logo
ಕನ್ನಡ ಸುದ್ದಿ  /  Karnataka  /  Hubli Dharwad News Lakshmi Hebbalkar Will In Charge Of Dharwad, Santosh Lad, Karnataka Political Updates In Kannada Pcp

Dharwad News: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಸಿಗುವುದೇ ಧಾರವಾಡದ ಉಸ್ತುವಾರಿ, ಸಂತೋಷ್‌ ಲಾಡ್‌ಗೆ ಎಲ್ಲಿಯ ಜವಾಬ್ದಾರಿ?

HT Kannada Desk HT Kannada

May 31, 2023 08:51 PM IST

Darwad News: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರಗೆ ಸಿಗುವುದೇ ಧಾರವಾಡದ ಉಸ್ತುವಾರಿ

    • Hubli Darwad News: ಪ್ರಬಲ ಪಂಚಮಸಾಲಿ ಲಿಂಗಾಯತ ಸಮುದಾಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಅವರಿಗೆ ಧಾರವಾಡ ಜಿಲ್ಲೆ ಉಸ್ತುವಾರಿ ಸಚಿವರನ್ನಾಗಿಸುವ ಚಿಂತನೆಯೂ ಹೈಕಮಾಂಡ್ ಮುಂದಿದೆ ಎನ್ನಲಾಗಿದೆ. 
Darwad News: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರಗೆ ಸಿಗುವುದೇ ಧಾರವಾಡದ ಉಸ್ತುವಾರಿ
Darwad News: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರಗೆ ಸಿಗುವುದೇ ಧಾರವಾಡದ ಉಸ್ತುವಾರಿ

ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆ ಎನಿಸಿರುವ ಧಾರವಾಡ ಜಿಲ್ಲೆಯ ಉಸ್ತುವಾರಿ ಸಚಿವರು ಯಾರಾಗುತ್ತಾರೆ ಎಂಬುದು ಸದ್ಯದ ಚರ್ಚಿತ ವಿಷಯ. ಜಿಲ್ಲೆಯಿಂದ ಏಕೈಕ ಸಚಿವರಾಗಿರುವ ಸಂತೋಷ ಲಾಡ್ ಅವರಿಗೆ ತಪ್ಪು ಸಾಧ್ಯತೆಗಳೂ ಇವೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಇತ್ತ ನೆರೆಯ ಜಿಲ್ಲೆ ಬೆಳಗಾವಿಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ ಧಾರವಾಡದ ಉಸ್ತುವಾರಿ ನೀಡುವ ಚಿಂತನೆಗಳೂ ವರಿಷ್ಠ ಮುಂದಿವೆ.

ಟ್ರೆಂಡಿಂಗ್​ ಸುದ್ದಿ

Hassan Scandal; ಹಾಸನ ಹಗರಣದ ಸಂತ್ರಸ್ತೆ ನಾಪತ್ತೆ ಆತಂಕಕಾರಿ, ಪ್ರಜ್ವಲ್‌ ರೇವಣ್ಣ ಬಂಧನ ಯಾವಾಗ, ಫೇಸ್‌ಬುಕ್ ಪೋಸ್ಟಲ್ಲಿ ವಾಸು ಎಚ್‌ವಿ ಕಳವಳ

Bengaluru Rains: ದಾಖಲೆಯ ಬಿಸಿ ಕಂಡ ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆ; ರಣ ಬಿಸಿಲಿಗೆ ಬೆಂದ ಜನ ಫುಲ್ ಖುಷ್

NEP ಅಥವಾ SEP: ಪದವಿ ಕೋರ್ಸ್ ಪ್ರವೇಶ ಗೊಂದಲ ರಾಜ್ಯವ್ಯಾಪಿ; ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ವಿದ್ಯಾರ್ಥಿಗಳ ಹಪಾಹಪಿ

ಮೈಸೂರು ಕಾರವಾರ ಮೈಸೂರು ನಡುವೆ 2 ಟ್ರಿಪ್‌ ಬೇಸಿಗೆ ವಿಶೇಷ ರೈಲು ಸಂಚಾರ ಇಂದಿನಿಂದ, ವೇಳಾಪಟ್ಟಿ, ಇತರೆ ವಿವರ ಪ್ರಕಟಿಸಿದ ಕೊಂಕಣ ರೈಲ್ವೆ

ಧಾರವಾಡ ಜಿಲ್ಲೆಯಿಂದ ಸಚಿವ ಸ್ಥಾನಕ್ಕೆ ಕಲಘಟಗಿ ಶಾಸಕ ಸಂತೋಷ ಲಾಡ್, ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಹಾಗೂ ಧಾರವಾಡ-ಹುಬ್ಬಳ್ಳಿ ಪೂರ್ವ ಶಾಸಕ ಪ್ರಸಾದ ಅಬ್ಬಯ್ಯ ಅವರ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕೊನೆಯಲ್ಲಿ ಸಂತೋಷ ಲಾಡ್ ಸಚಿವರಾಗಿ ಆಯ್ಕೆಯಾದರು. ಆದರೆ ಜಿಲ್ಲೆಯ ಒಬ್ಬರೆ ಸಚಿವರಾಗಿ, ಉಸ್ತುವಾರಿ ಸಚಿವರಾಗಲೂ ಬಯಸಿರುವ ಲಾಡ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಅನ್ಯ ಜಿಲ್ಲೆಯ ಜವಾಬ್ದಾರಿ ನೀಡಲು ಮುಂದಾಗುತ್ತಿದೆಯೇ ಎಂಬ ಮಾತುಗಳು ಕೇಳಿಬರುತ್ತಿವೆ.

ಲಕ್ಷ್ಮೀ ಹೆಬ್ಬಾಳ್ಕರ ಎಂಟ್ರಿ?

ಪ್ರಬಲ ಪಂಚಮಸಾಲಿ ಲಿಂಗಾಯತ ಸಮುದಾಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಅವರಿಗೆ ಧಾರವಾಡ ಜಿಲ್ಲೆ ಉಸ್ತುವಾರಿ ಸಚಿವರನ್ನಾಗಿಸುವ ಚಿಂತನೆಯೂ ಹೈಕಮಾಂಡ್ ಮುಂದಿದೆ ಎನ್ನಲಾಗಿದೆ. ಧಾರವಾಡ ಜಿಲ್ಲೆಯಲ್ಲಿ ಅತ್ಯಧಿಕ ಲಿಂಗಾಯತ ಸಮುದಾಯದ ಮತಗಳಿದ್ದು, ಲೋಕಸಭಾ ಚುನಾವಣೆ ವೇಳೆಗೆ ಈ ಮತಗಳನ್ನು ಕಾಂಗ್ರೆಸ್ ಪಕ್ಷದತ್ತ ಸೆಳೆಯುವ ನಿಟ್ಟಿನಲ್ಲಿ ಹೆಬ್ಬಾಳ್ಕರ ಉಸ್ತುವಾರಿ ನೀಡುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

ವಿಧಾನಸಭಾ ಚುನಾವಣೆಯಲ್ಲಿ ಪಂಚಮಸಾಲಿ ಮತಗಳನ್ನು ಕಾಂಗ್ರೆಸ್ ಪರ ಸೆಳೆಯುವಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಯಶಸ್ವಿಯಾಗಿದ್ದರು. ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರ ಗೆಲುವಿನಲ್ಲೂ ಪಾತ್ರ ವಹಿಸಿದ್ದ ಹೆಬ್ಬಾಳ್ಕರ ಅವರಿಗೆ ಧಾರವಾಡ ಉಸ್ತುವಾರಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಕ್ಕೆ ಪೂರಕ ಎಂಬಂತೆ ಲಿಂಗಾಯತ ಸಮಾಜದ ಕಾಂಗ್ರೆಸ್ ಮುಖಂಡರು ಸಹ ‘ಲಕ್ಷ್ಮೀ ಹೆಬ್ಬಾಳ್ಕರ ಅವರಿಗೆ ಉಸ್ತುವಾರಿ ನೀಡಿದರೆ ಜಿಲ್ಲೆಯಲ್ಲಿ ಲಿಂಗಾಯತ ಮತಗಳನ್ನು ಕಾಂಗ್ರೆಸ್ ಪಕ್ಷದತ್ತ ಸೆಳೆಯಲು ಅನುಕೂಲವಾಗುತ್ತದೆ. ಮುಂಬರುವ ಲೋಕಸಭಾ ಹಾಗೂ ಜಿಪಂ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವಿಗೆ ಸಹಕಾರಿ ಆಗುತ್ತದೆ’ ಎಂದು ಹೈಕಮಾಂಡ್ ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ.

ಬೆಳಗಾವಿ ಜಿಲ್ಲೆಯಿಂದ ಸತೀಶ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಯಮಕನಮರಡಿ ಕ್ಷೇತ್ರ ಪ್ರತಿನಿಧಿಸುವ ಹಿರಿಯ ಕಾಂಗ್ರೆಸ್ ಮುಖಂಡ ಸಹಜವಾಗಿಯೇ ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಿಗುವ ಸಾಧ್ಯತೆ ಹೆಚ್ಚು. ಈ ಬಗ್ಗೆಯೂ ಕಾಂಗ್ರೆಸ್ ವರಿಷ್ಠರು ಸಹ ಅಂತಿಮ ತೀರ್ಮಾನ ಕೂಡ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ನೆರೆ ಜಿಲ್ಲೆ ಧಾರವಾಡ ಜಿಲ್ಲೆಯ ಉಸ್ತುವಾರಿಯನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಅವರಿಗೆ ನೀಡುವ ಸಾಧ್ಯತೆ ಕೂಡ ಇದೆ.

ಲೋಕಸಭಾ ಚುನಾವಣೆ ಗುರಿ

ಮೊದಲಿನಿಂದಲೂ ಬಿಜೆಪಿ ಭದ್ರಕೋಟೆ ಎನಿಸಿರುವ ಧಾರವಾಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಬಲಪಡಿಸುವ ಚಿಂತನೆ ಹೈಕಮಾಂಡ್ ನಡೆಸಿದೆ. ವಿಧಾನಸಭಾ ಚುನಾವಣೆಯಲ್ಲಿ ಏಳರಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಬಲಪಡಿಸಲು ಸಾಕಷ್ಟು ಪೂರಕ ವಾತಾವರಣ ಸೃಷ್ಟಿಯಾಗಿದ್ದು, ಈ ಹಿನ್ನೆಲೆ ಉಸ್ತುವಾರಿ ಸಚಿವರ ಜವಾಬ್ದಾರಿ ಯಾರಿಗೆ ನೀಡಿದರೆ ಉತ್ತಮ ಎಂಬುದರ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಚಿಂತನೆ ಕೂಡ ನಡೆದಿದೆ.

ಮತ್ತೆ ಲಾಡ್‌ಗೆ ಯಾವ ಜಿಲ್ಲೆ?

ಜಿಲ್ಲೆ ಪ್ರತಿನಿಧಿಸುವ ಸಚಿವರಿಗೆ ಆಯಾ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡುವುದು ಹಿಂದಿನಿಂದಲೂ ಸಂಪ್ರದಾಯ. ಕಲಘಟಗಿ ಶಾಸಕ ಸಂತೋಷ ಲಾಡ್ ಧಾರವಾಡ ಜಿಲ್ಲೆಯಿಂದ ಒಬ್ಬರೇ ಸಚಿವರಾಗಿದ್ದಾರೆ. ಒಂದು ವೇಳೆ ಅವರಿಗೆ ಧಾರವಾಡ ಜಿಲ್ಲೆ ಉಸ್ತುವಾರಿ ನೀಡದಿದ್ದರೆ, ಅವರಿಗೆ ಯಾವ ಜಿಲ್ಲೆಯ ಜವಾಬ್ದಾರಿ ನೀಡಲಾಗುತ್ತದೆ ಎಂಬ ಚರ್ಚೆಗಳೂ ಶುರುವಾಗಿವೆ. ಅಖಂಡ ಧಾರವಾಡ ಜಿಲ್ಲೆಯ ಪಾಲು ಆಗಿದ್ದ ಹಾವೇರಿ ಜಿಲ್ಲೆಗೆ ಈ ಬಾರಿ ಸಚಿವ ಸ್ಥಾನದ ಭಾಗ್ಯ ಸಿಕ್ಕಿಲ್ಲ. ಹೀಗಾಗಿ ಹಾವೇರಿ ಜಿಲ್ಲೆಯ ಉಸ್ತುವಾರಿಯನ್ನು ಸಂತೋಷ ಲಾಡ್ ಅವರಿಗೆ ನೀಡಿದರೂ ಅಚ್ಚರಿ ಎನ್ನಲ್ಲ ಎಂಬುದು ರಾಜಕೀಯ ವಲಯದಲ್ಲಿ ಕೇಳಿ ಬರುವ ಮಾತು.

ಯಾವ ಜಿಲ್ಲೆಯಾದ್ರೂ ಸರಿ

‘ಧಾರವಾಡ ಜಿಲ್ಲೆ ಸೇರಿದಂತೆ ಯಾವ ಜಿಲ್ಲೆಯಲ್ಲಾದರೂ ಕೆಲಸ ಮಾಡಲು ಸಿದ್ಧನಿರುವೆ. ಜಿಲ್ಲಾ ಉಸ್ತುವಾರಿ ಬಗ್ಗೆ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರಿಗೆ ಬಿಟ್ಟ ವಿಚಾರ. ಅವರು ರಾಜ್ಯದ ಯಾವುದೇ ಜಿಲ್ಲೆ ಕೊಟ್ಟರೂ ಕಲಘಟಗಿ ಕ್ಷೇತ್ರದ ಅಭಿವೃದ್ಧಿ ಜೊತೆಗೆ ಉಸ್ತುವಾರಿ ಕೆಲಸವನ್ನು ಸಮರ್ಥವಾಗಿ ನಿಬಾಯಿಸುತ್ತೇನೆ’ ಎಂದು ಸಚಿವ ಸಂತೋಷ ಲಾಡ್ ತಿಳಿಸಿದ್ದಾರೆ.

(ವರದಿ-ಪ್ರಹ್ಲಾದಗೌಡ ಗೊಲ್ಲಗೌಡರ)

    ಹಂಚಿಕೊಳ್ಳಲು ಲೇಖನಗಳು