Karnataka Assembly Elections: ಶಿಕಾರಿಪುರದಲ್ಲಿ ವಿಜಯೇಂದ್ರ 2ನೇ ಬಾರಿ ನಾಮಪತ್ರ ಸಲ್ಲಿಕೆ; 126 ಕೋಟಿ ಆಸ್ತಿ, 2 ಕ್ರಿಮಿನಲ್ ಪ್ರಕರಣ
Apr 19, 2023 01:45 PM IST
ಶಿಕಾರಿಪುರದ ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಬುಧವಾರ (ಏ 19) ನಾಮಪತ್ರ ಸಲ್ಲಿಕೆಗೆ ಮೊದಲು ಪೂಜೆ ಸಲ್ಲಿಸಿದರು.
- BY Vijayendra Nomination: ಶಿಕಾರಿಪುರದಲ್ಲಿ ಬಿ.ಎಸ್.ಯಡಿಯೂರಪ್ಪ (BS Yediyurappa) ಅವರ ಪುತ್ರ ಬಿ.ವೈ.ವಿಜಯೇಂದ್ರ ಏ 19ರಂದು ನಾಮಪತ್ರ ಸಲ್ಲಿಸಿದರು. ಕರ್ನಾಟಕದ ವಿವಿಧ ನಗರಗಳಲ್ಲಿ ತಮ್ಮ ಕುಟುಂಬ ಹೊಂದಿರುವ ಭೂಮಿಯ ವಿವರ ಅವರ ಅಫಿಡವಿಟ್‌ನಲ್ಲಿದೆ.
ಶಿವಮೊಗ್ಗ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Elections 2023) ಗಮನ ಸೆಳೆದಿರುವ ಮಹತ್ವದ ಕ್ಷೇತ್ರ ಶಿಕಾರಿಪುರದಿಂದ (Shikaripura) ಭಾರತೀಯ ಜನತಾ ಪಕ್ಷ (Bharatiya Janata Party - BJP) ರಾಜ್ಯ ಘಟಕದ ಉಪಾಧ್ಯಕ್ಷ ಹಾಗೂ ಬಿಜೆಪಿಯಲ್ಲಿ ಮಹತ್ವದ ಸ್ಥಾನಮಾನ ಹೊಂದಿರುವ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಬುಧವಾರ (ಏ 19) 2ನೇ ಬಾರಿಗೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ಶಿಕಾರಿಪುರದಲ್ಲಿ ನಡೆದ ಮೆರವಣಿಗೆಯಲ್ಲಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ಪ್ರಭಾವಿಗಳು ಪಾಲ್ಗೊಂಡಿದ್ದರು. ಸಾವಿರಾರು ಬೆಂಬಲಿಗರೊಂದಿಗೆ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿರುವ ಚುನಾವಣಾ ಕೇಂದ್ರಕ್ಕೆ ಬಿ.ವೈ.ವಿಜಯೇಂದ್ರ ಬಂದರು.
ಶಿಕಾರಿಪುರದ ಜನರು ಶ್ರದ್ಧೆಯಿಂದ ನಡೆದುಕೊಳ್ಳುವ ಹುಚ್ಚರಾಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಮೆರವಣಿಗೆ ಆರಂಭವಾಯಿತು. ಯಡಿಯೂರಪ್ಪ ಅವರೊಂದಿಗೆ ಬಿಜೆಪಿಯ ಹಿರಿಯ ನಾಯಕರಾದ ಎ.ನಾರಾಯಣ ಸ್ವಾಮಿ, ಸಚಿವ ಎಂಟಿಬಿ ನಾಗರಾಜ್, ಚಿತ್ರನಟಿ ಶ್ರುತಿ, ಕುಡಚಿ ಶಾಸಕ ಪಿ.ರಾಜೀವ್, ಬಿಜೆಪಿ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ.ಮೇಘರಾಜ್ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಶಿಕಾರಿಪುರದಲ್ಲಿ ಉಷ್ಣಾಂಶ 36 ಡಿಗ್ರಿ ಸೆಂಟಿಗ್ರೇಡ್ ದಾಟಿದ್ದು ಸೂರ್ಯನ ಬಿಸಿಲು ಪ್ರಖರವಾಗಿದೆ. ಉರಿವ ಬಿಸಿಲಿನಲ್ಲಿಯೇ ಕಾರ್ಯಕರ್ತರು ಡೊಳ್ಳು ಕುಣಿತಕ್ಕೆ ಹೆಜ್ಜೆ ಹಾಕಿದ್ದು ಹಾಗೂ ಯಡಿಯೂರಪ್ಪನವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ವಿಶೇಷ ಎನಿಸಿತು. ಪ್ರಚಾರಕ್ಕೆಂದು ಸಿದ್ಧಪಡಿಸಿರುವ ವಿಶೇಷ ವಾಹನದಲ್ಲಿ ವಿಜಯೇಂದ್ರ ಅವರ ಭಾವಚಿತ್ರದೊಂದಿಗೆ ಎದ್ದು ಕಾಣುವಂತೆ ಸಂಸದ ಹಾಗೂ ವಿಜಯೇಂದ್ರ ಅವರ ಸೋದರ ಬಿ.ವೈ.ರಾಘವೇಂದ್ರ, ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಭಾವಚಿತ್ರಗಳನ್ನು ಅಳವಡಿಸಲಾಗಿದೆ.
ಏ 17ರಂದು ಮೊದಲ ಬಾರಿ ನಾಮಪತ್ರ
ಶಿಕಾರಿಪುರದ ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಅವರು ಸೋಮವಾರ (ಏ 17) ಶುಭದಿನ ಎನ್ನುವ ಕಾರಣಕ್ಕೆ ಮೊದಲ ಬಾರಿಗೆ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದರು. ಅಂದು ನಾಮಪತ್ರ ಸಲ್ಲಿಸಿದ ನಂತರ ಮತ್ತೊಮ್ಮೆ ಅದ್ಧೂರಿ ಮೆರವಣಿಗೆಯಲ್ಲಿ ಬಂದು ಏ 19ರಂದು ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಘೋಷಿಸಿದ್ದರು. ಅದರಂತೆ ಇಂದು ಮತ್ತೊಮ್ಮೆ ನಾಮಪತ್ರ ಸಲ್ಲಿಸಿದರು.
155 ಕೋಟಿ ಆಸ್ತಿ ಘೋಷಣೆ
ನಾಮಪತ್ರದೊಂದಿಗೆ ಏ 17ರಂದು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ವಿಜಯೇಂದ್ರ ತಮ್ಮ ಹಾಗೂ ತಮ್ಮ ಪತ್ನಿಯ ಹೆಸರಿನಲ್ಲಿರುವ ಆಸ್ತಿ ವಿವರ ನೀಡಿದ್ದಾರೆ. ಇವರಿಬ್ಬರ ಬಳಿ ಒಟ್ಟು 126 ಕೋಟಿ ರೂಪಾಯಿ ಮೊತ್ತದ ಆಸ್ತಿಯಿದೆ. ಆದರೆ ಕಾರ್ ಇಲ್ಲ. ಈ ಪೈಕಿ ವಿಜಯೇಂದ್ರ ಅವರ ಬಳಿ 46.82 ಕೋಟಿ ಮೊತ್ತದ ನಗದು ಮತ್ತು ಚರಾಸ್ತಿ ಇದ್ದರೆ, ಅವರ ಪತ್ನಿ ಪ್ರೇಮಾ ಅವರ ಬಳಿ 7.85 ಕೋಟಿ ಮೊತ್ತದ ಚರಾಸ್ತಿಯಿದೆ. ದಂಪತಿ ಬಳಿ ಇರುವ ಸ್ಥಿರಾಸ್ತಿಯ ಮೌಲ್ಯ 70.11 ಕೋಟಿ. ಇವರಿಗೆ 34.52 ಕೋಟಿ ಮೊತ್ತದ ಸಾಲ ಮತ್ತಿತರ ಬಾಧ್ಯತೆಗಳಿವೆ. ವಿಜಯೇಂದ್ರ ಅವರ ಅಫಿಡವಿಟ್ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.
ದಂಪತಿ ಬಳಿ 1.75 ಲಕ್ಷ ಬೆಲೆಬಾಳುವ ಟ್ರ್ಯಾಕ್ಟರ್ ಇದೆ. ಆದರೆ ಕಾರಿನ ಬಗ್ಗೆ ಯಾವುದೇ ಉಲ್ಲೇಖ ಕೊಟ್ಟಿಲ್ಲ. ವಿಜಯೇಂದ್ರ ಅವರ ಬಳಿ 1.34 ಕೆಜಿ ಚಿನ್ನ, ಪತ್ನಿಯ ಬಳಿ 1.25 ಕೆಜಿ ಚಿನ್ನ ಇದೆ. ಒಟ್ಟು ದಂಪತಿ ಬಳಿ 2.29 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ ಮತ್ತು ವಜ್ರದ ಆಭರಣಗಳಿವೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ. ಅಭ್ಯರ್ಥಿಯ ಕುಟುಂಬವು ಶಿಕಾರಿಪುರದಲ್ಲಿ ಕೃಷಿಭೂಮಿ ಹೊಂದಿದೆ. ದೊಡ್ಡಬಳ್ಳಾಪುರ, ರಾಮನಗರ, ಶಿಕಾರಿಪುರ, ಶಿವಮೊಗ್ಗ, ಕಲಬುರ್ಗಿ ಮತ್ತು ಬೆಂಗಳೂರಿನಲ್ಲಿ ಕೃಷಿಯೇತರ ಜಮೀನು ಹೊಂದಿದೆ. ಕುಟುಂಬಕ್ಕೆ ಒಟ್ಟು 7 ಮನೆಗಳಿವೆ.
ತಮ್ಮ ವಿರುದ್ಧ ದಾಖಲಾಗಿರುವ ಎರಡು ಕ್ರಿಮಿನಲ್ ಪ್ರಕರಣಗಳ ಬಗ್ಗೆಯೂ ವಿಜಯೇಂದ್ರ ಉಲ್ಲೇಖಿಸಿದ್ದಾರೆ. ಸರ್ಕಾರಿ ನೌಕರನಿಗೆ ಲಂಚದ ಆಮಿಷ ಒಡ್ಡಿದ ಆರೋಪದ ಮೇಲೆ ಬೆಂಗಳೂರಿನ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣವನ್ನು ಅಕ್ರಮ ಹಣಕಾಸು ವರ್ಗಾವಣೆ ನಿಯಮದ ಅಡಿಯಲ್ಲಿ ಜಾರಿ ನಿರ್ದೇಶನಾಲಯ ದಾಖಲಿಸಿದೆ.
ಎಚ್‌ಟಿ ಕನ್ನಡ ವಾಟ್ಸಾಪ್ ಕಮ್ಯುನಿಟಿ ಸೇರಿ. ಫೇಸ್‌ಬುಕ್ ಪೇಜ್ ಲೈಕ್ ಮಾಡಿ, ಟ್ವಿಟರ್‌ನಲ್ಲಿ ಫಾಲೊ ಮಾಡಿ. ಯುಟ್ಯೂಬ್ ಚಾನೆಲ್ ಸಬ್‌ಸ್ಕ್ರೈಬ್ ಮಾಡಿ.