logo
ಕನ್ನಡ ಸುದ್ದಿ  /  ಕರ್ನಾಟಕ  /  ದಕ್ಷಿಣ ಕನ್ನಡದ ಮಂಗಳೂರು, ಪುತ್ತೂರಲ್ಲಿ ಹಲಸು, ಮಾವು ಸೇರಿ ವಿವಿಧ ಹಣ್ಣುಗಳ ಮೇಳ, ದಿನಾಂಕ ಮತ್ತು ಇತರೆ ವಿವರ

ದಕ್ಷಿಣ ಕನ್ನಡದ ಮಂಗಳೂರು, ಪುತ್ತೂರಲ್ಲಿ ಹಲಸು, ಮಾವು ಸೇರಿ ವಿವಿಧ ಹಣ್ಣುಗಳ ಮೇಳ, ದಿನಾಂಕ ಮತ್ತು ಇತರೆ ವಿವರ

Umesh Kumar S HT Kannada

May 17, 2024 12:00 PM IST

google News

ದಕ್ಷಿಣ ಕನ್ನಡದ ಮಂಗಳೂರು, ಪುತ್ತೂರಲ್ಲಿ ಈ ಬಾರಿಯೂ ಹಲಸು, ಮಾವು ಸೇರಿ ವಿವಿಧ ಹಣ್ಣುಗಳ ಮೇಳಗಳು ನಡೆಯಲಿವೆ.

  • ಬೇಸಿಗೆ ಮುಗಿದು ಮಳೆ ನಿರೀಕ್ಷಿಸುವ ಹೊತ್ತು. ವಾಡಿಕೆಯಂತೆ ಈ ಬಾರಿಯೂ ದಕ್ಷಿಣ ಕನ್ನಡದ ಮಂಗಳೂರು, ಪುತ್ತೂರಲ್ಲಿ ಹಲಸು, ಮಾವು ಸೇರಿ ವಿವಿಧ ಹಣ್ಣುಗಳ ಮೇಳ ನಡೆಯಲಿವೆ. ದಿನಾಂಕ ಮತ್ತು ಇತರೆ ವಿವರ ಇಲ್ಲಿದೆ ನೋಡಿ. (ವರದಿ - ಹರೀಶ ಮಾಂಬಾಡಿ, ಮಂಗಳೂರು)

ದಕ್ಷಿಣ ಕನ್ನಡದ ಮಂಗಳೂರು, ಪುತ್ತೂರಲ್ಲಿ ಈ ಬಾರಿಯೂ ಹಲಸು, ಮಾವು ಸೇರಿ ವಿವಿಧ ಹಣ್ಣುಗಳ ಮೇಳಗಳು ನಡೆಯಲಿವೆ.
ದಕ್ಷಿಣ ಕನ್ನಡದ ಮಂಗಳೂರು, ಪುತ್ತೂರಲ್ಲಿ ಈ ಬಾರಿಯೂ ಹಲಸು, ಮಾವು ಸೇರಿ ವಿವಿಧ ಹಣ್ಣುಗಳ ಮೇಳಗಳು ನಡೆಯಲಿವೆ.

ಮಂಗಳೂರು: ಮತ್ತೆ ಹಲಸು ಮೇಳ ಬಂದಿದೆ. ಜತೆಗೆ ರುಚಿರುಚಿಯಾದ ಇತರ ಹಣ್ಣುಗಳೂ ಇರುತ್ತವೆ. ಮಂಗಳೂರು ಹಾಗೂ ಪುತ್ತೂರಿನಲ್ಲಿ ಈ ಮೇಳ ಆಯೋಜನೆಯಾಗಲಿದೆ. ಈಗಾಗಲೇ ಇಲಾಖೆಗಳ ವತಿಯಿಂದ ಮಾವು ಮೇಳ ಮಂಗಳೂರು ಮತ್ತು ಉಡುಪಿಯಲ್ಲಿ ಆಯೋಜನೆಯಾಗಿತ್ತು. 

ಇದೀಗ ಮೇ 18 ಮತ್ತು 19ರಂದು ಮಂಗಳೂರಿನ ಬಾಳಂಭಟ್ ಸಭಾಂಗಣದಲ್ಲಿ, ಮೇ 24, 25 ಮತ್ತು 26ರಂದು ಪುತ್ತೂರಿನ ಜೈನ ಭವನದಲ್ಲಿ ಹಾಗೂ ಜೂನ್ 16ರಂದು ಮಂಗಳೂರು ನಂತೂರಿನ ಶ್ರೀ ಭಾರತೀ ಕಾಲೇಜಿನಲ್ಲಿ ಖಾಸಗಿ ಸಂಸ್ಥೆಗಳ ವತಿಯಿಂದ ಮೇಳಗಳು ಭರ್ಜರಿಯಾಗಿಯೇ ಆಯೋಜನೆಯಾಗಲಿವೆ. ಇದರಲ್ಲಿ ಹಲಸಿನ ಖಾದ್ಯಗಳ ಸಹಿತ ಹಲವು ವೈವಿಧ್ಯಮಯ ಉತ್ಪನ್ನಗಳು ದೊರೆಯುವುದು ಗ್ಯಾರಂಟಿ ಎಂದು ಆಯೋಜಕರೇ ಮಾಹಿತಿ ನೀಡಿದ್ದಾರೆ. ಹಲಸು ಮೇಳಗಳು ಎಲ್ಲೆಲ್ಲಿವೆ ವಿವರಗಳು ಇಲ್ಲಿವೆ.

ಮಂಗಳೂರಿನಲ್ಲಿ ಮೇ 18, 19 ಮತ್ತು ಜೂನ್ 16 ರಂದು

ಮತ್ತೆ ಬಂದಿದೆ ಮಂಗಳೂರಿನ ಹಲಸು ಹಬ್ಬ ಎಂದು ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗ ಹೇಳುತ್ತಾ ಹಲಸುಪ್ರಿಯರನ್ನು ಆಹ್ವಾನಿಸಿದೆ. ಮೇ 18 ಶನಿವಾರ ಮತ್ತು 19 ಭಾನುವಾರ ಮಂಗಳೂರಿನ ಶರವು ದೇವಳ ಸಮೀಪದ ಬಾಳಂಭಟ್ ಸಭಾಂಗಣದಲ್ಲಿ ಈ ಮೇಳವನ್ನು ಆಯೋಜಿಸಲಾಗಿದೆ. ವೈವಿಧ್ಯಮಯ ಹಲಸಿನ ಹಣ್ಣು, ಹಲಸಿನ ಗಿಡ, ಹಲಸಿನ ಗಾರಿಗೆ, ಗಟ್ಟಿ, ಮುಳ್ಕ, ಚಿಪ್ಸ್, ಪಾಯಸ, ಬಿರಿಯಾನಿ, ಜ್ಯೂಸ್, ಹೋಳಿಗೆ, ತರಕಾರಿ ಗಿಡಗಳು, ಬಗೆ ಬಗೆಯ ಸಾವಯವ ಉತ್ಪನ್ನಗಳು ಇರಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.

ಹಲಸು ಮೇಳ ಆಹಾರೋತ್ಸವ ಸಮಿತಿ ಮತ್ತು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆ ಆಯೋಜನೆಯಲ್ಲಿ ಜೂನ್ 16ರಂದು ಬೆಳಗ್ಗೆ 8ರಿಂದ ರಾತ್ರಿ 8ವರೆಗೆ ನಂತೂರು ಶ್ರೀಭಾರತೀ ಕಾಲೇಜು ಆವರಣದಲ್ಲಿ ನಡೆಯಲಿದೆ. ಕಳೆದ ವರ್ಷದಂತೆ ಈ ವರ್ಷವೂ ಹಲಸಿನ ಹಣ್ಣು, ಗಿಡ ಸಹಿತ ಖಾದ್ಯೋತ್ಪನ್ನಗಳು ಇರಲಿವೆ ಎಂದು ಆಯೋಜಕರು ಹೇಳಿದ್ದಾರೆ.

ಮೇ 24, 25 ಮತ್ತು 26ರಂದು ಪುತ್ತೂರಿನ ಜೈನಭವನದಲ್ಲಿ

ಹಲಸು ಮತ್ತು ಹಣ್ಣುಗಳ ಮೇಳ ಆರು ವರ್ಷಗಳ ಯಶಸ್ವಿ ಆಯೋಜನೆ ಬಳಿಕ ಈ ಬಾರಿ ಮತ್ತೆ ಪುತ್ತೂರಿನ ಜೈನ ಭವನದಲ್ಲಿ ಏಳನೇ ಬಾರಿ ಮೇ 24, 25 ಮತ್ತು 26ರಂದು ನಡೆಯಲಿದೆ. ನವತೇಜ ಟ್ರಸ್ಟ್ ಪುತ್ತೂರು, ಅಡಿಕೆ ಪತ್ರಿಕೆ ಪುತ್ತೂರು ಮತ್ತು ಜೆ.ಸಿ.ಐ. ಪುತ್ತೂರು ಸಂಯುಕ್ತ ಆಶ್ರಯದಲ್ಲಿ ಏಳನೇ ವರುಷದ ’ಹಲಸು ಮತ್ತು ಹಣ್ಣುಗಳ ಮೇಳ’ವು 2024 ಮೇ 24 ರಿಂದ 26ರ ತನಕ ಜರುಗಲಿದೆ. ಪುತ್ತೂರಿನ ಬೈಪಾಸ್ ರಸ್ತೆಯಲ್ಲಿರುವ ’ಜೈನ್ ಭವನ’ದಲ್ಲಿ ದಿನಪೂರ್ತಿ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಇಲ್ಲಿ ಸುಮಾರು ಅರುವತ್ತಕ್ಕೂ ಮಿಕ್ಕಿ ಮಳಿಗೆಗಳಿರಲಿವೆ. ಯಾವುದೇ ಕೃತಕ ಬಣ್ಣ, ಒಳಸುರಿಗಳನ್ನು ಬಳಸದ ಉತ್ಪನ್ನಗಳು ಮೇಳದ ಹೈಲೈಟ್. ಸ್ಥಳದಲ್ಲೇ ತಯಾರಿಸುವ ಹಲವು ಪಾರಂಪರಿಕ ತಿಂಡಿಗಳು ಗ್ರಾಹಕರಲ್ಲಿ ರುಚಿವರ್ಧನೆಯನ್ನು ಮಾಡಲಿವೆ. ಹಲಸಿನ ತಳಿಗಳನ್ನು ಅಭಿವೃದ್ಧಿಪಡಿಸಿದ ಪ್ರಸಿದ್ಧ ನರ್ಸರಿಗಳಿಂದ ಗಿಡಗಳ ಪ್ರದರ್ಶನ ಮತ್ತು ಮಾರಾಟವಿದೆ.

ಹಲಸಿನ ಉಂಡ್ಲಕಾಳು, ಚಿಪ್ಸ್, ಹಪ್ಪಳ, ದೋಸೆ, ಮಂಚೂರಿ, ಕಬಾಬ್, ಮುಳುಕ್ಕ, ಜ್ಯೂಸ್, ಸೊಳೆ ರೊಟ್ಟಿ, ಕೇಕ್, ಹಲ್ವ, ಅತಿರಸ, ದೋಸೆ, ಸೇಮಿಗೆ, ಬನ್ಸ್, ಪಲಾವ್, ಪಾಯಸ, ಸೋಂಟೆ, ಕೊಟ್ಟಿಗೆ, ಗೆಣಸಲೆ, ಪೋಡಿ, ಮಾಂಬಳ, ಹಣ್ಣಿನ ಐಸ್‌ಕ್ರೀಂ.. ಹೀಗೆ ಹತ್ತಾರು ಬಗೆಯನ್ನು ಸವಿಯಲು ಅವಕಾಶ. ಹಲಸಿನ ಹಣ್ಣಿನ ಮಳಿಗೆಯಿದೆ. ಹಲಸಿನ ಬೀಜದ ಹೋಳಿಗೆ, ಹಣ್ಣಿನ ಹೋಳಿಗೆ ಖಾದ್ಯಗಳಲ್ಲಿ ಹೈಲೈಟ್. ಹಲಸಿನ ಇಷ್ಟೊಂದು ಖಾದ್ಯಗಳು ಒಂದೇ ಸೂರಿನಡಿಯಲ್ಲಿ ಲಭ್ಯವಾಗುತ್ತಿರುವುದು ಹಲಸು ಪ್ರಿಯರಿಗೆ ಖುಷಿ ತರಬಹುದಾದ ವಿಚಾರ ಎಂದು ಆಯೋಜಕ ಸುಹಾಸ್ ಮರಿಕೆ ತಿಳಿಸಿದ್ದಾರೆ.

ತಿಪಟೂರು, ಚೆನ್ನಪಟ್ಟಣದಿಂದ ಬರುವ ಬೆಳೆಗಾರರು; ಮಾರಾಟ ಮೇಳವಷ್ಟೇ ಅಲ್ಲ, ಸ್ಪರ್ಧೆ, ಮಾಹಿತಿ

ತಿಪಟೂರು ಮತ್ತು ಚೆನ್ನಪಟ್ಟಣದಿಂದ ಮೇಳಕ್ಕಾಗಿಯೇ ಹಲಸು ಮತ್ತು ಮಾವು ಬೆಳೆಗಾರರು ಸ್ವತಃ ಹಣ್ಣುಗಳೊಂದಿಗೆ ಮೇಳಕ್ಕೆ ಬರಲಿದ್ದಾರೆ. ಮುಖ್ಯವಾಗಿ ’ಕೆಂಪು ಹಲಸು’ ಗ್ರಾಹಕರ ಮನ ಸೆಳೆಯಲಿದೆ. ಕೊಕ್ಕೋ ಉತ್ಪನ್ನಗಳ ಮಳಿಗೆಗಳಿವೆ. ಈ ಋತುವಿನಲ್ಲಿ ಸಿಗುವ ರಂಬುಟಾನ್, ಡ್ರ್ಯಾಗನ್, ಮ್ಯಾಂಗೋಸ್ಟಿನ್, ಬೆಣ್ಣೆಹಣ್ಣು.. ಮೊದಲಾದ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ, ವಿಶೇಷ ಆಹಾರ ಮಳಿಗೆ, ಅಗ್ರಿ ಬ್ಯುಸಿನೆಸ್ ಮಳಿಗೆಗಳು ಇರಲಿವೆ.

ಹಲಸು ಕೃಷಿಕರ ಅನುಭವದ ಮಾತುಗಳು, ಹೊಸ ಹೊಸ ತಳಿಗಳ ಪರಿಚಯ.. ಹೀಗೆ ಹಲಸು ಮೇಳದಲ್ಲಿ ವಿವಿಧ ವೈವಿಧ್ಯಗಳು. ವಿದ್ಯಾರ್ಥಿಗಳಿಗೆ ಹಲಸಿನ ಅರಿವನ್ನು ಮೂಡಿಸುವ ಉದ್ದೇಶದಿಂದ ಚಿತ್ರಬಿಡಿಸುವ, ಕವನ ರಚಿಸುವ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಹಲಸಿನ ಹಣ್ಣಿನ ಸೊಳೆಯನ್ನು ತಿನ್ನುವ ಸ್ಪರ್ಧೆಯಿದೆ. ಮೇಳದಲ್ಲಿ ಸಂಶೋಧನಾ ಕೇಂದ್ರಗಳು ಹಾಗೂ ಕೃಷಿಕರನ್ನು ಒಂದೇ ಸೂರಿನಡಿ ತಂದು ಕೃಷಿ ಉತ್ಪನ್ನಗಳಿಗೆ ಉದ್ಯಮದ ಸ್ವರೂಪ ನೀಡುವ ಯತ್ನವು ಮೇಳದ ಉದ್ದೇಶಗಳಲ್ಲೊಂದು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ವಿವಿಧ ರಂಗದ ಗಣ್ಯರು, ಕೃಷಿಕರು ಆಗಮಿಸಲಿದ್ದಾರೆ. ನವತೇಜ ಟ್ರಸ್ಟಿನೊಂದಿಗೆ ಅಕ್ಷ ಕಾಟೇಜ್ ಇಂಡಸ್ಟ್ರೀಸ್, ನವನೀತ್ ಫಾರ್ಮ್ ನರ್ಸರಿ, ಮರಿಕೆ ಸಾವಯವ ಮಳಿಗೆ, ನಿರ್ಮಾಣ್ ಅಸೋಸಿಯೇಟ್ಸ್,.. ಮೊದಲಾದ ಸಂಸ್ಥೆಗಳ ಹೆಗಲೆಣೆ. ಎಲ್ಲರಿಗೂ ಮುಕ್ತ ಪ್ರವೇಶ ಎಂದು ನವತೇಜ ಪುತ್ತೂರಿನ ಸುಹಾಸ್ ಮರಿಕೆ ತಿಳಿಸಿದ್ದಾರೆ.

(ವರದಿ -ಹರೀಶ ಮಾಂಬಾಡಿ, ಮಂಗಳೂರು)

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ