logo
ಕನ್ನಡ ಸುದ್ದಿ  /  ಕರ್ನಾಟಕ  /  Save Kmf: ದಹಿ, ದೂದ್‌, ಪಾನಿ..ಕೆಎಂಎಫ್‌ನಿಂದ ಕನ್ನಡ ಮಾಯವಾಗಿಸುವ ಗುಮಾನಿ?: ಹಿಂದಿ ಹೇರಿಕೆ ವಿರುದ್ಧ ಸಿಡಿದೆದ್ದ ಕರುನಾಡಿನ ಸ್ವಾಭಿಮಾನಿ

Save KMF: ದಹಿ, ದೂದ್‌, ಪಾನಿ..ಕೆಎಂಎಫ್‌ನಿಂದ ಕನ್ನಡ ಮಾಯವಾಗಿಸುವ ಗುಮಾನಿ?: ಹಿಂದಿ ಹೇರಿಕೆ ವಿರುದ್ಧ ಸಿಡಿದೆದ್ದ ಕರುನಾಡಿನ ಸ್ವಾಭಿಮಾನಿ

HT Kannada Desk HT Kannada

Mar 29, 2023 06:19 AM IST

ಕೆಎಂಎಫ್‌ ಉಳಿಸಿ ಅಭಿಯಾನ

  • ಕೆಎಂಎಫ್‌ನಲ್ಲಿ ಒತ್ತಾತಯಪೂರ್ವಕ ಹಿಂದಿ ಹೇರಿಕೆಯ ಆರೋಪ ಕೇಳಿಬಂದಿದ್ದು, ಒಕ್ಕೂಟದ ಸಿಬ್ಬಂದಿಗೆ ಹಾಲು ಉತ್ಪನ್ನಗಳಿಗೆ ಕನ್ನಡದ ಬದಲು ಹಿಂದಿ ಪದಗಳನ್ನು ಬಳಸುವಂತೆ ಒತ್ತಡ ಹೇರಲಾಗುತ್ತಿದೆ ಎನ್ನಲಾಗಿದೆ. ಯಶವಂತಪುರದಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಅವರಿಗೆ "ಗುಜರಾತಿಗಳಿಂದ ಕನ್ನಡಿಗರ KMF ಉಳಿಸಿ" ಮನವಿ ಹಾರ ಹಾಕಿದ್ದಾರೆ.

ಕೆಎಂಎಫ್‌ ಉಳಿಸಿ ಅಭಿಯಾನ
ಕೆಎಂಎಫ್‌ ಉಳಿಸಿ ಅಭಿಯಾನ (Verified Twitter)

ಬೆಂಗಳೂರು: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ(ಕೆಎಂಎಫ್‌)ದಲ್ಲಿ ಒತ್ತಾತಯಪೂರ್ವಕ ಹಿಂದಿ ಹೇರಿಕೆಯ ಆರೋಪ ಕೇಳಿಬಂದಿದ್ದು, ಒಕ್ಕೂಟದ ಸಿಬ್ಬಂದಿಗೆ ಹಾಲು ಉತ್ಪನ್ನಗಳಿಗೆ ಕನ್ನಡದ ಬದಲು ಹಿಂದಿ ಪದಗಳನ್ನು ಬಳಸುವಂತೆ ಒತ್ತಡ ಹೇರಲಾಗುತ್ತಿದೆ ಎನ್ನಲಾಗಿದೆ.

ಟ್ರೆಂಡಿಂಗ್​ ಸುದ್ದಿ

Forest Tales: ಮಳೆಗಾಲ ಬಂತು ಒಂದಾದರೂ ಸಸಿ ನೆಡೋಣ, ಬಿಸಿಲು ಬರದ ಬವಣೆಗೆ ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸೋಣ ಬನ್ನಿ

Karnataka Rains: ಬೆಂಗಳೂರು, ಮೈಸೂರು, ಕೊಡಗು ಸಹಿತ ಹಲವೆಡೆ ಒಂದು ವಾರ ಭಾರೀ ಮಳೆ, ಆರೆಂಜ್‌ ಅಲರ್ಟ್‌

Tumkur News: ಮಾಗಡಿಗೆ ಕುಡಿಯುವ ನೀರು, ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಗೆ ತುಮಕೂರಲ್ಲಿ ಭಾರೀ ವಿರೋಧ

Indian Railway: ಹುಬ್ಬಳ್ಳಿ ನೈರುತ್ಯ ವಲಯದಿಂದ ಬೇಸಿಗೆಯಲ್ಲಿ ವಿಶೇಷ ರೈಲು ಡಬಲ್‌, ಆದಾಯವೂ ಶೇ 134ಪಟ್ಟು ಏರಿಕೆ

ಮೊಸರು ಪದದ ಬದಲಿಗೆ ದಹಿ, ಹಾಲು ಪದದ ಬದಲಿಗೆ ದೂದ್‌, ನೀರು ಪದದ ಬದಲಿಗೆ ಪಾನಿ, ಹೀಗೆ ಹಿಂದಿ ಪದಗಳ ಬಳಕೆಯನ್ನು ಕಡ್ಡಾಯಗೊಳಿಸಲಾಗಿದ್ದು, ಕೆಎಂಎಫ್‌ನಿಂದ ಕನ್ನಡವನ್ನು ಮಾಯವಾಗಿಸುವ ಹುನ್ನಾರ ನಡೆದಿದೆ ಎಂಬ ಗಂಭೀರ ಆರೋಪ ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ ಯಶವಂತಪುರದಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಅಭಿಯಾನವೊಂದನ್ನು ಆರಂಭಿಸಿದ್ದು, ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ನಾಯಕ ಹೆಚ್‌ಡಿ ಕುಮಾರಸ್ವಾಮಿ ಅವರಿಗೆ "ಗುಜರಾತಿಗಳಿಂದ ಕನ್ನಡಿಗರ KMF ಉಳಿಸಿ" ಮನವಿ ಹಾರ ಹಾಕಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌ ಮೂಲಕ ಮಾಹಿತಿ ನೀಡಿರುವ ಕನ್ನಡಪರ ಹೋರಾಟಗಾರ ರೂಪೇಶ್‌ ರಾಜಣ್ಣ, ನಂದಿನಿ ಉಳಿಸಿ ಅಭಿಯಾನಕ್ಕೆ ಸಮಸ್ತ ಕನ್ನಡಿಗರು ಬೆಂಬಲ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಕನ್ನಡ ಜಾಗೃತಿ,ಈ ನೆಲದ ಅಸ್ಮಿತೆಯ ಜಾಗೃತಿ ಯಾವ ರೂಪದಲ್ಲಿದ್ದರೂ ಅದು ಈ ನಾಡಿಗೆ ಒಳಿತು. ಹೀಗಾಗಿ ಕೆಎಂಎಫ್‌ ಉಳಿಸಿ ಅಭಿಯಾನ ಕನ್ನಡದ ಭವಿಷ್ಯಕ್ಕಾಗಿ ನಡೆಯುತ್ತಿರುವ ಐತಿಹಾಸಿಕ ಹೋರಾಟ ಎಂದು ರೂಪೇಶ್‌ ರಾಜಣ್ಣ ಟ್ವೀಟ್‌ ಮಾಡಿದ್ದಾರೆ.

''ಹಿಂದಿಹೇರಿಕೆ ಸಹಿಸೋಲ್ಲ ಇಂದು ಕೆಎಂಎಫ್ ಕಚೇರಿಗೆ ಭೇಟಿ ಕೊಟ್ಟಾಗ ಕಂಡದ್ದು ಕಡ್ಡಾಯವಾಗಿ ದಹಿ ಅಂತ ಬಳಸಲೇಬೇಕು ಎಂಬ ಆದೇಶವಾಗಿದೆ. ಇಂದು ದಹಿ,ನಾಳೆ ನಂದಿನಿ ದೂದ್, ಪಾನಿ ಅಂದುಕೊಂಡು ಎಲ್ಲದಕ್ಕೂ ಹಿಂದಿ ಕಡ್ಡಾಯ ಮಾಡಿ ಕಡೆಗೆ ಕನ್ನಡವನ್ನೇ ಇಲ್ಲವಾಗಿಸೋ ಹುನ್ನಾರ. ಮೆಟ್ರೋ ಹಿಂದಿಹೇರಿಕೆ ತಡೆದ ಹಾಗೆ ನಂದಿನಿ ಮೇಲಿನ ಹಿಂದಿಹೇರಿಕೆ ತಡೆಯಬೇಕಿದೆ..'' ಎಂದು ರೂಪೇಶ್‌ ರಾಜಣ್ಣ ಟ್ವೀಟ್‌ ಮೂಲಕ ಕರೆ ನೀಡಿದ್ದಾರೆ.

ರೂಪೇಶ್‌ ರಾಜಣ್ಣ ಅವರು ತಮ್ಮ ಟ್ವೀಟ್‌ನಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಆದೇಶದ ಪ್ರತಿಯನ್ನು ಲಗತ್ತಿಸಿದ್ದು, ಇದರಲ್ಲಿ ಹಾಲು ಉತ್ಪನ್ನಗಳಿಗೆ ಹಿಂದಿ ಪದ ಬಳಕೆಯನ್ನು ಕಡ್ಡಾಯಗೊಳಿಸಿರುವುದು ಸ್ಪಷ್ಟವಾಗಿದೆ. ಕೆಎಂಎಫ್‌ ಸಿಬ್ಬಂದಿ ಕಡ್ಡಾಯವಾಗಿ ಹಿಂದಿ ಪದ ಬಳಕೆ ಮಾಡಬೇಕು ಎಂಬ ಆದೇಶ ಸ್ವಾಭಿಮಾನಿ ಕನ್ನಡಿಗರನ್ನು ಕೆರಳಿಸಿದೆ.

ಈ ಹಿನ್ನೆಲೆಯಲ್ಲಿ ಯಶವಂತಪುರದಲ್ಲಿ ಹೋರಾಟದ ಕಹಳೆ ಊದಿರುವ ಕನ್ನಡಪರ ಹೋರಾಟಗಾರರು, ಹೆಚ್‌ಡಿ ಕುಮಾರಸ್ವಾಮಿ ಅವರಿಗೆ "ಗುಜರಾತಿಗಳಿಂದ ಕನ್ನಡಿಗರ KMF ಉಳಿಸಿ" ಮನವಿ ಹಾರ ಹಾಕಿದ್ದಾರೆ.

ವಿವಾದಕ್ಕೆ ಕಾರಣವಾಗಿದ್ದ ಅಮಿತ್‌ ಶಾ ಹೇಳಿಕೆ:

ಈ ಹಿಂದೆ ಕೆಎಂಎಫ್‌ ಮತ್ತು ಗುಜರಾತ್‌ನ ಅಮೂಲ್‌ ಸಂಸ್ಥೆಗಳನ್ನು ವಿಲೀನಗೊಳಿಸುವ ಚಿಂತನೆ ಇದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆ ಭಾರೀ ವಿವಾದವನ್ನು ಸೃಷ್ಟಿಸಿತ್ತು. ಅಮಿತ್‌ ಶಾ ಹೇಳಿಕೆಗೆ ಭಾರೀ ವಿರೋಧ ವ್ಯಕ್ತಪಡಿಸಿದ್ದ ಕನ್ನಡಪರ ಸಂಘಟನೆಗಳು, ಕೆಎಂಎಫ್‌ನಿಂದ ಕನ್ನಡಿಗರ ಒಡೆತವನ್ನು ಕಸಿದುಕೊಳ್ಳುವ ಹುನ್ನಾರ ನಡೆಸಲಾಗುತ್ತಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಆ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಸಚಿವರು ಅಮಿತ್‌ ಶಾ ಹೇಳಿಕೆಗೆ ಸ್ಪಷ್ಟೀಕರಣ ನೀಡಿದ್ದರು. ಅಲ್ಲದೇ ಯಾವುದೇ ಕಾರಣಕ್ಕೂ ಕೆಎಂಎಫ್‌ನ್ನಿ ಅಮೂಲ್‌ನೊಂದಿಗೆ ವಿಲೀನ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದರು. ಪ್ರತಿಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕೂ ಅಮಿತ್‌ ಶಾ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದವು.

ಇದೀಗ ಕೆಎಂಎಫ್‌ನಲ್ಲಿ ಹಿಂದಿ ಪದಗಳ ಬಳಕೆ ಕಡ್ಡಾಯಗೊಳಿಸುವ ಮೂಲಕ ಮತ್ತೊಮ್ಮೆ ವಿವಾದ ಸೃಷ್ಟಿಸಲಾಗಿದ್ದು, ಈ ಒತ್ತಾಯದ ಹಿಂದಿ ಹೇರಿಕೆಯನ್ನು ವಿರೋಧಿಸಿ ಮತ್ತೆ ಕನ್ನಡಪರ ಮನಸ್ಸುಗಳು ಹೋರಾಟಕ್ಕಾಗಿ ಬೀದಿಗಿಳಿದಿರುವುದು ರಾಜ್ಯದ ಗಮನ ಸೆಳೆದಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ