logo
ಕನ್ನಡ ಸುದ್ದಿ  /  ಕರ್ನಾಟಕ  /  ಕಲ್ಲುರ್ಟಿ ದೈವಸ್ಥಾನ: ಪಣೋಲಿಬೈಲ್ ಸನ್ನಿಧಿಯಲ್ಲಿ 23,000 ಕೋಲ ಸೇವೆಗೆ ಬುಕಿಂಗ್, ತಾಯಿ ಕಲ್ಲುರ್ಟಿ ಅನುಗ್ರಹಕ್ಕೆ ವರ್ಷಗಟ್ಟಲೆ ಕಾಯುವ ಭಕ್ತರು

ಕಲ್ಲುರ್ಟಿ ದೈವಸ್ಥಾನ: ಪಣೋಲಿಬೈಲ್ ಸನ್ನಿಧಿಯಲ್ಲಿ 23,000 ಕೋಲ ಸೇವೆಗೆ ಬುಕಿಂಗ್, ತಾಯಿ ಕಲ್ಲುರ್ಟಿ ಅನುಗ್ರಹಕ್ಕೆ ವರ್ಷಗಟ್ಟಲೆ ಕಾಯುವ ಭಕ್ತರು

HT Kannada Desk HT Kannada

May 05, 2024 01:01 PM IST

ಕಲ್ಲುರ್ಟಿ ದೈವಸ್ಥಾನ: ಪಣೋಲಿಬೈಲ್ ಸನ್ನಿಧಿಯಲ್ಲಿ 23,000 ಕೋಲ ಸೇವೆಗೆ ಬುಕಿಂಗ್, ತಾಯಿ ಕಲ್ಲುರ್ಟಿ ಅನುಗ್ರಹಕ್ಕೆ ವರ್ಷಗಟ್ಟಲೆ ಕಾಯುವ ಭಕ್ತರು

    • ಆಸ್ತಿ ವಿಚಾರ ತಕರಾರು, ಕೋರ್ಟ್ ವಿಚಾರ ಇನ್ನಿತರ ಕಷ್ಟ ಕಾರ್ಪಣ್ಯದಲ್ಲಿದ್ದವರು ಈ ಕ್ಷೇತ್ರಕ್ಕೆ ಬಂದು ದೈವದ ಮುಂದೆ ತಮ್ಮ ಕಷ್ಟ ತೋಡಿಕೊಂಡು ಹರಕೆಯನ್ನು ಹೇಳಿಕೊಳ್ಳುತ್ತಾರೆ. ಸತ್ಯ, ಧರ್ಮ, ನ್ಯಾಯವನ್ನು ಎತ್ತಿ ಹಿಡಿಯುವ ಈ ದೈವವು ಎಲ್ಲಾ ಮೂಲೆಗಳಂದಲೂ ಭಕ್ತರನ್ನು ಸೆಳೆದುಕೊಳ್ಳುತ್ತಿದೆ.
ಕಲ್ಲುರ್ಟಿ ದೈವಸ್ಥಾನ: ಪಣೋಲಿಬೈಲ್ ಸನ್ನಿಧಿಯಲ್ಲಿ 23,000 ಕೋಲ ಸೇವೆಗೆ ಬುಕಿಂಗ್, ತಾಯಿ ಕಲ್ಲುರ್ಟಿ ಅನುಗ್ರಹಕ್ಕೆ ವರ್ಷಗಟ್ಟಲೆ ಕಾಯುವ ಭಕ್ತರು
ಕಲ್ಲುರ್ಟಿ ದೈವಸ್ಥಾನ: ಪಣೋಲಿಬೈಲ್ ಸನ್ನಿಧಿಯಲ್ಲಿ 23,000 ಕೋಲ ಸೇವೆಗೆ ಬುಕಿಂಗ್, ತಾಯಿ ಕಲ್ಲುರ್ಟಿ ಅನುಗ್ರಹಕ್ಕೆ ವರ್ಷಗಟ್ಟಲೆ ಕಾಯುವ ಭಕ್ತರು

ಮಂಗಳೂರು: ದಕ್ಷಿಣ ಕನ್ನಡದ ಪ್ರಸಿದ್ಧ ಕಾರಣಿಕ ಕ್ಷೇತ್ರವೆನಿಸಿದ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನವನ್ನು ನಂಬುವ ಭಕ್ತರು ಅಪಾರ ಸಂಖ್ಯೆಯಲ್ಲಿದ್ದಾರೆ. ಯಾವುದಾದರೂ ಸಂದರ್ಭದಲ್ಲಿ ಪಣೋಲಿಬೈಲು ದೈವಕ್ಕೆ ಹರಕೆ ಹೇಳಿಕೊಳ್ಳುವುದುಂಟು. ಅದನ್ನು ಈಡೇರಿಸಲು ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಇಲ್ಲಿ ಅಗೇಲು ಸೇವೆ (ಕೋಳಿ, ಕುಚ್ಚಲಕ್ಕಿ, ಬಾಳೆ, ತೆಂಗಿನಕಾಯಿ, ಕೇಪುಳ ಹೂ ಒಪ್ಪಿಸುವುದು) ಹಾಗೂ ಕೋಲ ಸೇವೆ ಪ್ರಸಿದ್ಧ. ಕೋಲ ಸೇವೆಗಾಗಿ ಭಕ್ತರು ಬುಕ್ ಮಾಡುವುದುಂಟು. ಹೀಗೆ 23 ಸಾವಿರ ಸೇವೆಗಳು ಈ ಸನ್ನಿಧಿಯಲ್ಲಿ ಬುಕ್ ಆಗಿವೆ. ದಿನವೊಂದಕ್ಕೆ 4, ವಾರದಲ್ಲಿ 5 (ಕೆಲವು ದಿನ, ತಿಂಗಳು ಇರುವುದಿಲ್ಲ) ಸೇರಿ ಒಟ್ಟು 600ರಿಂದ 700 ಕೋಲ ಸೇವೆಗಳು ಇಲ್ಲಿ ನಡೆಯುತ್ತವೆ ಎಂದು ಲೆಕ್ಕ ಹಾಕಿದರೆ, ಇವತ್ತು ಬುಕ್ ಮಾಡಿದವರಿಗೆ 35 ವರ್ಷಗಳ ನಂತರ ಇಲ್ಲಿ ಸೇವೆ ಮಾಡಿಸಲು ಅವಕಾಶ ದೊರೆಯುತ್ತದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಈಗ ಕೋಲಸೇವೆಯಲ್ಲಿ 4ರ ಬದಲಿಗೆ 8 ಮಂದಿಗೆ ಸೇವೆ ಸಂದಾಯಕ್ಕೆ ಅವಕಾಶ ಕಲ್ಪಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

Environment day: ವಿಶ್ವ ಪರಿಸರ ದಿನಕ್ಕೆ ಜಾಗತಿಕ ತಾಪಮಾನದ ಮೇಲೆ ಪ್ರಬಂಧ ಬರೆಯಿರಿ, 5000 ರೂ. ಬಹುಮಾನ ಪಡೆಯಿರಿ

Vijayapura News: ವಿಜಯಪುರ ಬಿಎಲ್‌ಡಿಇಯಲ್ಲಿ ಕೌಶಲ್ಯಗಳ ಸಂಗಮ, ತಾಂತ್ರಿಕ ಹಬ್ಬದ ಸಡಗರ

Museums Day 2024: ಬೆಂಗಳೂರು, ಶಿವಮೊಗ್ಗ, ಮಡಿಕೇರಿ, ಮಂಗಳೂರು, ಮೈಸೂರು ಮ್ಯೂಸಿಯಂಗಳಿಗೆ ಹೊಸ ರೂಪ, ಏನಿದರ ವಿಶೇಷ

Bangalore Mysore Expressway: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಮೊಬೈಲ್ ನಲ್ಲಿ ಮಾತಾಡಿಕೊಂಡು ಡ್ರೈವ್ ಮಾಡಿದರೆ ದಂಡ ಗ್ಯಾರಂಟಿ

ಸುದೀರ್ಘ ವರ್ಷಕ್ಕೆ ಬುಕ್ಕಿಂಗ್ ಮಾಡಿದವರಿಗೆ ಅನುಕೂಲ

ಕೋಲಸೇವೆಯಲ್ಲಿ 4ರ ಬದಲಿಗೆ 8 ಮಂದಿಗೆ ಸೇವೆ ಸಂದಾಯಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ. ಈ ವ್ಯವಸ್ಥೆ ಮೇ 3ರಂದು ಆರಂಭಗೊಂಡಿದ್ದು, ಇದು ವಾರದಲ್ಲಿ 5 ದಿನ ಇರುತ್ತದೆ. ಇದರಿಂದ ಸುದೀರ್ಘ ವರ್ಷಕ್ಕೆ ಬುಕ್ಕಿಂಗ್ ಮಾಡಿದವರಿಗೆ ಶೀಘ್ರ ಸೇವೆ ಸಂದಾಯವಾಗುವ ವ್ಯವಸ್ಥೆ ಕಲ್ಪಿಸಿದಂತಾಗುತ್ತದೆ. ಇದುವರೆಗೆ ವರ್ಷಕ್ಕೆ 600ರಿಂದ 700 ಮಂದಿಗೆ ಮಾತ್ರ ಕೋಲ ಸೇವೆಗೆ ಅವಕಾಶ ಸಿಗುತ್ತಿತ್ತು. ಬುಕಿಂಗ್ ಸಂಖ್ಯೆ ವರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಭಕ್ತರಿಗೆ ಶೀಘ್ರ ಸೇವೆಗೆ ಅವಕಾಶ ನೀಡುವ ದೃಷ್ಟಿಯಿಂದ ದೈವದ ಬಳಿ ಹರಕೆ ಮಾಡಿ, ಮಾಗಣೆಯ ದೈವದ ಅಪ್ಪಣೆ ಪಡೆದು, ದಿನಕ್ಕೆ ನಾಲ್ಕು ಕೋಲ ಸೇವೆ ನೀಡಿದರೂ ಪ್ರತಿ ಕೋಲದಲ್ಲಿ ಇಬ್ಬರಿಗೆ ಪ್ರಸಾದದಂತೆ 8 ಮಂದಿಗೆ ಪ್ರಸಾದ ನೀಡುವುದಕ್ಕೆ ನಿರ್ಧರಿಸಲಾಯಿತು. ಹೀಗಾಗಿ ಮುಂದಿನ ದಿನಗಳಲ್ಲಿ ಕೋಲ ಸೇವೆ ನೀಡಲು ಬುಕಿಂಗ್ ಮಾಡುವವರಿಗೆ ಅನುಕೂಲವಾಗಲಿದೆ. ಪ್ರತಿದಿನ ನಡೆಯುತ್ತಿದ್ದ ಕೋಲ ಸೇವೆಯಲ್ಲಿ 4ರ ಬದಲಿಗೆ 8 ಮಂದಿಗೆ ಸೇವೆ ಸಂದಾಯಕ್ಕೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಸೇವೆ ಮಾಡಿಸುವವರಿಗೂ ಅನುಕೂಲವಾಗಿದೆ.

23 ಸಾವಿರಕ್ಕೂ ಅಧಿಕ ಬುಕ್ಕಿಂಗ್

ಪಣೋಲಿಬೈಲಿಗೆ ತುಳುನಾಡ ಜಿಲ್ಲೆಗಳಷ್ಟೇ ಅಲ್ಲ, ಹೊರಗಿನಿಂದಲೂ ಆಗಮಿಸುವ ಭಕ್ತರು ಅಗೇಲು, ಕೋಲ ಸೇವೆ ನಡೆಸುತ್ತಾರೆ. ವಿಶೇಷ ಹರಕೆ ರೂಪದಲ್ಲಿ ಕೋಲ ಸೇವೆಯನ್ನು ನೀಡುತ್ತಾರೆ. ಇದುವರೆಗೆ 23 ಸಾವಿರಕ್ಕೂ ಅಧಿಕ ಕೋಲ ಸೇವೆಗಳ ಬುಕ್ ಆಗಿದೆ. ಕ್ಷೇತ್ರದಲ್ಲಿ ಅಗೇಲು ಮತ್ತು ಕೋಲ ಸೇವೆಗಳು ವಿಶೇಷವಾಗಿದೆ. ವಾರದ ಮೂರು ದಿನಗಳು ಅಗೇಲು ಹಾಗೂ ವಾರದ 5 ದಿನಗಳ ಕೋಲ ಸೇವೆ ಸಂದಾಯವಾಗುತ್ತದೆ. ಬೆಳಗ್ಗೆ ನಿಗದಿತ ಸಮಯದೊಳಗೆ ಬಂದವರಿಗೆ ಎಷ್ಟು ಬೇಕಾದರೂ ಅಗೇಲು ಸೇವೆ ನೀಡುವುದಕ್ಕೆ ಅವಕಾಶವಿದೆ. ದಿನವೊಂದಕ್ಕೆ ಕೋಲ ಸೇವೆ ನೀಡುವುದಕ್ಕೆ ಕೇವಲ ನಾಲ್ವರಿಗೆ ಮಾತ್ರ ಅವಕಾಶವಿತ್ತು. ಕೋಲ ಸೇವೆಗಳ ಬುಕ್ಕಿಂಗ್ ಹೆಚ್ಚಾಗುತ್ತಿದ್ದು, ಅದು ಪೂರ್ಣಗೊಳ್ಳಬೇಕಾದರೆ ಕನಿಷ್ಠ 35 ವರ್ಷ ಬೇಕಾಗುತ್ತದೆ ಎಂದು ಅಂದಾಜಿಸಲಾಗುತ್ತಿದೆ.

ಯಾವಾಗೆಲ್ಲ ಕೋಲ ಇರುತ್ತದೆ

ಸೋಮವಾರ ಹಾಗೂ ಶನಿವಾರ ಹೊರತುಪಡಿಸಿ ವಾರದಲ್ಲಿ 5 ದಿನ ಕೋಲ ಸೇವೆಗೆ ಅವಕಾಶವಿದೆ. ಆಟಿ ತಿಂಗಳು, ಅಮಾವಾಸ್ಯೆ, ಷಷ್ಠಿ, ಸಜಿಪಮಾಗಣೆಯ ಜಾತ್ರೆ, ಉತ್ಸವಾದಿಗಳ ಸಂದರ್ಭ ಕೋಲ ಸೇವೆ ಇರುವುದಿಲ್ಲ.

ಎಲ್ಲಿದೆ ಕ್ಷೇತ್ರ ಪಣೋಲಿಬೈಲ್

ಮಂಗಳೂರಿನಿಂದ ಬಿಸಿ ರೋಡಿಗೆ ಹೆದ್ದಾರಿಯಲ್ಲಿ ಬಂದು ಮುಂದಕ್ಕೆ ಸಾಗಿದಾಗ ಮೇಲ್ಕಾರ್‌ನಿಂದ ಬಲಭಾಗಕ್ಕೆ ಕೊಣಾಜೆ ಮಾರ್ಗದಲ್ಲಿ ಸಾಗುವ ಸಂದರ್ಭ ಮಾರ್ನಬೈಲ್ ನಲ್ಲಿ ಎಡಭಾಗಕ್ಕೆ ತಿರುಗಿ ಸುಮಾರು 4 ಕಿಮೀ ದೂರದಲ್ಲಿ ಸಾಗಿದರೆ, ಪಣೋಲಿಬೈಲ್ ಕ್ಷೇತ್ರ ಕಾಣಲು ಸಿಗುತ್ತದೆ. ಇಲ್ಲಿ ಕಲ್ಲುರ್ಟಿ ಕಲ್ಕುಡರು ನೆಲೆಯಾಗಿದ್ದಾರೆ.

ಪಣೋಲಿಬೈಲ್ ಕಲ್ಲುರ್ಟಿ ಕ್ಷೇತ್ರ ತುಳುನಾಡಿನ ಅತ್ಯಂತ ಶ್ರೀಮಂತ ಕ್ಷೇತ್ರ. ವಾರಕ್ಕೆ ಐದು ದಿವಸ ಇಪ್ಪತ್ತು ಹರಕೆಯ ಕೋಲ ಅದೇ ರೀತಿ ವಾರದ ಮೂರು ದಿನ ನಾಲ್ಕು ಸಾವಿರಕ್ಕೂ ಹೆಚ್ಚು ಅಗೆಲು ಸೇವೆ ಹರಕೆಯನ್ನು ಪಡೆಯುತ್ತಿರುವ ಕ್ಷೇತ್ರವಿದು. ಮದುವೆ, ವಿದ್ಯೆ, ಕಷ್ಟಕಾರ್ಪಣ್ಯ, ಕಳ್ಳತನ ಉದ್ಯೋಗಕ್ಕೆ ಅಲ್ಲದೆ ಶರೀರದಲ್ಲಿರುವ ಪ್ರೇತಾತ್ಮ ಇನ್ನಿತ್ತರ ದುಷ್ಟಶಕ್ತಿಗಳನ್ನು ಕೋಲದಲ್ಲಿ ವಿಮೋಚನೆಗೊಳಿಸುತ್ತಾರೆ. ಈ ಜಾಗದಲ್ಲಿ ಪಟ್ಟ ಹರಕೆ ಹೇಳುತ್ತಾ ಜನರು ಕಷ್ಟ ಕಳೆಯುತ್ತಾ ಇರುವ ಶ್ರೀ ಕ್ಷೇತ್ರ ಪಣೋಲಿಬೈಲು.

ಈ ಪ್ರದೇಶಕ್ಕೆ ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಸುಬ್ರಹ್ಮಣ್ಯ, ನೆಲ್ಯಾಡಿ, ಮಡಿಕೇರಿ, ಮಂಗಳೂರು, ಮಂಜೇಶ್ವರ, ಕಾಸರಗೋಡು, ಉಡುಪಿ, ಕುಂದಾಪುರ, ಕಾರ್ಕಳ, ಮೂಡಬಿದ್ರೆ, ಕೊಡಗು ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಬರುತ್ತಾರೆ. ಇತರ ಪ್ರದೇಶಗಳಿಂದಲೂ ಗಮನಾರ್ಹ ಪ್ರಮಾಣದ ಭಕ್ತರು ನಡೆದುಕೊಳ್ಳುತ್ತಾರೆ. ಹರಕೆ ಕಾಣಿಕೆ, ಅಗೇಲು ಕೋಲ ಬೆಳ್ಳಿ ಬಂಗಾರದ ಸೇವೆಯನ್ನು ಕೊಡುತ್ತಿದ್ದಾರೆ. ಆಸ್ತಿ ವಿಚಾರ ತಕರಾರು, ಕೋರ್ಟ್ ವಿಚಾರ ಇನ್ನಿತರ ಕಷ್ಟ ಕಾರ್ಪಣ್ಯದಲ್ಲಿದ್ದವರು ಈ ಕ್ಷೇತ್ರಕ್ಕೆ ಬಂದು ದೈವದ ಮುಂದೆ ತಮ್ಮ ಕಷ್ಟ ತೋಡಿಕೊಂಡು ಹರಕೆಯನ್ನು ಹೇಳಿಕೊಳ್ಳುತ್ತಾರೆ. ಸತ್ಯ, ಧರ್ಮ, ನ್ಯಾಯವನ್ನು ಎತ್ತಿ ಹಿಡಿಯುವ ಈ ದೈವವು ಎಲ್ಲಾ ಮೂಲೆಗಳಂದಲೂ ಭಕ್ತರನ್ನು ಸೆಳೆದುಕೊಳ್ಳುತ್ತಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ