Hubli News: ಹುಬ್ಬಳ್ಳಿ ಅಂಜಲಿ ಅಂಬಿಗೇರ ಪ್ರಕರಣ, ಎಸಿಪಿ ಸಸ್ಪೆಂಡ್, ನೂತನ ಡಿಸಿಪಿ ನೇಮಕ
May 20, 2024 11:30 PM IST
ಅಂಜಲಿ ಹತ್ಯೆ ಪ್ರಕರಣದ ನಂತರ ಹುಬ್ಬಳ್ಳಿಗೆ ಹೊಸ ಡಿಸಿಪಿ ಕೌಶಲ್ ಅವರನ್ನು ನೇಮಿಸಿದ್ದು ಆಯುಕ್ತರಾದ ರೇಣುಕಾ ಸುಕುಮಾರ್ ವರ್ಗವಾಗುವ ಸಾಧ್ಯತೆಯಿದೆ.
- ಹುಬ್ಬಳ್ಳಿ ಯುವತಿಯರ ಕೊಲೆ ಪ್ರಕರಣಗಳ ನಂತರ ಈಗಾಗಲೇ ಡಿಸಿಪಿ ಸೇರಿ ನಾಲ್ವರನ್ನು ಅಮಾನತುಗೊಳಿಸಿರುವ ಸರ್ಕಾರ ಹೊಸ ಡಿಸಿಪಿಯನ್ನು ನೇಮಿಸಿದೆ.
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಡೆದಿದ್ದ ಯುವತಿ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ಹುಬ್ಬಳ್ಳಿ ಧಾರವಾಡ ನಗರದ ಎಸಿಪಿ ವಿಜಯಕುಮಾರ್ ತಲವಾರಿ ಅವರನ್ನು ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈಗಾಗಲೇ ಈ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿಯಾಗಿರುವ ಹುಬ್ಬಳ್ಳಿ ಡಿಸಿಪಿ ಎಂ.ರಾಜೀವ್, ಇನ್ಸ್‌ಪೆಕ್ಟರ್ ಚಂದ್ರಶೇಖರ ಚಿಕ್ಕೋಡಿ ಹಾಗೂ ಸಿಬ್ಬಂದಿಯೊಬ್ಬರನ್ನು ಅಮಾನತುಪಡಿಸಲಾಗಿದೆ. ಆನಂತರ ಎಸಿಪಿ ಅವರ ತಲೆ ದಂಡವೂ ಆಗಿದೆ. ಸೋಮವಾರ ಹುಬ್ಬಳ್ಳಿಗೆ ಆಗಮಿಸಿ ನೇಹಾಹಿರೇಮಠ ಹಾಗೂ ಅಂಜಲಿ ಅಂಬಿಗೇರ ಅವರ ನಿವಾಸಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಭೇಟಿ ನೀಡಿ ಸಾಂತ್ವನ ಹೇಳಿದ ನಂತರ ಈ ಆದೇಶ ಹೊರ ಬಿದ್ದಿದೆ.
ಅಂಜಲಿ ಅಂಬಿಗೇರ ಕೊಲೆ ಮಾಡುವುದಾಗಿ ಆರೋಪಿ ಗಿರೀಶ್ ಈ ಹಿಂದೆಯೇ ಬೆದರಿಕೆ ಹಾಕಿದ ಬಗ್ಗೆ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ಆದರೂ ಏನು ಆಗುವುದಿಲ್ಲ ಎಂದು ಪೊಲೀಸರೇ ಕುಟುಂಬದವರನ್ನು ವಾಪಾಸ್ ಕಳುಹಿಸಿದ್ದರು. ಕ್ರಮವನ್ನೂ ತೆಗೆದುಕೊಂಡಿರಲಿಲ್ಲ. ಅಲ್ಲದೇ ದೂರನ್ನೂ ಗಂಭೀರವಾಗಿ ಪರಿಗಣಿಸಿರಲಿಲ್ಲ.
ಇದರಿಂದಲೇ ಅಂಜಲಿ ಕೊಲೆಯಾಗಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಇದಾಗುತ್ತಲೇ ಬೆಂಡಿಗೇರಿ ಠಾಣೆ ಇನ್ಸ್‌ಪೆಕ್ಟರ್ ಚಂದ್ರಶೇಖರ್ ಚಿಕ್ಕೋಡಿ ಅವರನ್ನು ಅಮಾನತುಗೊಳಿಸಲಾಗಿತ್ತು. ಮೂರು ದಿನದ ಹಿಂದೆ ಡಿಸಿಪಿ ರಾಜೀವ್ ಅವರನ್ನು ಸರ್ಕಾರ ಅಮಾನುತಪಡಿಸಿತ್ತು. ಹುಬ್ಬಳ್ಳಿಯಲ್ಲಿ ಎರಡು ಕೊಲೆಯಾಗಿ ಕಾನೂನು ಮತ್ತು ವ್ಯವಸ್ಥೆ ಕುಸಿದಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ರಾಜೀವ್ ಅಮಾನತುಗೊಂಡಿದ್ದರು. ಈಗ ದಕ್ಷಿಣ ವಿಭಾಗದ ಎಸಿಪಿ ವಿಜಯಕುಮಾರ್ ತಲವಾರಿ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಗೃಹ ಸಚಿವರು ಹೇಳಿದ್ದೇನು
ಸೋಮವಾರ ಸಂಜೆ ಹುಬ್ಬಳ್ಳಿಯಲ್ಲಿ ಮಾತನಾಡಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಅಂಜಲಿ ಅಂಬಿಗೇರ ಅವರ ನಿವಾಸಕ್ಕೆ ಭೇಟಿ ನೀಡಿದ ವೇಳೆ ಯುವತಿಯ ಅಜ್ಜಿಯನ್ನು ಮಾತನಾಡಿಸಿದೆ. ದೂರು ಕೊಡಲು ಠಾಣೆಗೆ ಹೋಗಿರುವುದಾಗಿ ಹೇಳಿದರು. ಈ ವೇಳೆ ಅಲ್ಲಿ ಸರಿಯಾಗಿ ಸ್ಪಂದಿಸಿಲ್ಲ. ಅದಕ್ಕೆ ಬೇಸರ ಆಯ್ತು ಎಂದರು. ದೂರು ನೀಡಿದ ಕೂಡಲೇ ಕ್ರಮ ತೆಗೆದುಕೊಂಡಿದ್ದರೆ ಕೃತ್ಯ ಸಂಭವಿಸುತ್ತಿರಲಿಲ್ಲ ಎಂಬುದು ಗೊತ್ತಾಗಿದೆ. ನಿರ್ಲಕ್ಷ್ಯ ತೋರಿದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಅಮಾನತುಗೊಳಿಸಿ, ಇಲಾಖಾ ವಿಚಾರಣೆಗೆ ಒಳಪಡಿಸಲಾಗಿದೆ. ಅದರ ವರದಿ ಬದ ನಂತರ ಮುಂದಿನ ಕ್ರಮ ಜರುಗಿಸಲಾಗುವುದು. ಯಾರೇ ತಪ್ಪೆಸಗಿದ್ದರು ಸುಮ್ಮನೆ ಬಿಡುವ ಪ್ರಮೇಯವಿಲ್ಲ ಎಂದು ಎಚ್ಚರಿಸಿದ್ದರು.
ಡಿಸಿಪಿ ನೇಮಕ
ಅಮಾನತುಗೊಂಡಿರುವ ಹುಬ್ಬಳ್ಳಿ ಧಾರವಾಡ ನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಯಾಗಿದ್ದ ಎಂ.ರಾಜೀವ್ ಅವರ ಜಾಗಕ್ಕೆ ಐಪಿಎಸ್ ಅಧಿಕಾರಿ ಕುಶಲ್ ಚೌಕ್ಸಿ ಅವರನ್ನು ( Kushal Chouksey) ಅವರನ್ನು ನೇಮಿಸಲಾಗಿದೆ. ಈ ಕುರಿತು ಆದೇಶ ಹೊರಡಿಸಲಾಗಿದ್ದು, ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯದ ಜಂಟಿ ನಿರ್ದೇಶಕರಾಗಿರುವ ಚೌಕ್ಸಿ ಆ ಹುದ್ದೆಯಲ್ಲೂ ಮುಂದುವರೆಯಲಿದ್ದಾರೆ. 2018 ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಚೌಕ್ಸಿ ಈ ಹಿಂದೆ ಉತ್ತರ ಕನ್ನಡ ಜಿಲ್ಲೆ ಹಳಿಯಾಳದಲ್ಲಿ ಎಎಸ್ಪಿಯಾಗಿದ್ದರು. ಸೋಮವಾರ ಸಂಜೆಯೇ ಅವರು ಅಧಿಕಾರ ವಹಿಸಿಕೊಂಡರು.
ಆಯುಕ್ತರ ಎತ್ತಂಗಡಿ?
ಇದೇ ಪ್ರಕರಣದಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಾಗಿರುವ ರೇಣುಕಾ ಸುಕುಮಾರ್ ಅವರನ್ನು ಒಂದೆರಡು ದಿನದಲ್ಲಿ ವರ್ಗ ಮಾಡುವ ಸಾಧ್ಯತೆಯಿದೆ. ಅವರ ಜಾಗಕ್ಕೆ ಡಿಐಜಿ ಹುದ್ದೆಯ ಅಧಿಕಾರಿಯೊಬ್ಬರನ್ನು ನೇಮಿಸುವ ನಿರೀಕ್ಷೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)