logo
ಕನ್ನಡ ಸುದ್ದಿ  /  ಕರ್ನಾಟಕ  /  Mangaluru Crime: ಬೈಕ್‌ನಲ್ಲಿ ತೆರಳುತ್ತಿದ್ದಾಗ ಟಿಪ್ಪರ್ ಡಿಕ್ಕಿ, ಶಿಕ್ಷಕಿ ಸ್ಥಳದಲ್ಲೇ ಸಾವು; ಪುತ್ತೂರಿನ ಪೋಳ್ಯದಲ್ಲಿ ಘಟನೆ

Mangaluru Crime: ಬೈಕ್‌ನಲ್ಲಿ ತೆರಳುತ್ತಿದ್ದಾಗ ಟಿಪ್ಪರ್ ಡಿಕ್ಕಿ, ಶಿಕ್ಷಕಿ ಸ್ಥಳದಲ್ಲೇ ಸಾವು; ಪುತ್ತೂರಿನ ಪೋಳ್ಯದಲ್ಲಿ ಘಟನೆ

HT Kannada Desk HT Kannada

Jan 30, 2024 12:03 PM IST

ಬೈಕ್‌ನಲ್ಲಿ ತೆರಳುತ್ತಿದ್ದಾಗ ಟಿಪ್ಪರ್ ಡಿಕ್ಕಿ, ಶಿಕ್ಷಕಿ ಸ್ಥಳದಲ್ಲೇ ಸಾವು

    • ಪತಿ-ಮಗಳೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಟಿಪ್ಪರ್‌ ಡಿಕ್ಕಿಯಾದ ಪರಿಣಾಮ ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಪುತ್ತೂರಿನ ಪೋಳ್ಯ ಎಂಬಲ್ಲಿ ನಡೆದಿದೆ. ಸ್ಟೇಜ್‌ ಮೇಲೆ ಹಾಡುತ್ತಿದ್ದಾಗಲೇ ಕುಸಿದು ಬಿದ್ದು ಯುವಕ ಸಾವನ್ನಪ್ಪಿದ ಘಟನೆ ಕಾಸರಗೋಡಿನ ಬಾಯಾರಿನಲ್ಲಿ ನಡೆದಿದೆ. ಇನ್ನಿತರ ಕ್ರೈಮ್‌ ಸುದ್ದಿಗಳ ಅಪ್‌ಡೇಟ್‌ ಇಲ್ಲಿದೆ. 
ಬೈಕ್‌ನಲ್ಲಿ ತೆರಳುತ್ತಿದ್ದಾಗ ಟಿಪ್ಪರ್ ಡಿಕ್ಕಿ, ಶಿಕ್ಷಕಿ ಸ್ಥಳದಲ್ಲೇ ಸಾವು
ಬೈಕ್‌ನಲ್ಲಿ ತೆರಳುತ್ತಿದ್ದಾಗ ಟಿಪ್ಪರ್ ಡಿಕ್ಕಿ, ಶಿಕ್ಷಕಿ ಸ್ಥಳದಲ್ಲೇ ಸಾವು

ಮಂಗಳೂರು: ಪುತ್ತೂರು ಸಮೀಪ ಮೈಸೂರು ರಸ್ತೆಯ ಪೋಳ್ಯ ಎಂಬಲ್ಲಿ ಟಿಪ್ಪರ್‌ ಹಾಗೂ ದ್ವಿಚಕ್ರ ವಾಹನ ನಡುವೆ ನಡೆದ ಅಪಘಾತದಲ್ಲಿ ಶಿಕ್ಷಕಿ ಸಾವನ್ನಪ್ಪಿದ್ದಾರೆ. ಇಡ್ಕಿದು ಗ್ರಾಮದ ಮಿತ್ತೂರು ಮದಕ ನಿವಾಸಿ ಸುರೇಶ್ ಕುಲಾಲ್ ಪತ್ನಿ, ಶಿಕ್ಷಕಿ ಅನಿತಾ (35) ಸಾವನ್ನಪ್ಪಿದವರು. ಇವರು ಮಾಣಿಯ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ಮನೆಯಲ್ಲಿ ಬಿದ್ದು ಗಾಯಗೊಂಡಿದ್ದ ಅನಿತಾ ಅವರು ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಪತಿ ಸುರೇಶ್ ಹಾಗೂ 5 ವರ್ಷದ ಪುತ್ರಿ ಜೊತೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ಸಂದರ್ಭ, ಕಬಕ ಸಮೀಪ ಪೋಳ್ಯದಲ್ಲಿ ಏಕಾಏಕಿ ಬಂದ ಟಿಪ್ಪರ್ ಅವರ ಮೇಲೆರಗಿದೆ. ಅಪಘಾತದ ತೀವ್ರತೆಗೆ ಅನಿತಾ ರಸ್ತೆಗೆ ಎಸೆಯಲ್ಪಟ್ಟು ಸಾವನ್ನಪ್ಪಿದ್ದಾರೆ. ಉಳಿದಿಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ದೊಡ್ಡಬಳ್ಳಾಪುರ: ಹೇಮಂತಗೌಡ ಹತ್ಯೆ ಪ್ರಕರಣದ 2ನೇ ಆರೋಪಿ ಬಂಧನ, ಪೊಲೀಸರ ಮೇಲೆ ಹಲ್ಲೆಗೆತ್ನಿಸಿದ್ದ ಕಾರಣ ಕಾಲಿಗೆ ಗುಂಡೇಟು

ಮಂಗಳೂರು ವಿಮಾನ ನಿಲ್ಧಾಣಕ್ಕೆ ಬಂದು ಗೊಂದಲಕ್ಕೆ ಒಳಗಾದ ಮಹಿಳೆ, ನೆರವಾದ ಭದ್ರತಾ ಸಿಬ್ಬಂದಿ, ನಾಪತ್ತೆ ಪ್ರಕರಣ ಸುಖಾಂತ್ಯ

ದಕ್ಷಿಣ ಕನ್ನಡದ ಮಂಗಳೂರು, ಪುತ್ತೂರಲ್ಲಿ ಹಲಸು, ಮಾವು ಸೇರಿ ವಿವಿಧ ಹಣ್ಣುಗಳ ಮೇಳ, ದಿನಾಂಕ ಮತ್ತು ಇತರೆ ವಿವರ

ಬೆಂಗಳೂರು: ಕೊನೆಗೂ ತೆರಿಗೆ ಕಟ್ಟಲು ಒಪ್ಪಿಕೊಂಡ ಮಂತ್ರಿ ಮಾಲ್; ಬೀಗ ತೆಗೆಯುವಂತೆ ಬಿಬಿಎಂಪಿಗೆ ಹೈಕೋರ್ಟ್‌ ನಿರ್ದೇಶನ

ಹಾಡುತ್ತಿದ್ದಾಗಲೇ ಕುಸಿದು ಬಿದ್ದು ಯುವಕ ಸಾವು

ಕಾಸರಗೋಡು ಜಿಲ್ಲೆಯ ಬಾಯಾರು ಸಮೀಪ ವಿವಾಹ ಸಮಾರಂಭವೊಂದರಲ್ಲಿ ಹಾಡುತ್ತಿದ್ದಾಗಲೇ ಯುವಕನೊಬ್ಬ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಬಾಯಾರು ಬದಿಯೂರು ಸಾರ್ಕಾಜೆ ನಿವಾಸಿ ಮೋನು ಅವರ ಪುತ್ರ ಮೊಹಮ್ಮದ್ ಅನ್ಸಾರ್ (34) ಸಾವನ್ನಪ್ಪಿದವರು. ದಿಢೀರ್ ಕುಸಿದು ಸಾವನ್ನಪ್ಪಲು ಕಾರಣ ಇನ್ನೂ ಗೊತ್ತಾಗಿಲ್ಲ. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೋಟೆಕಣಿಯಲ್ಲಿ ಪ್ಲೈವುಡ್ ಫ್ಯಾಕ್ಟರಿಗೆ ಬೆಂಕಿ

ಸಜೀಪ ಸಮೀಪದ ಕೋಟೆಕಣಿಯಲ್ಲಿ ಫ್ಲೈವುಡ್ ಫ್ಯಾಕ್ಟರಿಗೆ ಬೆಂಕಿ ತಗಲಿ ಸುಮಾರು 2 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ. ಬಂಟ್ವಾಳ ಹಾಗೂ ಪಾಂಡೇಶ್ವರ ಅಗ್ನಿಶಾಮಕ ವಾಹನಗಳು ತೆರಳಿ ಸ್ಥಳೀಯರ ನೆರವಿನಿಂದ ಬೆಂಕಿ ನಂದಿಸುವ ಕಾರ್ಯ ನಿರ್ವಹಿಸಿದ್ದಾರೆ. ಶಬೀರ್ ಅವರಿಗೆ ಸೇರಿದ ಫ್ಯಾಕ್ಟರಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಮರದ ಅವಶೇಷ ರಾಶಿ ಹಾಕಿದ್ದ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕಾರ್ಯಾಚರಣೆಯಲ್ಲಿ ಪಾಂಡೇಶ್ವರ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ರಾಜ, ಬಂಟ್ವಾಳ ಅಗ್ನಿಶಾಮಕ ಠಾಣೆಯ ಸಿಬಂದಿ ಚಂದ್ರಕಾಂತ, ಪುರುಷೋತ್ತಮ, ರಾಜೇಶ್ ಶೆಟ್ಟಿ, ಕಿರಣ್ ಕುಮಾರ್, ರುಕ್ಕಯ್ಯ ಅಮೀನ್, ಕೆ.ಸುರೇಂದ್ರ, ನಾಗರಾಜ್, ಜಾಂಟಿ ಭಾಗವಹಿಸಿದ್ದರು.

ಪಟಾಕಿ ತಯಾರಿ ಘಟಕ ಸ್ಫೋಟ ಪ್ರಕರಣ: ತನಿಖೆ ತೀವ್ರ

ವೇಣೂರು ಠಾಣಾ ವ್ಯಾಪ್ತಿಯ ಕುಕ್ಕೇಡಿ ಎಂಬಲ್ಲಿ ಪಟಾಕಿ ತಯಾರಿಕಾ ಘಟಕದಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಂಡಿದ್ದು, ಘಟಕದ ಮಾಲೀಕ ಬಶೀರ್ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಘಟಕದಲ್ಲಿ ಸುಡುಮದ್ದು ತಯಾರಿಸುತ್ತಿದ್ದ ಮತ್ತೋರ್ವ ಕಿರಣ್ ಎಂಬಾತನನ್ನು ವಶಕ್ಕೆ ಪಡೆದು, ಈಗಾಗಲೇ ಜಿಲ್ಲಾ ಎಸ್ಪಿ ರಿಷ್ಯಂತ್ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ. ಸ್ಫೋಟದಿಂದ ದೇಹ ಛಿದ್ರಗೊಂಡಿದ್ದ ಕೇರಳದ ವರ್ಗೀಸ್, ಹಾಸನದ ಚೇತನ್ ಮತ್ತು ಪಾಲಕ್ಕಾಡಿನ ಸ್ವಾಮಿ ಯಾನೆ ನಾರಾಯಣ ಸಾವನ್ನಪ್ಪಿದ್ದರು.

ಮೇಲ್ನೋಟಕ್ಕೆ ಗನ್ ಪೌಡರ್ ರೂಪದ ಕಚ್ಚಾ ವಸ್ತುಗಳು ಇಲ್ಲಿ ಕಂಡುಬಂದಿದ್ದು, ಜಿಲೆಟಿನ್ ರೂಪದ ಕುರುಹುಗಳು ಇಲ್ಲ ಎಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ, ರಾಜ್ಯದ ಹಲವು ಇಲಾಖೆಗಳೂ ತನಿಖೆ ನಡೆಸುತ್ತಿವೆ. ಎಲ್ಲ ವರದಿಗಳು ಬಂದ ಬಳಿಕ ಕಾರಣ ತಿಳಿಯಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈಗಾಗಲೇ 85ಕ್ಕೂ ಅಧಿಕ ಸ್ಯಾಂಪಲ್‌ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯದ ತಂಡ ಪಡೆದುಕೊಂಡಿದೆ. ಪಟಾಕಿ ತಯಾರಿಕೆಗೆ ಬೇಕಾದ ವಸ್ತುಗಳು ಇದರಲ್ಲಿವೆ. ಇಲ್ಲಿ ಫೈರ್ ಸೇಫ್ಟಿ ಬಳಕೆಯಾಗಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.

(This copy first appeared in Hindustan Times Kannada website. To read more like this please logon to kannada.hindustantimes.com )

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ