logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Bjp: ಹೆಸರು ಬಹಿರಂಗ ಪಡಿಸದೆ 11 ಸದಸ್ಯರಿಗೆ ನೋಟಿಸ್‌ ಎಂದ ನಳಿನ್‌ ಕುಮಾರ್‌ ಕಟೀಲ್‌; ಪಕ್ಷ ವಿರೋಧಿ ಚಟುವಟಿಕೆ, ಹೇಳಿಕೆ ಕಾರಣ

Karnataka BJP: ಹೆಸರು ಬಹಿರಂಗ ಪಡಿಸದೆ 11 ಸದಸ್ಯರಿಗೆ ನೋಟಿಸ್‌ ಎಂದ ನಳಿನ್‌ ಕುಮಾರ್‌ ಕಟೀಲ್‌; ಪಕ್ಷ ವಿರೋಧಿ ಚಟುವಟಿಕೆ, ಹೇಳಿಕೆ ಕಾರಣ

Umesh Kumar S HT Kannada

Jun 30, 2023 09:36 PM IST

ಬಿಜೆಪಿ ಸಭೆ (ಕಡತ ಚಿತ್ರ)

  • Karnataka BJP: ಪಕ್ಷ ವಿರೋಧಿ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸಿ, ಸಂಬಂಧಪಟ್ಟವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಪಕ್ಷವು ನಿರ್ಧರಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಹಾಗೂ ಸಂಸದೀಯ ಮಂಡಳಿ ಸದಸ್ಯ ಬಿಎಸ್ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಮುಖಂಡರು ಶುಕ್ರವಾರ ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಬಿಜೆಪಿ ಸಭೆ (ಕಡತ ಚಿತ್ರ)
ಬಿಜೆಪಿ ಸಭೆ (ಕಡತ ಚಿತ್ರ) (Savitha)

ಬೆಂಗಳೂರು: ವಿಧಾನಸಭಾ ಚುನಾವಣೆ (Karnataka Assembly Election) ಯ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಕರ್ನಾಟಕ ಬಿಜೆಪಿ (Karnataka BJP) ಇದುವರೆಗೆ ಪಕ್ಷದ 11 ಸದಸ್ಯರಿಗೆ ನೋಟಿಸ್ ಜಾರಿಗೊಳಿಸಿದೆ. ಪಕ್ಷ ಮತ್ತು ನಾಯಕರ ವಿರುದ್ಧ ಸಾರ್ವಜನಿಕ ಹೇಳಿಕೆಗಳನ್ನು ನೀಡಿ ಮುಜುಗರ ಉಂಟು ಮಾಡಿದವರು ಕೂಡ ನೋಟಿಸ್‌ ಪಡೆದವರಲ್ಲಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Bus Accident: ಫ್ಲೈ ಓವರ್‌ಗೆ ಹಾರಿದ ಸಾರಿಗೆ ಬಸ್‌ ಪ್ರಯಾಣಿಕರು ಪಾರಾಗಿದ್ದೇ ರೋಚಕ; ನೆಲಮಂಗಲದಲ್ಲಿ ಸಿನಿಮಾ ಸ್ಟಂಟ್ ನಂತೆ ಸಂಭವಿಸಿದ ಅಪಘಾತ

Hassan Scandal: 100 ಕೋಟಿ ರೂ. ಆಫರ್ ವಿಚಾರವನ್ನು ಎಸ್‌ಐಟಿ ನೋಡಿಕೊಳ್ಳುತ್ತೆ, ದೇವರಾಜೇಗೌಡ ಜೈಲಲ್ಲೇ ಇರ್ತಾರೆ: ಗೃಹ ಸಚಿವ

Hassan Scandal : ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ

Wildlife News: ಹುಲಿ ಉಗುರು ಪ್ರಕರಣ, ವನ್ಯಜೀವಿಗಳ ಅಂಗಾಂಗ ಹಸ್ತಾಂತರ ಇನ್ನಷ್ಟು ವಿಳಂಬ ಸಾಧ್ಯತೆ

ಪಕ್ಷ ವಿರೋಧಿ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸಿ, ಸಂಬಂಧಪಟ್ಟವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಪಕ್ಷವು ನಿರ್ಧರಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಹಾಗೂ ಸಂಸದೀಯ ಮಂಡಳಿ ಸದಸ್ಯ ಬಿಎಸ್ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಮುಖಂಡರು ಶುಕ್ರವಾರ ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಯಾರಿಗೆಲ್ಲ ನೋಟಿಸ್‌: ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದು ಇಷ್ಟು..

''ಚುನಾವಣೆ ವೇಳೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ವಿಚಾರಣೆ ನಡೆಸಿ ಶಿಸ್ತು ಕ್ರಮ ಜರುಗಿಸಲು ನಿರ್ಧರಿಸಲಾಗಿದೆ. ಅದೇ ರೀತಿ ಪಕ್ಷಕ್ಕೆ ಮುಜುಗರ ಉಂಟು ಮಾಡುವ ಹೇಳಿಕೆ ನೀಡುತ್ತಿರುವವರ ಜತೆ ಖುದ್ದಾಗಿ ಮಾತನಾಡಿ ನೋಟಿಸ್ ಜಾರಿ ಮಾಡಲಾಗಿದೆ. ಭವಿಷ್ಯದಲ್ಲಿ ಇಂತಹ ಹೇಳಿಕೆಗಳನ್ನು ನೀಡದಂತೆ ಅವರಿಗೆ ತಾಕೀತು ಮಾಡಲಾಗಿದೆ ಎಂದು ನಳಿನ್‌ ಕುಮಾರ್‌ ಕಟೀಲ್ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

ಯಾರಿಗೆ ನೋಟಿಸ್ ನೀಡಲಾಗಿದೆ ಎಂಬ ವಿವರವನ್ನು ಸುದ್ದಿಗಾರರು ಕೇಳಿದಾಗ ಕಟೀಲ್, ‘ಈವರೆಗೆ 11 ಮಂದಿಗೆ ನೋಟಿಸ್ ನೀಡಿದ್ದೇವೆ’ ಎಂದು ಹೆಸರು ಬಹಿರಂಗಪಡಿಸದೆ ಉತ್ತರಿಸಿದರು ಎಂದು ಪಿಟಿಐ ವರದಿ ಮಾಡಿದೆ.

ಪಕ್ಷಕ್ಕೆ ಮುಜುಗರ ಉಂಟುಮಾಡುವ ಹೇಳಿಕೆ ಬೇಡ ಎಂದ ಬಿಎಸ್‌ ಯಡಿಯೂರಪ್ಪ

ಬಿಜೆಪಿಗೆ ಮುಜುಗರ ಉಂಟು ಮಾಡುವ ಹೇಳಿಕೆಗಳನ್ನು ಯಾರೂ ನೀಡಬಾರದು ಎಂದು ಪಕ್ಷದವರಿಗೆ ಸೂಚನೆ ನೀಡಲಾಗಿದೆ. ಇಂತಹ ಹೇಳಿಕೆ ನೀಡಿದವರನ್ನು ಕರೆಸಿ ಮಾತನಾಡಿದ್ದೇವೆ, ಜಾಗರೂಕರಾಗಿರಿ ಮತ್ತು ಅಂತಹ ಪರಿಸ್ಥಿತಿ ಉದ್ಭವಿಸದಂತೆ ನೋಡಿಕೊಳ್ಳಬೇಕು, ಇಲ್ಲದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ, ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸ್ಥಳದಲ್ಲಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ನೋಟಿಸ್‌ ಪಡೆದವರು ಇವರು..

ಪಕ್ಷದ ಮುಖಂಡರಾದ ಬಸನಗೌಡ ಪಾಟೀಲ್ ಯತ್ನಾಳ್, ಎ ಎಸ್ ಪಾಟೀಲ್ (ನಡಹಳ್ಳಿ), ವೀರಣ್ಣ ಚರಂತಿಮಠ, ಪ್ರತಾಪ್ ಸಿಂಹ, ತಮ್ಮೇಶ್ ಗೌಡ, ಎಸ್ ಮುನಿರಾಜು, ರಮೇಶ್ ಜಿಗಜಿಣಗಿ, ಎಂಪಿ ರೇಣುಕಾಚಾರ್ಯ, ಮುರುಗೇಶ್ ನಿರಾಣಿ, ಪ್ರಭು ಚವ್ಹಾಣ, ಈಶ್ವರ ಸಿಂಗ್ ಠಾಕೂರ್ ಅವರನ್ನು ಪಕ್ಷದ ನಾಯಕತ್ವ ಮಾತುಕತೆಗೆ ಕರೆದಿದೆ. ಬಿಜೆಪಿಯ ಸೋಲಿನ ಬಗ್ಗೆ ವಿವಿಧ ಸಂದರ್ಭಗಳಲ್ಲಿ ಇವರೆಲ್ಲ ಬಹಿರಂಗ ಹೇಳಿಕೆಗಳನ್ನು ನೀಡಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ನೋಟಿಸ್‌ ಪಡೆದ 11 ಮಂದಿಯ ಪೈಕಿ ಐವರು ನಾಯಕರು ವಿಶೇಷವಾಗಿ ಮುರುಗೇಶ್‌ ನಿರಾಣಿ, ಪ್ರಭು ಚವ್ಹಾಣ, ರಮೇಶ್‌ ಜಿಗಜಿಣಗಿ, ಈಶ್ವರ ಸಿಂಗ್ ಠಾಕೂರ್ ಮತ್ತು ರೇಣುಕಾಚಾರ್ಯ‌ ಸಭೆಗೆ ಹಾಜರಾಗಲಿಲ್ಲ.

ಸಭೆಗೆ ಗೈರಾದ ನಾಯಕರ ಜತೆಗೆ ಮಾತುಕತೆ ನಡೆಸುವುದಕ್ಕೆ ಪಕ್ಷ ಬಿ.ಎಸ್‌.ಯಡಿಯೂರಪ್ಪ ಅವರನ್ನು ನಿಯೋಜಿಸಿದೆ. ಈ ಐವರು ನಾಯಕರಿಂದ ವಿವರಣೆ ಪಡೆಯುವಂತೆ ಯಡಿಯೂರಪ್ಪ ಅವರಿಗೆ ಸೂಚಿಸಿದೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿ ಕುಮಾರ್‌ ಹೇಳಿದರು.

ಯತ್ನಾಳ್, ಚರಂತಿಮಠ, ಸಿಂಹ, ಮುನಿರಾಜು, ಗೌಡ, ಪಾಟೀಲ್ ಸಭೆಗೆ ಹಾಜರಾಗಿ, ಪಕ್ಷಕ್ಕೆ ಮುಜುಗರ ಉಂಟು ಮಾಡುವ ಉದ್ದೇಶ ಇಲ್ಲ ಎಂದು ವಿವರಿಸಿದರು.

ರೇಣುಕಾಚಾರ್ಯಗೆ ಶೋಕಾಸ್‌ ನೋಟಿಸ್‌; ಲಿಖಿತ ಉತ್ತರಕ್ಕೆ ವಾರದ ಕಾಲಾವಕಾಶ

ಪಕ್ಷ ವಿರೋಧಿ ಹೇಳಿಕೆಗಾಗಿ ಹೊನ್ನಾಳಿ ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಅವರಿಗೆ ಕರ್ನಾಟಕ ಬಿಜೆಪಿ ಗುರುವಾರ ನೋಟಿಸ್ ನೀಡಿದೆ. ಪಕ್ಷದ ರಾಜ್ಯ ಶಿಸ್ತು ಸಮಿತಿ ನೀಡಿರುವ ಶೋಕಾಸ್ ನೋಟಿಸ್‌ಗೆ ಲಿಖಿತ ಉತ್ತರ ನೀಡಲು ಒಂದು ವಾರ ಕಾಲಾವಕಾಶ ನೀಡಲಾಗಿದೆ. ರೇಣುಕಾಚಾರ್ಯ ಅವರಿಗೆ ನೀಡಿದ್ದ ನೋಟಿಸ್ ಅನ್ನು ಪಕ್ಷ ಅಧಿಕೃತವಾಗಿ ಬಿಡುಗಡೆ ಮಾಡಿದೆ. ವಿಧಾನಸಭೆ ಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತು ಪಕ್ಷದ ರಾಜ್ಯಾಧ್ಯಕ್ಷ ಕಟೀಲು ರಾಜೀನಾಮೆ ನೀಡಬೇಕಿತ್ತು ಎಂದು ರೇಣುಕಾಚಾರ್ಯ ಗುರುವಾರ ಹೇಳಿದ್ದರು.

ಬಿಜೆಪಿ ಕಚೇರಿಯನ್ನು ಕಾರ್ಪೊರೇಟ್ ಕಚೇರಿಯನ್ನಾಗಿ ಮಾಡಲಾಗಿದೆ ಎಂದು ಆರೋಪಿಸಿರುವ ಮಾಜಿ ಸಚಿವರು, ಪಕ್ಷದ ಯಾವುದೇ ನಾಯಕರನ್ನು ಹೆಸರಿಸದೆ, ಆತ್ಮಾವಲೋಕನ ಮಾಡಿಕೊಂಡು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳಿಗೆ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಒತ್ತಾಯಿಸಿದರು. .

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ