BJP Manifesto: ಪೊಳ್ಳು ಭರವಸೆ, ಸುಳ್ಳು ಗ್ಯಾರೆಂಟಿಯ ಪ್ರಣಾಳಿಕೆ ನಮ್ಮದಲ್ಲ; ಕಾಂಗ್ರೆಸ್ ಗೆ ಸಚಿವ ಡಾ ಕೆ ಸುಧಾಕರ್ ಟಾಂಗ್
Apr 10, 2023 02:44 PM IST
ಬೆಂಗಳೂರಿನ ಬಿಜೆಪಿ ಕಚೇರಿಯ ಸುದ್ದಿಗೋಷ್ಠಿಯಲ್ಲಿ ಸಚಿವ ಡಾ ಕೆ ಸುಧಾಕರ್
ಬಿಜೆಪಿಯ ಪ್ರಣಾಳಿಕೆ ರಾಮರಾಜ್ಯದ ಪರಿಕಲ್ಪನೆಯಲ್ಲಿ ಇರಲಿದ್ದು, ರಾಜ್ಯದ ಆರ್ಥಿಕ ಸ್ಥಿತಿ ಮತ್ತು ಶಕ್ತಿಯನ್ನು ಆಧರಿಸಿ ಅಭಿವೃದ್ಧಿಗೆ ಪೂರಕವಾಗಿರಲಿದೆ ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರು: ವಿಧಾನಸಭೆ ಚುನಾವಣೆಗಾಗಿ (Assembly Elections 2023) ಕಾಂಗ್ರೆಸ್ (Congress) ಈಗಾಗಲೇ ನಾಲ್ಕು ಗ್ಯಾರಂಟಿ ಯೋಜನೆಗಳನ್ನು (Guarantee schemes) ಘೋಷಿಸಿದ್ದು, ತಾವು ಅಧಿಕಾರಕ್ಕೆ ಬಂದರೆ ಈ ಯೋಜನೆಗಳನ್ನು ಜನರಿಗೆ ನೀಡುತ್ತೇವೆಂದು ಹೇಳಿ ಮತಯಾಚಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳಿಗೆ ಸಚಿವ ಸುಧಾಕರ್ (Minister Dr K Sudhakar) ಇವತ್ತು ಟಾಂಗ್ ನೀಡಿದ್ದಾರೆ.
ಪೊಳ್ಳು ಭರವಸೆ, ಸುಳ್ಳು ಗ್ಯಾರೆಂಟಿಯ ಪ್ರಣಾಳಿಕೆ ನಮ್ಮದಲ್ಲ. ರಾಮ ರಾಜ್ಯದ ಕನಸಿಗೆ ಪೂರಕ ಪ್ರಣಾಳಿಕೆ (BJP Manifesto) ಸಿದ್ಧವಾಗಲಿದೆ. ಆರ್ಥಿಕ ಸ್ಥಿತಿ, ನಮ್ಮ ಶಕ್ತಿ ಆಧರಿಸಿ ಪ್ರಣಾಳಿಕೆ ಸಜ್ಜಾಗಲಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಪ್ರಣಾಳಿಕೆ ಅಭಿಯಾನ ಸಲಹಾ ಸಮಿತಿ (Manifesto Campaign Advisory Committee) ಸಭೆಯ ಬಳಿಕ ಮಾತನಾಡಿದ ಅವರು, ಬಿಜೆಪಿಯ ಪ್ರಣಾಳಿಕೆ ರಾಮರಾಜ್ಯದ ಪರಿಕಲ್ಪನೆಯಲ್ಲಿ ಇರಲಿದ್ದು, ರಾಜ್ಯದ ಆರ್ಥಿಕ ಸ್ಥಿತಿ ಮತ್ತು ಶಕ್ತಿಯನ್ನು ಆಧರಿಸಿ ಅಭಿವೃದ್ಧಿಗೆ ಪೂರಕವಾಗಿರಲಿದೆ ಎಂದಿದ್ದಾರೆ.
ಪ್ರತಿ ಜಿಲ್ಲೆ, ತಾಲೂಕುಗಳಲ್ಲಿ ಸಲಹಾ ಪೆಟ್ಟಿಗೆಗಳನ್ನು ಇಡಲಾಗಿತ್ತು. ಅದೆಲ್ಲವನ್ನೂ ತರಿಸಿಕೊಂಡು ತಾಲೂಕುವಾರು, ಜಿಲ್ಲಾವಾರು ಸಲಹೆಗಳನ್ನು ತೆಗೆದುಕೊಂಡು ಡಿಜಿಟಲೈಸ್ ಮಾಡಲಾಗಿದೆ. ಪ್ರತಿಯೊಂದು ವರ್ಗದ ಜನರ ಅಭಿವೃದ್ಧಿಗೆ ಏನು ಮಾಡಬಹುದು ಅನ್ನುವುದನ್ನು ಚರ್ಚಿಸಿ ಪ್ರಣಾಳಿಕೆ ಸಿದ್ಧವಾಗಲಿದೆ ಎಂದು ಸುಧಾಕರ್ ವಿವರಿಸಿದ್ದಾರೆ.
ಪ್ರಣಾಳಿಕೆ ಸಮಿತಿಯಲ್ಲಿ ವಿಷಯವಾರು ತಜ್ಞರು ಸೇರಿದಂತೆ 32 ಎಕ್ಸ್‌ಪರ್ಟ್‌ಗಳಿದ್ದಾರೆ. ಇವರ ಜೊತೆ ಸಮಾಲೋಚನೆ ನಡೆಸಿ, ಕರ್ನಾಟಕದ ಪ್ರಣಾಳಿಕೆ ಇಡೀ ದೇಶಕ್ಕೆ ಮಾದರಿಯಾಗಿ, ಸಮಗ್ರವಾಗಿರಲಿದೆ. ಹೊಸತನ ಮತ್ತು ಬದುಕು ಕಟ್ಟಿಕೊಡುವ, ನೈಜತೆಯಿಂದ ಕೂಡಿರುವ ಪ್ರಣಾಳಿಕೆ ಇದಾಗಿರಲಿದೆ.
ಬಿಜೆಪಿಯ ಪ್ರಣಾಳಿಕೆ ಕೇವಲ ಘೋಷಣೆಗೆ ಸೀಮಿತವಾಗದೆ 5 ವರ್ಷಗಳಲ್ಲಿ ನಮ್ಮ ಸರ್ಕಾರ ಮಾಡಬೇಕಾಗಿರುವ, ಮಾಡಬಹುದಾದ ಅಭಿವೃದ್ಧಿಯ ಬ್ಲೂ ಪ್ರಿಂಟ್ ಆಗಲಿರಲಿದೆ. ಮುಂದಿನ 7 ದಿನಗಳ ಒಳಗೆ ಪ್ರಣಾಳಿಕೆ ಬಿಡುಗಡೆಯಾಗಲಿದ್ದು, ಗ್ರೇಟರ್ ಬೆಂಗಳೂರು, ಕರಾವಳಿ ಪ್ರದೇಶ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಹಳೆ ಮೈಸೂರು ಹೀಗೆ ವಲಯವಾರು, ಜಿಲ್ಲಾವಾರು ಪ್ರಣಾಳಿಕೆ ಮಾಡಲು ಅವಕಾಶವಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನ ನಾಲ್ಕು ಗ್ಯಾರಂಟಿ ಯೋಜನೆಗಳು
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಾರಿಗೆ ತರಲಿವರು ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದೆ. ನಂಬರ್ 1 ಗೃಹಜ್ಯೋತಿ ಯೋಜನೆ. ಈ ಯೋಜನೆ ಮೂಲಕ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವುದು, ಗ್ಯಾರಂಟಿ ನಂಬರ್ 2 ಗೃಹಲಕ್ಷ್ಮಿ ಯೋಜನೆ. ಇದರ ಮೂಲಕ ಮನೆಯೊಡತಿಗೆ 2 ಸಾವಿರ ಪ್ರೋತ್ಸಾಹ ಧನ ನೀಡುವುದು. ಗ್ಯಾರಂಟಿ ನಂಬರ್ 3 ಅನ್ನ ಭಾಗ್ಯ ಯೋಜನೆ. ಬಡ ಕುಟುಂಬ ಸದಸ್ಯರಿಗೆ ತಲಾ 10 ಕೆ.ಜಿ ಅಕ್ಕಿ ಉಚಿತವಾಗಿ ನೀಡುವುದಾಗಿದೆ.
ಗ್ಯಾರಂಟಿ ನಂಬರ್ 4 ಯುವನಿಧಿ ಯೋಜನೆ. ಈ ಯೋಜನೆಯಡಿಯಲ್ಲಿ ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳು 3,000 ಹಾಗೂ ಡಿಪ್ಲೊಮಾ ಪದವೀಧರರಿಗೆ ಪ್ರತಿ 1,500 ರೂ. ಭತ್ಯೆ ನೀಡಲಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿರುದ್ಯೋಗ ಪದವೀಧರರಿಗೆ ಎರಡು ವರ್ಷಗಳ ಮಟ್ಟಿಗೆ ಈ ಭತ್ಯೆ ಸಿಗಲಿದೆ.
ಜೆಡಿಎಸ್ ನಿಂದ ಪಂಚರತ್ನ ಯೋಜನೆ
ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಪಂಚರತ್ನ ಯೋಜನೆಗಳೇ ಪರಿಹಾರ ಎಂಬುದು ಜೆಡಿಎಸ್ ಐದು ಅಂಶಗಳ ಕಾರ್ಯಸೂಚಿ. ಜೆಡಿಎಸ್ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬಂದರೆ ಈ ಕೆಳಗಿನ ಯೋಜನೆಗಳನ್ನು ಜಾರಿಗೆ ತರಲಿದೆ.
1. ಶಿಕ್ಷಣವೇ ಆಧುನಿಕ ಶಕ್ತಿ
2. ಆರೋಗ್ಯವೇ ಸಂಪತ್ತು
3. ರೈತ ಚೈತನ್ಯ
4. ಯುವನವ ಮಾರ್ಗ ಮತ್ತು ಮಹಿಳಾ ಸಬಲೀಕರಣ
5. ವಸತಿಯ ಆಸರೆ