logo
ಕನ್ನಡ ಸುದ್ದಿ  /  ಕರ್ನಾಟಕ  /  Govind Karjol: ಸಿದ್ದರಾಮಯ್ಯ ಮತ್ತೆಂದೂ ಸಿಎಂ ಆಗಲ್ಲ: ಕಾರಜೋಳ ಭವಿಷ್ಯವಾಣಿ!

Govind Karjol: ಸಿದ್ದರಾಮಯ್ಯ ಮತ್ತೆಂದೂ ಸಿಎಂ ಆಗಲ್ಲ: ಕಾರಜೋಳ ಭವಿಷ್ಯವಾಣಿ!

HT Kannada Desk HT Kannada

Sep 27, 2022 08:49 PM IST

google News

ವಿಜಯಪುರದಲ್ಲಿ ಬಿಜೆಪಿ ಸಭೆ

    • ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆಂದೂ ರಾಜ್ಯದ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಭವಿಷ್ಯ ನುಡಿದ್ದಾರೆ. ವಿಜಯಪುರದಲ್ಲಿ ನಡೆದ ನಾಗಠಾಣ ವಿಧಾನಸಭಾ ಕ್ಷೇತ್ರದ ಬೂತ್‌ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಸಿಎಂ ಕನಸು ಎಂದೂ ನನಸಾಗದು ಎಂದು ಗುಡುಗಿದರು.
ವಿಜಯಪುರದಲ್ಲಿ ಬಿಜೆಪಿ ಸಭೆ
ವಿಜಯಪುರದಲ್ಲಿ ಬಿಜೆಪಿ ಸಭೆ (Verified Twitter)

ವಿಜಯಪುರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆಂದೂ ರಾಜ್ಯದ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಭವಿಷ್ಯ ನುಡಿದ್ದಾರೆ. ವಿಜಯಪುರದಲ್ಲಿ ನಡೆದ ನಾಗಠಾಣ ವಿಧಾನಸಭಾ ಕ್ಷೇತ್ರದ ಬೂತ್‌ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಸಿಎಂ ಕನಸು ಎಂದೂ ನನಸಾಗದು ಎಂದು ಗುಡುಗಿದರು.

ಸಿದ್ದರಾಮಯ್ಯ ಅವರು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಹೆಗಲ ಮೇಲೆ ಬಂದೂಕು ಇಟ್ಟು ಗುಂಡು ಹಾರಿಸುತ್ತಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಇಲ್ಲಸಲ್ಲದ ಭ್ರಷ್ಟಾಚಾರ ಆರೋಪ ಮಾಡುತ್ತಿರುವ ಸಿದ್ದರಾಮಯ್ಯ, ಮೊದಲು ತಮ್ಮ ಅವಧಿಯ ಭ್ರಷ್ಟಾಚಾರಗಳ ಬಗ್ಗೆ ಮಾತನಾಡಲಿ ಎಂದು ಕಾರಜೋಳ ಸವಾಲು ಹಾಕಿದರು.

ಕೆಂಪಣ್ಣ ಅವರ ಮೂಲಕ ನಮ್ಮ ಸರಕಾರದ ಮೇಲೆ ಕಮಿಷನ್‌ ಆರೋಪ ಹೊರಿಸಿರುವ ಸಿದ್ದರಾಮಯ್ಯ, ಈ ಕುರಿತು ಯಾವುದೇ ದಾಖಲೆಗಳಿದ್ದರೆ ಲೋಕಾಯುಕ್ತಕ್ಕೆ ಸಲ್ಲಿಸಲಿ. ಹಾಗೆಯೇ ಕೆಂಪಣ್ಣ ನೇತೃತ್ವದಲ್ಲಿ ರಾಜ್ಯದಲ್ಲಿ ಯಾವ ಅಭಿವೃದ್ಧಿ ಕೆಲಸ ನಡೆದಿದೆ ಎಂದು ವಿಪಕ್ಷ ನಾಯಕ ಸ್ಪಷ್ಟಪಡಿಸಲಿ ಎಂದು ಕಾರಜೋಳ ವ್ಯಂಗ್ಯವಾಡಿದರು.

ಕಾಂಗ್ರೆಸ್‌ನವರು ಲಜ್ಜೆಗಟ್ಟು ನಮ್ಮ ಸರಕಾರದ ಮೇಲೆ ಸುಳ್ಳು ಅರೋಪ ಮಾಡುತ್ತಿದ್ದಾರೆ. ಇದಕ್ಕೆ ರಾಜ್ಯದ ಜನ ಕಿವಿಗೊಡುವುದಿಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ಸಚಿವ ಕಾರಜೋಳ ಭರವಸೆ ವ್ಯಕ್ತಪಡಿಸಿದರು.

ಜಾತಿ-ಜಾತಿಗಳ ನಡುವೆ, ಧರ್ಮ ಧರ್ಮಗಳ ನಡುವೆ ದ್ವೇಷ ಬಿತ್ತಿದ್ದೇ ಕಾಂಗ್ರೆಸ್‌ನ 60 ವರ್ಷಗಳ ಆಡಳಿತದ ಸಾಧನೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌‌ ಅವರನ್ನು ಸೋಲಿಸಿದ ಕಾಂಗ್ರೆಸ್‌, ಅಲ್ಪಸಂಖ್ಯಾತರ ಕಣ್ಣಿಗೆ ಮಣ್ಣೆರೆಚುತ್ತಿದ್ದಾರೆ. ಆದರೆ ಪ್ರಧಾನಿ ಮೋದಿ ಅವರು ಅಲ್ಪಸಂಖ್ಯಾತ ಸಮುದಾಯದ ಶೈಕ್ಷಣಿಕ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದು ಕಾರಜೋಳ ಇದೇ ವೇಳೆ ನುಡಿದರು.

ತಮ್ಮ ಕುಟುಂಬ ದೇಶವನ್ನು ಇಬ್ಭಾಗ ಮಾಡಿದ ಪಶ್ಚಾತಾಪಕ್ಕಾಗಿ, ರಾಹುಲ್‌ ಗಾಂಧಿ ಅವರು ಮಾಜಿ ಪ್ರಧಾನಮಂತ್ರಿ ಅಟಲ್‌ ಬಿಹಾರಿ ವಾಜಪೇಯಿ ನಿರ್ಮಿಸಿದ ರಸ್ತೆಯಲ್ಲಿ ಭಾರತ್‌ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ರಾಹುಲ್‌ ಯಾವ ಯಾತ್ರೆ ಮಾಡಿದರೂ ದೇಶದಲ್ಲಿ ಕಾಂಗ್ರೆಸ್‌ ಪುನರುಜ್ಜೀವನಗೊಳ್ಳುವುದಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಕಾರಜೋಳ ಹೇಳಿದರು.

ಇದೇ ವೇಳೆ ಮಾತನಾಡಿದ ಸಂಸದ ರಮೇಶ ಜಿಗಜಿಣಗಿ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 400 ಸ್ಥಾನ ಗೆಲ್ಲಲಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಮಣಿಸಲು ಒಗ್ಗಟ್ಟಾಗುತ್ತಿರುವ ಪತ್ರಿಪಕ್ಷಗಳ ಕುತಂತ್ರ ನಡೆಯದು ಎಂದು ಹರಿಹಾಯ್ದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ, ರಾಹುಲ್‌ ಗಾಂಧಿ ಕಾಲಿಟ್ಟಲೆಲ್ಲ ಕಾಂಗ್ರೆಸ್‌ ನೆಲ ಕಚ್ಚುತ್ತಿದೆ. ರಾಹುಲ್‌ ಭಾರತ್‌ ಜೋಡೋ ಯಾತ್ರೆ ಕೈಗೊಂಡು ರಾಜ್ಯಕ್ಕೂ ಕಾಲಿಡುತ್ತಿದ್ದು, ಇದರ ಅರ್ಥ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಸಂಪೂರ್ಣ ನೆಲ ಕಚ್ಚಲಿದೆ ಎಂದು ಕಾಲೆಳೆದರು.

ನಾವೀಗ ಅಶ್ವಮೇಧ ಕುದುರೆ ಬಿಟ್ಟಿದ್ದೇವೆ, ಕಾಂಗ್ರೆಸ್‌ನವರಿಗೆ ತಾಕತ್ತಿದ್ದರೆ ಅದನ್ನು ಕಟ್ಟಿ ಹಾಕಲಿ. ಕಾಂಗ್ರೆಸ್‌ ನಾಯಕರು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಅದೆಷ್ಟೇ ಸುಳ್ಳು ಭ್ರಷ್ಟಾಚಾರದ ಆರೋಪ ಮಾಡಿದರೂ ಯಾವುದೇ ಪ್ರಯೋಜವಿಲ್ಲ. ರಾಜ್ಯದ ಜನತೆ ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ ಇದೇ ವೇಳೆ ಭರವಸೆ ವ್ಯಕ್ತಪಡಿಸಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ