logo
ಕನ್ನಡ ಸುದ್ದಿ  /  ಕರ್ನಾಟಕ  /  Kalaburagi News: ಕನ್ನಡಿಗರ ಅಸ್ಮಿತೆ ಮತ್ತು ಅಕ್ಕಿ ವಿಚಾರದಲ್ಲಿ ರಾಜಕೀಯ ಮಾಡುತ್ತಿಲ್ಲ ಎಂದ ನಳಿನ್ ಕುಮಾರ್ ಕಟೀಲ್

Kalaburagi News: ಕನ್ನಡಿಗರ ಅಸ್ಮಿತೆ ಮತ್ತು ಅಕ್ಕಿ ವಿಚಾರದಲ್ಲಿ ರಾಜಕೀಯ ಮಾಡುತ್ತಿಲ್ಲ ಎಂದ ನಳಿನ್ ಕುಮಾರ್ ಕಟೀಲ್

HT Kannada Desk HT Kannada

Jun 23, 2023 04:16 PM IST

google News

ನಳಿನ್‌ ಕುಮಾರ್‌ ಕಟೀಲ್

    • Nalin Kumar Kateel: ನಾವು ಅಕ್ಕಿ ನೀಡುವ ನಿಟ್ಟಿನಲ್ಲಿ ಯಾವುದೇ ರಾಜಕೀಯ ಮಾಡುತ್ತಿಲ್ಲ. ಎಲ್ಲ ರಾಜ್ಯಗಳಿಗೆ ಕೊಟ್ಟಂತೆ ಕರ್ನಾಟಕಕ್ಕೂ ಕೊಡುತ್ತಾ ಇದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ.
ನಳಿನ್‌ ಕುಮಾರ್‌ ಕಟೀಲ್
ನಳಿನ್‌ ಕುಮಾರ್‌ ಕಟೀಲ್

ಕಲಬುರಗಿ: ರಾಜ್ಯದ ಜನತೆಯ ವಿಚಾರದಲ್ಲಿ ಹಾಗೂ ಕನ್ನಡಿಗರ ಅಸ್ಮಿತೆ ವಿಷಯದಲ್ಲಿ ರಾಜಕೀಯ ಮಾಡುತ್ತಿಲ್ಲ. ಕೇಂದ್ರ ಸರ್ಕಾರ ಅಕ್ಕಿ ವಿಚಾರದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಸಿಎಂ ಸಿದ್ರಾಮಣ್ಣಾ ಅವರೇ ಹೇಳಿದ್ದಾರಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಅಕ್ಕಿ ನೀಡುವ ನಿಟ್ಟಿನಲ್ಲಿ ಯಾವುದೇ ರಾಜಕೀಯ ಮಾಡುತ್ತಿಲ್ಲ. ಎಲ್ಲ ರಾಜ್ಯಗಳಿಗೆ ಕೊಟ್ಟಂತೆ ಕರ್ನಾಟಕಕ್ಕೂ ಕೊಡುತ್ತಾ ಇದ್ದೇವೆ. ಈಗ ನಾವು ಕೇಳುತ್ತಿರುವುದು ಕೇಂದ್ರ ಕೊಡುವ 5 ಕೆಜಿ, ಚುನಾವಣೆ ಗ್ಯಾರಂಟಿಯಲ್ಲಿ ಘೋಷಣೆ ಮಾಡಿರುವಂತೆ 10 ಕೆಜಿ ಸೇರಿದಂತೆ ಜನತೆಗೆ ಒಟ್ಟು 15 ಕೆಜಿ ಕೊಡಿ ಎನ್ನುವುದು ನಮ್ಮ ಆಗ್ರಹವಾಗಿದೆ ಎಂದರು.

ಎಫ್‌ಸಿಐ ಅಧಿಕಾರಿಗಳ ಬದಲು ಕೇಂದ್ರ ಆಹಾರ ಮಂತ್ರಿಗಳ ಬಳಿಯಲ್ಲಿ ಮನವಿ ಮಾಡಬೇಕಿತ್ತು. ಅದು ಬಿಟ್ಟು ಮಾಧ್ಯಮ ಮುಂದೆ ಹೇಳುಕೊಂಡು ರಾಜ್ಯದಲ್ಲಿ ಪ್ರತಿಭಟನೆ ಮಾಡಿದರೆ ಹೇಗೆ? ಯಾವ ಆಧಾರದಲ್ಲಿ ಗ್ಯಾರಂಟಿ ಘೋಷಣೆ ಮಾಡಿದಿರಿ? ಹಿಂದೆಯೂ ನೀವು ಕೇಂದ್ರದ ಅಕ್ಕಿಯ ಜತೆ ಎರಡು ಕೆಜಿ ಕೊಟ್ಟು ನೀವು ಪ್ರಚಾರ ತಗೊಂಡ್ರಿ. ಈಗ ಪುನಃ ಹತ್ತು ಕೆಜಿ ಕೊಡುತ್ತೇವೆ ಎಂದು ಹೇಳಿದಂತೆ ಕೊಡಿ. ಇದರಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಜನರನ್ನು ಎತ್ತಿ ಕಟ್ಟುವ ಅಗತ್ಯವಿಲ್ಲ ಎಂದರು.

ಈಗ ಸಿಎಂ ಸಿದ್ಧರಾಮಯ್ಯನವರು ಕೇಂದ್ರದ ಸಚಿವರನ್ನು ಭೇಟಿ ಮಾಡಿದ್ದಾರೆ. ಸಕಾರಾತ್ಮಕವಾಗಿ ಸ್ಪಂದನೆ ಸಿಕ್ಕಿದೆ ಎಂದಿದ್ದಾರಲ್ಲ ಎಂದರು.

ಕಳೆದ 9 ವರ್ಷದಲ್ಲಿ ಅಕ್ಕಿಯ ರಾಜಕಾರಣ ಮಾಡಿಲ್ಲ. ಹಿಂದಿನ ಸರ್ಕಾರದಲ್ಲಿ ಕೂಡ ಕೇಂದ್ರ ಸರ್ಕಾರ ಅಕ್ಕಿ ಕೊಟ್ಟಿದೆ. ಸಿದ್ದರಾಮಯ್ಯ ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿಲ್ಲ. ಸಿದ್ದರಾಮಯ್ಯ ಈ ಹಿಂದೆ ಸಿಎಂ ಆಗಿದ್ದಾಗಲೂ 22 ರೂಪಾಯಿಗೆ ಅಕ್ಕಿ ಕೊಟ್ಟಿದೆ. ಆಗ ಸಿದ್ದರಾಮಯ್ಯ ಮೂರು ರೂಪಾಯಿ ಅಕ್ಕಿ ಕೊಟ್ಟು ಅದರ ಮೇಲೆ ಸ್ಟಿಕರ್ ಹಾಕಿ ರಾಜಕಾರಣ ಮಾಡಿದ್ರು ಎಂದು ವಾಗ್ದಾಳಿ ನಡೆಸಿದರು.

ಕೇಂದ್ರ ಸರ್ಕಾರಕ್ಕೆ‌ ಕರ್ನಾಟಕ ಒಂದೇ ಮುಖ್ಯ ಅಲ್ಲ ಹೇಳಿಕೆಗೆ ಇದೀಗ ಉಲ್ಟಾ ಹೊಡೆದ ಕಟೀಲ್, ನಾನು ಹಾಗೆ ಹೇಳಿಲ್ಲ. ಕೇಂದ್ರ ಸರ್ಕಾರದ ಯೋಜನೆಗಳು ಎಲ್ಲಾ ರಾಜ್ಯಗಳಿಗೂ ಸಮವಾಗಿ ಸಿಗಲಿವೆ ಎಂದರು.

ಈ ರಾಜಕಾರಣ ಯಾಕೆ ಕರ್ನಾಟಕದಲ್ಲಿ ಮಾತ್ರ ಆಗ್ತಿದೆ. ಆಂದ್ರದಲ್ಲಿ, ರಾಜಸ್ಥಾನದಲ್ಲಿ ಯಾಕೆ ಅಕ್ಕಿಯ ರಾಜಕಾರಣ ಆಗ್ತಿಲ್ಲ. ಕಾಂಗ್ರೆಸ್‌ಗೆ ಭಾಗ್ಯಗಗಳನ್ನು ಕೊಡಲು ಆಗದೆ ಅವರಲ್ಲಿನ ಆಂತರಿಕ ಕಚ್ಚಾಟ ಆಗುತ್ತೆ. ಒಂದು ವರ್ಷದಲ್ಲಿ ಈ ಸರ್ಕಾರದ ಹಣೆಬರಹ ಏನಾಗುತ್ತೆ ನೋಡಿ. ಕಾಂಗ್ರೆಸ್ ಸರ್ಕಾರ ನಡೆಸುವಲ್ಲಿ ವಿಫಲವಾಗಿದೆ. ಈಗ ಕೇಂದ್ರ ಸರ್ಕಾರದ ಮೇಲೆ‌ ಗೂಬೆ ಕೂರಿಸಲು ಮುಂದಾಗಿದ್ದಾರೆ ಎಂದು ಅಪಾದಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿದೆ. ಆ ಸೋಲನ್ನು ವಿನಮ್ರತೆಯಿಂದ ಸ್ವೀಕರಿಸಿ, ಪುನಃ ಹೋರಾಟ ಮಾಡಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಯಾವುದೇ ಕಾರಣಕ್ಕೂ ಪಲಾಯನ ಮಾಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ. ಗುರುವಾರ ಮಾತನಾಡಿದ ಅವರು, ಅಕ್ಕಿ ವಿಚಾರದಲ್ಲಿ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂಬ ಆರೋಪಕ್ಕೆ ತಿರುಗೇಟು ನೀಡಿದರು. ರಾಜ್ಯದಲ್ಲಿ ದ್ವೆಷದ ರಾಜಕಾರಣ ಪ್ರಾರಂಭ ಮಾಡಿದ್ದೇ ಮುಖ್ಯಮಂತ್ರಿ ಸಿದ್ದರಾಮಯ್ಯ. ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ತೆಗೆದುಕೊಳ್ಳುತ್ತಿದ್ದಾರೆ. ಪಠ್ಯ ಪುಸ್ತಕ ಬದಲಾವಣೆ ತಂದರು. ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಬಂಧಿಸಲು ಸೂಚಿಸಿದ್ದಾರೆ. ಇದು ದ್ವೇಷದ ರಾಜಕಾರಣ ಅಲ್ಲದೆ ಬೇರೆನು ಎಂದು ಪ್ರಶ್ನಿಸಿದರು. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ