logo
ಕನ್ನಡ ಸುದ್ದಿ  /  ಕರ್ನಾಟಕ  /  ರಾಜ್ಯಾಧ್ಯಕ್ಷರು ಧರಣಿ ಎಂದರೆ ವಿಪಕ್ಷ ನಾಯಕರು ಸಭಾತ್ಯಾಗವೇ ಸರಿ ಅಂತಾರೆ; ಬಿಜೆಪಿಯಲ್ಲಿ ಹೆಚ್ಚಿದ ಒಡಕು, ಕಲಾಪದಲ್ಲಿ ಕಾಣದ ಒಗ್ಗಟ್ಟು

ರಾಜ್ಯಾಧ್ಯಕ್ಷರು ಧರಣಿ ಎಂದರೆ ವಿಪಕ್ಷ ನಾಯಕರು ಸಭಾತ್ಯಾಗವೇ ಸರಿ ಅಂತಾರೆ; ಬಿಜೆಪಿಯಲ್ಲಿ ಹೆಚ್ಚಿದ ಒಡಕು, ಕಲಾಪದಲ್ಲಿ ಕಾಣದ ಒಗ್ಗಟ್ಟು

HT Kannada Desk HT Kannada

Dec 08, 2023 08:16 AM IST

ಬೆಳಗಾವಿ ವಿಧಾನಸಭೆ ಅಧಿವೇಶನದ ಚಿತ್ರಣ (ಫೋಟೊ ಫೈಲ್)

  • ಬಿಜೆಪಿ ರಾಜ್ಯಾಧ್ಯಕ್ಷರು ಧರಣಿ ಎಂದರೆ ವಿಪಕ್ಷ ನಾಯಕರು ಸಭಾತ್ಯಾಗವೇ ಸರಿ ಎಂದು ಭಿನ್ನಮತ ಪ್ರದರ್ಶಿಸಿದ್ದಾರೆ. ಇದರಿಂದ ಸರ್ಕಾರ ಮುಸಿ ಮುಸಿ ನಗುವಂತಾಗಿದೆ.

ಬೆಳಗಾವಿ ವಿಧಾನಸಭೆ ಅಧಿವೇಶನದ ಚಿತ್ರಣ (ಫೋಟೊ ಫೈಲ್)
ಬೆಳಗಾವಿ ವಿಧಾನಸಭೆ ಅಧಿವೇಶನದ ಚಿತ್ರಣ (ಫೋಟೊ ಫೈಲ್)

ಬೆಳಗಾವಿ: ಪ್ರತಿ ಪಕ್ಷದ ನಾಯಕರಾಗಿ ಆರ್ ಅಶೋಕ್ ಸರಿಯಾದ ದಾರಿಯಲ್ಲಿ ಸಾಗುತ್ತಿದ್ದಾರೆಯೇ? ಸದನದಲ್ಲಿ ಪಕ್ಷವನ್ನು ಸಮರ್ಪಕವಾಗಿ ಮುನ್ನಡೆಸುತ್ತಿದ್ದಾರೆಯೇ ಎಂಬ ಅನುಮಾನಗಳು ಬಿಜೆಪಿಯೊಳಗೆ ಹುಟ್ಟಿಕೊಂಡಿವೆ. ಅವರ ನಡವಳಿಕೆ ಕುರಿತು ಶಾಸಕರಲ್ಲಿ ಅಸಮಾಧಾನ ಮೂಡಲು ಕಾರಣವಾಗಿದೆ.

ಟ್ರೆಂಡಿಂಗ್​ ಸುದ್ದಿ

CET Results2024: ಕರ್ನಾಟಕ ಸಿಇಟಿ ಫಲಿತಾಂಶ ಇಂದು ಪ್ರಕಟ ಸಾಧ್ಯತೆ, ನಿಮ್ಮ ಅಂಕ ನೋಡುವುದು ಹೀಗೆ

Bangalore News: ತಮಿಳುನಾಡಿನಲ್ಲಿ ಗುಂಡು ತಗುಲಿ ಬೆಂಗಳೂರಿನ ಯೋಧ ಸಾವು

Hassan Scandal: ಗೃಹ ಇಲಾಖೆ ಬೇರೆಯವರಿಂದ ಹೈಜಾಕ್‌‌, ಪ್ರಜ್ವಲ್‌ ರೇವಣ್ಣ ಪ್ರಕರಣ ಮುಚ್ಚಿಹಾಕಲು ಎಸ್‌ಐಟಿ ಸಿದ್ಧತೆ, ಅಶೋಕ ಆರೋಪ

Karnataka Rains: ಬೆಂಗಳೂರು, ಚಿಕ್ಕಮಗಳೂರು, ಕೊಡಗು, ಹೊಸದುರ್ಗ,ಚನ್ನಗಿರಿಯಲ್ಲಿ ಭಾರೀ ಮಳೆ, ನಿಮ್ಮೂರಲ್ಲಿ ಎಷ್ಟು ಮಳೆಯಾಗಿದೆ ?

ಗುರುವಾರ (ಡಿಸೆಂಬರ್ 7) ಸದನದಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆ ಕುರಿತು ಚರ್ಚೆ ನಡೆಯುತಿದ್ದ ಸಂದರ್ಭದಲ್ಲಿ ಹಠಾತ್ತನೆ ಸಭಾತ್ಯಾಗ ನಿರ್ಣಯ ಕೈಗೊಂಡಿದ್ದು ಅಸಮಾಧಾನಕ್ಕೆ ಕಾರಣವಾಗಿದೆ. ಅಶೋಕ್ ಅವರ ನಿರ್ಧಾರ ಶಾಸಕರನ್ನು ಮಾತ್ರವಲ್ಲ, ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರನ್ನೂ ಮುಜುಗರಕ್ಕಿಡು ಮಾಡಿದೆ. ಪ್ರತಿಪಕ್ಷದ ನಾಯಕರ ನಡೆ ಕುರಿತು ಕೆಲವು ಶಾಸಕರು ಬಹಿರಂಗವಾಗಿಯೇ ಅಸಮಾಧಾನವನ್ನು ಹೊರಹಾಕಿದ್ದಾರೆ.

ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮತ್ತು ಅವರ ಬೆಂಬಲಿಗರು ಬೆಳಗಾವಿ ಬಿಜೆಪಿ ಎಸ್ ಸಿ ಮೋರ್ಚಾ ಸದಸ್ಯ ಪೃಥ್ವಿಸಿಂಗ್ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ಕುರಿತು ಸದನದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸುಧೀರ್ಘ ಚರ್ಚೆ ನಡೆಯಿತು. ಜೊತೆಗೆ ಬಿಜೆಪಿ ಪಾಲಿಕೆ ಸದಸ್ಯ ಅಭಿಜಿತ್ ಜವಳ್ಕರ್ ಬಂಧನ ಕುರಿತೂ ಬಿಜೆಪಿ ಸದಸ್ಯರು ಪ್ರಸ್ತಾಪ ಮಾಡಿದರು. ಪ್ರತಿಪಕ್ಷದ ಆರೋಪಗಳಿಗೆ ಉತ್ತರ ನೀಡಿದ ಗೃಹ ಸಚಿವ ಡಾ. ಜಿ.ಪರಮೇಶ್ವರ್ ತನಿಖೆ ಪ್ರಗತಿಯಲ್ಲಿದೆ. ಯಾವುದೇ ಪೂರ್ವಾಗ್ರಹ ಪೀಡಿತವಾಗದೆ ಎರಡೂ ಪ್ರಕರಣಗಳಲ್ಲಿ ಕಾನೂನು ಪ್ರಕಾರವೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಅಶೋಕ್ ನಿರ್ಧಾರದಿಂದ ವಿಚಲಿತರಾದ ವಿಜಯೇಂದ್ರ ಮತ್ತವರ ಶಾಸಕರು

ಸಕಾರದ ಉತ್ತರಕ್ಕೆ ತೃಪ್ತರಾಗದ ಅಶೋಕ್ ಆರೋಪಿಯನ್ನು ಕಾಂಗ್ರೆಸ್ ರಕ್ಷಿಸುತ್ತಿದೆ ಎಂದು ಆರೋಪಿಸಿ ಸರ್ಕಾರದ ಉತ್ತರಕ್ಕೆ ತೃಪ್ತರಾಗದೆ ಸಭಾತ್ಯಾಗ ಮಾಡುವ ನಿರ್ಧಾರವನ್ನು ಪ್ರಕಟಿಸಿದರು. ಅಶೋಕ್ ಅವರ ಈ ಹಠಾತ್ ನಿರ್ಧಾರದಿಂದ ವಿಜಯೇಂದ್ರ ಸೇರಿದಂತೆ ಅನೇಕ ಶಾಸಕರು ವಿಚಲಿತರಾದರು. ಈ ಪ್ರಕರಣಗಳಲ್ಲಿ ಕಾಂಗ್ರೆಸ್‌ನ ಮುಖಂಡರ ಕೈವಾಡ ಇದೆ ಎಂದು ಆರೋಪಿಸಿ ಸದನದೊಳಗೆ ಧರಣಿ ಆರಂಭಿಸಿ ಸರ್ಕಾರಕ್ಕೆ ಮುಜುಗರ ಉಂಟು ಮಾಡಲು ನಿರ್ಧರಿಸಿದ್ದರು. ಆದರೆ ಅಶೋಕ್ ನಿರ್ಧಾರದಿಂದ ಇವರ ಯೋಜನೆ ವಿಫಲವಾಯಿತು.

ಸಭಾತ್ಯಾಗ ನಿರ್ಧಾರವನ್ನು ಬೆಂಬಲಿಸಿ ಕೆಲವು ಸದಸ್ಯರು ಸಭಾತ್ಯಾಗ ಮಾಡಿದರೂ ಇನ್ನೂ ಕೆಲವು ಬಿಜೆಪಿ ಶಾಸಕರು ಸದನದಲ್ಲಿಯೇ ಉಳಿದುಕೊಂಡಿದ್ದರು. ಈ ಮಧ್ಯೆ ಅಶೋಕ್ ನಿರ್ಧಾರವನ್ನು ಎಸ್ ಆರ್ ವಿಶ್ವನಾಥ್ ಆಕ್ಷೇಪಿಸಿದ ಘಟನೆಯೂ ನಡೆಯಿತು.

ವಿಪಕ್ಷ ನಾಯಕ ಅಶೋಕ್ ನಿರ್ಧಾರ ಖಂಡಿಸಿದ ಬಿಜೆಪಿ ಶಾಸಕರು

ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್ ವಿಪಕ್ಷ ನಾಯಕ ಅಶೋಕ್ ನಿರ್ಧಾರವನ್ನು ಖಂಡಿಸಿ ಜವಳ್ಕರ್ ಅವರನ್ನು ಬಂಧಿಸಿದ ಪೊಲೀಸ್ ಅಧಿಕಾರಿಯನ್ನು ಅಮಾನತ್ತು ಮಾಡಬೇಕೆಂದು ಸದನದೊಳಗೆ ಪ್ರತಿಭಟನೆ ಆರಂಭಿಸಿದ್ದು, ಬಿಜೆಪಿಗೆ ಮತ್ತಷ್ಟು ಮುಜುಗರವನ್ನುಂಟು ಮಾಡಿತು. ನಂತರ ಅವರನ್ನು ಸಮಾಧಾನ ಮಾಡಿ ಹೊರಗೆ ಕರೆದೊಯ್ಯಲಾಯಿತು.

ನಂತರ ಪ್ರತಿಕ್ರಿಯೆ ನೀಡಿದ ಅಭಯ್ ಪಾಟೀಲ್, ನಾವು ನಮ್ಮ ಕಾರ್ಯಕರ್ತರ ಜೊತೆ ನಿಲ್ಲದಿದ್ದರೆ ಮತ್ತು ಅವರನ್ನು ರಕ್ಷಣೆ ಮಾಡಿದ್ದರೆ ಮತ್ತಾರು ಮಾಡುತ್ತಾರೆ ಎಂದು ಪ್ರಶ್ನಿಸಿದರು. ಚುನಾವಣೆ ಹತ್ತಿರವಾಗುತ್ತಿದ್ದು ಕಾರ್ಯಕರ್ತರ ವಿಶ್ವಾಸ ಗಳಿಸುವುದಾದರೂ ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಜಯೇಂದ್ರ ಅವರನ್ನು ಸಮಾಧಾನ ಮಾಡುವ ಪ್ರಯತ್ನ

ಸಭಾತ್ಯಾಗ ಮಾಡಿದ ನಂತರ ವಿಜಯೇಂದ್ರ, ಅಶೋಕ್, ಸುನೀಲ್ ಕುಮಾರ್, ಅಶ್ವತ್ಥ ನಾರಾಯಣ, ಅರಗ ಜ್ಞಾನೇಂದ್ರ ಮೊದಲಾದವರು ಸಭೆ ನಡೆಸಿ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡಿದರು. ಸದನವು ಬರ ಕುರಿತ ಚರ್ಚೆಯನ್ನು ಮುಂದುವರೆಸಲಿ ಎಂಬ ಏಕೈಕ ಕಾರಣದಿಂದ ಸಭಾತ್ಯಾಗದ ನಿರ್ಧಾರವನ್ನು ಪ್ರಕಟಿಸಲಾಯಿತು ಎಂದು ವಿಜಯೇಂದ್ರ ಅವರನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದರು.

ಅಶೋಕ್ ನಿರ್ಧಾರವನ್ನು ಬಲವಾಗಿ ಖಂಡಿಸಿದ ಸುನೀಲ್ ಕುಮಾರ್, ಈ ಎರಡೂ ಪ್ರಕರಣಗಳು ಬೆಳಗಾವಿಯಲ್ಲಿ ನಡೆದಿವೆ. ಅಧಿವೇಶನವೂ ಇಲ್ಲಿಯೇ ನಡೆಯುತ್ತಿದೆ. ಆದ್ದರಿಂದ ಸದನದೊಳಗೆ ಪ್ರತಿಭಟನೆ ನಡೆಸಿದ್ದರೆ ಚೆನ್ನಾಗಿರುತ್ತಿತ್ತು ಎಂದರು.

ಈ ಬೆಳವಣಿಗೆಗಳನ್ನು ಅವಲೋಕಸಿದರೆ ಬಿಜೆಪಿ ಮನೆಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಎದ್ದು ಕಾಣುತ್ತಿದೆ. ಒಂದು ಕಡೆ ಎಸ್‌ಟಿ ಸೋಮಶೇಖರ್ ಪಕ್ಷದ ನಿರ್ಧಾರಗಳಿಗೆ ಸಹಕಾರ ನೀಡುತ್ತಿಲ್ಲ. ಮತ್ತೊಂದು ಕಡೆ ಯತ್ನಾಳ್ ಪಕ್ಷದ ಅಧ್ಯಕ್ಷರು ಮತ್ತು ವಿಪಕ್ಷ ನಾಯಕರನ್ನು ಕಂಡರೆ ಉರಿದು ಬೀಳುತ್ತಿದ್ದಾರೆ. ಉತ್ತರ ಕರ್ನಾಟಕ ಬಿಜೆಪಿ ಮತ್ತು ದಕ್ಷಿಣ ಕರ್ನಾಟಕ ಬಿಜೆಪಿ ಎಂದು ಒಡಕು ಮೂಡುತ್ತಿದೆ. ಹೀಗೆಯೇ ಮುಂದುವರೆದರೆ ಆಡಳಿತ ಪಕ್ಷದ ಹಾದಿ ಮಾತ್ರ ಸುಗಮವಾಗುತ್ತದೆ. ಬಿಜೆಪಿ ದುರ್ಗಮ ಹಾದಿಯಲ್ಲಿ ಸಾಗಬೇಕಾಗುತ್ತದೆ. ವರದಿ: ಎಚ್.ಮಾರುತಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ