logo
ಕನ್ನಡ ಸುದ್ದಿ  /  ಕರ್ನಾಟಕ  /  Viral News: ಬಾರೋ ಬಾರೋ ಮಳೆರಾಯ, ಮಳೆಗಾಗಿ ಮಕ್ಕಳ ಅಣಕು ಮದುವೆ; ಲಿಂಗಪ್ಪನ ಪಾಳ್ಯ ಗ್ರಾಮಸ್ಥರ ವಿಲಕ್ಷಣ ಆಚರಣೆ

Viral News: ಬಾರೋ ಬಾರೋ ಮಳೆರಾಯ, ಮಳೆಗಾಗಿ ಮಕ್ಕಳ ಅಣಕು ಮದುವೆ; ಲಿಂಗಪ್ಪನ ಪಾಳ್ಯ ಗ್ರಾಮಸ್ಥರ ವಿಲಕ್ಷಣ ಆಚರಣೆ

Umesh Kumar S HT Kannada

Mar 27, 2024 10:25 AM IST

ಅಣಕು ಮದುವೆಯ ಮದುಮಕ್ಕಳ ಜೊತೆಗೆ ಗ್ರಾಮಸ್ಥರು (ಆಚರಣೆ ಏನೇ ಇದ್ದರೂ, ಪುಟ್ಟ ಮಕ್ಕಳು ಎನ್ನುವ ಕಾರಣಕ್ಕೆ ಮದುಮಕ್ಕಳ ವೇಷದಲ್ಲಿರುವ ಬಾಲಕರ ಮುಖಗಳನ್ನು ಮರೆಮಾಚಲಾಗಿದೆ)

  • ತುಮಕೂರಿನ ಲಿಂಗಪ್ಪನ ಪಾಳ್ಯದ ಗ್ರಾಮಸ್ಥರು ಮಳೆಗಾಗಿ ಮಕ್ಕಳ ಅಣಕು ಮದುವೆ ಮಾಡಿ, ಬಾರೋ ಬಾರೋ ಮಳೆರಾಯ ಎಂದು ಸಂಭ್ರಮಿಸಿದರು. ಈ ವಿಲಕ್ಷಣ ಆಚರಣೆಯ ವಿವರ ಇಲ್ಲಿದೆ. (ವರದಿ- ಈಶ್ವರ್, ತುಮಕೂರು)

ಅಣಕು ಮದುವೆಯ ಮದುಮಕ್ಕಳ ಜೊತೆಗೆ ಗ್ರಾಮಸ್ಥರು (ಆಚರಣೆ ಏನೇ ಇದ್ದರೂ,  ಪುಟ್ಟ ಮಕ್ಕಳು ಎನ್ನುವ ಕಾರಣಕ್ಕೆ ಮದುಮಕ್ಕಳ ವೇಷದಲ್ಲಿರುವ ಬಾಲಕರ ಮುಖಗಳನ್ನು ಮರೆಮಾಚಲಾಗಿದೆ)
ಅಣಕು ಮದುವೆಯ ಮದುಮಕ್ಕಳ ಜೊತೆಗೆ ಗ್ರಾಮಸ್ಥರು (ಆಚರಣೆ ಏನೇ ಇದ್ದರೂ, ಪುಟ್ಟ ಮಕ್ಕಳು ಎನ್ನುವ ಕಾರಣಕ್ಕೆ ಮದುಮಕ್ಕಳ ವೇಷದಲ್ಲಿರುವ ಬಾಲಕರ ಮುಖಗಳನ್ನು ಮರೆಮಾಚಲಾಗಿದೆ)

ತುಮಕೂರು: ಮಳೆ ಕೈ ಕೊಟ್ಟಾಗ ಮಳೆಗಾಗಿ ಕಪ್ಪೆ ಮದುವೆ, ಕತ್ತೆ ಮದುವೆ ಮಾಡುವುದು ಸಾಮಾನ್ಯ, ಆದರೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಹೋಬಳಿಯ ಲಿಂಗಪ್ಪನಪಾಳ್ಯದಲ್ಲಿ ಮಕ್ಕಳ ಮದುವೆ ಮಾಡಿ ಮಳೆಗಾಗಿ ಪ್ರಾರ್ಥಿಸಲಾಗಿದೆ. ಇಲ್ಲಿನ ಹುಡುಗ, ಹುಡುಗಿ ಮದುವೆ ಮಾಡಲಿಲ್ಲ, ಬದಲಾಗಿ ಹುಡುಗನಿಗೆ ಹುಡುಗಿ ವೇಷ ಹಾಕಿಸಿ ಅಣುಕು ಮದುವೆ ಮಾಡಿ ಸಂಭ್ರಮಿಸಿದರು.

ಟ್ರೆಂಡಿಂಗ್​ ಸುದ್ದಿ

Hubli News: ಹುಬ್ಬಳ್ಳಿ ಅಂಜಲಿ ಅಂಬಿಗೇರ ಪ್ರಕರಣ, ಎಸಿಪಿ ಸಸ್ಪೆಂಡ್‌, ನೂತನ ಡಿಸಿಪಿ ನೇಮಕ

Mangalore News: ಪದ್ಮಶ್ರೀ ಹರೇಕಳ ಹಾಜಬ್ಬರ ಶಾಲೆಯಲ್ಲಿ ದುರಂತ, ಮಳೆಗೆ ಶಿಥಿಲಗೊಂಡ ಆವರಣಗೋಡೆ, ಗೇಟು ಕುಸಿದು ಬಾಲಕಿ ದುರ್ಮರಣ

Hubli News: ಹುಬ್ಬಳ್ಳಿ ಅಂಜಲಿ‌ ಅಂಬಿಗೇರ ಹತ್ಯೆ ಪ್ರಕರಣ ತನಿಖೆ ಸಿಐಡಿಗೆ, ತಪ್ಪಿತಸ್ಥ ಪೊಲೀಸರ ವಿರುದ್ದ ಕಠಿಣ ಕ್ರಮ: ಗೃಹ ಸಚಿವ ಪರಮೇಶ್ವರ

Dakshin Kannada Accidents: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತ್ಯೇಕ ಅಪಘಾತ; ಮಾಜಿ ಸೈನಿಕ ಸೇರಿ ಮೂವರು ಸಾವು

ಮಕ್ಕಳ ಮದುವೆ ಮಾಡಿದರೆ ಮಳೆ ಬರುತ್ತದೆ ಎನ್ನುವ ನಂಬಿಕೆಯಿಂದ ಅನೇಕ ವರ್ಷಗಳಿಂದ ಈ ಆಚರಣೆಯನ್ನು ಹಳ್ಳಿಗಳಲ್ಲಿ ಮಾಡಿಕೊಂಡು ಬರುತ್ತಿದ್ದಾರೆ. ಇದಕ್ಕಾಗಿ 9 ದಿನಗಳಿಂದ ನವಧಾನ್ಯಗಳನ್ನು ಮೊಳಕೆ ಬರಿಸಿ ಮದುವೆಯ ದಿನ ಶಾಸ್ತ್ರ ಮಾಡಲಾಯಿತು.

ಏನಿದು ಅಣಕು ಮದುವೆ

ಗ್ರಾಮದ ಒಬ್ಬ ಬಾಲಕನಿಗೆ ಕಚ್ಚೆಪಂಚೆ, ಪೇಟ, ಬಾಸಿಂಗ ಹಾಕಿ ಮದು ಮಗನಾಗಿಯೂ, ಮತ್ತೊಬ್ಬ ಬಾಲಕನಿಗೆ ಸೀರೆ ಕುಪ್ಪಸ, ಬಳೆ, ಒಡವೆ ತೊಡಿಸಿ ಶೃಂಗರಿಸಿ ಮಧು ಮಗಳಾಗಿಯೂ ಮಾಡಿ ವಿವಿಧ ವಿವಾಹ ಶಾಸ್ತ್ರ ನೆರವೇರಿಸಲಾಯಿತು, ನಂತರ ಬ್ಯಾಂಡ್ ಸೆಟ್‌ನೊಂದಿಗೆ ಊರು ತುಂಬ ಮೆರವಣಿಗೆ ನಡೆಸಿದರು.

ಥೇಟ್ ವಧು ವರರಂತೆ ಕಂಗೊಳಿಸುತ್ತಿದ್ದ ಇಬ್ಬರೂ ಬಾಲಕರನ್ನು ಕುರ್ಚಿಯಲ್ಲಿ ಕುಳ್ಳಿರಿಸಿ ಆರತಕ್ಷತೆ ಸಹ ಮಾಡಿದರು, ಗ್ರಾಮದ ಮಹಿಳೆಯರು ಆರತಿ ಎತ್ತಿ ಶುಭ ಹಾರೈಸಿದರು, ಕೆಲವರು ಹಣ ಮುಯ್ಯಿ ಮಾಡಿ ವರದಿಂದ ವಧುವಿನ ಹೆಸರು, ವಧುವಿನಿಂದ ವರನ ಹೆಸರು ಕೇಳಿ ಖುಷಿ ಪಟ್ಟರು, ಅಜ್ಜಿಯಂದಿರು ಸೋಬಾನೆ ಪದ ಹಾಡಿದರೆ, ಹುಡುಗಿಯರು ಡ್ಯಾನ್ಸ್‌ ಮಾಡಿ ಮದುವೆಯ ಕಳೆ ಹೆಚ್ಚಿಸಿದ್ದರು.

ಮದುವೆಗೆ ಬಂದಿದ್ದ ಮುತ್ತೆದೆಯರಿಗೆ ಅರಿಶಿನ, ಕುಂಕುಮ ಕೊಡುವ ಶಾಸ್ತ್ರ, ಪಾಲ್ಗೊಂಡ ಎಲ್ಲರಿಗೂ ಪಾಯಸದ ಅಡುಗೆ ಊಟ ಸಹ ಬಡಿಸಲಾಯಿತು, ಕೊನೆಗೆ ಎಲ್ಲರೂ ನೃತ್ಯ ಮಾಡಿ ಬಾರೋ ಮಳೆರಾಯ ಎಂದು ಕರೆದರು.

ರಿಯಾಲಿಟಿಯಲ್ಲಿ ಒಂದು ಗಂಡು-ಹೆಣ್ಣಿಗೆ ಯಾವ ರೀತಿ ಮದುವೆ ಮಾಡುತ್ತರೋ ಅದೇ ರೀತಿ ಶಾಸ್ತ್ರೋಕ್ತವಾಗಿ ಗ್ರಾಮದ ಜನರೆಲ್ಲಾ ಸೇರಿ ವಿಜೃಂಭಣೆಯಿಂದ ಮದುವೆ ಮಾಡಿ ಹಾಡುಗಳನ್ನಾಡಿ ಸಂಭ್ರಮಿಸಿದ್ದಾರೆ, ಊರಿನ ಜನರ ಈ ನಂಬಿಗೆ ಸುಳ್ಳಾಗದಿದ್ದರೆ ಬರದ ಛಾಯೆ ಮರೆಯಾಗಿ ವರ್ಷಧಾರೆಯ ಕೃಪೆಗೆ ಭೂರಮೆ ತಣ್ಣಗಾಗಲಿದೆ ಎಂಬ ನಂಬಿಕೆಯೊಂದಿಗೆ ಹಳ್ಳಿ ಜನ ಈ ಆಚರಣೆಯನ್ನು ಮಾಡುತ್ತಿದ್ದಾರೆ.

ಮೊದಲಿನಿಂದಲೂ ಈ ಸಂಪ್ರದಾಯವಿದೆ

ಮಳೆ ಬಾರದಿದ್ದಾಗ ಮಕ್ಕಳ ಮದುವೆ ಮಾಡುವ ಸಂಪ್ರದಾಯ ನಮ್ಮಲ್ಲಿ ಮೊದಲಿನಿಂದಲೂ ಇದೆ, ನಾವು ಮುಂದುವರೆಸುಕೊಂಡು ಹೋಗುತ್ತಿದ್ದೇವೆ, ಕೆಲ ವರ್ಷದ ಹಿಂದೆ ಹೀಗೆಯೇ ಮಳೆಯಾಗದೇ ಇದ್ದಾಗ ಬಾಲಕರ ಮದುವೆ ಮಾಡಿಸಿದ್ದೆವು, ನಂತರ ಮಳೆಯಾಗಿತ್ತು, ಈ ಬಾರಿಯೂ ಮಳೆ ಬರುವ ನಿರೀಕ್ಷೆ ಇಟ್ಟುಕೊಂಡು ಊರಿನವರೆಲ್ಲರೂ ಸೌಹಾದರ್ತೆಯಿಂದ ಬೆರೆತು ಈ ಆಚರಣೆ ಮಾಡಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಕಳೆದ ವರ್ಷ ಮಳೆಯಿಲ್ಲದೆ ಮುಂಗಾರು, ಹಿಂಗಾರು ಎರಡೂ ಕೈ ಕೊಟ್ಟಿತು, ಪರಿಣಾಮ ಭೂಮಿಯನ್ನೇ ನಂಬಿ ಜೀವನ ಮಾಡುತ್ತಿರುವ ರೈತರ ಪಾಡು ಹೇಳತೀರದಾಗಿದೆ, ಈ ವರ್ಷವೂ ಹವಮಾನ ಇಲಾಖೆ ಮಳೆಯಾಗುತ್ತದೆ ಎಂದು ಹೇಳಿದ್ದರೂ ಇಲ್ಲಿಯವರೆವಿಗೆ ಮಳೆಯ ಸುಳಿವಿಲ್ಲ, ಹಾಗಾಗಿ ಪೂರ್ವಿಕರು ಆಚರಿಸುತ್ತಿದ್ದ ಚಂದಮಾನ ಮದುವೆ ಮಾಡಿದ್ದೇವೆ ಎಂದು ರೈತ ಮೈಲಾರಪ್ಪ ತಿಳಿಸಿದ್ದಾರೆ.

(ವರದಿ- ಈಶ್ವರ್, ತುಮಕೂರು)

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ