ನಾಮಪತ್ರ ವಾಪಸ್ ಪಡೆದಿದ್ದೇನೆ ಅನ್ನೋದು ಸುಳ್ಳು, ಯಾವುದೇ ಕಾರಣಕ್ಕೆ ಹಿಂಪಡೆಯಲ್ಲ; ಚುನಾವಣೆಯಲ್ಲಿ ಸ್ಪರ್ಧೆ ಖಚಿತ ಎಂದ ಈಶ್ವರಪ್ಪ
Apr 14, 2024 03:45 PM IST
ಬಿಜೆಪಿ ಬಂಡಾಯ ನಾಯಕ, ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ.
- ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ತಮ್ಮ ಪುತ್ರ ಕೆ.ಇ ಕಾಂತೇಶ್ ಅವರಿಗೆ ಹಾವೇರಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಪಕ್ಷದ ವಿರುದ್ಧ ಬಂಡಾಯವೆದ್ದ ಶಿವಮೊಗ್ಗದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.
ಬೆಂಗಳೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ (Shivamogga Lok Sabha Constituency) ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಡಿಸಿಎಂ, ಬಿಜೆಪಿ ಬಂಡಾಯ ನಾಯಕ ಕೆಎಸ್ ಈಶ್ವರಪ್ಪ (BJP Rebel Leader KS Eshwarappa) ಅವರು ಯಾವುದೇ ಕಾರಣಕ್ಕೂ ನಾಮಪತ್ರ ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಶಿವಮೊಗ್ಗದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಈಶ್ವರಪ್ಪ, ನನ್ನ ಹೋರಾಟ ಯಡಿಯೂರಪ್ಪ ಕುಟುಂಬದ ವಿರುದ್ಧ ಮಾತ್ರ ಎಂದಿದ್ದಾರೆ. ನಾಮಪತ್ರ ಹಿಂಪಡೆಯುವ ಬಗ್ಗೆ ಕೆಲವು ಊಹಾಪೋಹಗಳ ಬಗ್ಗೆ ಪ್ರತಿಕ್ರಿಯಿಸಿರುವ ಈಶ್ವರಪ್ಪ, "ನನ್ನ ಹಿಂದೆ ನಿಂತವರಿಗೆ ನಾನು ಎಂದಿಗೂ ದ್ರೋಹ ಮಾಡುವುದಿಲ್ಲ. ನಾನು ನಾಮಪತ್ರ ಹಿಂತೆಗೆದುಕೊಂಡಿದ್ದೇನೆ ಎಂಬ ವರದಿಗಳು ನಿಜವಲ್ಲ. ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ನನಗೆ ಈಗಾಗಲೇ ಶಿವಮೊಗ್ಗದ ಜನರಿಂದ ಸಾಕಷ್ಟು ಬೆಂಬಲ ಸಿಗುತ್ತಿದೆ ಎಂದು ಹೇಳಿದ್ದಾರೆ.
ನಾಮಪತ್ರ ಸಲ್ಲಿಕೆ ವೇಳೆ ಮಾತನಾಡಿದ್ದ ಕೆಎಸ್‌ಇ, ಶಿವಮೊಗ್ಗದಲ್ಲಿ ಗೆದ್ದು ಪ್ರಧಾನಿ ಮೋದಿ ಬಳಿಗೆ ಹೋಗುತ್ತೇನೆ. ಈಗ ನೇರ ಸ್ಪರ್ಧೆ ನಡೆಯಲಿದೆ. ಎಲ್ಲಾ ನಾಯಕರು ಮತ್ತು ಕಾರ್ಯಕರ್ತರು ನನ್ನೊಂದಿಗೆ ಇದ್ದಾರೆ. ಜನರೂ ನನ್ನೊಂದಿಗಿದ್ದಾರೆ. ನಾನು ಗೆದ್ದರೆ ಪ್ರಧಾನಿ ನರೇಂದ್ರ ಮೋದಿಯವರ ಬಳಿಗೆ ಹೋಗುತ್ತೇನೆ" ಎಂದಿದ್ದಾರೆ.
ಬಿಎಸ್ ಯಡಿಯೂರಪ್ಪ ಕುಟುಂಬದವರ ವಿರುದ್ಧ ಈಶ್ವರಪ್ಪ ಹೋರಾಟ
ಈಶ್ವರಪ್ಪ ಅವರ ಪುತ್ರ ಕೆ.ಇ.ಕಾಂತೇಶ್ ಅವರಿಗೆ ಹಾವೇರಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಪಕ್ಷದ ವಿರುದ್ಧ ಬಂಡಾಯ ಎದ್ದಿದ್ದಾರೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹಾವೇರಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಇಬ್ಬರು ಪುತ್ರರಾದ ಬಿ.ವೈ ರಾಘವೇಂದ್ರ ಮತ್ತು ಬಿ.ವೈ ವಿಜಯೇಂದ್ರ ಅವರು ತಮ್ಮ ಮಗನಿಗೆ ಸ್ಪರ್ಧಿಸಲು ಅವಕಾಶ ನೀಡದಿರುವುದಕ್ಕೆ ಕಾರಣ ಎಂದು ಈಶ್ವರಪ್ಪ ಆರೋಪಿಸಿದ್ದರು. ಬಿವೈ ರಾಘವೇಂದ್ರ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದು, ವಿಜಯೇಂದ್ರ ಅವರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಶಿಕಾರಿಪುರ ಶಾಸಕರಾಗಿದ್ದಾರೆ.
ಕರ್ನಾಟಕದ ಎರಡನೇ ಹಂತದ 14 ಲೋಕಸಭಾ ಕ್ಷೇತ್ರಗಳ ಮತದಾನ ಮೇ 7 ರಂದು ನಡೆಯಲಿದೆ. ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆಗೆ ಏಪ್ರಿಲ್ 12 ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ನಾಮಪತ್ರ ಸಲ್ಲಿಕಲು ಏಪ್ರಿಲ್ 19 ಕೊನೆಯ ದಿನವಾಗಿದ್ದು, ಏಪ್ರಿಲ್ 20 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ವಾಪಸ್ ಪಡೆಯಲು ಏಪ್ರಿಲ್ 22 ಕೊನೆಯ ದಿನವಾಗಿದೆ. ಮೇ 7 ರಂದು ಮತದಾನ ನಡೆಯಲಿದ್ದು, ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.