KS Eshwarappa: ಬಂಡಾಯದ ಕಹಳೆ ಎಫೆಕ್ಟ್; ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಬಿಜೆಪಿಯಿಂದ 6 ವರ್ಷ ಉಚ್ಚಾಟನೆ
Apr 22, 2024 10:33 PM IST
ಮಾಜಿ ಡಿಸಿಎಂ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಕೆಎಸ್ ಈಶ್ವರಪ್ಪ.
ಬಿಜೆಪಿ ವಿರುದ್ಧ ರೆಬೆಲ್ ಆಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಅವರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಟಾಟಿಸಲಾಗಿದೆ.
ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ಪಕ್ಷಕ್ಕೆ ಮುಜುಗರ ಉಂಟು ಮಾಡಿದ ಆರೋಪದ ಮೇಲೆ ಹಿರಿಯ ನಾಯಕ, ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಅವರನ್ನು ಬಿಜೆಪಿ 6 ವರ್ಷಗಳ ಕಾಲ ಉಚ್ಚಾಟಿಸಿದೆ. ಈಶ್ವರಪ್ಪ ತಮ್ಮ ಪುತ್ರ ಕೆಇ ಕಾಂತೇಶ್ ಅವರಿಗೆ ಹಾವೇರಿಯಿಂದ ಬಿಜೆಪಿ ಟಿಕೆಟ್ ಬಯಸಿದ್ದರು. ಆದರೆ ಬಿಜೆಪಿ ಇದನ್ನು ನಿರಾಕರಿಸಿ ಹಾವೇರಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮಣೆ ಹಾಕಿದೆ. ತಮ್ಮ ಪುತ್ರನಿಗೆ ಟಿಕೆಟ್ ತಪ್ಪು ಬಿಎಸ್‌ವೈ ಅವರ ಕುಟುಂಬವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದ್ಲಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಅದರಂತೆ ಇತ್ತೀಚೆಗೆ ಅವರು ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಅವರ ಪುತ್ರರ ವಿರುದ್ಧ ಬಂಡಾಯದ ಕಹಳೆ ಹೊಳಿಸಿದ ಈಶ್ವರಪ್ಪ "ಬಿಜೆಪಿಯನ್ನು ತಂದೆ ಮತ್ತು ಮಕ್ಕಳ ನಿಯಂತ್ರಣದಿಂದ ಮುಕ್ತಗೊಳಿಸಲು" ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ಹೇಳಿದ್ದರು. ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಚುನಾವಣಾ ಪ್ರಚಾರಕ್ಕೆ ಬಳಸಿರುವುದು ವಿವಾದಕ್ಕೆ ಕಾರಣವಾಗಿದೆ.
ಈ ಸಂಬಂಧ ಏಪ್ರಿಲ್ 10 ರಂದು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದ ಬಿಜೆಪಿ, ಈಶ್ವರಪ್ಪ ಅವರು ಮೋದಿ ಅವರ ಫೋಟೋ ಬಳಸದಂತೆ ತಡೆಯುವಂತೆ ಸೂಚಿಸಿತ್ತು. "ಅವರು ಬಿಜೆಪಿಯ ಭಾಗವಾಗಿರುವಂತೆ ಬಿಂಬಿಸುತ್ತಿದ್ದಾರೆ, ಇದು ತಪ್ಪು" ಎಂದು ಕೇಸರಿ ನಾಯಕರು ದೂರಿನಲ್ಲಿ ತಿಳಿಸಿದ್ದಾರೆ. ಇದಾದ ಕೆಲವು ದಿನಗಳ ನಂತರ, ಬಂಡಾಯ ನಾಯಕನ ವಿರುದ್ಧ ತಡೆ ಆದೇಶವನ್ನು ಕೋರಿ ಬಿಜೆಪಿ ಶಿವಮೊಗ್ಗ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ.
'ನಾಮಪತ್ರ ಹಿಂಪಡೆಯುವುದಿಲ್ಲ'
ಈ ವಿವಾದದ ಮಧ್ಯೆಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈಶ್ವರಪ್ಪ ಅವರಿಗೆ ಕರೆ ಮಾಡಿ ನಾಮಪತ್ರ ಹಿಂಪಡೆಯುವಂತೆ ಸೂಚಿಸಿದ್ದರು. ಆದರೆ, ಅವರು ಈ ಮನವಿಯನ್ನು ನಿರಾಕರಿಸಿದ್ದಾರೆ. ಏಪ್ರಿಲ್ 13ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ, "ನಾನು ನಾಮಪತ್ರ ಹಿಂಪಡೆಯುತ್ತೇನೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ನಾಮಪತ್ರ ಹಿಂಪಡೆದಿದ್ದೇನೆ ಎಂಬುದು ಸುಳ್ಳು ಸುದ್ದಿ. ಯಾವುದೇ ಕಾರಣಕ್ಕೂ ಚುನಾವಣಾ ಕಣದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಹಿರಿಯ ಪುತ್ರ ಬಿ.ವೈ.ರಾಘವೇಂದ್ರ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಇದರ ನಡುವೆ ಈಶ್ವರಪ್ಪ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದು ಬಿಜೆಪಿ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ಮೇ 7ರಂದು ನಡೆಯುವ ರಾಜ್ಯದ ಎರಡನೇ ಹಂತದ 14 ಲೋಕಸಭಾ ಚುನಾವಣಾ ಕ್ಷೇತ್ರಗಳಲ್ಲಿ
ಶಿವಮೊಗ್ಗವೂ ಸೇರಿದೆ.