Vijay Sankapla Yatre: ವಿಧಾನಸಭೆ ಚುನಾವಣೆ 2023; ಬೃಹತ್ ವಿಜಯ ಸಂಕಲ್ಪ ಯಾತ್ರೆಗೆ ಬಿಜೆಪಿ ಸಜ್ಜು
Feb 28, 2023 06:00 PM IST
ವಿಜಯ ಸಂಕಲ್ಪ ಯಾತ್ರೆಯ ರಥ
Vijay Sankapla Yatre: ವಿಜಯ ಸಂಕಲ್ಪ ಯಾತ್ರೆ ಕೈಗೊಳ್ಳುವುದಕ್ಕಾಗಿ ನಾಲ್ಕು ರಥಗಳನ್ನು ಬಿಜೆಪಿ ಸಿದ್ಧಗೊಳಿಸಿದೆ. ಇದು ರಾಜ್ಯದ ಎಲ್ಲ 224 ಕ್ಷೇತ್ರಗಳನ್ನು ತಲುಪಲಿದ್ದು, ತಲಾ 1 ಕೋಟಿ ಜನರನ್ನು ತಲುಪುವ ಗುರಿಯೊಂದಿಗೆ ರಾಜ್ಯದ ನಾಲ್ಕು ದಿಕ್ಕುಗಳಿಂದ ಹೊರಡಲಿವೆ. ಇದಕ್ಕೆ ಚಾಲನೆ ನೀಡಲು ಬಿಜೆಪಿಯ ಕೇಂದ್ರ ನಾಯಕರು ರಾಜ್ಯಕ್ಕೆ ಆಗಮಿಸಲಿದ್ದಾರೆ.
ಬೆಂಗಳೂರು: ರಾಜ್ಯ ವಿಧಾನ ಸಭೆ ಚುನಾವಣೆ ಬಹಳ ಸಮೀಪದಲ್ಲಿದೆ. ಈ ಸಂದರ್ಭದಲ್ಲಿ ಅಧಿಕಾರ ಚುಕ್ಕಾಣಿ ಉಳಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದ್ದು, ಬುಧವಾರ ಬೃಹತ್ ವಿಜಯ ಸಂಕಲ್ಪ ಯಾತ್ರೆ ಕೈಗೊಳ್ಳಲು ಸಜ್ಜಾಗಿದೆ.
ವಿಜಯ ಸಂಕಲ್ಪ ಯಾತ್ರೆ ಕೈಗೊಳ್ಳುವುದಕ್ಕಾಗಿ ನಾಲ್ಕು ರಥಗಳನ್ನು ಬಿಜೆಪಿ ಸಿದ್ಧಗೊಳಿಸಿದೆ. ಇದು ರಾಜ್ಯದ ಎಲ್ಲ 224 ಕ್ಷೇತ್ರಗಳನ್ನು ತಲುಪಲಿದ್ದು, ತಲಾ 1 ಕೋಟಿ ಜನರನ್ನು ತಲುಪುವ ಗುರಿಯೊಂದಿಗೆ ಮಾ.1,2,3ರಂದು ರಾಜ್ಯದ ನಾಲ್ಕು ದಿಕ್ಕುಗಳಿಂದ ಹೊರಡಲಿವೆ. ಇದಕ್ಕೆ ಚಾಲನೆ ನೀಡಲು ಬಿಜೆಪಿಯ ಕೇಂದ್ರ ನಾಯಕರು ರಾಜ್ಯಕ್ಕೆ ಆಗಮಿಸಲಿದ್ದಾರೆ.
ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ವಿಜಯ ಸಂಕಲ್ಪ ಯಾತ್ರೆಗೆ ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಿಂದ ನಾಳೆ ಚಾಲನೆ ನೀಡುವರು. ಅದೇ ರೀತಿ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇನ್ನೊಂದು ರಥಕ್ಕೆ ಬೆಳಗಾವಿ ಜಿಲ್ಲೆಯ ನಂದಗಡದಿಂದ ಮಾ.2ರಂದು ಚಾಲನೆ ನೀಡುವರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೀದರ್ - ಬಸವಕಲ್ಯಾಣದಿಂದ ಮತ್ತೊಂದು ರಥಕ್ಕೆ ಮಾ.3ರಂದು ಬೆಳಗ್ಗೆ ಮತ್ತು ಮಗದೊಂದು ರಥಕ್ಕೆ ಅದೇ ದಿನ ಅಪರಾಹ್ನ ದೇವನಹಳ್ಳಿ ಸಮೀಪದಿಂದ ಚಾಲನೆ ನೀಡುವರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಸೇರಿದಂತೆ ಹಲವರು ಯಾತ್ರೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಈಗಾಗಲೇ ಪ್ರಧಾನಿ ಮೋದಿ, ಅಮಿತ್ ಶಾ, ನಡ್ಡಾ ರಾಜ್ಯಕ್ಕೆ ಭೇಟಿ ನೀಡಿದ್ದು, ಕೇಂದ್ರ ಸಚಿವ ಧರ್ಮಂದ್ರ ಪ್ರಧಾನ್, ಮನ್‌ಸುಖ್ ಮಾಂಡವೀಯ ಅವರು ಚುನಾವಣಾ ಉಸ್ತುವಾರಿಗಳೂ ಆಗಿದ್ದು, ಪ್ರಚಾರಕ್ಕಾಗಿ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಇನ್ನೂ ಹಲವು ಪ್ರಮುಖ ನಾಯಕರು ಭೇಟಿ ನೀಡಲಿದ್ದಾರೆ.
ಎಲ್ಲಾ ವಿಧಾನಸಭಾ ಕ್ಷೇತ್ರಗಳನ್ನು ತಲುಪುವ ರಥಯಾತ್ರೆಗಳು ಮಾರ್ಚ್ 1, 2 ಮತ್ತು 3 ರಂದು ಪ್ರಾರಂಭವಾಗಲಿವೆ. ಈ ಯಾತ್ರೆಯ ಸಮಯದಲ್ಲಿ ಹಲವಾರು ಪಕ್ಷದ ನಾಯಕರು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಎಂದು ಅವರು ಹೇಳಿದರು.
ಪಕ್ಷದ ನಾಯಕರ ಪ್ರಕಾರ, ಮೇ ತಿಂಗಳೊಳಗೆ ಚುನಾವಣೆ ನಡೆಯಲಿರುವ ರಾಜ್ಯದ ಎಲ್ಲ 31 ಜಿಲ್ಲೆಗಳು ಮತ್ತು 224 ಕ್ಷೇತ್ರಗಳನ್ನು ಒಳಗೊಂಡಿರುವ ಈ ಅಭಿಯಾನದಲ್ಲಿ 50 ಕ್ಕೂ ಹೆಚ್ಚು ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಭಾಗವಹಿಸಲಿದ್ದಾರೆ. ರಥಯಾತ್ರೆ, ಪ್ರವಾಸವು ರಾಜ್ಯದ 8,000 ಕಿ.ಮೀ ಕ್ರಮಿಸಲಿದ್ದು, ಇದರೊಂದಿಗೆ ಪಕ್ಷವು 80 ರ್ಯಾಲಿಗಳು, 74 ಸಾರ್ವಜನಿಕ ಸಭೆಗಳು ಮತ್ತು ಸುಮಾರು 150 ರೋಡ್ ಶೋಗಳನ್ನು ಯೋಜಿಸಿದೆ, ಇದು ಸುಮಾರು ನಾಲ್ಕು ಕೋಟಿ ಜನರನ್ನು ತಲುಪುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.
ದಾವಣಗೆರೆ ಜಿಲ್ಲಾ ಕೇಂದ್ರದಲ್ಲಿ 20 ದಿನಗಳ 'ಯಾತ್ರೆ' ಮಾರ್ಚ್ 25 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಪಾಲ್ಗೊಳ್ಳುವ ಮೆಗಾ ರ್ಯಾಲಿಯೊಂದಿಗೆ ಮುಕ್ತಾಯಗೊಳ್ಳಲಿದೆ. ನಾಲ್ಕು ವಿಭಿನ್ನ ಸ್ಥಳಗಳಿಂದ ಪ್ರಾರಂಭವಾಗುವ ಯಾತ್ರೆಯು ಪ್ರತಿಯೊಂದರಲ್ಲೂ 10-12 ನಾಯಕರು ಇರುತ್ತಾರೆ.
ಐತಿಹಾಸಿಕ ಅಥವಾ ಧಾರ್ಮಿಕ ಪ್ರಾಮುಖ್ಯತೆಯ ಎಲ್ಲಾ ನಾಲ್ಕು ಸ್ಥಳಗಳನ್ನು ಯಾತ್ರೆಗಳ ಆರಂಭಕ್ಕೆ ಆಯ್ಕೆ ಮಾಡಲಾಗಿದೆ - ಬಸವಕಲ್ಯಾಣ ಲಿಂಗಾಯತರಿಗೆ ಪವಿತ್ರ ಸ್ಥಳವಾಗಿದೆ, ಆದರೆ ನಂದಗಡ (ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಸ್ಮಾರಕವಿದೆ) ಮತ್ತು ಆವತಿ (ನಾಡಪ್ರಭು ಕೆಂಪೇಗೌಡರ ಜನ್ಮಸ್ಥಳ) ) ಕುರುಬ ಮತ್ತು ಒಕ್ಕಲಿಗ ಸಮುದಾಯಗಳ ಮೇಲೆ ಕಣ್ಣಿಟ್ಟು ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ.
ರಥಯಾತ್ರೆ - ನೋಟ
ವಿಜಯ ಸಂಕಲ್ಪ ಯಾತ್ರೆ 2023
04 ರಥಗಳು
04 ವಿಭಿನ್ನ ಸ್ಥಳಗಳಿಂದ ರಥ ಯಾತ್ರೆ ಶುರು
ರಥ 1 - ಮಲೆಮಹದೇಶ್ವರ ಬೆಟ್ಟದಿಂದ ಯಾತ್ರೆ ಶುರು (ಮಾ.1)
ರಥ 2 - ಬೆಳಗಾವಿ ಜಿಲ್ಲೆಯ ನಂದಗಡದಿಂದ ಯಾತ್ರೆ ಶುರು (ಮಾ.2)
ರಥ 3 - ಬಸವ ಕಲ್ಯಾಣದಿಂದ ಯಾತ್ರೆ ಶುರು (ಮಾ.3)
ರಥ 4 - ಆವತಿಯಿಂದ ಯಾತ್ರೆ ಶುರು (ಮಾ.3)
224 ಕ್ಷೇತ್ರಗಳಲ್ಲಿ ರಥ ಯಾತ್ರೆ
12 ಪ್ರತಿ ರಥದಲ್ಲೂ ಕನಿಷ್ಠ 10-12 ನಾಯಕರು
04 ಕೋಟಿ ಜನರನ್ನು ತಲುಪುವ ನಿರೀಕ್ಷೆ
20 ದಿನಗಳ ಯಾತ್ರೆ
ಮಾ.25 - ದಾವಣಗೆರೆಯಲ್ಲಿ ಯಾತ್ರೆ ಸಂಪನ್ನ