logo
ಕನ್ನಡ ಸುದ್ದಿ  /  ಕರ್ನಾಟಕ  /  ಗೌರಿಬಿದನೂರು: ಸತ್ಯಮ್ಮ ದೇವಿ ದೇವಸ್ಥಾನಕ್ಕೆ ಕಾಣಿಕೆ ಕೊಡದ ದಲಿತ ಮಹಿಳೆ ಶವಸಂಸ್ಕಾರಕ್ಕೆ ಅಡ್ಡಿ, ಅಧಿಕಾರಿಗಳ ಮಧ್ಯಪ್ರವೇಶ

ಗೌರಿಬಿದನೂರು: ಸತ್ಯಮ್ಮ ದೇವಿ ದೇವಸ್ಥಾನಕ್ಕೆ ಕಾಣಿಕೆ ಕೊಡದ ದಲಿತ ಮಹಿಳೆ ಶವಸಂಸ್ಕಾರಕ್ಕೆ ಅಡ್ಡಿ, ಅಧಿಕಾರಿಗಳ ಮಧ್ಯಪ್ರವೇಶ

Umesh Kumar S HT Kannada

Apr 30, 2024 09:36 AM IST

ಗೌರಿಬಿದನೂರು ತಾಲೂಕಿನಲ್ಲಿ ದೇವರಿಗೆ ಹಣ ನೀಡದ ಕಾರಣ ದಲಿತ ಮಹಿಳೆಯ ಶವಸಂಸ್ಕಾರಕ್ಕೆ ಅಡ್ಡಿ ಉಂಟುಮಾಡಿದ ಘಟನೆ ವರದಿಯಾಗಿದೆ. (ಸಾಂಕೇತಿಕ ಚಿತ್ರ)

  • ಚಿಕ್ಕಬಳ್ಳಾಪುರ ಗೌರಿಬಿದನೂರು ತಾಲೂಕಿನಲ್ಲಿ ಸತ್ಯಮ್ಮ ದೇವಿ ದೇವಸ್ಥಾನದ ದೇವರಿಗೆ ಹಣ ನೀಡದ ಕಾರಣ ದಲಿತ ಮಹಿಳೆಯ ಶವಸಂಸ್ಕಾರಕ್ಕೆ ಅಡ್ಡಿ ಉಂಟುಮಾಡಿದ ಘಟನೆಯ ವಿಡಿಯೋ ವೈರಲ್ ಆಗಿತ್ತು. ಭಾನುವಾರ ಈ ಘಟನೆ ನಡೆದಿದ್ದು, ಸೋಮವಾರ ಅಧಿಕಾರಿಗಳ ಮಧ್ಯಪ್ರವೇಶದಿಂದ ಪ್ರಕರಣ ಸುಖಾಂತ್ಯ ಕಂಡಿದೆ. ಈ ಪ್ರಕರಣದ ವಿವರ ವರದಿ ಇಲ್ಲಿದೆ.

ಗೌರಿಬಿದನೂರು ತಾಲೂಕಿನಲ್ಲಿ ದೇವರಿಗೆ ಹಣ ನೀಡದ ಕಾರಣ ದಲಿತ ಮಹಿಳೆಯ ಶವಸಂಸ್ಕಾರಕ್ಕೆ ಅಡ್ಡಿ ಉಂಟುಮಾಡಿದ ಘಟನೆ ವರದಿಯಾಗಿದೆ. (ಸಾಂಕೇತಿಕ ಚಿತ್ರ)
ಗೌರಿಬಿದನೂರು ತಾಲೂಕಿನಲ್ಲಿ ದೇವರಿಗೆ ಹಣ ನೀಡದ ಕಾರಣ ದಲಿತ ಮಹಿಳೆಯ ಶವಸಂಸ್ಕಾರಕ್ಕೆ ಅಡ್ಡಿ ಉಂಟುಮಾಡಿದ ಘಟನೆ ವರದಿಯಾಗಿದೆ. (ಸಾಂಕೇತಿಕ ಚಿತ್ರ) (HT News )

ಚಿಕ್ಕಬಳ್ಳಾಪುರ: ಶವಸಂಸ್ಕಾರ ನಡೆಸುವ ಮೊದಲು ದೇವರ ಹಣ ನೀಡಬೇಕು ಎಂದು ಪರಿಶಿಷ್ಟ ಜಾತಿಯ ಕುಟುಂಬವೊಂದರಿಂದ ಬಲವಂತವಾಗಿ ಹಣ ವಸೂಲಿ ಮಾಡಿದ ಘಟನೆ ಶನಿವಾರ -ಭಾನುವಾರ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದ್ದು, ಗೌರಿಬಿದನೂರು ಪೊಲೀಸರು ಸೋಮವಾರ ಈ ಕುಟುಂಬದ ನೆರವಿಗೆ ಬಂದಿದ್ದು, ಬಲವಂತವಾಗಿ ವಸೂಲಿ ಮಾಡಿಕೊಳ್ಳಲಾಗಿದ್ದ ಹಣವನ್ನು ಮತ್ತೆ ಕುಟುಂಬಕ್ಕೆ ಕೊಡಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Mangalore News: ಪದ್ಮಶ್ರೀ ಹರೇಕಳ ಹಾಜಬ್ಬರ ಶಾಲೆಯಲ್ಲಿ ದುರಂತ, ಮಳೆಗೆ ಶಿಥಿಲಗೊಂಡ ಆವರಣಗೋಡೆ, ಗೇಟು ಕುಸಿದು ಬಾಲಕಿ ದುರ್ಮರಣ

Puc Exam-2 Results: ಕರ್ನಾಟಕ ದ್ವಿತೀಯ ಪರೀಕ್ಷೆ- 2 ಫಲಿತಾಂಶ ಮಂಗಳವಾರ ಪ್ರಕಟ, ನೋಡೋದು ಹೇಗೆ

Hubli News: ಹುಬ್ಬಳ್ಳಿ ಅಂಜಲಿ‌ ಅಂಬಿಗೇರ ಹತ್ಯೆ ಪ್ರಕರಣ ತನಿಖೆ ಸಿಐಡಿಗೆ, ತಪ್ಪಿತಸ್ಥ ಪೊಲೀಸರ ವಿರುದ್ದ ಕಠಿಣ ಕ್ರಮ: ಗೃಹ ಸಚಿವ ಪರಮೇಶ್ವರ

Dakshin Kannada Accidents: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತ್ಯೇಕ ಅಪಘಾತ; ಮಾಜಿ ಸೈನಿಕ ಸೇರಿ ಮೂವರು ಸಾವು

ದೇವಸ್ಥಾನದ “ದೇಣಿಗೆ ಹಣ” (ದೇವರ ಹಣ) ಕೊಟ್ಟ ಬಳಿಕ ಶವಸಂಸ್ಕಾರ ನಡೆಸಬಹುದು ಎಂದು, ಪರಿಶಿಷ್ಟ ಜಾತಿ ಮಹಿಳೆಯ ಶವಸಂಸ್ಕಾರಕ್ಕೆ ತಡೆಯೊಡ್ಡಿದ ಘಟನೆಯ ವಿಡಿಯೋ ವೈರಲ್ ಆಗಿತ್ತು. ಈ ಘಟನೆ ಗೌರಿಬಿದನೂರು ತಾಲೂಕು ಗೋಟಕಾನಾಪುರ 26ನೇ ವಾರ್ಡ್‌ನಲ್ಲಿ ಶನಿವಾರ ರಾತ್ರಿ ನಡೆದಿತ್ತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ವೈರಲ್ ವಿಡಿಯೋ - ಏನಿದು ಪ್ರಕರಣ

ಪರಿಶಿಷ್ಟ ಜಾತಿ ಸಮುದಾಯದ ಹನುಮಕ್ಕ (55) ಶನಿವಾರ ರಾತ್ರಿ ನಿಧನರಾಗಿದ್ದರು. ಆದಿ ಕರ್ನಾಟಕ ಸಮುದಾಯದ ಈ ಮಹಿಳೆ ಗೌರಿಬಿದನೂರು ತಾಲೂಕು ಗೊಟಕನಾಪುರದ 26ನೇ ವಾರ್ಡ್‌ ನಿವಾಸಿ. ಗೊಟಕನಾಪುರದಲ್ಲಿ ಈ ಮಹಿಳೆಯ ಅಂತ್ಯ ಸಂಸ್ಕಾರ ನಡೆಸಬೇಕಾದರೆ ಸ್ಥಳೀಯ ಸತ್ಯಮ್ಮ ದೇವಿ ದೇವಸ್ಥಾನದ ಆಡಳಿತ 25,000 ರೂಪಾಯಿ ಪಾವತಿಸುವಂತೆ ಈಕೆಯ ಕುಟುಂಬ ಸದಸ್ಯರ ಮೇಲೆ ಒತ್ತಡ ಹೇರಿತ್ತು. ಇಲ್ಲದೇ ಇದ್ದರೆ, ಇಲ್ಲಿ ಶವಸಂಸ್ಕಾರ ನಡೆಸುವಂತೆ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಶವಸಂಸ್ಕಾರ ಶುಲ್ಕ ಎಂದು ಆದಿ ಕರ್ನಾಟಕ ಸಮುದಾಯದವರಿಗೆ ನಿಗದಿ ಮಾಡಿರುವಂಥದ್ದು 3,000 ರೂಪಾಯಿ. ಆದರೆ, ಈ ಮಹಿಳೆಯ ಕುಟುಂಬದವರಿಗೆ ಆಡಳಿತ ಮಂಡಳಿ 25,000 ರೂಪಾಯಿ ವಸೂಲಿ ಮಾಡಲು ಪ್ರಯತ್ನಿಸಿತ್ತು. ವಾಸ್ತವದಲ್ಲಿ ಇದು ಈ ಕುಟುಂಬ ಸದಸ್ಯರು ಪಾಲ್ಗೊಂಡಿದ್ದ ಚೀಟಿ ವ್ಯವಹಾರದ ಬಾಕಿ ಹಣವಾಗಿತ್ತು. ಈ ಚೀಟಿ ವ್ಯವಹಾರವನ್ನು ಆ ದೇವಸ್ಥಾನದ ಅರ್ಚಕ ನಡೆಸುತ್ತಿದ್ದು, ಮರಣದ ಸಂದರ್ಭದಲ್ಲಿ ಅದನ್ನು ವಸೂಲಿ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಹನುಮಕ್ಕನ ಶವಸಂಸ್ಕಾರಕ್ಕೆ ಭಾನುವಾರ ಮಧ್ಯಾಹ್ನ 12 ಗಂಟೆ ತನಕವೂ ಅವಕಾಶ ನೀಡಿರಲಿಲ್ಲ. ಕೊನೆಗೆ ಕುಟುಂಬ ಸದಸ್ಯರು 6,000 ರೂಪಾಯಿ ಹೊಂದಿಸಿ ಅರ್ಚಕರಿಗೆ ಕೊಟ್ಟಿದ್ದರು. ಇಷ್ಟಾದ ಬಳಿಕವಷ್ಟೇ ಹನುಮಕ್ಕನ ಅಂತ್ಯ ಸಂಸ್ಕಾರ ನಡೆಸಲು ಅವಕಾಶ ನೀಡಿದ್ದರು ಎಂದು ಪ್ರಜಾವಾಣಿ ವರದಿ ಮಾಡಿದೆ.

ಗೊಟಕನಾಪುರ ಸತ್ಯಮ್ಮ ದೇವಿಗೆ ದೇಣಿಗೆ ಸಂಪ್ರದಾಯ

ಆದಿಕರ್ನಾಟಕ ಸಮುದಾಯದವರು ಯಾರೇ ಮೃತಪಟ್ಟರೂ, ಆ ಕುಟುಂಬದವರು ಗೊಟಕನಾಪುರ ಸತ್ಯಮ್ಮ ದೇವಿಗೆ ದೇಣಿಗೆ ನೀಡುವ ಸಂಪ್ರದಾಯ ತಲೆಮಾರುಗಳಿಂದ ನಡೆದು ಬಂದಿದೆ. ಅದನ್ನು ಮುಂದುವರಿಸಲಾಗಿದೆ. ಇದು ಸಮುದಾಯದ ಸಂಪ್ರದಾಯವಾದ ಕಾರಣ ಇದನ್ನು ನಿಲ್ಲಿಸಲಾಗದು ಎಂದು ಸಮುದಾಯದ ಮುಖಂಡರು ಹೇಳಿದಾಗಿ ವರದಿ ವಿವರಿಸಿದೆ.

ಈ ವಿಚಾರವಾಗಿ ಮೃತ ಹನುಮಕ್ಕ ಅವರ ಪುತ್ರಿ ಮಂಜುಳಾ (32) ಅವರ ಹೇಳಿಕೆಯನ್ನು ಪೊಲೀಸರು ಪಡೆದಿದ್ದು, ದುಃಖದ ಸಂದರ್ಭದಲ್ಲೂ ಹಣಕ್ಕಾಗಿ ಪೀಡಿಸುವುದು ತ್ರಾಸದಾಯಕ. ಇಂತಹ ನಂಬಿಕೆಗಳನ್ನು ನಿಲ್ಲಿಸಬೇಕು ಎಂದು ಅಳಲು ತೋಡಿಕೊಂಡಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಗೌರಿ ಬಿದನೂರು ತಹಸೀಲ್ದಾರ್ ಮಹೇಶ್ ಮೇಟ್ರಿ ಅವರು ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಸತ್ಯಮ್ಮ ದೇವಸ್ಥಾನದಲ್ಲಿ ಆದಿ ಕರ್ನಾಟಕ ಸಮುದಾಯದವರು ಶವ ಸಂಸ್ಕಾರ ನಡೆಸಬೇಕಾದ 3,000 ರೂಪಾಯಿ ದೇಣಿಗೆ ಕೊಡಬೇಕಾದ್ದು ಕಡ್ಡಾಯ. ಅದನ್ನು ಅವರು ಗುಂಡಿ ತೋಡಲು ಮತ್ತು ಇತರೆ ಶವಸಂಸ್ಕಾರ ವೆಚ್ಚ ಭರಿಸಲು ಬಳಸುತ್ತಾರೆ ಎಂದು ವಿವರಿಸಿದ್ದಾರೆ. ಗ್ರಾಮದಲ್ಲಿರುವ ಸ್ಮಶಾನ ಭೂಮಿ ಸರ್ಕಾರ ನೀಡಿರುವಂಥದ್ದು. ಅದನ್ನು ಬಳಸುವುದಕ್ಕೆ ಯಾರೂ ದುಡ್ಡುಕೊಡಬೇಕಾಗಿಲ್ಲ ಎಂದು ಮೇಟ್ರಿ ಇದೇ ವೇಳೆ ಸ್ಪಷ್ಟಪಡಿಸಿದರು.

ವೃತ್ತ ನಿರೀಕ್ಷಕ ಸತ್ಯನಾರಾಯಣ ಮತ್ತು ಸಮಾಜ ಕಲ್ಯಾಣ ಅಧಿಕಾರಿ ಚನ್ನಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿದ್ದು, ಸಮುದಾಯದ ಹಿರಿಯರು ಮತ್ತು ದೇವಸ್ಥಾನದ ಆಡಳಿತದ ಸದಸ್ಯರನ್ನು ಒಟ್ಟು ಸೇರಿಸಿ ಸಭೆ ನಡೆಸಿದರು. ಹೆಚ್ಚುವರಿಯಾಗಿ ಪಡೆದ 3,000 ರೂಪಾಯಿಯನ್ನು ವಾಪಸ್ ಆ ಕುಟುಂಬಕ್ಕೆ ಕೊಡಿಸುವಲ್ಲಿ ಯಶಸ್ವಿಯಾದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ