Basavaraj Bommai: ಕಾಂಗ್ರೆಸ್ ಜನಪರ ಆಡಳಿತ ನೀಡಲು ಸಾಧ್ಯವೇ ಇಲ್ಲ; ವಿದ್ಯುತ್, ನೀರಿನ ಕ್ಷಾಮ ನಿಶ್ಚಿತ; ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
Jun 26, 2023 10:39 PM IST
ವಿಜಯಪುರ ಬಿಜೆಪಿ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದರು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲ ಕ್ಷೇತ್ರದಲ್ಲಿಯೂ ಬಿಜೆಪಿ ಗೆಲ್ಲಲಿದೆ, ನಾವು ಸೋಲಿಸಬೇಕಾಗಿರುವುದು ಕಾಂಗ್ರೆಸ್ ಅಭ್ಯರ್ಥಿಗಳನ್ನು, ಅದು ಮಾತ್ರ ಕಾರ್ಯಕರ್ತರು ಲಕ್ಷ್ಯದಲ್ಲಿರಿಸಿಕೊಳ್ಳಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಿ ಹೇಳಿದ್ದಾರೆ.
ವಿಜಯಪುರ: ಗ್ಯಾರಂಟಿ ಮೂಲಕ ಜನರಿಗೆ ಮೋಸ ಮಾಡಿ, ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಜನಪರ ಆಡಳಿತ ನೀಡಲು ಸಾಧ್ಯವೇ ಇಲ್ಲ, ಡೀಸೆಲ್ ಇಲ್ಲದೇ ಬಸ್‌ಗಳು ನಿಲ್ಲುವುದು ಗ್ಯಾರಂಟಿ, ವಿದ್ಯುತ್, ನೀರಿನ ಕ್ಷಾಮ ರಾಜ್ಯದಲ್ಲಿ ತಲೆದೂರುವುದು ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದಿದ್ದಾರೆ.
ವಿಜಯಪುರದ ಶ್ರೀ ಗುರು ಸಂಗನಬಸವ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಭಾರತೀಯ ಜನತಾ ಪಕ್ಷದ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಈ ಗ್ಯಾರಂಟಿ, ಆ ಗ್ಯಾರಂಟಿ ಎಂದು ಹೇಳಿ ನೀರಾವರಿಯ ವಿಷಯವನ್ನೇ ಡೈವರ್ಟ್ ಮಾಡುತ್ತಿದ್ದಾರೆ, ವಿಜಯಪುರ ಜಿಲ್ಲೆಗೆ ಬೇಕಾದ ನೀರಾವರಿ ಯೋಜನೆಗಳಿಗೆ ಅನುದಾನ ಒದಗಿಸುತ್ತಿಲ್ಲ. ಮುಂದೊಂದು ದಿನ ನೀರಿಗೂ ಸಹ ದುಸ್ತರ ಬರುವಂತಹ ವಾತಾವರಣವನ್ನು ಕಾಂಗ್ರೆಸ್ ಸರ್ಕಾರ ಸೃಷ್ಟಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುತ್ತಿ ಬಸವಣ್ಣ ಯೋಜನೆ ಅನುಷ್ಠಾನ ಮಾಡುವಾಗ ಅನೇಕ ವಿಘ್ನ ಎದುರಾದವು, ನೀವು ಜೈಲಿಗೆ ಹೋಗಬೇಕಾಗುತ್ತದೆ ಎಂದು ಅನೇಕರು ಹೆದರಿಸಿದರು, ಆದರೆ ವಿಜಯಪುರ ಜಿಲ್ಲೆಯ ಜನತೆಗೆ ನ್ಯಾಯ ಒದಗಿಸಲು ನಾನು ಜೈಲಿಗೆ ಹೋಗಲು ಸಿದ್ಧ, ನೇಣಿಗೆ ಏರಲು ಸಿದ್ಧ ಎಂದು ಗುತ್ತಿ ಬಸವಣ್ಣ ಯೋಜನೆ ಅನುಷ್ಠಾನಕ್ಕೆ ಮುಂದಾದೆ ಎಂದು ಸ್ಮರಿಸಿಕೊಂಡಿದ್ದಾರೆ.
ರೈತರು ಕಳೆದುಕೊಂಡ ಭೂಮಿಗೆ ದರವನ್ನು ನಂತರ ಬಂದ ಕಾಂಗ್ರೆಸ್ ಸರ್ಕಾರ ನಿಗದಿಪಡಿಸಲಿಲ್ಲ, ಏಕರೂಪದ ದರವನ್ನು ರೈತರಿಗೆ ನೀಡಲೇ ಇಲ್ಲ, ಈ ಏಕರೂಪದ ದರವನ್ನು ನೀಡಲು ಪುನಃ ನಮ್ಮ ಸರ್ಕಾರವೇ ಬರಬೇಕಾಯಿತು. ಆರು ಸಾವಿರ ಕೀ.ಮೀ. ರಾಷ್ಡ್ರೀಯ ಹೆದ್ದಾರಿ ನಿರ್ಮಾಣ, ಹಲವಾರು ವಿಮಾನ ನಿಲ್ದಾಣಗಳಿಗೆ ಅನುಮತಿ ನೀಡಿದ ಕೀರ್ತಿ ನಮ್ಮ ಕೇಂದ್ರ ಸರ್ಕಾರಕ್ಕೆ ಸಲ್ಲುತ್ತದೆ. ವಿಜಯಪುರ ನಗರದಲ್ಲಿ ವಿಮಾನ ನಿಲ್ದಾಣ ನಿರ್ಮಿಸಿದ್ದು ನಮ್ಮ ಸರ್ಕಾರ, ಈಗ ಕಾಂಗ್ರೆಸ್‌ನವರು ಈ ವಿಮಾನ ನಿಲ್ದಾಣವನ್ನೇ ರಿಬ್ಬನ್ ಕತ್ತರಿಸಿ ತಮ್ಮ ಸಾಧನೆ ಎಂದು ಹೇಳಿಕೊಳ್ಳಬಹುದು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ವಿರೋಧ ಮಾಡಿಕೊಂಡು ಬಂದ ಜಿಲ್ಲೆ, ಇತಿಹಾಸದ ಪುಟಗಳನ್ನು ತೆರೆದು ನೋಡಿದಾಗ ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಅಸ್ತಿತ್ವಕ್ಕೆ ಬಂದಾಗ ಅಖಂಡ ವಿಜಯಪುರ ಜಿಲ್ಲೆಯ 15 ಸ್ಥಾನಗಳಲ್ಲಿ 12 ಸ್ಥಾನಗಳನ್ನು ಬಿಜೆಪಿ ಶಾಸಕರು ಆಯ್ಕೆಯಾಗಿದ್ದರು. ಬಹುಮನಿಯಿಂದ ಹಿಡಿದು ಬ್ರಿಟಿಷರ ಆಡಳಿತದವರೆಗೆ ಈ ಭಾಗಕ್ಕೆ ದೊಡ್ಡ ಅನ್ಯಾಯವಾಗುತ್ತಲೇ ಬಂದಿತ್ತು ಎಂದು ಮಾಜಿ ಸಿಎಂ ಬೊಮ್ಮಾಯಿ ಅವರು ಹೇಳಿದ್ದಾರೆ.
ಬಂಗಾರದಿಂದ ತೂಗಿದ ಜಿಲ್ಲೆ: ಗುಳೇ ತಪ್ಪಿಸುವುದಕ್ಕಾಗಿ ನೀರಾವರಿ ಮಾಡಿಕೊಡಿ ಎಂಬ ಬೇಡಿಕೆ ಮಾತ್ರ ಇರಿಸಿದ್ದರು. ಬರದ ಜಿಲ್ಲೆಯಾದರೂ ಸಹ ದಿ.ಇಂದಿರಾ ಗಾಂಧೀ ಹಾಗೂ ನಿಜಲಿಂಗಪ್ಪ ಅವರನ್ನು ಬಂಗಾರದಿಂದ ತೂಗಿದ ಜಿಲ್ಲೆ, ಆದರೆ ಜನತೆಯ ನ್ಯಾಯಯುತವಾದ ಬೇಡಿಕೆ ಯುಕೆಪಿ ಅನುಷ್ಠಾನವಾಗಲೇ ಇಲ್ಲ, ಹೀಗಾಗಿ ನ್ಯಾಯಯುತ ಕೂಗಿಗೆ ಕಾಂಗ್ರೆಸ್ ಪಕ್ಷದಿಂದ ಸ್ಪಂದನೆ ದೊರಕದ ಸಿಟ್ಟು ವಿಜಯಪುರ ಜಿಲ್ಲೆಯಲ್ಲಿ ಇಂದಿಗೂ ಇದೆ ಎಂದಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲ ಕ್ಷೇತ್ರದಲ್ಲಿಯೂ ಬಿಜೆಪಿ ಗೆಲ್ಲಲಿದೆ, ನಾವು ಸೋಲಿಸಬೇಕಾಗಿರುವುದು ಕಾಂಗ್ರೆಸ್ ಅಭ್ಯರ್ಥಿಗಳನ್ನು, ಅದು ಮಾತ್ರ ಕಾರ್ಯಕರ್ತರು ಲಕ್ಷ್ಯದಲ್ಲಿರಿಸಿಕೊಳ್ಳಬೇಕು ಎಂದು ನೆರೆದಿದ್ದವರಿಗೆ ತಿಳಿಸಿದ್ದಾರೆ.
ಯತ್ನಾಳರ ಕ್ರೀಯಾಶೀಲತೆ ಕಾರಣ: ವಿಜಯಪುರ ನಗರ ಸ್ಮಾರ್ಟ್ ಸಿಟಿಯಾಗಿ ಬೆಳೆಯುತ್ತಿದೆ. ಇದು ಸಾಧ್ಯವಾಗಿದ್ದು ನೀವು ಈ ಕ್ಷೇತ್ರದಿಂದ ಆಯ್ಕೆ ಮಾಡಿ ಕಳುಹಿಸಿದ ಕ್ರೀಯಾಶೀಲ, ದೂರದೃಷ್ಟಿ ಇರುವ ನಾಯಕ ಬಸನಗೌಡ ಪಾಟೀಲ ಯತ್ನಾಳ ಅವರಿಂದ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಯತ್ನಾಳರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಂಸದರಾದ ರಮೇಶ ಜಿಗಜಿಣಗಿ, ಅಣ್ಣಾಸಾಹೇಬ ಜೊಲ್ಲೆ, ಮಾಜಿ ಸಚಿವರಾದ ಮುರುಗೇಶ ನಿರಾಣಿ, ಎಸ್.ಕೆ. ಬೆಳ್ಳುಬ್ಬಿ, ಶಶಿಕಲಾ ಜೊಲ್ಲೆ, ವಿಧಾನ ಪರಿಷತ್ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ, ಹಣಮಂತ ನಿರಾಣಿ, ಮಾಜಿ ಶಾಸಕರಾದ ಅಭಯ ಪಾಟೀಲ, ರಮೇಶ ಭೂಸನೂರ, ಸೋಮನಗೌಡ ಪಾಟೀಲ ಸಾಸನೂರ, ಎ.ಎಸ್. ಪಾಟೀಲ ನಡಹಳ್ಳಿ, ಅರುಣ ಶಹಾಪೂರ ಮೊದಲಾದವರು ಪಾಲ್ಗೊಂಡಿದ್ದರು.