ಕನ್ನಡ ಸುದ್ದಿ  /  Karnataka  /  Profile Of Karnataka Congress Laxmi Hebbalkar Belgaum Rural Assembly Constituency Powerful Lingayat Women Pcp

Laxmi Hebbalkar Profile: ಬೆಳಗಾವಿ ಕ್ಷೇತ್ರದ ಲಕ್ಷ್ಮಿ ಹೆಬ್ಬಾಳ್ಕರ್‌ ಪರಿಚಯ, ಕಾಂಗ್ರೆಸ್‌ನ ದಿಟ್ಟ ಹೆಣ್ಣು, ದೊಡ್ಡ ಹುದ್ದೆ ಮೇಲೆ ಕಣ್ಣು

ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Election) ಬೆಳಗಾವಿ ವಿಧಾನಸಭಾ ಕ್ಷೇತ್ರದಿಂದ (Belgaum Rural Assembly constituency) ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸುತ್ತಿರುವ ಲಕ್ಷ್ಮಿ ಹೆಬ್ಬಾಳ್ಕರ್‌ (Laxmi Hebbalkar) ವ್ಯಕ್ತಿಚಿತ್ರಣ ಇಲ್ಲಿದೆ.

Laxmi Hebbalkar Profile: ಬೆಳಗಾವಿ ಕ್ಷೇತ್ರದ ಲಕ್ಷ್ಮಿ ಹೆಬ್ಬಾಳ್ಕರ್‌ ಪರಿಚಯ, ಕಾಂಗ್ರೆಸ್‌ನ ದಿಟ್ಟ ಹೆಣ್ಣು, ದೊಡ್ಡ ಹುದ್ದೆ ಮೇಲೆ ಕಣ್ಣು
Laxmi Hebbalkar Profile: ಬೆಳಗಾವಿ ಕ್ಷೇತ್ರದ ಲಕ್ಷ್ಮಿ ಹೆಬ್ಬಾಳ್ಕರ್‌ ಪರಿಚಯ, ಕಾಂಗ್ರೆಸ್‌ನ ದಿಟ್ಟ ಹೆಣ್ಣು, ದೊಡ್ಡ ಹುದ್ದೆ ಮೇಲೆ ಕಣ್ಣು

ಲಕ್ಷ್ಮಿ ಹೆಬ್ಬಾಳ್ಕರ್‌ ಕರ್ನಾಟಕ ರಾಜಕೀಯದಲ್ಲಿ ಚಿರಪರಿಚಿತ ಹೆಸರು. ಕಾಂಗ್ರೆಸ್‌ ಪಕ್ಷದ ದಿಟ್ಟ ನಾಯಕಿಯಾಗಿ ಹೆಸರು ಮಾಡಿದವರು. ವಿಶೇಷವಾಗಿ ಪ್ರಭಾವಿ ಲಿಂಗಾಯತ ನಾಯಕಿ ಎಂದೇ ಹೆಸರಾದವರು. ಹಣಕಾಸು ವಿಷಯದಲ್ಲಿಯೂ ಶ್ರೀಮಂತ ರಾಜಕಾರಣಿ. ರಾಜಕೀಯ ರಂಗದಲ್ಲಿ ಹಲವು ಕಾರಣಗಳಿಂದ ಸುದ್ದಿಯಲ್ಲಿದ್ದವರು. ಡಿಕೆ ಶಿವಕುಮಾರ್‌ ಮನೆಗೆ ಐಟಿ ದಾಳಿಯಾದಗ ಇವರ ಹೆಸರು ಕೇಳಿಬಂದಿತ್ತು. ಇತ್ತೀಚೆಗೆ ಚುನಾವಣೆಗೆ ಕೆಲವೇ ದಿನಗಳಿರುವಾಗ "ನನ್ನನ್ನೂ ಸೇರಿದಂತೆ ಐವತ್ತು ಕಾಂಗ್ರೆಸ್‌ ನಾಯಕರ ಮನೆಗೆ ಐಟಿ ದಾಳಿಯಾಗಲಿದೆ" ಎಂದು ಹೇಳಿದ್ದರು. ಜತೆಗೆ, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಮಹಿಳಾ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ನೋಡಬಯಸುತ್ತೇನೆ ಎಂದು ಇವರು ಇತ್ತೀಚೆಗೆ ಹೇಳಿದ್ದು, ಇವರ ಕಣ್ಣಲ್ಲಿ ದೊಡ್ಡ ಹುದ್ದೆಯ ಕನಸೂ ಇದೆ.

ಹೆಸರು: ಲಕ್ಷ್ಮಿ ಹೆಬ್ಬಾಳ್ಕರ್‌

ಜನ್ಮ ದಿನಾಂಕ: ಮೇ 28, 1975

ಜನ್ಮಸ್ಥಳ: ಬೆಳಗಾವಿ

ಪಕ್ಷ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌

ಶಿಕ್ಷಣ: ಸ್ನಾತಕೋತ್ತರ ಪದವಿ, ಮೈಸೂರು ವಿಶ್ವವಿದ್ಯಾಲಯ

ವೃತ್ತಿ: ರಾಜಕಾರಣಿ, ಸಾಮಾಜಿಕ ಸೇವೆ, ಕೃಷಿ, ಬಿಸ್ನೆಸ್‌

ಪತಿ ಹೆಸರು: ರವೀಂದ್ರ ಹೆಬ್ಬಾಳ್ಕರ್‌

ಧರ್ಮ: ಹಿಂದೂ

ಜಾತಿ: ಲಿಂಗಾಯತ

ವೆಬ್‌ಸೈಟ್‌ ವಿಳಾಸ: laxmihebbalkarmla.com

ಫೇಸ್‌ಬುಕ್‌ ಲಿಂಕ್‌: facebook.com/Laxmihebbalkarofficial

ಟ್ವಿಟ್ಟರ್‌ ಲಿಂಕ್‌: twitter.com/laxmi_hebbalkar

ಇನ್‌ಸ್ಟಾಗ್ರಾಂ: instagram.com/laxmi_hebbalkar

ಸಾಮಾನ್ಯ ಕಾಂಗ್ರೆಸ್‌ ಕಾರ್ಯಕರ್ತೆಯಾಗಿದ್ದ ಲಕ್ಷ್ಮಿ ಹೆಬ್ಬಾಳ್ಕರ್‌ ಈಗ ಏರಿರುವ ಎತ್ತರ ಅವರ ಮಹಾತ್ವಕಾಂಕ್ಷೆ, ಹಠ, ಬದುಕಿನ ಕತೆಗಳನ್ನು ಬಚ್ಚಿಟ್ಟಿದೆ. ಇವರು ಕಾಂಗ್ರೆಸ್‌ನ ಮಹಿಳಾ ಅಧ್ಯಕ್ಷ ಹುದ್ದೆಗೆ ಏರಿರುವ ಇವರು 1975ರಲ್ಲಿ ಬೆಳಗಾವಿಯಲ್ಲಿ ಜನಿಸಿದರು. ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕ ಪದವಿ ಪಡೆದಿದ್ದಾರೆ. ಕಾಲೇಜು ಹಂತದಲ್ಲಿಯೇ ಇವರಲ್ಲಿ ನಾಯಕತ್ವ ಗುಣವಿತ್ತು. ಕಾಲೇಜು ವೇದಿಕೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದರು. ಅಂದಹಾಗೆ, ಇವರ ಕುಟುಂಬ ಬೆಳಗಾವಿಯಲ್ಲಿ ಪ್ರಭಾವಿ ಕುಟುಂಬವಾಗಿತ್ತು. ರವೀಂದ್ರ ಹೆಬ್ಬಾಳ್ಕರ್‌ ಇವರ ಪತಿ. ಮೃನಾಲ್‌ ಹೆಬ್ಬಾಳ್ಕರ್‌ ಇವರ ಮಗ.

ಲಕ್ಷ್ಮಿ ಹೆಬ್ಬಾಳ್ಕರ್‌ ಚಿನ್ನದ ಚಮಚ ಬಾಯಿಗಿಟ್ಟುಕೊಂಡು ಬೆಳೆದಿರಬಹುದು, ಆದರೆ, ಅವರಿಗೆ ಯಶಸ್ಸು ಸುಲಭವಾಗಿ ದಕ್ಕಲಿಲ್ಲ. ಇವರು 2013ರಲ್ಲಿ ರಾಜಕೀಯ ಪ್ರವೇಶ ಮಾಡಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ವಿಧಾನಸಭೆ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಮೊದಲ ಪ್ರಯತ್ನದಲ್ಲಿ ಇವರಿಗೆ ಸೋಲು ಜತೆಯಾಯಿತು. ಬಳಿಕ ಇವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದರು. 2014ರ ಲೋಕಸಭೆ ಚುನಾವಣೆಯಲ್ಲಿಯೂ ಲಕ್ಷ್ಮಿ ಹೆಬ್ಬಾಳ್ಕರ್‌ ಪರಾಭವಗೊಂಡರು.

ಹೀಗೆ, ಸತತವಾಗಿ ಎರಡು ಸೋಲುಗಳ ಸ್ವಾಗತದಲ್ಲಿ ಇವರ ರಾಜಕೀಯ ಜೀವನ ಆರಂಭವಾಯಿತು. ಬಳಿಕ ಇವರನ್ನು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಲಾಯಿತು. 2018ರಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಆ ಸಮಯದಲ್ಲಿ ಮತದಾರರಿಗೆ ಕುಕ್ಕರ್‌ ಹಂಚಿಕೆ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಈ ಚುನಾವಣೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್‌ ಗೆಲುವು ಪಡೆದರು. ಈ ಮೂಲಕ ಕರ್ನಾಟಕ ವಿಧಾನಸಭೆಗೆ ಪ್ರವೇಶಿಸಿದರು.

2023ರ ವಿಧಾನಸಭೆ ಚುನಾವಣೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ಬಿಜೆಪಿಯ ಪ್ರಬಲ ಪ್ರತಿಸ್ಪರ್ಧಿ ಸತೀಶ್‌ ಜಾರಕಿಹೊಳಿ ವಿರುದ್ಧ ಸ್ಪರ್ಧಿಸಿದ್ದಾರೆ. ವಿಶೇಷವೆಂದರೆ, ಒಂದು ಕಾಲದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್‌ ಮತ್ತು ಸತೀಶ್‌ ಜಾರಕಿಹೊಳಿ ಆಪ್ತರಾಗಿದ್ದರು. ರಾಜಕೀಯ ಚದುರಂಗದಾಟದಲ್ಲಿ ಇವರಿಬ್ಬರು ಈಗ ವೈರಿಗಳಂತೆ ಆಡುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರು ಬೆಳಗಾವಿ ರಾಜಕೀಯಕ್ಕೆ ಹಸ್ತಕ್ಷೇಪ ಮಾಡಿರುವುದು ಕೂಡ ಇವರಿಬ್ಬರ ನಡುವಿನ ವೈಮನಸ್ಸಿಗೆ ಕಾರಣ ಎನ್ನಲಾಗುತ್ತಿದೆ.

ಇವರಿಗೆ ಕರ್ನಾಟಕದ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿಯಾಗುವ ಕನಸಿದೆ. ಮಹಿಳೆಯರಿಗೆ ರಾಜಕೀಯ ವೃತ್ತಿ ರೂಪಿಸುವುದು ಸವಾಲಿನ ಸಂಗತಿ ಎಂದು ಅವರು ಹೇಳಿದ್ದರು. ಪಿತೃಪ್ರಧಾನ ಸಮಾಜದಲ್ಲಿ ಮಹಿಳೆಯ ನೈತಿಕತೆಯ ಪ್ರಶ್ನೆ ಎತ್ತುವುದು ಸಾಮಾನ್ಯ. ಮಹಿಳಾ ನಾಯಕಿಯರು ತಮ್ಮ ಗುರಿ ತಲುಪಲು ಪುರುಷರಿಗಿಂತ ಹೆಚ್ಚು ಶ್ರಮಿಸಬೇಕು. ಮುಂದಿನ ದಿನಗಳಲ್ಲಿ ಮಹಿಳಾ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿಯನ್ನು ನೋಡಲು ಬಯಸುತ್ತೇನೆ ಎಂದು ಅವರು ಹೇಳಿದ್ದರು. ಆದರೆ, ಮಹಿಳಾ ಮುಖ್ಯಮಂತ್ರಿ/ಉಪಮುಖ್ಯಮಂತ್ರಿಯಾಗಲು ಇನ್ನಷ್ಟು ದೂರ ಪ್ರಯಾಣಿಸಬೇಕೆನ್ನುವ ಅರಿವು ಅವರಿಗಿದೆ. "ನಾನು ಲಾಂಗ್‌ ಜಂಪ್‌ ಮಾಡಲು ಬಯಸುವುದಿಲ್ಲ. ನಿಧಾನವಾಗಿ ಮತ್ತು ಸ್ಥಿರವಾಗಿ ಬೆಳೆಯಲು ನಂಬಿಕೆ ಇಟ್ಟಿದ್ದೇನೆ" ಎಂದು ಅವರು ಇತ್ತೀಚೆಗೆ ಹೇಳಿದ್ದರು.

ಸುಮಾರು ಹಲವು ಕೋಟಿ ರೂ. ಆಸ್ತಿ ಹೊಂದಿರುವ ಇವರು ಶ್ರೀಮಂತ ರಾಜಕಾರಣಿಯೂ ಹೌದು. ಇವರು 2014ರಲ್ಲಿ ಆಸ್ತಿ ಘೋಷಣೆ ಮಾಡಿದ್ದಾಗ ಇವರಲ್ಲಿ ಆರೂವರೆ ಕೋಟಿ ರೂಪಾಯಿಯ ಆಸ್ತಿ ಇತ್ತು. 2018ರ ಚುನಾವಣೆಯ ವೇಳೆಗೆ ಇದು 26 ಕೋಟಿ ರೂ.ಗೆ ಬೆಳೆದಿತ್ತು. ಚುನಾವಣಾ ಅವಧಿಯಲ್ಲಿ ಇವರು ಘೋಷಿಸಿದ ಪ್ರಕಾರ, ಇವರು 8.1 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಸುಮಾರು 7 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಚರಾಸ್ತಿ ಮೌಲ್ಯ 90 ಲಕ್ಷ ರೂ.ಗೂ ಅಧಿಕವಿದೆ.

 

IPL_Entry_Point