆ ನಾಮಪತ್ರ ಸಲ್ಲಿಕೆ ದಿನದಿಂದ ಮುಗಿಯುವವರೆಗೆ ಬಿಜೆಪಿ ಮತ್ತು ಪಕ್ಷೇತರರ ಬೆಂಬಲಿಗರ ನಡುವೆ ಜಿದ್ದಾಜಿದ್ದಿ ಕದನ ಸಾಮಾಜಿಕ ಜಾಲತಾಣದಲ್ಲಿ ನಡೆದಿತ್ತು. ಫಲಿತಾಂಶ ಬಂದ ಬಳಿಕ ಪುತ್ತೂರಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಕಂಡರೆ, ರಾಜ್ಯದಲ್ಲೂ ಸೋತಿತು. ಪುತ್ತೂರಿನಲ್ಲಿ ಸೋಲು ಕಾಣಲು ಡಿ.ವಿ.ಸದಾನಂದ ಗೌಡ ಮತ್ತು ನಳಿನ್ ಕುಮಾರ್ ಕಟೀಲ್ ಅವರೇ ಕಾರಣ ಎಂಬ ಆರೋಪ ವೈಯಕ್ತಿಕ ಟೀಕೆಗೆ ತಿರುಗಿತ್ತು. ಇದರ ಭಾಗವಾಗಿಯೇ ಪರಿಸ್ಥಿತಿಯ ದುರ್ಲಾಭ ಪಡೆದುಕೊಂಡ ಕಿಡಿಗೇಡಿಗಳು ಪುತ್ತೂರಿನಲ್ಲಿ ಬ್ಯಾನರ್ ಕಟ್ಟಿದ್ದಾರೆ. ಬಿಜೆಪಿ ನಾಯಕರ ಫೋಟೋ ಹಾಕಿ ಭಾವಪೂರ್ಣ ಶ್ರದ್ಧಾಂಜಲಿ ಬ್ಯಾನರ್ ಹಾಕಲಾಗಿದೆ. ನಳಿನ್ ಕಟೀಲ್ ಮತ್ತು ಡಿವಿ ಸದಾನಂದ ಗೌಡ ಬ್ಯಾನರ್ ಹಾಕಿ ಶ್ರದ್ಧಾಂಜಲಿ ಹಾಕಲಾಗಿದೆ. ಅಲ್ಲದೇ ಬ್ಯಾನರ್ ಗೆ ಚಪ್ಪಲಿ ಹಾರ ಹಾಕಿ ಕೃತ್ಯ ಎಸಗಿದ್ದಾರೆ. 'ಬಿಜೆಪಿ ಹೀನಾಯವಾಗಿ ಸೋಲಲು ಕಾರಣರಾದ ನಿಮಗೆ ಭಾವಪೂರ್ಣ ಶ್ರದ್ಧಾಂಜಲಿ' ಅಂತ ಬ್ಯಾನರ್ ನಲ್ಲಿ ಬರೆಯಲಾಗಿದ್ದು, ನೊಂದ ಹಿಂದೂ ಕಾರ್ಯಕರ್ತರ ಹೆಸರಿನಲ್ಲಿ ಬ್ಯಾನರ್ ಅಳವಡಿಕೆ ಮಾಡಿದ್ದಾರೆ.
ಇದೀಗ ಬಂದ ಅಪ್‌ಡೇಟ್: ಘಟನೆಗೆ ಸಂಬಂಧಪಟ್ಟಂತೆ ಪುತ್ತೂರು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ನರಿಮೊಗರು ಗ್ರಾಮದ ಸಹೋದರರಾದ ವಿಶ್ವನಾಥ್ ಹಾಗೂ ಮಾಧವ ಎಂದು ಗುರುತಿಸಲಾಗಿದೆ. ಪುತ್ತೂರು ನಗರಸಭೆ ಆಯುಕ್ತ ಮಧು ಎಸ್. ಮನೋಹರ್ ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿತ್ತು.
ಬಿಜೆಪಿ ಖಂಡನೆ, ಪ್ರತಿಭಟನೆ ಪೊಲೀಸರಿಗೆ ದೂರು
ಈ ಘಟನೆಯನ್ನು ತೀವ್ರವಾಗಿ ಖಂಡಿಸಿ ಪ್ರತಿಭಟನೆ ನಡೆಸಿರುವ ಬಿಜೆಪಿ ಈ ಕುರಿತು ತನಿಖೆಗೆ ಒತ್ತಾಯಿಸಿದೆ. ಮಾಜಿ ಶಾಸಕ ಸಂಜೀವ ಮಠಂದೂರು ಈ ಕುರಿತು ಮಾತನಾಡಿ, ಪುತ್ತೂರಿನಲ್ಲಿ ಅಶಾಂತಿಯ ವಾತಾವರಣಕ್ಕೆ ಸದಾನಂದ ಗೌಡ ಅವರು ಇತಿಶ್ರೀ ಹಾಕಿದವರು. ಸಂಸದ ನಳಿನ್ ಅಂಥದ್ದಕ್ಕೆ ಕಡಿವಾಣ ಹಾಕಿದವರು. ಅವರ ವಿರುದ್ಧ ಬ್ಯಾನರ್ ಕಟ್ಟಿದ್ದಾರೆ ಎಂದರು. ಈ ಕೃತ್ಯಗಳನ್ನು ಭಾರತೀಯ ಜನತಾ ಪಾರ್ಟಿ ಉಗ್ರವಾಗಿ ಖಂಡಿಸುತ್ತದೆ, ಈ ಕೃತ್ಯ ಎಸಗಿದ ವ್ಯಕ್ತಿಗಳನ್ನು ತಕ್ಷಣ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮತ್ತು ನಗರ ಅಧ್ಯಕ್ಷ ಪಿ.ಜೆ.ಜಗನ್ನಿವಾಸ ರಾವ್ ತಿಳಿಸಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.
ಅರುಣ್ ಕುಮಾರ್ ಪುತ್ತಿಲ ಖಂಡನೆ
ಯಾರೋ ವಿಘ್ನ ಸಂತೋಷಿಗಳು ಸಂಘ ಹಾಗು ಬಿಜೆಪಿ ಪಕ್ಷದ ನಾಯಕರನ್ನು ನಿಂದಿಸುವುದು ಕಂಡು ಬಂದಿದೆ. ನಾವು ಇದನ್ನು ಬೆಂಬಲಿಸುವುದಿಲ್ಲ ಎಂದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲ ಹೇಳಿದ್ದಾರೆ. ನಾವು ಹಿಂದುತ್ವದ ಪ್ರತಿಪಾದನೆಗಾಗಿ, ಸ್ವಾಭಿಮಾನ, ಪ್ರತಿರೋಧದ ಭಾಗವಾಗಿ ಚುನಾವಣೆಗೆ ಸ್ಪರ್ಧಿಸಿ ಗೆಲುವಿಗಾಗಿ ಹೋರಾಟ ಮಾಡಿದ್ದೀವೆ ನಮ್ಮದು ವೀರೋಚಿತ ಸೋಲು. ವ್ಯವಸ್ಥೆಯಯಲ್ಲಿನ ಹುಳುಕುಗಳನ್ನು ಎತ್ತಿತೋರಿಸಲು ಸ್ಪರ್ಧಿಸಿ ಸ್ಪಷ್ಟವಾದ ಸಂದೇಶ ರವಾನೆಯಾಗಿದೆ. ನಮ್ಮ ವಿರುದ್ಧ ಎಷ್ಟೇ ಅಪಚಾರ, ಷಡ್ಯಂತ್ರ ನಡೆದರೂ ಸತ್ಯದ ದಾರಿಯಲ್ಲಿ ನಡೆದ್ದಿದ್ದೇವೆ ನಾವು ಇದನ್ನೇ ಮುಂದುವರಿಸುವ. ಭವಿಷ್ಯದ ಗೆಲುವಿಗಾಗಿ ಕಾಯೋಣ ಎಂದು ಕಾರ್ಯಕರ್ತರಿಗೆ ಅವರು ತಿಳಿಸಿದ್ದು, ಇಂಥ ಕೃತ್ಯಕ್ಕೆ ಪ್ರಚೋದನೆ ನೀಡುವುದಿಲ್ಲ ಎಂದಿದ್ದಾರೆ.
ಇದು ನೀಚ ಕೃತ್ಯ- ತನಿಖೆಗೆ ಶಾಸಕ ಅಶೋಕ್ ರೈ ಸೂಚನೆ
ಪುತ್ತೂರು ಬಸ್ ನಿಲ್ದಾಣದ ಬಳಿ ಬಿಜೆಪಿ ಮುಖಂಡರ ಭಾವಚಿತ್ರ ಇರುವ ಬ್ಯಾನರನ್ನು ಹಾಕಿ ಅದಕ್ಕೆ ಚಪ್ಪಲಿ ಹಾರ ಹಾಕಿರುವ ಘಟನೆ ನಡೆದಿದ್ದು ಇದು ಯಾರ ಕೃತ್ಯ ಎಂಬುದನ್ನು ಪೊಲೀಸ್ ಇಲಾಖೆ ತನಿಖೆ ಮಾಡಬೇಕು.ಸುತ್ತಮುತ್ತಲಿರುವ ಸಿ ಸಿ ಕೆಮರಾ ಪರಿಶೀಲಿಸಿ ಆರೋಪಿಗಳನ್ನು ಪೊಲೀಸರು ಪತ್ತೆ ಮಾಡಬೇಕು. ಘಟನೆಯ ಖಂಡಿಸಿ ಬಿಜೆಪಿಯವರು ನಡೆಸಿದ ಪ್ರತಿಭಟನೆಯಲ್ಲಿ ಮಾಜಿ ಶಾಸಕರು ಪರೋಕ್ಷವಾಗಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಗೂಬೆ ಕೂರಿಸುವ ಯತ್ನವನ್ನು ಮಾಡಿದ್ದು ಇದನ್ನು ನಾನು ಖಂಡಿಸುತ್ತೇನೆ. ಕಾಂಗ್ರೆಸ್ ಕಾರ್ಯಕರ್ತರು ಎಂದಿಗೂ ಇಂಥಹ ನೀಚಕೃತ್ಯಕ್ಕೆ ಕೈ ಹಾಕುವುದಿಲ್ಲ, ನಮಗೆ ಯಾರ ಮೇಲೆ ದ್ವೇಷವೂ ಇಲ್ಲ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಗೆ ಮತದಾರ ನೀಡಿದ ಜನ ಬೆಂಬಲವನ್ನು ಕಂಡು ಬಿಜೆಪಿಗೆ ಆಘಾತವಾಗಿದೆ. ಹತಾಶರಾಗಿ ಏನೇನೋ ಹೇಳಿಕೆ ನೀಡುತ್ತಿದ್ದಾರೆ. ಪ್ರತಿಭಟನೆ ನಡೆಸುವುದು ಬಿಜೆಪಿಗರ ಕಾಯಕವಾಗಿದೆ. ಅವರದೇ ಸರಕಾರ ಇರುವಾಗಲೂ ಮಾಡಿದ್ದರೂ ಈಗಲೂ ಮಾಡುತ್ತಲೇ ಇದ್ದಾರೆ ಎಂದು ಹೇಳಿದರು.