ಕರ್ನಾಟಕ ಹವಾಮಾನ ಮೇ 7; ಬೆಂಗಳೂರು, ಮೈಸೂರು ಸೇರಿ 18 ಜಿಲ್ಲೆಗಳಲ್ಲಿ ಮಳೆ, ಬೀದರ್, ಕೊಪ್ಪಳ ಸೇರಿ 9 ಜಿಲ್ಲೆಗಳಲ್ಲಿ ಶಾಖದ ಅಲೆ
May 07, 2024 06:11 AM IST
ಕರ್ನಾಟಕ ಹವಾಮಾನ ಮೇ 7; ಬೆಂಗಳೂರು, ಮೈಸೂರು ಸೇರಿ 18 ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ಇದ್ದು, ಬೀದರ್, ಕೊಪ್ಪಳ ಸೇರಿ 9 ಜಿಲ್ಲೆಗಳಲ್ಲಿ ಶಾಖದ ಅಲೆಗಳ ಕಾರಣ ಆರೆಂಜ್ ಅಲರ್ಟ್ ಘೋಷಣೆಯಾಗಿದೆ. (ಸಾಂಕೇತಿಕ ಚಿತ್ರ)
ಕರ್ನಾಟಕ ಹವಾಮಾನ ಮೇ 7; ರಾಜ್ಯದ ಬೆಂಗಳೂರು, ಮೈಸೂರು ಸೇರಿ 18 ಜಿಲ್ಲೆಗಳ ಕೆಲವೆಡೆ ಮಳೆಯಾಗಬಹುದು. ಬಾಗಲಕೋಟೆ, ಬೀದರ್, ಕೊಪ್ಪಳ ಸೇರಿ 8ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಶಾಖದ ಅಲೆಯ ಸಂಕಷ್ಟ ಎದುರಾಗುವ ಸಾಧ್ಯತೆ ಇದ್ದು, ಆರೆಂಜ್ ಅಲರ್ಟ್ ಅನ್ನು ಭಾರತೀಯ ಹವಾಮಾನ ಇಲಾಖೆ ಘೋಷಿಸಿದೆ.
ಬೆಂಗಳೂರು: ಕರ್ನಾಟಕದ ಬೆಂಗಳೂರು, ಮೈಸೂರು ಜಿಲ್ಲೆ ಸೇರಿ 18 ಜಿಲ್ಲೆಗಳ ಕೆಲವು ಕಡೆಗಳಲ್ಲಿ ಇಂದು (ಮೇ 7) ಹಗುರ, ಸಾಧಾರಣ ಮಳೆಯಾಗಬಹುದು. ಕೆಲವು ಕಡೆ ಗುಡುಗು ಮಿಂಚು ಸಹಿತ ಮಳೆಯಾಗಬಹುದು. ಉಳಿದ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ. ವಿಶೇಷವಾಗಿ ಬಾಗಲಕೋಟೆ, ಬೀದರ್ ಜಿಲ್ಲೆ ಸೇರಿ 8ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಶಾಖದ ಅಲೆಗಳುಂಟಾಗಬಹುದು ಎಂದು ಆರೆಂಜ್ ಅಲರ್ಟ್ ಅನ್ನು ಬೆಂಗಳೂರು ಹವಾಮಾನ ಕೇಂದ್ರ ಘೋಷಿಸಿದೆ.
ಕಳೆದ ಎರಡು ಮೂರು ದಿನಗಳಿಂದ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆ ಬಿದ್ದಿದ್ದು, ಭೂಮಿ ಕೊಂಚ ಮಟ್ಟಿಗೆ ತಂಪಾಗಿದೆ. ಆದಾಗ್ಯೂ, ತಾಪಮಾನ, ಕರಾವಳಿ ಭಾಗದಲ್ಲಿ ಸೆಖೆ ಹೆಚ್ಚಳವಾಗಿದೆ. ಈ ನಡುವೆ, ಇಂದಿನಿಂದ (ಮೇ 7) ಆರು ದಿನ ಕರ್ನಾಟಕದಲ್ಲಿ ವ್ಯಾಪಕವಾಗಿ ಮಳೆಯಾಗಲಿದೆ ಎಂಬ ಮುನ್ಸೂಚನೆಯನ್ನು ಮಳೆ ಮುನ್ಸೂಚನೆ ವರದಿ ನೀಡಿದೆ.
ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದ ಮಳೆಯಾಗಬಹುದು. ವಿಶೇಷವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಒಂದೆರಡು ಕಡೆ ಚದುರಿದ ಮಳೆಯಾಗಬಹುದು. ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಮಳೆಯ ಸುಳಿವು ಕಡಿಮೆ. ತಾಪಮಾನ ಹೆಚ್ಚಳ ಮತ್ತು ಆರ್ದ್ರತೆ ಇರುವ ಕಾರಣ ಸೆಖೆ ಹೆಚ್ಚು.
ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಒಂದೆರಡು ಕಡೆ ಹಗುರ ಚದುರಿದ ಮಳೆಯಾಗಬಹುದು. ವಿಶೇಷವಾಗಿ ರಾಯಚೂರು, ಯಾದಗಿರಿಗಳಲ್ಲಿ ಈ ರೀತಿ ಮಳೆಯಾಗಬಹುದು. ಆದಾಗ್ಯೂ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಒಣಹವೆ ಮುಂದುವರಿಯಲಿದೆ. ತಾಪಮಾನ ಹೆಚ್ಚಳ, ಬಿಸಿಲ ಝಳ ಇರಲಿದೆ.
ಇನ್ನು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಬಹುತೇಕ ಕಡೆ ಇಂದು (ಮೇ 7) ಮಳೆಯಾಗಲಿದೆ. ವಿಶೇಷವಾಗಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ,ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಕೆಲವು ಕಡೆ ಸಾಧಾರಣ ಮಳೆಯಾಗಲಿದೆ. ಈ ಪೈಕಿ ಕೆಲವೆಡೆ ಗುಡುಗು ಮಿಂಚು ಸಹಿತ ಮಳೆಯಾಗಬಹುದು.
ಶಾಖದ ಅಲೆಗಳ ಮುನ್ನೆಚ್ಚರಿಕೆ, ಆರೆಂಜ್ ಅಲರ್ಟ್
ಕರ್ನಾಟಕದ ಉದ್ದಗಲಕ್ಕೂ ಉಷ್ಣಾಂಶ ಹೆಚ್ಚಳವಾಗಿದ್ದು, ಒಣಹವೆ ಇದೆ. ಇಂದು (ಮೇ7) ಬೀದರ್, ಬೆಳಗಾವಿ, ಧಾರವಾಡ, ಗದಗ, ಕಲಬುರಗಿ, ಹಾವೇರಿ, ಕೊಪ್ಪಳ, ಯಾದಗಿರಿ, ರಾಯಚೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ತುಮಕೂರು, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಶಾಖದ ಅಲೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಮುನ್ಸೂಚನೆ ವರದಿ ಹೇಳಿದೆ. ಈ ನಡುವೆ, ವಿಜಯನಗರ, ಬಳ್ಳಾರಿ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಬೀದರ್, ಬಾಗಲಕೋಟೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಇದನ್ನೂ ವೀಕ್ಷಿಸಿ| ಕರ್ನಾಟಕದಲ್ಲಿ ರಣಬಿಸಿಲು, ಶಾಖದ ಅಲೆಯಿಂದ ರಕ್ಷಣೆಗೆ 7 ಸಲಹೆಗಳು - ವಿಡಿಯೋ
ಬೆಂಗಳೂರು ಹವಾಮಾನ ಇಂದು (ಮೇ 7), ಗರಿಷ್ಠ 37 ಡಿಗ್ರಿ ಸೆಲ್ಶಿಯಸ್ ಕನಿಷ್ಠ 24 ಡಿಗ್ರಿ ಸೆಲ್ಶಿಯಸ್
ಬೆಂಗಳೂರು ನಗರದಲ್ಲಿ ಇಂದು (ಮೇ 7) ಗರಿಷ್ಠ ತಾಪಮಾನವು 37 ಡಿಗ್ರಿ ಸೆಲ್ಶಿಯಸ್ ಕನಿಷ್ಠ 24 ಡಿಗ್ರಿ ಸೆಲ್ಶಿಯಸ್ ದಾಖಲಾಗಬಹುದು. ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಕೆಲವು ಕಡೆ ಗುಡುಗು ಮಿಂಚು ಸಹಿತ ಮಳೆ ಬೀಳಬಹುದು ಎಂದು ಬೆಂಗಳೂರು ಹವಾಮಾನ ಕೇಂದ್ರದ ಮುನ್ಸೂಚನಾ ವರದಿ ತಿಳಿಸಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಕೂಡ ಗರಿಷ್ಠ 37 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ 24 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ಇರಬಹುದು. ನಿನ್ನೆ (ಮೇ 6) ಬೆಂಗಳೂರು ನಗರ ಜಿಲ್ಲೆಯ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ಉಷ್ಣಾಂಶ 24.2 ಡಿಗ್ರಿ ಸೆಲ್ಶಿಯಸ್ ದಾಖಲಾಗಿತ್ತು.
ಇದೇ ರೀತಿ ಬೆಂಗಳೂರು ಗ್ರಾಮಾಂತರದಲ್ಲಿ ಕೂಡ ಉಷ್ಣಾಂಶ ಗರಿಷ್ಠ 37 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ 24 ಡಿಗ್ರಿ ಸೆಲ್ಶಿಯಸ್ ಅಂದಾಜಿಸಲಾಗಿದೆ. ನಿನ್ನೆ (ಮೇ 6) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಶಿಯಸ್, ಕನಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಶಿಯಸ್ ಇತ್ತು ಎಂದು ಬೆಂಗಳೂರು ಹವಾಮಾನ ಕೇಂದ್ರದ ವರದಿ ಹೇಳಿದೆ.
ಪ್ರಮುಖ ನಗರಗಳ ತಾಪಮಾನ
ಭಾರತೀಯ ಹವಾಮಾನ ಇಲಾಖೆಯ ದತ್ತಾಂಶ ಪ್ರಕಾರ, ಕರ್ನಾಟಕದ ಪ್ರಮುಖ ನಗರಗಳಲ್ಲಿ ಇಂದು (ಮೇ 7 ) ಬೆಳಗ್ಗೆ 6 ಗಂಟೆಗೆ ದಾಖಲಾಗಿರುವ ತಾಪಮಾನಗಳ ವಿವರ.
ಬೆಂಗಳೂರು – 22.4 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 88)
ಮಂಗಳೂರು – 29 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 79)
ಚಿತ್ರದುರ್ಗ – 30.4 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 85)
ಗದಗ – 26.2 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 79)
ಹೊನ್ನಾವರ – 29.8 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 71)
ಕಲಬುರಗಿ – 33.2 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 27)
ಬೆಳಗಾವಿ – 25 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 89)
ಕಾರವಾರ – 36.6 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 61 )
----------------------
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
(This copy first appeared in Hindustan Times Kannada website. To read more like this please logon to kannada.hindustantimes.com)