logo
ಕನ್ನಡ ಸುದ್ದಿ  /  ಕರ್ನಾಟಕ  /  Kalaburagi News: ಹಿಂದಿನ ಸರ್ಕಾರದ ತಪ್ಪುಗಳನ್ನು ಸರಿಪಡಿಸಿ, ಕಲಬುರಗಿಯನ್ನು ಅಭಿವೃದ್ಧಿಪಡಿಸುತ್ತೇವೆ; ಸಚಿವ ಪ್ರಿಯಾಂಕ್​ ಖರ್ಗೆ ಅಭಿಮತ

Kalaburagi News: ಹಿಂದಿನ ಸರ್ಕಾರದ ತಪ್ಪುಗಳನ್ನು ಸರಿಪಡಿಸಿ, ಕಲಬುರಗಿಯನ್ನು ಅಭಿವೃದ್ಧಿಪಡಿಸುತ್ತೇವೆ; ಸಚಿವ ಪ್ರಿಯಾಂಕ್​ ಖರ್ಗೆ ಅಭಿಮತ

HT Kannada Desk HT Kannada

Jul 09, 2023 02:02 PM IST

ಸಚಿವ ಪ್ರಿಯಾಂಕ್‌ ಖರ್ಗೆ

    • Kalaburagi News: ಕಲಬುರಗಿ ಜಿಲ್ಲೆಯಲ್ಲಿ ನೀರು ಸರಬರಾಜು ಹಾಗೂ ನೀರಿನ ಗುಣಮಟ್ಟಕ್ಕೆ ಸಂಬಂಧಿಸಿದ ದೂರುಗಳನ್ನು ಪರಿಹರಿಸಲು ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ದೂರು ಪರಿಹಾರ ಕೋಶವನ್ನು ಸ್ಥಾಪಿಸಲಾಗಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ತಿಳಿಸಿದ್ದಾರೆ.
ಸಚಿವ ಪ್ರಿಯಾಂಕ್‌ ಖರ್ಗೆ
ಸಚಿವ ಪ್ರಿಯಾಂಕ್‌ ಖರ್ಗೆ

ಕಲಬುರಗಿ: ಜಿಲ್ಲೆಯಲ್ಲಿ ಕಳೆದ ವಾರದಿಂದ ಮಳೆಯಾಗುತ್ತಿದ್ದು, ಕುಡಿಯುವ ನೀರು ಸರಬರಾಜಿನಲ್ಲಿ ಆಗಿದ್ದ ಸಮಸ್ಯೆಗಳು ಸುಧಾರಣೆಯಾಗುತ್ತಿದೆ. ಆದಾಗ್ಯೂ ಜಿಲ್ಲೆಯ ಕೆಲವು ಭಾಗಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಆಗಿರುವ ತೊಂದರೆಯನ್ನು ಎದುರಿಸಲು 100 ಲಕ್ಷ ಅನುದಾನವನ್ನು ತುರ್ತು ನಿರ್ವಹಣೆಗಾಗಿ ಮಂಜೂರು ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ, ಮಾಹಿತಿ ತಂತ್ರಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ತಿಳಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Hassan Scandal: 100 ಕೋಟಿ ರೂ. ಆಫರ್ ವಿಚಾರವನ್ನು ಎಸ್‌ಐಟಿ ನೋಡಿಕೊಳ್ಳುತ್ತೆ, ದೇವರಾಜೇಗೌಡ ಜೈಲಲ್ಲೇ ಇರ್ತಾರೆ: ಗೃಹ ಸಚಿವ

Hassan Scandal : ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ

Wildlife News: ಹುಲಿ ಉಗುರು ಪ್ರಕರಣ, ವನ್ಯಜೀವಿಗಳ ಅಂಗಾಂಗ ಹಸ್ತಾಂತರ ಇನ್ನಷ್ಟು ವಿಳಂಬ ಸಾಧ್ಯತೆ

Hubli News:ಅಂಜಲಿ ಅಂಬಿಗೇರ ಹತ್ಯೆ, ಹುಬ್ಬಳ್ಳಿ ಐಪಿಎಸ್‌ ಅಧಿಕಾರಿ ರಾಜೀವ್‌ ಸಸ್ಪೆಂಡ್‌, ಪೊಲೀಸ್‌ ಆಯುಕ್ತರ ತಲೆದಂಡ ಸಾಧ್ಯತೆ

130 ಕಾಮಗಾರಿಗಳಿಗೆ ಅನುದಾನ

ಈ‌ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಜಿಲ್ಲೆಯ ಯಡ್ರಾಮಿ ಹಾಗೂ ಜೇವರ್ಗಿ ತಾಲೂಕುಗಳ ತಲಾ ಒಂದೊಂದು ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಮುಂಬರುವ ವಾರಗಳಲ್ಲಿ ಕಡಿಮೆ ಮಳೆಯಿಂದ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದಾದ ಗ್ರಾಮಗಳನ್ನು ಮೌಲ್ಯಮಾಪನ ಮಾಡಲಾಗಿದೆ. ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಪ್ರಸ್ತುತ 130 ಕಾಮಗಾರಿಗಳಿಗೆ ಸಂಬಂಧಿಸಿದಂತೆ 2.60 ಕೋಟಿ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ ಎಂದರು.

ಚರಂಡಿ ನೀರು ಅಥವಾ ಮಳೆನೀರು ಸೇರುವುದರಿಂದ ಕಲಬುರಗಿ ಜಿಲ್ಲೆಯಲ್ಲಿ 1,828 ಕೊಳವೆಬಾವಿಗಳು ಹಾಗೂ ಕೈಪಂಪುಗಳು ಮಾಲಿನ್ಯಕ್ಕೆ ಗುರಿಯಾಗಿವೆ. ಇಂತಹ ಕೊಳವೆ ಬಾವಿಗಳನ್ನು ಮಾಲಿನ್ಯದಿಂದ ರಕ್ಷಿಸುವ ಸಲುವಾಗಿ ಕೊಳವೆಬಾವಿ ಸುತ್ತಲೂ ರಕ್ಷಣಾತ್ಮಕ ಕಾಂಕ್ರೀಟ್ ರಿಂಗ್ ಅಳವಡಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ 135.20 ಲಕ್ಷ ವೆಚ್ಚವಾಗಲಿದೆ ಎಂದು ತಿಳಿಸಿದ್ದಾರೆ.

7 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು

ಗ್ರಾಮೀಣ ಪ್ರದೇಶಗಳಿಗೆ ನೀರು ಸರಬರಾಜು ಮಾಡಲು ಖಾಸಗಿಯಾಗಿ ಬಾಡಿಗೆಗೆ ಪಡೆಯಾಗಿರುವ ಕೊಳವೆಬಾವಿ ಹಾಗೂ ಟ್ಯಾಂಕರ್‌ಗಳ ಬಾಡಿಗೆ ಶುಲ್ಕದ ಬಿಲ್‌ಗಳನ್ನು ಪಾವತಿಸಲು ಗ್ರಾಮಪಂಚಾಯ್ತಿಗಳಿಗೆ ಅನುದಾನದ ಕೊರತೆಯಿದೆ. ಈ ವೆಚ್ಚವನ್ನು ಭರಿಸಲು 20 ಲಕ್ಷ ರೂಪಾಯಿ ಮಂಜೂರು ಮಾಡಲಾಗುವುದು. ಮೇ-ಜೂನ್‌ ತಿಂಗಳಲ್ಲಿ 7 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸ್ವಚ್ಛತಾ ಅಭಿಯಾನ

ಜಿಲ್ಲೆಯಲ್ಲಿ 200 ಶುದ್ಧ ನೀರಿನ ಘಟಕಗಳು ದುರಸ್ತಿಗೆ ಒಳಗಾಗಿದ್ದು, ಇವುಗಳನ್ನು ಸರಿಪಡಿಸಿ ನೀರು ಸರಬರಾಜು ಮಾಡಲು ಕಾರ್ಯಯೋಜನೆ ಸಿದ್ಧಪಡಿಸಲು ಸೂಚಿಸಲಾಗಿದೆ. ಕೊಳವೆಬಾವಿ ಹಾಗೂ ತೆರೆದ ಬಾವಿಗಳಲ್ಲಿ ಅಂತರ್ಜಲ ಕಲುಷಿತಗೊಳ್ಳದಂತೆ ಸ್ವಚ್ಛತಾ ಅಭಿಯಾನ ಕೈಗೊಂಡು ಸುತ್ತಮುತ್ತಲ ಪ್ರದೇಶಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಲಾಗುತ್ತಿದೆ. ಜಿಇ/ಕಾಲರಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಹಿಂದಿನ ಐದು ವರ್ಷಗಳ ಕಣ್ಗಾವಲು ಮಾಹಿತಿಯನ್ನು ಆಧರಿಸಿ 49 ಗ್ರಾಮಗಳನ್ನು ಗುರುತಿಸಿಲಾಗಿದೆ ಎಂದರು.

ಕುಡಿಯುವ ನೀರು ಸರಬರಾಜಿನಲ್ಲಿ ಯಾವುದೇ ರೀತಿಯ ಮಾಲಿನ್ಯವನ್ನು ತಪ್ಪಿಸಲು ನೀರಿನ ಪರೀಕ್ಷೆ, ಸಂಭವನೀಯ ಜಿಇ ಪ್ರಕರಣಗಳನ್ನು ಗುರುತಿಸಲು ಆಶಾ ಕಾರ್ಯಕರ್ತರ ಮೂಲಕ ಸಮೀಕ್ಷೆ, ನೀರಿನ ಜಾಲದ ವಿವರವಾದ ಲೆಕ್ಕಪರಿಶೋಧನೆಗಾಗಿ ಅಭಿಯಾನವನ್ನು ತೀವ್ರಗೊಳಿಸಿದ್ದೇವೆ. ಗ್ರಾಮಪಂಚಾಯತಿಗಳು ಮಾರ್ಗಸೂಚಿಯನ್ವಯ ನೀರಿನ ಕ್ಲೋರಿನೇಷನ್ ಮಾಡುತ್ತಿದ್ದಾರೆ ಹಾಗೂ ಸಿಬ್ಬಂದಿಗೆ ಇತ್ತೀಚೆಗೆ ತರಬೇತಿ ನೀಡಲಾಗಿದೆ ಎಂದೂ ಸಚಿವರು ತಿಳಿಸಿದ್ದಾರೆ.

ಈ ಬಜೆಟ್ ನಮ್ಮ ಬದ್ಧತೆಯ ಪ್ರತೀಕ

ಹಿಂದಿನ 4 ವರ್ಷಗಳ ಕಾಲ ಸತತವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಕಲಬುರಗಿ ಜಿಲ್ಲೆಗೆ ನಮ್ಮ ಕಾಂಗ್ರೆಸ್ ಸರ್ಕಾರ ಈ ಬಾರಿಯ ಬಜೆಟ್​ನಲ್ಲಿ ಹಲವು ದೊಡ್ಡ ಕೊಡುಗೆಗಳನ್ನು ನೀಡಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಬಜೆಟ್ ಕುರಿತು ತಿಳಿಸಿದ್ದಾರೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಒಂದು ವರ್ಷಕ್ಕೆ 5,000 ಕೋಟಿ ಹಣ ಒದಗಿಸುವ ಮೂಲಕ ಇತಿಹಾಸ ಸೃಷ್ಟಿಸಲಾಗುತ್ತಿದೆ. ಇದು ನಮ್ಮ ಭಾಗದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರದ ಬದ್ಧತೆಯ ದ್ಯೋತಕ ಎಂದು ಹೇಳಿದ್ದಾರೆ.

400 ಮಹಿಳಾ ಶೌಚಾಲಯಗಳಿಗೆ 100 ಕೋಟಿ

ಇನ್ನು ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಗ್ರಾಮ ಪಂಚಾಯತಿ ಕೇಂದ್ರಗಳ ಗ್ರಂಥಾಲಯಗಳು ಅರಿವು ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ನಮ್ಮ ಭಾಗದ ಹೆಣ್ಣು ಮಕ್ಕಳ ಘನತೆ ಕಾಪಾಡುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರತಿ ಸಂಕೀರ್ಣಕ್ಕೆ 25 ಲಕ್ಷದಂತೆ 400 ಮಹಿಳಾ ಸಮುದಾಯ ಶೌಚಾಲಯ ಸಂಕೀರ್ಣಗಳ ನಿರ್ಮಾಣಕ್ಕೆ 100 ಕೋಟಿ ಅನುದಾನ ಬಜೆಟ್​ನಲ್ಲಿ ಮೀಸಲಿರಿಸಲಾಗಿದೆ ಎಂದು ಹೇಳಿದ್ದಾರೆ.

ಸುಸಜ್ಜಿತ ಆಸ್ಪತ್ರೆ ನಿರ್ಮಾಣ

ನಮ್ಮ ಭಾಗದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಘನ ತ್ಯಾಜ್ಯ ವಿಲೇವಾರಿಗೆ ಪ್ರತಿ ಘಟಕಕ್ಕೆ 2 ಕೋಟಿ ರೂಪಾಯಿ ವೆಚ್ಚದಲ್ಲಿ ಸಮರ್ಥನೀಯ ಹಾಗೂ ಸ್ವಾವಲಂಬಿ ವ್ಯವಸ್ಥೆ ಸ್ಥಾಪಿಸಲು ಮೆಟೀರಿಯಲ್ ರಿಕವರಿ ಫೆಸಿಲಿಟಿಗಳ ಸ್ಥಾಪನೆಗೆ ಅನುದಾನ ಒದಗಿಸಲಾಗಿದೆ. ಇನ್ನು ಕಲಬುರ್ಗಿ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಜನರ ಬಯಕೆಯಾಗಿದ್ದ ನೂತನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸ್ಥಾಪನೆಯನ್ನು ನಮ್ಮ ಸರ್ಕಾರ ಘೋಷಿಸಿದೆ. 70 ಕೋಟಿ ವೆಚ್ಚದಲ್ಲಿ 200 ಹಾಸಿಗೆ ಸಾಮರ್ಥ್ಯದ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಲಿದೆ ಎಂದರು.

ಏತ ನೀರಾವರಿ ಯೋಜನೆಗೆ ಬದ್ದ

ಜಿಲ್ಲೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಾರ್ಯಾರಂಭ ಹಾಗೂ ಸುಟ್ಟ ಗಾಯಗಳ ಘಟಕ ಸ್ಥಾಪನೆಗೆ 155 ಕೋಟಿ ಅನುದಾನ, ನೂತನ ಟ್ರಾಮಾ ಕೇರ್ ಸೆಂಟರ್‌ ಕಾರ್ಯಾಚರಣೆಗೆ 30 ಕೋಟಿ, ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ಕಲಬುರಗಿ ಪ್ರಾದೇಶಿಕ ಘಟಕದ ಸೌಲಭ್ಯಗಳ ಸುಧಾರಣೆಗೆ 10 ಕೋಟಿ ಅನುದಾನ ನೀಡಲಾಗಿದೆ. ಸನ್ನತಿ ಏತ ನೀರಾವರಿ ಯೋಜನೆಗೆ ರಾಜ್ಯ ಸರ್ಕಾರ ಬದ್ದವಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಯ ಯೋಜನೆಯಡಿ ಕೇಂದ್ರದ ನೆರವಿಗಾಗಿ ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಎಂದರು.

ಸನ್ನತಿ ಗ್ರಾಮ, ಮಳಖೇಡ ಕೋಟೆ ಹಾಗೂ ಕಲಬುರಗಿ ಕೋಟೆಗಳನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ವಿಶೇಷ ಅನುದಾನವನ್ನು ಒದಗಿಸಲಾಗಿದೆ. ಜೊತೆಗೆ ಕಲಬುರಗಿ ವಸ್ತು ಸಂಗ್ರಹಾಲಯವನ್ನು ಮೇಲ್ದರ್ಜೆಗೆ ಏರಿಸಲು ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಿಖ್ ಸಮುದಾಯ ಅಭಿವೃದ್ಧಿಗೆ ಅನುದಾನ

ಯುವಜನರ ಸಬಲೀಕರಣಕ್ಕಾಗಿ ಕಲಬುರಗಿಯಲ್ಲಿ ರಾಜೀವ್ ಗಾಂಧಿ ಅತ್ಯಾಧುನಿಕ ಕೌಶಲ್ಯ ಪ್ರಯೋಗಾಲಯ, ಸಂಶೋಧನಾ ಕೇಂದ್ರ ಮತ್ತು ಒಳಾಂಗಣ ಕ್ರೀಡಾ ಸೌಲಭ್ಯ ಮತ್ತು ಅಲೈಡ್ ಹೆಲ್ತ್ ಸೈನ್ಸ್ ಕಾಲೇಜುಗಳು ಸ್ಥಾಪನೆಯಾಗಲಿದೆ. ಜಿಲ್ಲೆಯಲ್ಲಿ ಕೆರೆ ತುಂಬುವ ಕಾರ್ಯವನ್ನು ಪ್ರಾರಂಭಿಸಲಾಗುವುದು. ಸಿಖ್ ಸಮುದಾಯದ ಪೂಜಾಕೇಂದ್ರ ಗುರುದ್ವಾರದ ಅಭಿವೃದ್ಧಿಗಾಗಿ ಅನುದಾನ ಒದಗಿಸಲಾಗಿದೆ. ಹಿಂದಿನ ಅನ್ಯಾಯಗಳನ್ನು ಸರಿಪಡಿಸಿ, ನಮ್ಮ ಜಿಲ್ಲೆಯನ್ನು ಮತ್ತೆ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸಲು ಮೊದಲ ಹೆಜ್ಜೆಯನ್ನು ಇಡಲಾಗಿದೆ ಎಂದಿದ್ದಾರೆ.

ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ