Gopalaiah on Gujarat Elections Results: ನಿರೀಕ್ಷೆಗೂ ಮೀರಿ ಗುಜರಾತ್ ಜನತೆ ಬಿಜೆಪಿಗೆ ಮತ ನೀಡಿದ್ದಾರೆ: ಸಚಿವ ಕೆ.ಗೋಪಾಲಯ್ಯ
Dec 08, 2022 03:03 PM IST
ಅಬಕಾರಿ ಸಚಿವರು ಹಾಗೂ ಮಂಡ್ಯ ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ
- ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಗುಜರಾತ್ನ ಜನತೆ ಭಾರತೀಯ ಜನತಾ ಪಾರ್ಟಿಯನ್ನು ಒಪ್ಪಿಕೊಂಡಿದ್ದಾರೆ.ನಿರೀಕ್ಷೆಗೂ ಮೀರಿ ಗುಜರಾತ್ ಜನತೆ ಬಿಜೆಪಿಗೆ ಮತ ನೀಡಿದ್ದಾರೆ ಎಂದು ಅಬಕಾರಿ ಸಚಿವರು ಹಾಗೂ ಮಂಡ್ಯ ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ ಹೇಳಿದರು.
ಬೆಂಗಳೂರು: ಗುಜರಾತ್ ವಿಧಾನಸಭೆ ಚುನಾವಣೆಗೆ ಮತ ಎಣಿಕೆ ಪ್ರಕ್ರಿಯೆ ಜಾರಿಯಲ್ಲಿದ್ದು, ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಲಿರುವುದು ಬಹುತೇಕ ಖಚಿತವಾಗಿದೆ. ಮತ ಎಣಿಕೆ ಪ್ರಕ್ರಿಯೆಯಲ್ಲಿ ಭಾರೀ ಮುನ್ನಡೆ ಕಾಯ್ದುಕೊಂಡಿರುವ ಬಿಜೆಪಿ, ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಕ್ಷೇತ್ರಗಳಲ್ಲಿ ಜಯ ಸಾಧಿಸಲಿರುವುದು ಖಚಿತ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಬಕಾರಿ ಸಚಿವರು ಹಾಗೂ ಮಂಡ್ಯ ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಗುಜರಾತ್ನ ಜನತೆ ಭಾರತೀಯ ಜನತಾ ಪಾರ್ಟಿಯನ್ನು ಒಪ್ಪಿಕೊಂಡಿದ್ದಾರೆ.ನಿರೀಕ್ಷೆಗೂ ಮೀರಿ ಗುಜರಾತ್ ಜನತೆ ಬಿಜೆಪಿಗೆ ಮತ ನೀಡಿದ್ದಾರೆ ಎಂದು ಹೇಳಿದರು.
ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಹಿಮಾಚಲ ಪ್ರದೇಶದಲ್ಲಿಯೂ ಸಹ ನಾವೇ ಅಧಿಕಾರವನ್ನು ನಡೆಸುತ್ತಿದ್ದೇವೆ. ಎರಡು ರಾಜ್ಯದಲ್ಲಿಯೂ ಸಹ ನಮ್ಮ ಪಕ್ಷ ಬರುತ್ತದೆ ಎಂದು ಹೇಳಿದ್ದೆವು. ಇಂದು ಜನರು ತೀರ್ಪನ್ನು ಕೊಟ್ಟಿದಾರೆ. ಇದನ್ನು ವಿರೋಧ ಪಕ್ಷಗಳು ಒಪ್ಪಿಕೊಳ್ಳಬೇಕು ಎಂದರು.
ಕರ್ನಾಟಕದಲ್ಲಿ ಮುಂದಿನ 2023ರ ಚುನಾವಣೆಯಲ್ಲಿಯೂ ಸಹ ಭಾರತೀಯ ಜನತಾ ಪಾರ್ಟಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹಾಗೂ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿರವರ ನಾಯಕತ್ವದಲ್ಲಿ ಗೆದ್ದು ಅಧಿಕಾರಕ್ಕೆ ಬರುತ್ತದೆ ಎಂದರು. ಮೋದಿಜೀ ಅವರ ನಾಯಕತ್ವವನ್ನು ಗುಜರಾತ್ ಜನತೆ ಒಪ್ಪಿಕೊಂಡಿದ್ದಾರೆ ಹಾಗಾಗಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಬಿಎಸ್‌ವೈ ಪ್ರತಿಕ್ರಿಯೆ
ಗುಜರಾತ್‌ನಲ್ಲಿ ಪಕ್ಷ ಐತಿಹಾಸಿಕ ಗೆಲುವು ದಾಖಲಿಸಿರುವುದು ಸಂತಸದ ಸಂಗತಿ. ಗುಜರಾತ್ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಹೊರಬರುತ್ತಿರುವ ಚುನಾವಣಾ ಫಲಿತಾಂಶಗಳು, ಜಾತಿ ಮತ್ತು ಧರ್ಮ ಆಧಾರಿತ ರಾಜಕಾರಣವನ್ನು ತಿರಸ್ಕರಿಸುವುದಕ್ಕೆ ಸಾಕ್ಷಿ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಈ ಎರಡೂ ರಾಜ್ಯಗಳ ಮತದಾರರು ಜಾತಿ ಮತ್ತು ಧರ್ಮ ಆಧಾರಿತ ರಾಜಕೀಯ ಲೆಕ್ಕಾಚಾರಗಳನ್ನು ಮೀರಿ, ರಾಜ್ಯದ ಹಾಗೂ ದೇಶದ ಅಭಿವೃದ್ಧಿ ಮುಖ್ಯ ಎಂಬುದನ್ನು ಎತ್ತಿ ತೋರಿಸಿದ್ದಾರೆ. ಗುಜರಾತ್‌ನಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದ್ದು, ಹಿಮಾಚಲ ಪ್ರದೇಶದಲ್ಲೂ ಪಕ್ಷ ಉತ್ತಮ ಪ್ರದರ್ಶನ ತೋರುವ ಭರವಸೆ ಇದೆ ಎಂದು ಬಿಎಸ್‌ವೈ ಹೇಳಿದ್ದಾರೆ.
ಗುಜರಾತ್‌ನಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು ತಂದುಕೊಟ್ಟ ರಾಜ್ಯದ ಜನತೆಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ರಾಜ್ಯದ ಜನ ಭರವಸೆ ಇಟ್ಟಿದ್ದಾರೆ ಎಂಬುದಕ್ಕೆ ಈ ಫಲಿತಾಂಶ ಸಾಕ್ಷಿ ಎಂದು ಮಾಜಿ ಸಿಎಂ ಬಿಸ್‌ವೈ ಹೇಳಿದ್ದಾರೆ.
ಭಾರತೀಯ ಜನತಾ ಪಕ್ಷದ ನೇತೃತ್ವದ ಸರ್ಕಾರದಿಂದ ಮಾತ್ರ ಈ ದೇಶದ ಅಭಿವೃದ್ಧಿ ಸಾಧ್ಯ ಎಂಬುದು, ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶದಿಂದ ಸಾಬೀತಾಗಿದೆ. ಗುಜರಾತ್ ಚುನಾವಣೆಯ ಫಲಿತಾಂಶವು ಒಂದು ಐತಿಹಾಸಿಕ ಅಭೂತಪೂರ್ವ ದಾಖಲೆಯನ್ನು ಸೃಷ್ಟಿಸಿದ್ದು, ಆ ರಾಜ್ಯದ ಇತಿಹಾಸದಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಗಳಿಸಿದ ಖ್ಯಾತಿಗೆ ಬಿಜೆಪಿ ಪಾತ್ರವಾಗಿದೆ ಎಂದು ಬಿಎಸ್‌ವೈ ಸಂತಸ ವ್ಯಕ್ತಪಡಿಸಿದರು.
ಮೋದಿ ಅವರ ವ್ಯಕ್ತಿತ್ವ ಹಾಳು ಮಾಡುವ ವಿಪಕ್ಷಗಳ ಹುನ್ನಾರವನ್ನು ಗುಜರಾತ್ ಜನತೆ ಸೋಲಿಸಿದ್ದಾರೆ
ಪ್ರತಿಪಕ್ಷ ನಾಯಕರು ಪ್ರಧಾನಿ ಮೋದಿ ಅವರನ್ನು ರಾವಣ, ಭಸ್ಮಾಸುರ ಎಂದೆಲ್ಲಾ ಕರೆದು ಹೀಯಾಳಿಸಿದರು. ಆದರೆ ಪ್ರಧಾನಿ ಮೋದಿ ಅವರ ವ್ಯಕ್ತಿತ್ವ ಹಾಳು ಮಾಡುವ ವಿಪಕ್ಷಗಳ ಹುನ್ನಾರವನ್ನು ಗುಜರಾತ್ ಜನತೆ ಸೋಲಿಸಿದ್ದಾರೆ ಎಂದು ಯಡಿಯೂರಪ್ಪ ಇದೇ ವೇಳೆ ಪರೋಕ್ಷವಾಗಿ ಮಲ್ಲಿಖಾರ್ಜುನ ಖರ್ಗೆ ಅವರ ಹೇಳಿಕೆಯನ್ನು ಉಲ್ಲೇಖಿಸಿ ತರಾಟೆಗೆ ತೆಗೆದುಕೊಂಡರು.
ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ದೇಶವು ಸುಭದ್ರವಾಗಿದ್ದು, ಅಭಿವೃದ್ಧಿ ಹೊಂದಿದ ದೇಶವಾಗಿ ಹೊರಹೊಮ್ಮುತ್ತಿದೆ. ಭಾರತ ವಿಶ್ವಗುರುವಾಗುವತ್ತ ದಾಪುಗಾಲು ಇಡುತ್ತಿದೆ ಎಂದು ಇದೇ ವೇಳೆ ಬಿಎಸ್‌ವೈ ಯಡಿಯೂರಪ್ಪ ಭರವಸೆ ವ್ಯಕ್ತಪಡಿಸಿದರು.