Chikkaballapur Medical College: ಉಚಿತ ವೈದ್ಯಕೀಯ ಶಿಕ್ಷಣ ನೀಡುವ ಚಿಕ್ಕಬಳ್ಳಾಪುರದ ಮೆಡಿಕಲ್ ಕಾಲೇಜು ನಾಳೆ ಮೋದಿಯಿಂದ ಲೋಕಾರ್ಪಣೆ
Mar 24, 2023 11:49 AM IST
Chikkaballapur Medical College: ಉಚಿತ ವೈದ್ಯಕೀಯ ಶಿಕ್ಷಣ ನೀಡುವ ಚಿಕ್ಕಬಳ್ಳಾಪುರದ ಮೆಡಿಕಲ್ ಕಾಲೇಜು ನಾಳೆ ಮೋದಿಯಿಂದ ಲೋಕಾರ್ಪಣೆ
ಚಿಕ್ಕಬಳ್ಳಾಪುರದ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯನ್ನು ಪ್ರಧಾನಿ ನರೇಂದ್ರ ಮೋದಿ ನಾಳೆ ಲೋಕಾರ್ಪಣೆ ಮಾಡಲಿದ್ದಾರೆ.
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ನೂತನ ಮೆಡಿಕಲ್ ಕಾಲೇಜು ನಿರ್ಮಾಣಗೊಂಡಿದೆ. ಈ ವೈದ್ಯಕೀಯ ಕಾಲೇಜಿಗೆ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಎಂದು ನಾಮಕರಣ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ನಾಳೆ ಈ ವೈದ್ಯಕೀಯ ಕಾಲೇಜನ್ನು ಲೋಕಾರ್ಪಣೆಗೊಳಿಸಲಿದ್ದಾರೆ.
100 ವಿದ್ಯಾರ್ಥಿಗಳಿಗೆ ಉಚಿತ ವೈದ್ಯಕೀಯ ಶಿಕ್ಷಣ
ಈ ಮೆಡಿಕಲ್ ಕಾಲೇಜು ನೂರು ಹಾಸಿಗೆಗಳನ್ನು ಹೊಂದಿದೆ. ಇದಕ್ಕೆ ತಕ್ಕಂತೆ ಪ್ರತಿವರ್ಷ ನೂರು ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಂಪೂರ್ಣವಾಗಿ ಉಚಿತವಾಗಿ ಮೆಡಿಕಲ್ ಸೀಟು ನೀಡಲಾಗುತ್ತಿದೆ. ಈ ರೀತಿ ಉಚಿತವಾಗಿ ಶಿಕ್ಷಣ ನೀಡಲು ಸರಕಾರ ಅನುಮತಿ ನೀಡಿದೆ. ಈ ರೀತಿ ಉಚಿತವಾಗಿ ಶಿಕ್ಷಣ ಪಡೆಯಲು ಕೆಲವು ಷರತ್ತುಗಳು ಇವೆ. ಈ ರೀತಿ ಉಚಿತವಾಗಿ ಮೆಡಿಕಲ್ ಸೀಟ್ ಪಡೆದ ವಿದ್ಯಾರ್ಥಿಗಳು ಇದೇ ಮೆಡಿಕಲ್ ಕಾಲೇಜಿನಲ್ಲಿ ಐದು ವರ್ಷ ವೈದ್ಯರಾಗಿ ಸೇವೆ ಸಲ್ಲಿಸಬೇಕು. ಪ್ರಶಾಂತ ಬಾಲಮಂದಿರ ಟ್ರಸ್ಟ್ ಈ ಮೆಡಿಕಲ್ ಕಾಲೇಜಿನ ನಿರ್ವಹಣೆ ಮಾಡಲಿದೆ. ಉಚಿತವಾಗಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಇದೇ ಟ್ರಸ್ಟ್ ಅಧ್ಯಯನ ಸಾಮಗ್ರಿಗಳನ್ನು ನೀಡಲಿದೆ.
ಆಸ್ಪತ್ರೆಯಲ್ಲೂ ಉಚಿತ ಸೇವೆ
ಈ ಮೆಡಿಕಲ್ ಕಾಲೇಜಿಗೆ ಹೊಂದಿಕೊಂಡಂತೆ ಈಗಾಗಲೇ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ. 360 ಹಾಸಿಗೆಗಳನ್ನು ಹೊಂದಿರುವ ಈ ಆಸ್ಪತ್ರೆಯಲ್ಲಿ 30 ಹಾಸಿಗೆಗಳನ್ನು ತುರ್ತು ಚಿಕಿತ್ಸೆಗೆ ಮೀಸಲಿರಿಸಲಾಗಿದೆ. ಇಲ್ಲಿ ರೋಗಿಗಳಿಗೆ ಸಂಪೂರ್ಣವಾಗಿ ಉಚಿತವಾಗಿ ವೈದ್ಯಕೀಯ ಸೇವೆ ನೀಡಲಾಗುತ್ತಿದೆ.
ಸುಮಾರು 350 ಕೋಟಿ ರೂ. ವೆಚ್ಚದಲ್ಲಿ ಈ ಮೆಡಿಕಲ್ ಕಾಲೇಜಿನ ಕಟ್ಟಡವನ್ನು ನಿರ್ಮಿಸಲಾಗಿದೆ. ಪ್ರಧಾನಿ ಮೋದಿಯವರು ನಾಳೆ ಬೆಳಗ್ಗೆ 10:45ಕ್ಕೆ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಆಗಮಿಸಲಿದ್ದಾರೆ. ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.
ಬೆಂಗಳೂರಿನಲ್ಲಿ ನಾಳೆ ಪ್ರಧಾನಿ ನರೇಂದ್ರ ಮೋದಿ ವೈಟ್‌ಫೀಲ್ಡ್‌ನ ನಮ್ಮ ಮೆಟ್ರೋ ರೈಲು ಮಾರ್ಗ ಉದ್ಘಾಟನೆ ಮಾಡಲಿದ್ದಾರೆ. ಮೊದಲಿಗೆ ವೈಟ್‌ಫೀಲ್ಡ್ ಮೆಟ್ರೋ ರೈಲು ಮಾರ್ಗವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ನಂತರ ದಾವಣಗೆರೆಯಲ್ಲಿ ಬಿಜೆಪಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
ಕರ್ನಾಟಕ ಸೇರಿ ಏಳು ರಾಜ್ಯಗಳಲ್ಲಿ ಪಿಎಂ ಮಿತ್ರಾ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಆರಂಭಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಘೋಷಿಸಿದ್ದಾರೆ. ಇದರಂತೆ, ಕರ್ನಾಟಕದ ಹೊರತಾಗಿ, ತಮಿಳುನಾಡು, ಗುಜರಾತ್, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶಗಳಲ್ಲಿ ಪಿಎಂ ಮಿತ್ರಾ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆಯಾಗಲಿದೆ. ಪಿಎಂ ಮಿತ್ರ ಮೆಗಾ ಟೆಕ್ಸ್‌ಟೈಲ್ ಪಾರ್ಕ್‌ಗಳು ಜವಳಿ ಕ್ಷೇತ್ರಕ್ಕೆ ಅತ್ಯಾಧುನಿಕ ಮೂಲಸೌಕರ್ಯಗಳನ್ನು ಒದಗಿಸುತ್ತವೆ, ಕೋಟಿಗಟ್ಟಲೆ ಹೂಡಿಕೆಯನ್ನು ಆಕರ್ಷಿಸುತ್ತವೆ ಮತ್ತು ಲಕ್ಷಗಟ್ಟಲೆ ಉದ್ಯೋಗಗಳನ್ನು ಸೃಷ್ಟಿಸುತ್ತವೆ. ಇದು 'ಮೇಕ್ ಇನ್ ಇಂಡಿಯಾ' ಮತ್ತು 'ಮೇಕ್ ಫಾರ್ ದಿ ವರ್ಲ್ಡ್'ಗೆ ಉತ್ತಮ ಉದಾಹರಣೆಯಾಗಲಿದೆ ಎಂದು ಮೋದಿ ಹೇಳಿದ್ದಾರೆ. ಈ ಕುರಿತ ವರದಿ ಓದಿ.