Politics: ಸ್ವಾಮೀಜಿಗಳು ರಾಜಕೀಯ ಪ್ರವೇಶ ಅನಿವಾರ್ಯ; ನನ್ನ ಸ್ಪರ್ಧೆಗೆ ಕಾಂಗ್ರೆಸ್, ಬಿಜೆಪಿ ನಾಯಕರ ಬೆಂಬಲ; ದಿಂಗಾಲೇಶ್ವರ ಸ್ವಾಮೀಜಿ
Apr 06, 2024 12:13 PM IST
ಶಿರಹಟ್ಟಿ ಫಕೀರೇಶ್ವರ ಮಠದ ಪೀಠಾಧ್ಯಕ್ಷರಾದ ದಿಂಗಾಲೇಶ್ವರ ಸ್ವಾಮೀಜಿ ಲೋಕಸಭಾ ಚುನಾವಣೆಯಲ್ಲಿ ಧಾರವಾಡದಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ. (ANI)
- ಧಾರವಾಡ ಲೋಕಸಭೆ ಚುನಾವಣೆಯಲ್ಲಿ ಶಿರಹಟ್ಟಿ ಫಕೀರೇಶ್ವರ ಮಠದ ಪೀಠಾಧ್ಯಕ್ಷರಾದ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧಿಸುವುದು ಖಚಿತವಾಗಿದೆ. ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಅವರ ವಿರುದ್ಧ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿ: ವ್ಯವಸ್ಥೆ ಅಸ್ಥಿರಗೊಂಡಾಗ ಮಠಾಧೀಶರ ರಾಜಕೀಯ ಅನಿವಾರ್ಯ ಎಂದು ಜನರು ಹೇಳುತ್ತಿದ್ದಾರೆ ಎಂದು ಶಿರಹಟ್ಟಿ ಫಕೀರೇಶ್ವರ ಮಠದ (Shirahatti Fakireshwar Mutt) ದಿಂಗಾಲೇಶ್ವರ ಸ್ವಾಮೀಜಿ (Dingaleshwar Swamiji) ಹೇಳಿದ್ದಾರೆ. ಶುಕ್ರವಾರ (ಏಪ್ರಿಲ್ 5) ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಸ್ವಾಮೀಜಿ, ಇವತ್ತಿನವರೆಗೆ ನಾವು ಚುನಾವಣೆಗೆ ಬರ್ತೀವಿ, ಎಂಪಿ ಎಲೆಕ್ಷನ್‌ಗೆ ಬರ್ತೀವಿ, ಎಂಎಲ್‌ಎ ಎಲೆಕ್ಷನ್‌ಗೆ ಬರ್ತೀವಿ ಅಂತ ಎಲ್ಲೂ ಹೇಳಿಲ್ಲ. ಆದರೆ ನಾವು ರಾಜಕೀಯಕ್ಕೆ ಬರಬೇಕೆಂದು ಜನರ ಬಯಕೆಯೇ ಹೊರತು ನಮ್ಮದಲ್ಲ. ರಾಜಕಾರಣಿಗಳಿಗೆ ಮಾರ್ಗದರ್ಶನ ಮಾಡುತ್ತಾ ಬಂದಿದ್ದೇವೆಯೇ ಹೊರತು ರಾಜಕಾರಣ ಮಾಡಿಲ್ಲ ಎಂದು ಹೇಳಿದ್ದಾರೆ.
ಮುರುಘಾ ಮಠದ ಸ್ವಾಮೀಜಿಗಳು ಈಗಾಗಲೇ ನನಗೆ ದಬ್ಬಾಳಿಕೆ ಮಾಡಿ, ಹಿಂಸೆ ಮಾಡಿ ಹೊಡೆಸಿದ್ದಾರೆ ಎಂದು ಹೇಳಿರುವುದರಿಂದ ಮಠಾಧಿಪತಿಗಳ ಸ್ವಾತಂತ್ರ್ಯವನ್ನೂ ಸಚಿವರು ಹಾಳು ಮಾಡಿದ್ದಾರೆ ಎಂಬುದನ್ನು ಪ್ರಜ್ಞಾವಂತ ಮತದಾರರು ವಿಚಾರ ಮಾಡಬೇಕು ಎಂದು ಕೇಂದ್ರ ಸಚಿವ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಯಾರೋ ಕಲಿಸಿಕೊಟ್ಟಿದ್ದಾರೆ, ಹೇಳಿಕೊಟ್ಟಿದ್ದಾರೆ ಎನ್ನುತ್ತಿದ್ದಾರೆ. ಆದರೆ ಯಾರೋ ಹೇಳಿಕೊಟ್ಟರೆ, ಕಲಿಸಿಕೊಟ್ಟರೆ ಇಷ್ಟು ಗಟ್ಟಿಯಾಗಿ ನಿಲ್ಲಲು ಸಾಧ್ಯವಿಲ್ಲ. ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಚುನಾವಣೆಗೆ ನಿಲ್ಲುವುದು ಖಚಿತ ಎಂದಿದ್ದಾರೆ.
ಸ್ವಾಮೀಜಿಗಳು ರಾಜಕೀಯಕ್ಕೆ ಬರಬಾರದು ಎಂದು ಹೇಳಿರುವವರು ಪ್ರಹ್ಲಾದ್ ಜೋಶಿ ಅವರ ಅಭಿಮಾನಿಗಳೇ ಹೊರತು ಅವರು ಪ್ರಜ್ಞಾವಂತರಲ್ಲ. ರಾಜಕೀಯಕ್ಕೆ ಬರಬೇಕು ಎಂಬುದು ನನ್ನ ಆಸಕ್ತಿ ಅಲ್ಲ. ಆದರೆ ಉತ್ತರ ಭಾರತದಲ್ಲಿ ಬಹುಸಂಖ್ಯಾತ ಸನ್ಯಾಸಿಗಳು ರಾಜಕೀಯವನ್ನು ಪ್ರವೇಶಿಸಿ ಆ ನಾಡಿನ ಜನರ ಸುಖ ಶಾಂತಿ ನೆಮ್ಮದಿಯನ್ನು ತರುವ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ ಗುಣಮಟ್ಟವನ್ನು ಹೆಚ್ಚಿಸಿದ್ದಾರೆ. ವೈದ್ಯಕೀಯ ಸೇವೆ, ಸಾರಿಗೆಯ ಗುಣಮಟ್ಟದ ಸೇವೆಯನ್ನು ಹೆಚ್ಚಿಸಿದ್ದಾರೆ. ಕೆಲವರು ಮಠಾಧೀಶರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ದಿಂಗಾಲೇಶ್ವರ ಸ್ವಾಮೀಜಿ ರಾಜಕೀಯಕ್ಕೆ ಬರಬೇಕೆಂಬುದು ಕರ್ನಾಟಕದ ಜನರ ಆಶಯವಾಗಿದೆ ಎಂದು ಹೇಳಿದ್ದಾರೆ.
ನಮ್ಮ ತಂಡವನ್ನು ಒಡೆದರೂ ನನ್ನ ಒಡೆಯುವ ಶಕ್ತಿ ಅವರಿಗಿಲ್ಲ
ಯುದ್ಧಭೂಮಿಯಲ್ಲಿ ಯಾರ್ಯಾರು ಇದ್ದರೂ ಎಂಬುದು ಮುಖ್ಯವಲ್ಲ, ಅರ್ಜುನ ಮತ್ತು ಕೃಷ್ಣ ಇಬ್ಬರು ಇದ್ದರು ಎಂಬುದು ಇತಿಹಾಸ. ನಮ್ಮ ತಂಡವನ್ನು ಅವರು ಒಡೆದರೂ ನನ್ನನ್ನ ಒಡೆಯುವ ಶಕ್ತಿ ಅವರಿಗಿಲ್ಲ. ಮುರುಘಾ ಮಠದ ಸ್ವಾಮೀಜಿಗಳು ಈಗಾಗಲೇ ನನಗೆ ದಬ್ಬಾಳಿಕೆ ಮಾಡಿ, ಹಿಂಸೆ ಮಾಡಿ ಹೊಡೆಸಿದ್ದಾರೆ ಎಂದು ಹೇಳಿರುವುದರಿಂದ ಪ್ರಜ್ಞಾವಂತ ಮತದಾರರು ಮಠಾಧಿಪತಿಗಳ ಸ್ವಾತಂತ್ರ್ಯವನ್ನೂ ಹಾಳು ಮಾಡಿದ್ದಾರೆ ಎಂಬುದನ್ನು ವಿಚಾರ ಮಾಡಬೇಕು ಎಂದು ಜೋಶಿ ವಿರುದ್ಧ ಕಿಡಿಕಾರಿದ್ದಾರೆ.
ಬಿಜೆಪಿ, ಕಾಂಗ್ರೆಸ್‌ನ ಪ್ರಮುಖ ನಾಯಕರಿಂದ ಬೆಂಬಲ
ನಮ್ಮ ಹಿಂದೆ ಬಿಜೆಪಿ, ಕಾಂಗ್ರೆಸ್ ನವರು ಇದ್ದಾರೆ, ಎಲ್ಲಾ ರೀತಿಯ ಸಣ್ಣ ಪಕ್ಷದವರು ನಮ್ಮ ಬೆಂಬಲಕ್ಕೆ ಇದ್ದಾರೆ. ವ್ಯವಸ್ಥೆ ಅಸ್ಥಿರಗೊಂಡಾಗ ಮಠಾಧೀಶರ ರಾಜಕೀಯ ಅನಿವಾರ್ಯ ಎಂದು ಜನರು ಹೇಳುತ್ತಿದ್ದಾರೆ. ಇವತ್ತಿನ ವರೆಗೆ ನಾವು ಚುನಾವಣೆಗೆ ಬರುತ್ತೀವಿ, ಎಂಪಿ ಎಲೆಕ್ಷನ್‌ಗೆ ಬರ್ತೀವಿ, ಎಂಎಲ್‌ಎ ಎಲೆಕ್ಷನ್‌ಗೆ ಬರ್ತೀವಿ ಅಂತ ಎಲ್ಲೂ ಹೇಳಿಲ್ಲ. ಆದರೆ ನಾವು ರಾಜಕೀಯಕ್ಕೆ ಬರಬೇಕೆಂದು ಜನರ ಬಯಕೆಯೇ ಹೊರತು ನಮ್ಮದಲ್ಲ, ರಾಜಕಾರಣಿಗಳಿಗೆ ಮಾರ್ಗದರ್ಶನ ಮಾಡುತ್ತಾ ಬಂದಿದ್ದೇವೆಯೇ ಹೊರತು ರಾಜಕಾರಣ ಮಾಡಿಲ್ಲ. ಎಲ್ಲ ಪಕ್ಷದ ಪ್ರಮುಖರು ನಮ್ಮ ಸಂಪರ್ಕದಲ್ಲಿ ಇದ್ದಾರೆ.
ಮೇಲ್ಮನೆ, ಕೆಳಮನೆಯಲ್ಲಿ ಕುಳಿತಿರುವವರು ನಮ್ಮನ್ನು ಸಂಪರ್ಕ ಮಾಡಿದ್ದಾರೆ. ಇವತ್ತು (ಏಪ್ರಿಲ್ 5, ಶುಕ್ರವಾರ) ಕೂಡ ಸಂಪರ್ಕ ಮಾಡಿದ್ದಾನೆ. ಯಾವುದೇ ಸಂಪರ್ಕ, ನಾಯಕರ ಒತ್ತಡಗಳಿಗೆ ಬಗ್ಗುವ ಸ್ವಾಮಿಗಳಲ್ಲ ಎಂದು ಖಡಕ್ ಉತ್ತರ ಕೊಟ್ಟಿದ್ದಾರೆ.