logo
ಕನ್ನಡ ಸುದ್ದಿ  /  ಕರ್ನಾಟಕ  /  Shimoga News: ಕೊನೆಗೂ ಶಿವಮೊಗ್ಗದಲ್ಲಿ ಬಂಡಾಯ ಸಾರಿದ ಈಶ್ವರಪ್ಪ, ನಾಮಪತ್ರ ಸಲ್ಲಿಕೆ, ಮೋದಿಯನ್ನೇ ಕರೆ ತಂದರು !

Shimoga News: ಕೊನೆಗೂ ಶಿವಮೊಗ್ಗದಲ್ಲಿ ಬಂಡಾಯ ಸಾರಿದ ಈಶ್ವರಪ್ಪ, ನಾಮಪತ್ರ ಸಲ್ಲಿಕೆ, ಮೋದಿಯನ್ನೇ ಕರೆ ತಂದರು !

Umesha Bhatta P H HT Kannada

Apr 12, 2024 08:58 PM IST

google News

ಪ್ರಧಾನಿ ನರೇಂದ್ರಮೋದಿ ಅವರಂತಿರುವ ಸದಾನಂದನಾಯಕ್‌ ಅವರೊಂದಿಗೆ ಈಶ್ವರಪ್ಪ.

    • Karnataka Politics ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಿಜೆಪಿ ನಾಯಕ ಕೆ.ಎಸ್‌.ಈಶ್ವರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಪ್ರಚಾರಕ್ಕೆ ಕರೆತಂದಿದ್ದರು.
ಪ್ರಧಾನಿ ನರೇಂದ್ರಮೋದಿ ಅವರಂತಿರುವ ಸದಾನಂದನಾಯಕ್‌ ಅವರೊಂದಿಗೆ ಈಶ್ವರಪ್ಪ.
ಪ್ರಧಾನಿ ನರೇಂದ್ರಮೋದಿ ಅವರಂತಿರುವ ಸದಾನಂದನಾಯಕ್‌ ಅವರೊಂದಿಗೆ ಈಶ್ವರಪ್ಪ.

ಶಿವಮೊಗ್ಗ: ತಮ್ಮ ಮಗನಿಗೆ ಹಾವೇರಿ ಲೋಕಸಭಾ ಕ್ಷೇತ್ರದಿಂದ ಟಿಕೆಟ್‌ ಕೈತಪ್ಪಿದ್ದಕ್ಕೆ ಆಕ್ರೋಶಗೊಂಡಿರುವ ಹಿರಿಯ ಬಿಜೆಪಿ ನಾಯಕ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ನಾಮಪತ್ರ ಸಲ್ಲಿಸಿದ್ದಾರೆ. ಶಿವಮೊಗ್ಗದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಧುಮುಕಿದ್ದಾರೆ. ಶಿವಮೊಗ್ಗದಲ್ಲಿ ಮಾಜಿ ಸಚಿವ ಗೂಳಿಹಟ್ಟಿ ಶೇಖರ್‌, ಬಿಜೆಪಿಯ ಹಲವು ಮುಖಂಡರು, ಪಾಲಿಕೆ ಮಾಜಿ ಸದಸ್ಯರು ಹಾಗೂ ಬೆಂಬಲಗರೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿದ ಈಶ್ವರಪ್ಪ ಉಮೇದುವಾರಿಕೆಯನ್ನು ತುಂಬಿದರು. ಈ ವೇಳೆ ನರೇಂದ್ರ ಮೋದಿ ಅವರನ್ನೇ ನಾಮಪತ್ರ ಸಲ್ಲಿಕೆಗೆ ಈಶ್ವರಪ್ಪ ಅವರು ಕರೆ ತಂದು ಗಮನ ಸೆಳೆದರು.

ಬಂಡಾಯದ ಬಾವುಟ

ಈಗಾಗಲೇ ಕೇಂದ್ರ ಸಚಿವ ಅಮಿತ್‌ ಶಾ, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಸಹಿತ ಹಲವರು ಮನಒಲಿಕೆಗೂ ಜಗ್ಗದೇ ಈಶ್ವರಪ್ಪ ಸ್ಪರ್ಧೆಯಲ್ಲಿ ಉಳಿಯವುದು ಪಕ್ಕ ಎಂದು ಹೇಳಿಕೊಂಡು ಬಂದಿದ್ದರು. ಹಿಂದೆ ಸರಿಯುವ ಮಾತೇ ಇಲ್ಲ ಎಂದು ಗುರುವಾರ ಕೂಡ ಹೇಳಿದ್ದರು. ದೆಹಲಿಗೂ ಹೋಗಿ ವರಿಷ್ಠರನ್ನು ಭೇಟಿ ಮಾಡಿ ಬಂದಿದ್ದರು. ಆದರೂ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದು ಹೇಳಿಕೊಂಡಿದ್ದರು.

ಶುಕ್ರವಾರ ಬೆಳಿಗ್ಗೆಯೇ ಶಿವಮೊಗ್ಗದ ಪ್ರಮುಖ ರಸ್ತೆಯಲ್ಲಿ ಭಾರೀ ಮೆರವಣಿಗೆಯನ್ನು ನಡೆಸಿದರು. ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಚುನಾವಣಾಧಿಕಾರಿಯೂ ಆಗಿರುವ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ನಾಮಪತ್ರವನ್ನು ಸಲ್ಲಿಸಿದರು.

ಅಪ್ಪ ಮಕ್ಕಳಿಗೆ ಪಾಠ

ಇದೇ ವೇಳೆ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಈಶ್ವರಪ್ಪ, ಪಕ್ಷದ ಸಿದ್ದಾಂತವನ್ನು ಉಳಿಸಬೇಕು. ಬಿಜೆಪಿಯನ್ನು ರಕ್ಷಿಸಬೇಕು ಎನ್ನುವ ಕಾರಣದಿಂದ ನಾನು ಕಣಕ್ಕೆ ಇಳಿದಿದ್ದೇನೆ. ಬಿಜೆಪಿಯನ್ನು ಅಪ್ಪ ಮಕ್ಕಳ ಹಿಡಿತದಿಂದ ಬಿಡಿಸುವುದು ನನ್ನ ಗುರಿ. ರಾಘವೇಂದ್ರ ಈ ಚುನಾವಣೆಯಲ್ಲಿ ಖಂಡಿತಾ ಸೋಲುತ್ತಾರೆ. ಅವರ ಸಹೋದರ ವಿಜಯೇಂದ್ರ ಕೂಡ ಅಧ್ಯಕ್ಷ ಸ್ಥಾನ ಕಳೆದುಕೊಳ್ಳುವರು. ಈ ಚುನಾವಣೆಯಲ್ಲಿ ಗೆದ್ದು ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸುತ್ತೇನೆ. ನನ್ನ ಗುರುತು ಮುಂದಿನ ವಾರ ಸಿಗಲಿದ್ದು, ನಿಮ್ಮೆಲ್ಲರ ಬೆಂಬಲ ಇರಲಿ ಎಂದು ಹೇಳಿದರು.

ಈಶ್ವರಪ್ಪ ಪುತ್ರ ಕೆ.ಇ.ಕಾಂತೇಶ ಮಾತನಾಡಿ, ನಮ್ಮ ತಂದೆ ಕೆಜೆಪಿಗೆ ಹೋಗಲಿಲ್ಲ ಎನ್ನುವ ಕಾರಣದಿಂದ ಈಗ ಯಡಿಯೂರಪ್ಪ ಅವರು ತೊಂದರೆ ಕೊಡುತ್ತಿದ್ದಾರೆ. ಜಗದೀಶ್‌ ಶೆಟ್ಟರ್‌ ಅವರು ಕಾಂಗ್ರೆಸ್‌ಗೆ ಹೋಗಿ ಸೋತು ಬಂದರೂ ಅವರಿಗೆ ಟಿಕೆಟ್‌ ನೀಡಲಾಗಿದೆ. ನಾವೇನು ತಪ್ಪು ಮಾಡಿದ್ದೇವೆ ಎಂದು ಪ್ರಶ್ನಿಸಿದರು.

ಮಾಜಿ ಸಚಿವ ಗೂಳಿಹಟ್ಟಿ ಶೇಖರ್‌ ಸಹಿತ ಹಲವರು ಮಾತನಾಡಿದರು.

ಗಮನ ಸೆಳೆದ ಮೋದಿ

ಉಡುಪಿ ತಾಲ್ಲೂಕಿನ ಹಿರಿಯಡ್ಕದವರಾದ ಸದಾನಂದನಾಯಕ್‌ ಅವರು ಥೇಟ್‌ ಪ್ರಧಾನಿ ಮೋದಿ ಅವರ ತೀರಿಯೇ ಇದ್ದಾರೆ. ಅವರನ್ನು ಒಮ್ಮೆಗೆ ನೋಡಿದರೆ ಮೋದಿ ಬಂದಿದ್ದಾರೆ ಎನ್ನಿಸಿಬಿಡುತ್ತದೆ. ಮೋದಿ ರೀತಿಯಲ್ಲಿಯೇ ಗಡ್ಡ, ವೇಷ, ನಗು ಕೂಡ ಸದಾನಂದ ನಾಯಕ್‌ ಅವರದ್ದು. ಈ ಕಾರಣದಿಂದ ಅವರು ಗಮನ ಸೆಳೆಯುತ್ತಾರೆ. ಈಗಾಗಲೇ ಈಶ್ವರಪ್ಪ ಅವರು ಮೋದಿ ಅವರ ಫೋಟೋ ಬಳಸಿ ಪ್ರಚಾರ ಕೈಗೊಳ್ಳುವುದಾಗಿ ಹೇಳಿದ್ದಾರೆ. ಅಲ್ಲದೇ ಬಿಜೆಪಿ ಮೊಕದ್ದಮೆ ದಾಖಳಿಸುವ ಮುನ್ನವೇ ಕೇವಿಯಟ್‌ ಕೂಡ ಹೈಕೋರ್ಟ್‌ನಲ್ಲಿ ದಾಖಲಿಸಿದ್ದಾರೆ. ಇದರ ನಡುವೆ ಶಿವಮೊಗ್ಗದಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಮೋದಿ ಅವರೊಂದಿಗೆ ಬಂದರು. ಇದನ್ನು ನೋಡಿ ಅಲ್ಲಿ ನೆರೆದಿದ್ದವರಿಗೂ ಅಚ್ಚರಿ. ಮೋದಿಯಂತಿರುವ ಸದಾನಂದ ನಾಯಕ್‌ ಅವರೊಂದಿಗೆ ಅವರು ಸೆಲ್ಫಿ ತೆಗೆಯಿಸಿಕೊಂಡರು. ಅವರೊಂದಿಗೆ ಹೆಜ್ಜೆ ಕೂಡ ಹಾಕಿದರು. ಸದಾನಂದ ನಾಯಕ್‌ ಅವರು ಈಶ್ವರಪ್ಪ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ