JDS Manifesto 2023: ಜನತಾ ಪ್ರಣಾಳಿಕೆ ಬಿಡುಗಡೆ ಮಾಡಿದ ಜೆಡಿಎಸ್; ಪಂಚರತ್ನ ಯೋಜನೆಯ ವಿಸ್ತೃತ ನೋಟ ಮತ್ತು ಇತರೆ ಹೈಲೈಟ್ಸ್
Apr 27, 2023 07:01 PM IST
ಜೆಡಿಎಸ್‌ನ ಜನತಾ ಪ್ರಣಾಳಿಕೆ 2023
JDS Manifesto 2023: ಜೆಡಿಎಸ್ ಚುನಾವಣಾ ಪ್ರಣಾಳಿಕೆ “ಜನತಾ ಪ್ರಣಾಳಿಕೆ” (Janata Pranalike) ಬಿಡುಗಡೆ ಆಗಿದೆ. ಈ ಹಿಂದೆಯೇ ಘೋಷಿಸಿದ್ದ ಪಂಚರತ್ನ ಯೋಜನೆಯ ವಿಸ್ತೃತ ವಿವರಣೆ ಇದರಲ್ಲಿದೆ. ಪೂರ್ಣ ವರದಿಗೆ ಮುಂದೆ ಓದಿ.
ಕರ್ನಾಟಕ ವಿಧಾನಸಭಾ ಚುನಾವಣೆ 2023 (Karnataka Assembly Election 2023)ರ ಮತದಾನದ ದಿನಕ್ಕೆ ದಿನಗಣನೆ ಶುರುವಾಗಿದೆ. ಪ್ರಚಾರ ಕಣ ರಂಗೇರತೊಡಗಿದೆ. ಜೆಡಿಎಸ್ ತನ್ನ ಪ್ರಣಾಳಿಕೆ (JDS Manifesto) ಯನ್ನು ಇಂದು (ಏ.27) ಬಿಡುಗಡೆ ಮಾಡಿದೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಜೆಡಿಎಸ್ ಚುನಾವಣಾ ಪ್ರಣಾಳಿಕೆ “ಜನತಾ ಪ್ರಣಾಳಿಕೆ” (Janata Pranalike) ಬಿಡುಗಡೆ ಆಗಿದೆ. ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಬಿ ಎಂ ಫಾರೂಕ್, ಪಕ್ಷದ ಕಾರ್ಯಾಧ್ಯಕ್ಷ ಅಲ್ಕೋಡ್ ಹನುಮಂತಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಗೌಡ ಮತ್ತುಇತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಣಾಳಿಕೆಗೆ ʻಜನತಾ ಪ್ರಣಾಳಿಕೆ" ಎಂದು ಜೆಡಿಎಸ್ ಹೆಸರಿಟ್ಟಿದೆ. ಇದು 36 ಪುಟಗಳ ಪುಸ್ತಿಕೆಯಾಗಿದ್ದು, ಈ ಹಿಂದೆಯೇ ಘೋಷಿಸಿದ್ದ ಪಂಚರತ್ನ ಯೋಜನೆಯ ವಿಸ್ತೃತ ವಿವರಣೆ ಇದರಲ್ಲಿದೆ. ಜನತಾ ಪ್ರಣಾಳಿಕೆಯಲ್ಲಿ 6ರಿಂದ 11 ಪುಟಗಳಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳನ್ನು ಘೋಷಿಸಲಾಗಿದೆ. 12ನೇ ಪುಟದಿಂದ 19ನೇ ಪುಟಗಳ ತನಕ ಪಂಚರತ್ನ ಯೋಜನೆ (ಶಿಕ್ಷಣವೇ ಆಧುನಿಕ ಶಕ್ತಿ, ಆರೋಗ್ಯವೇ ಸಂಪತ್ತು, ರೈತ ಚೈತನ್ಯ, ವಸತಿ ಆಸರೆ, ಯುವನವ ಮಾರ್ಗ ಮತ್ತು ಮಹಿಳಾ ಸಬಲೀಕರಣ)ಗಳ ವಿವರ ಇದೆ.
ಇದೇ ರೀತಿ, ಮುಂದಿನ ಪುಟಗಳಲ್ಲಿ ಕೈಗಾರಿಕಾ ಅಭಿವೃದ್ಧಿ, ಸಾರಿಗೆ ಮತ್ತು ಪ್ರವಾಸೋದ್ಯಮ, ಜಲಧಾರೆ, ರಸ್ತೆ ಅಭಿವೃದ್ಧಿ -ಸಂಪರ್ಕ ಸೇತುವೆಗಳು, ಇಂಧನ ವಲಯ, ಆಡಳಿತ ಸುಧಾರಣೆ, ಕೃಷಿ ಮತ್ತು ಹೈನುಗಾರಿಕೆ ಕುರಿತ ಯೋಜನೆಗಳನ್ನು ಘೋಷಿಸಲಾಗಿದೆ.
ಸಾಮಾಜಿಕ ಭದ್ರತೆಯಲ್ಲಿ ಏನೇನು- ಮಾತೃಶ್ರೀ ಯೋಜನೆ, ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗೆ ಪರಿಹಾರ, ರೈತ ಬಂಧು ಯೋಜನೆ, ಸಾರಥಿಗೆ ಸೈ, ರಕ್ಷಕ ಬಂಧು, ಹಿರಿ-ಸಿರಿ, ಚೈತನ್ಯ ಯೋಜನೆ, ಸಾರಿಗೆ ನೌಕರರ ಬೇಡಿಕೆ ಈಡೇರಿಕೆ, ಧಾರ್ಮಿಕ ಅಲ್ಪಸಂಖ್ಯಾತರ ಏಳಿಗೆ, ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ, ವೃತ್ತಿನಿರತ ವಕೀಲರ ರಕ್ಷಣೆಗೆ ಕಾಯ್ದೆ, ಮೀಸಲಾತಿ ಗೊಂದಲ ನಿವಾರಣೆ, ಎಸ್‌ಸಿ, ಎಸ್‌ಟಿ ಏಳಿಗೆ ಮತ್ತು ಅಭಿವೃದ್ಧಿ, ಬಗರ್ ಹುಕುಂ ಸಾಗುವಳಿ ಮತ್ತು ಇತರೆ ವಿವರಗಳಿವೆ.
ಕನ್ನಡ ಮತ್ತು ಸಂಸ್ಕೃತಿ ವಿಚಾರ - ಕನ್ನಡ ನಾಡಿನಲ್ಲಿರುವ ಭಾಷೆಗಳ ಸಂಸ್ಕೃತಿ ಸಂರಕ್ಷಣೆ ಮತ್ತು ಅಭಿವೃದ್ಧಿ, ಆರಕ್ಷಕರಿಗೆ ಅಭಯ, ಕಲಾ ಪ್ರೋತ್ಸಾಹ, ಆಯುಷ್ ವೈದ್ಯರಿಗೆ ಅಭಯ, ಸ್ವರ್ಣ ಕುಟೀರ ಯೋಜನೆಗಳ ವಿವರವನ್ನು ಉಲ್ಲೇಖಿಲಾಗಿದೆ.
ಇಷ್ಟಾದ ಬಳಿಕ ಮುಂದಿನ ಪುಟಗಳಲ್ಲಿ ಪಂಚ ರತ್ನ ಯೋಜನೆಗಳ ವಿವರವನ್ನು ಜೆಡಿಎಸ್‌ನವರು ಸೇರಿಸಿದ್ದಾರೆ. ಇದು ಅವರ ಮಹತ್ವಾಕಾಂಕ್ಷೆಯ ಯೋಜನೆ. JDS Pancharatna yatre Explained: ಏನಿದು ಜೆಡಿಎಸ್‌ನ ಪಂಚರತ್ನ ಯೋಜನೆ, ಪಂಚರತ್ನ ರಥಯಾತ್ರೆ ಯಾವಾಗ, ಎಲ್ಲಿಂದ ಶುರು?
ಮುಂದೆ ಕೈಗಾರಿಕಾ ಅಭಿವೃದ್ಧಿಯ ವಿಚಾರ ಪ್ರಸ್ತಾಪವಾಗಿದೆ. ಇದರಲ್ಲಿ, ಮಹತ್ವಾಕಾಂಕ್ಷೆ ಜಿಲ್ಲೆಗಳ ಕೃಷಿ ಮತ್ತು ಉದ್ಯಮ ಆಧಾರಿತ ಕ್ಲಸ್ಟರ್‌ಗಳ ಸ್ಥಾಪನೆ ವಿವರ ಇದೆ. ತಾಲೂಕು ಮಟ್ಟದಲ್ಲಿ ಕೈಗಾರಿಕಾ ವಸಾಹತುಗಳ ಸ್ಥಾಪನೆ ಚಿತ್ರಣ ನೀಡಿದ್ದಾರೆ.
ಸಾರಿಗೆ ಮತ್ತು ಪ್ರವಾಸೋದ್ಯಮ ಕ್ಷೇತ್ರದ ಬಗ್ಗೆ ನೀಡಿರುವ ಚುನಾವಣಾ ಭರವಸೆಯಲ್ಲಿ, ಮೈಸೂರಿನ ಹೊರವಲಯದಲ್ಲಿ ಡಿಸ್ನಿ ವರ್ಲ್ಡ್ ಜತೆಗೆ ಒಪ್ಪಂದಮಾಡಿಕೊಂಡು ಅಮ್ಯೂಸ್‌ಮೆಂಟ್ ಪಾರ್ಕ್ ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದಾರೆ.
ಜಲಧಾರೆಯಲ್ಲಿ ಭದ್ರಾ ಮೇಲ್ದಂಡೆ, ಮೇಕೆದಾಟು ಯೋಜನೆ, ಮಹದಾಯಿ, ಎತ್ತಿನಹೊಳೆ ಯೋಜನೆಗಳ ಪ್ರಸ್ತಾಪವಾಗಿದೆ. ಇನ್ನುಳಿದಂತೆ, ರಸ್ತೆ ಮೂಲಸೌಕರ್ಯ ಸೇರಿ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಕೆಲವು ಭರವಸೆಗಳಿವೆ.