logo
ಕನ್ನಡ ಸುದ್ದಿ  /  Latest News  /  Karnataka Kannada Live News Updates December 8 12 2022
ಇಂದು ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶ

December 8 Kannada News Updates: ಗುಜರಾತ್ ಗೆ ಕಮಲ, ಹಿಮಾಚಲ ಪ್ರದೇಶದಲ್ಲಿ ಅಭಯ 'ಹಸ್ತ'

Dec 08, 2022 02:45 PM IST

ರಾಜ್ಯ, ದೇಶ ಹಾಗೂ ವಿದೇಶದ ಎಲ್ಲಾ ಬ್ರೇಕಿಂಗ್‌ ಸುದ್ದಿಗಳು ಇಲ್ಲಿ ಲಭ್ಯ. ಪ್ರತಿ ಕ್ಷಣದ ನಿಖರ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

Dec 08, 2022 10:29 PM IST

ಗುಜರಾತ್‌ನಲ್ಲಿ ಬಿಜೆಪಿಗೆ ದಿಗ್ವಿಜಯ

ಒಟ್ಟು 182 ಸದಸ್ಯ ಬಲದ ಗುಜರಾತ್‌ ವಿಧಾನಸಭೆಯಲ್ಲಿ, ಬಹುಮತಕ್ಕೆ ಬೇಕಾಗಿರುವುದು 92 ಕ್ಷೇತ್ರಗಳಲ್ಲಿ ಗೆಲುವು. 

ಆದರೆ, ಇಂದು ಮತ ಎಣಿಕೆ ಆರಂಭವಾದಾಗಿನಿಂದ ಬಿಜೆಪಿಯು ಭಾರಿ ಮುನ್ನಡೆ ಕಾಯ್ದುಕೊಂಡು ಬಂದಿತ್ತು. 

ಅಂತಿಮವಾಗಿ ಒಟ್ಟು 156 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ರಾಜ್ಯದಲ್ಲಿ ಗದ್ದುಗೆ ಉಳಿಸಿಕೊಂಡಿದೆ. 

ಸತತ ಏಳು ಬಾರಿ ರಾಜ್ಯವೊಂದರ ವಿಧಾನ ಸಭೆಯನ್ನು ಗೆಲ್ಲುವ ಮೂಲಕ, ಪಶ್ಚಿಮ ಬಂಗಾಳದ ಎಡರಂಗದ ಸರ್ಕಾರದ ಸಾಧನೆಯನ್ನು ಗುಜರಾತ್‌ ಬಿಜೆಪಿ ಸರಿಗಟ್ಟಿದೆ.

Dec 08, 2022 07:59 PM IST

ಹಿಮಾಚಲ ಪ್ರದೇಶದಲ್ಲಿ ಕೈ ಪಕ್ಷಕ್ಕೆ ಗೆಲುವು

ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಮತ ಎಣಿಕೆ ಮುಕ್ತಾಯವಾಗಿದೆ. 

ಕಾಂಗ್ರೆಸ್ 40 ಕ್ಷೇತ್ರಗಳಲ್ಲಿ ಗೆದ್ದು ಬಹುಮತ ಸಾಬೀತುಪಡಿಸಿದೆ.

ಬಿಜೆಪಿ 25 ಮತ್ತು ಸ್ವತಂತ್ರ ಅಭ್ಯರ್ಥಿಗಳು 3 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.

Dec 08, 2022 07:12 PM IST

ಹಿಮಾಚಲ ಪ್ರದೇಶದ ಸಿಎಂ ಜೈರಾಮ್ ಠಾಕೂರ್  ರಾಜೀನಾಮೆ

ಹಿಮಾಚಲ ಪ್ರದೇಶದ ನಿರ್ಗಮಿತ ಸಿಎಂ ಜೈರಾಮ್ ಠಾಕೂರ್ ಅವರು ರಾಜ್ಯಪಾಲ ಆರ್‌ ವಿ ಅರ್ಲೇಕರ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

 

Dec 08, 2022 07:10 PM IST

ಪಕ್ಷದ ಬೆಂಬಲಿಗರಿಗೆ ಪ್ರಧಾನಿ ಮೋದಿ ಶುಭಾಶಯ

ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು

ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಕ್ಷದ ಬೆಂಬಲಿಗರಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ

Dec 08, 2022 06:22 PM IST

ಪ್ರಧಾನಿ ಮೋದಿ ಟ್ವೀಟ್‌

ಅಂತಿಮ ಫಲಿತಾಂಶ ಹೊರಬೀಳುವುದಕ್ಕೂ ಮುಂಚೆ, ಗೆಲುವು ಖಚಿತಪಡಿಸಿಕೊಂಡ ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದಾರೆ. ಗುಜರಾತ್ ರಾಜ್ಯದಲ್ಲಿ ಪಕ್ಷದ ಗೆಲುವಿಗೆ ಶ್ರಮವಹಿಸಿದ ಎಲ್ಲಾ ಬಿಜೆಪಿ ಕಾರ್ಯಕರ್ತರಿಗೆ ನಾನು ಇಷ್ಟು ಹೇಳಲು ಬಯಸುತ್ತೇನೆ. ನೀವು ಪ್ರತಿಯೊಬ್ಬರೂ ಚಾಂಪಿಯನ್! ನಮ್ಮ ಪಕ್ಷದ ನಿಜವಾದ ಶಕ್ತಿಯಾಗಿರುವ ನಮ್ಮ ಕಾರ್ಯಕರ್ತರ ಅಸಾಧಾರಣ ಪರಿಶ್ರಮವಿಲ್ಲದೆ ಈ ಐತಿಹಾಸಿಕ ಗೆಲುವು ಎಂದಿಗೂ ಸಾಧ್ಯವಿಲ್ಲ ಎಂದು ಪ್ರಧಾನಿ ಟ್ವೀಟ್‌ ಮಾಡಿದ್ದಾರೆ.

Dec 08, 2022 05:09 PM IST

ಹಿಮಾಚಲದಲ್ಲಿ ಕೈ ಗೆಲುವು ಪಕ್ಕಾ

ಬಹುಮತ ದಾಟಿದ ಕಾಂಗ್ರೆಸ್‌

ಕೈ ಪಕ್ಷದ ಗೆಲುವು ಖಚಿತ

ಕೆಲವೇ ಕ್ಷಣದಲ್ಲಿ ಅಂತಿಮ ಫಲಿತಾಂಶ

Dec 08, 2022 04:11 PM IST

ಗುಜರಾತ್‌ನ ಎಐಸಿಸಿ ಉಸ್ತುವಾರಿ ರಘು ಶರ್ಮಾ ರಾಜೀನಾಮೆ

ಚುನಾವಣೆಯಲ್ಲಿ ಪಕ್ಷದ ಕಳಪೆ ಪ್ರದರ್ಶನ

ಗುಜರಾತ್‌ನ ಎಐಸಿಸಿ ಉಸ್ತುವಾರಿ ರಘು ಶರ್ಮಾ ರಾಜೀನಾಮೆ

ಪಕ್ಷದ ಹೀನಾಯ ಸೋಲಿನ ಬಳಿಕ ರಾಜೀನಾಮೆ ನೀಡಿದ ನಾಯಕ

ರಾಜ್ಯದಲ್ಲಿ ಚೊಚ್ಚಲ ಚುನಾವಣೆಯಲ್ಲೇ ಸುಮಾರು 13% ಮತಗಳನ್ನು ಪಡೆದ ಆಮ್ ಆದ್ಮಿ ಪಕ್ಷವು (ಎಎಪಿ).

ಹೀಗಾಗಿ ಕಾಂಗ್ರೆಸ್‌ ಪಕ್ಷದ ಮತಗಳ ಪ್ರಮಾಣವು ಕೇವಲ 27%ಕ್ಕೆ ಕುಸಿತ.

Dec 08, 2022 03:06 PM IST

ಗುಜರಾತ್‌ ಸಿಎಂ ಆಗಿ ಭೂಪೇಂದ್ರ ಪಟೇಲ್ ಮುಂದುವರಿಕೆ

ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಪ್ರಚಂಡ ವಿಜಯ ಸಾಧಿಸಲು ಆಡಳಿತಾರೂಢ ಬಿಜೆಪಿ ಸಜ್ಜಾಗಿದೆ. 

ಈಗಾಗಲೇ ಬಹುಮತದ ಗಡಿ ದಾಟಿರುವ ಬಿಜೆಪಿ, ಗೆಲ್ಲುವುದು ಖಚಿತವಾಗಿದೆ.

ಈ ನಡುವೆ ಹೊಸ ವಿಧಾಸಭಾ ಅವಧಿಗೆ ಪದಗ್ರಹಣದ ಮುಹೂರ್ತ ಕೂಡಾ ನಿಗದಿಯಾಗಿದೆ.

ಹಾಲಿ ಸಿಎಂ ಭೂಪೇಂದ್ರ ಪಟೇಲ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಪಕ್ಷ ಘೋಷಿಸಿದೆ. 

ಇದೇ ಡಿಸೆಂಬರ್ 12ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಹಾಲಿ ಸಿಎಂ ಭೂಪೇಂದ್ರ ಪಟೇಲ್ ಮತ್ತೊಂದು ಅವಧಿಗೆ ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸಿ ಆರ್ ಪಾಟೀಲ್ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Dec 08, 2022 02:45 PM IST

ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶ

ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶ

ಕಾಂಗ್ರೆಸ್‌ ಮುನ್ನಡೆ

10ರಲ್ಲಿ ಗೆದ್ದು 29 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ ಕಾಂಗ್ರೆಸ್.

ಬಿಜೆಪಿ 9ರಲ್ಲಿ ಗೆದ್ದು, 17ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

Dec 08, 2022 02:43 PM IST

ಮಹಾರಾಷ್ಟ್ರದ ವಾಹನಕ್ಕೆ ಮಸಿ ಎರಚಿ ಆಕ್ರೋಶ

ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ

ಗದಗ ಜಿಲ್ಲೆಯಲ್ಲಿ ಮಹಾರಾಷ್ಟ್ರದ ವಿರುದ್ಧ ಪ್ರತಿಭಟನೆ 

ಕನ್ನಡ ಪರ ಸಂಘಟನೆ ಕಾರ್ಯಕರ್ತರಿದ ಮಹಾರಾಷ್ಟ್ರದ ವಾಹನಕ್ಕೆ ಮಸಿ ಎರಚಿ ಆಕ್ರೋಶ

ನಿನ್ನೆಯಷ್ಟೇ ಕರ್ನಾಟಕ ಸಾರಿಗೆ ವಾಹನಕ್ಕೆ ಮಸಿ ಬಳಿದಿದ್ದ ಮಹಾರಾಷ್ಟ್ರ ಪುಂಡರು 

Dec 08, 2022 01:00 PM IST

ಜಾತಿ, ಧರ್ಮ ಆಧಾರಿತ ರಾಜಕೀಯ  ಲೆಕ್ಕಾಚಾರ ಬುಡಮೇಲು-ಮಾಜಿ ಸಿಎಂ ಬಿಎಸ್ವೈ

ಗುಜರಾತ್‌ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಹೊರಬರುತ್ತಿರುವ ಚುನಾವಣಾ ಫಲಿತಾಂಶಗಳು ಜಾತಿ ಮತ್ತು ಧರ್ಮ ಆಧಾರಿತ ರಾಜಕೀಯ ಬುಡಮೇಲು ಮಾಡಿದೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ. 

ಎರಡು ರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿರುವ ಅವರು, ಈ ಎರಡೂ ರಾಜ್ಯಗಳ ಮತದಾರರು ಜಾತಿ ಮತ್ತು ಧರ್ಮ ಆಧಾರಿತ ರಾಜಕೀಯ ಲೆಕ್ಕಾಚಾರಗಳನ್ನು ಮೀರಿ ರಾಜ್ಯದ ಹಾಗೂ ದೇಶದ ಅಭಿವೃದ್ಧಿ ಮುಖ್ಯ ಎಂಬುದನ್ನು ಎತ್ತಿ ತೋರಿಸಿದ್ದಾರೆ. ಇದಕ್ಕಾಗಿ ನಾನು ಆ ರಾಜ್ಯಗಳ ಜನತೆಯನ್ನು ಹಾಗೂ ಮತದಾರರನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ. 

Dec 08, 2022 12:57 PM IST

ಗುಜರಾತ್ ಚುನಾವಣಾ ಫಲಿತಾಂಶ: ಸುಶಾಸನದ ಫಲ: ಸಿಎಂ ಬೊಮ್ಮಾಯಿ

ಬೆಂಗಳೂರು: ಗುಜರಾತ್ ಚುನಾವಣಾ ಫಲಿತಾಂಶ ಸುಶಾಸನದ ಫಲ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಲಲಿತ್ ಅಶೋಕ್ ಹೋಟೆಲ್ ಬಳಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿರುವ ಸಿಎಂ, ಬಿಜೆಪ ಮುನ್ನಡೆಯಲ್ಲಿದ್ದು, ಈ ಬಾರಿಯೂ ಗುಜರಾತ್ ನಲ್ಲಿ ಅಭೂತಪೂರ್ವ ಗೆಲುವು ಸಾಧಿಸುತ್ತಿದೆ. ಕಳೆದ ಎಲ್ಲ ಚುನಾವಣೆ ಗಳಿಗಿಂತ ಅತಿ ಹೆಚ್ಚು ಸ್ಥಾನಗಳನ್ನು ಪಡೆದುಕೊಳ್ಳುತ್ತಿದ್ದೇವೆ. ಇದು ಚುನಾವಣೋತ್ತರ ಸಮೀಕ್ಷೆಯಲ್ಲಿಯೂ ತಿಳಿದು ಬಂದಿತ್ತು. ಒಂದು ರಾಜ್ಯದಲ್ಲಿ ಸುಶಾಸನ ತಂದರೆ ಜನ ಬೆಂಬಲ ಕೊಡುತ್ತಾರೆ. ಇದುವರೆಗೂ ದೇಶದಲ್ಲಿ ಆಡಳಿತ ವಿರೋಧ ಟ್ರೆಂಡ್ ಇತ್ತು. ಗುಜರಾತ್ ಆಡಳಿತದ ಪರವಾಗಿದೆ ಎಂದು ನಿರೂಪಿಸಿದೆ. 7ನೇ ಬಾರಿ ಗೆಲ್ಲುತ್ತಿರುವುದು ಸುಲಭದ ಮಾತಲ್ಲ. ಆಡಳಿತದ ಪರವಾಗಿ ಜನ ನಿಲ್ಲಲು ಸರ್ಕಾರಗಳು ಕೆಲಸ ಮಾಡಬೇಕಾಗುತ್ತದೆ. ಆ ಕೆಲಸವನ್ನು ಗುಜರಾತ್ ಸರ್ಕಾರ ಮಾಡಿದೆ ಎಂದು ಹೇಲಿದ್ದಾರೆ.

Dec 08, 2022 12:37 PM IST

ಹಿಮಾಚಲ ಕಾಂಗ್ರೆಸ್ ಸಿಎಂ ಆಕಾಂಕ್ಷಿಗಳಲ್ಲಿ ಪ್ರತಿಭಾ ವೀರಭದ್ರ ಸಿಂಗ್ ಒಬ್ಬರು - ವಿಕ್ರಮಾದಿತ್ಯ ಸಿಂಗ್

ಹಿಮಾಚಲಪ್ರದೇಶದಲ್ಲಿ ನಾವು ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುತ್ತೇವೆ. ನಮ್ಮ ಸರ್ಕಾರವು 5 ವರ್ಷಗಳವರೆಗೆ ಇರುತ್ತದೆ. ಪ್ರತಿಭಾ ವೀರಭದ್ರ ಸಿಂಗ್ ಅವರು ಮುಖ್ಯಮಂತ್ರಿ ಸ್ಥಾನದ ಸ್ಪರ್ಧಿಗಳಲ್ಲಿ ಒಬ್ಬರು ಎಂದು ಕಾಂಗ್ರೆಸ್ ನಾಯಕ ವಿಕ್ರಮಾದಿತ್ಯ ಸಿಂಗ್ ಹೇಳಿದ್ದಾರೆ. 

Dec 08, 2022 12:14 PM IST

ಹಿಮಾಚಲಕ್ಕೆ ಅಭಯ  ‘ಹಸ್ತ’!

ಹಿಮಾಚಲ ಪ್ರದೇಶದಲ್ಲೂ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇದೆ. ಈವರೆಗಿನ ಮಾಹಿತಿ ಪ್ರಕಾರ ಕಾಂಗ್ರೆಸ್ 37 ರಲ್ಲಿ ಮುನ್ನಡೆಯಲ್ಲಿದ್ದರೆ, ಬಿಜೆಪಿ 28 ಹಾಗೂ ಇತರೆ 3 ಕ್ಷೇತ್ರಗಳಲ್ಲಿ ಮುಂದಿದಿದ್ದಾರೆ. 

Dec 08, 2022 12:10 PM IST

ಗುಜರಾತ್ ನಲ್ಲಿ ಮತ್ತೆ ಅರಳಿದ ಕಮಲ!

ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ತವರು ರಾಜ್ಯವನ್ನು ಉಳಿಸಿಕೊಳ್ಳುವಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ. ಪ್ರಸ್ತುತ ವರದಿ ಪ್ರಕಾರ ಬಿಜೆಪಿ 155, ಕಾಂಗ್ರೆಸ್ 18, ಎಎಪಿ 6, ಇತರೆ-3 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ. 

Dec 08, 2022 11:29 AM IST

ಹಿಮಾಚಲದಲ್ಲಿ ಕಾಂಗ್ರೆಸ್ 37 ಕ್ಷೇತ್ರಗಳಲ್ಲಿ ಮುನ್ನಡೆ

ಚುನಾವಣಾ ಆಯೋಗದ ಪ್ರಕಾರ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ 37 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. 1ರಲ್ಲಿ ಗೆಲುವು ದಾಖಲಿಸಿದೆ. ಇಲ್ಲಿ ಒಟ್ಟು 68 ಕ್ಷೇತ್ರಗಳ ಪೈಕಿ ಗೆಲುವಿನ ಮ್ಯಾಜಿಕ್ ಸಂಖ್ಯೆ 35 ಆಗಿದೆ. 

Dec 08, 2022 10:58 AM IST

ಗುಜರಾತ್ ಮಾದರಿಯನ್ನು ಜನರು ಸ್ವೀಕರಿಸಿದ್ದಾರೆ - ಪ್ರಹ್ಲಾದ್ ಜೋಶಿ

ಗುಜರಾತ್ ಮಾದರಿಯನ್ನು 2000-2001 ರಿಂದ ಜನರು ಅನುಮೋದಿಸಿದ್ದಾರೆ ಮತ್ತು ಸ್ವೀಕರಿಸಿದ್ದಾರೆ. ದೇಶದ ಮುಂದೆ ನಾವು ಪ್ರಸ್ತುತಪಡಿಸುತ್ತಿರುವ ಮಾದರಿಯನ್ನು ಸ್ವೀಕರಿಸಲಾಗುತ್ತಿದೆ. ನಾನು ಗುಜರಾತ್ ಜನತೆ ಮತ್ತು ಬಿಜೆಪಿಯನ್ನು ಅಭಿನಂದಿಸುತ್ತೇನೆ. ಇದು ಮತದಾನ ಇತಿಹಾಸದಲ್ಲಿ ಇದುವರೆಗಿನ ಅತಿದೊಡ್ಡ ದಾಖಲೆಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. 

Dec 08, 2022 10:52 AM IST

ಹಿಮಾಚಲದಲ್ಲಿ ಕಾಂಗ್ರೆಸ್-ಬಿಜೆಪಿ ಸಮಬಲ

ಹಿಮಾಚಲ ವಿಧಾನಸಭೆ ಚುನಾವಣೆಯ ಮತ ಎಣಿಕೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 32 ಕ್ಷೇತ್ರಗಳಲ್ಲಿ ಮುನ್ನಡೆ ಮೂಲಕ ಸಮಬಲ ಸಾಧಿಸಿವೆ. 

Dec 08, 2022 10:22 AM IST

ಗುಜರಾತ್ ನಲ್ಲಿ ಬಿಜೆಪಿ ಸಂಭ್ರಮಾಚರಣೆ ಶುರು

ಗುಜರಾತ್ ವಿಧಾನಸಭೆ ಚುನಾವಣೆಯ ಮತಎಣಿಕೆ ಪ್ರಗತಿಯಲ್ಲಿದ್ದು, ಬಿಜೆಪಿ ಗೆಲುವು ಬಹುತೇಕ ಖಚಿತವಾಗಿದೆ. ಭಾರೀ ಮುನ್ನಡೆ ಕಾಯ್ದುಕೊಂಡಿರುವ ಹಿನ್ನೆಲೆಯಲ್ಲಿ ಕೇಸರಿ ಪಕ್ಷದ ಕಾರ್ಯಕರ್ತರಲ್ಲಿ ಸಂಭ್ರಮಾಚರಣೆ ಮನೆ ಮಾಡಿದೆ. 

ಗಾಂಧಿನಗರದ ಬಿಜೆಪಿ ಕಚೇರಿಯಾದ 'ಶ್ರೀ ಕಮಲಂ'ನಲ್ಲಿ ಕಾರ್ಯಕರ್ತರು ಜಮಾಯಿಸುತ್ತಿದ್ದು, ಸಂಭ್ರಮಾಚರಣೆ ಮಾಡುತ್ತಿದ್ದಾರೆ. 

ಚುನಾವಣಾ ಆಯೋಗದ ಪ್ರಕಾರ ಬಿಜೆಪಿ-144, ಕಾಂಗ್ರೆಸ್-20, ಎಎಪಿ-6 ಮತ್ತು ಇತರೆ-5 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. 

Dec 08, 2022 09:54 AM IST

ಮುನ್ನಡೆಯ ಅಂತರ ಹೆಚ್ಚಿಸಿಕೊಂಡ ಬಿಜೆಪಿ

ಗುಜರಾತ್ ನಲ್ಲಿ ಮುನ್ನಡೆಯ ಅಂತರವನ್ನು ಹೆಚ್ಚಿಸಿಕೊಂಡಿರುವ ಬಿಜೆಪಿ 138 ಕ್ಷೇತ್ರಗಳಲ್ಲಿ ಮುನ್ನುಗ್ಗುತ್ತಿದೆ. ಕಾಂಗ್ರೆಸ್ 21 ಹಾಗೂ ಎಎಪಿ 11 ಕ್ಷೇತ್ರಗಳಲ್ಲಿ ಮುಂದೆ ಸಾಗುತ್ತಿದೆ.

Dec 08, 2022 09:45 AM IST

ಎಸ್‌ಪಿ ಅಭ್ಯರ್ಥಿ ಡಿಂಪಲ್ ಯಾದವ್ ಗೆ ಮುನ್ನಡೆ

ಉತ್ತರ ಪ್ರದೇಶದ ಮೈನ್‌ಪುರಿ ಲೋಕಸಭಾ ಉಪಚುನಾವಣೆ ಮತಎಣಿಕೆ ಪ್ರಗತಿಯಲ್ಲಿದ್ದು, ಎಸ್‌ಪಿ ಅಭ್ಯರ್ಥಿ ಡಿಂಪಲ್ ಯಾದವ್ ಇಲ್ಲಿಯವರೆಗೆ 16,933 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

Dec 08, 2022 09:41 AM IST

ಹಿಮಾಚಲ ಪ್ರದೇಶದಲ್ಲಿ ಮತ್ತೆ ಅರಳುತ್ತಾ ಕಮಲ?

ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ 28 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಕಾಂಗ್ರೆಸ್ 21 ಕ್ಷೇತ್ರಗಳಲ್ಲಿ ಮುಂದೆ ಇದೆ ಎಂದು ಹೇಳಿದೆ. 

Dec 08, 2022 09:32 AM IST

ಹಿಮಾಚಲದಲ್ಲೂ ಬಿಜೆಪಿಗೆ ಮುನ್ನಡೆ

ಹಿಮಾಚಲ ಪ್ರದೇಶದಲ್ಲೂ ಬಿಜೆಪಿ ಮುನ್ನಡೆ ಪಡೆದಿದೆ. 26 ಕ್ಷೇತ್ರದಲ್ಲಿ ಕೇಸರಿ ಪಕ್ಷ ಹಾಗೂ 25 ರಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದೆ. 

Dec 08, 2022 09:29 AM IST

ಗುಜರಾತ್ ನಲ್ಲಿ ಬಿಜೆಪಿ ಮುನ್ನಡೆಯ ಪ್ರಮಾಣ ಹೆಚ್ಚಳ

ಗುಜರಾತ್ ನಲ್ಲಿ ಬಿಜೆಪಿ 101, ಕಾಂಗ್ರೆಸ್ 19 ಹಾಗೂ ಎಎಪಿ 6 ಹಾಗೂ ಇತರರು 2 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ. 

Dec 08, 2022 09:19 AM IST

ಹಿಮಾಚಲಪ್ರದೇಶದಲ್ಲಿ ಕಾಂಗ್ರೆಸ್-ಬಿಜೆಪಿ ಸಮಬಲದ ಪೈಪೋಟಿ

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸಮಬಲದ ಪೈಪೋಟಿ ಎದುರಾಗಿದೆ. ಕಾಂಗ್ರೆಸ್ 11 ಹಾಗೂ ಬಿಜೆಪಿ 10 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ. 

Dec 08, 2022 09:16 AM IST

ಗುಜರಾತ್ ನಲ್ಲಿ ಬಿಜೆಪಿ ಮುನ್ನಡೆ ಸ್ಥಾನಗಳ ಸಂಖ್ಯೆ ಹೆಚ್ಚಳ

ಗುಜರಾತ್ ನಲ್ಲಿ ಬಿಜೆಪಿ 52, ಕಾಂಗ್ರೆಸ್ 10 ಹಾಗೂ ಎಎಪಿ 5 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. 

Dec 08, 2022 08:59 AM IST

ಕಾಂಗ್ರೆಸ್ 2, ಎಎಪಿ 1 ಕ್ಷೇತ್ರಗಳಲ್ಲಿ ಮುನ್ನಡೆ

ಗುಜರಾತ್ ನಲ್ಲಿ ಬಿಜೆಪಿ 16, ಕಾಂಗ್ರೆಸ್ 2, ಎಎಪಿ 1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿವೆ. 

Dec 08, 2022 08:50 AM IST

ಹಿಮಾಚಲದಲ್ಲಿ ಕಾಂಗ್ರೆಸ್ ಗೆ ಮುನ್ನಡೆ

ಹಿಮಾಚಲ ಪ್ರದೇಶದ 23 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ. 

Dec 08, 2022 08:43 AM IST

3 ದಶಕಗಳಿಂದ ಗುಜರಾತ್ ನಲ್ಲಿ ಬಿಜೆಪಿಯದ್ದೇ ಅಧಿಕಾರ

ಕಳೆದ 27 ವರ್ಷಗಳಿಂದ ಗುಜರಾತ್‌ನಲ್ಲಿ ಬಿಜೆಪಿ ಅಧಿಕಾರದಲ್ಲಿದೆ. 182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಿದೆ. ಎಎಪಿ ಈ ಬಾರಿ ಬಿಜೆಪಿಗೆ ಶಾಕ್ ನೀಡುತ್ತಾ ಅನ್ನೋದು ಬೆಳಗ್ಗೆ 11 ಗಂಟೆ ನಂತರ ಸ್ಪಷ್ಟವಾಗಲಿದೆ.

ಎಕ್ಸಿಟ್ ಪೋಲ್‌ಗಳನ್ನು ನಂಬುವುದಾದರೆ, ಗುಜರಾತ್‌ನಲ್ಲಿ ಬಿಜೆಪಿ ಗೆಲುವಿನ ನಗೆ ಬೀರಲಿದೆ. ಎಎಪಿ ಎರಡಂಕಿ ಮೀರುವುದಿಲ್ಲ ಎಂದು ಭವಿಷ್ಯ ನುಡಿದಿದೆ. ಆ ಭವಿಷ್ಯ ಏನಾಗುತ್ತೆ ಎಂಬುದು ಕಾದು ನೋಡಬೇಕಿದೆ. 

ದೆಹಲಿ ಮುನ್ಸಿಪಾಲಿಟಿಯಲ್ಲಿ ಮೊದಲ ಬಾರಿಗೆ ಗೆಲುವಿನ ಮೇಲೆ ಸವಾರಿ ಮಾಡುತ್ತಿರುವ ಎಎಪಿ ಗುಜರಾತ್‌ನಲ್ಲಿ ಚೊಚ್ಚಲ ಗೆಲುವಿನ ಸಂಭ್ರಮಕ್ಕಾಗಿ ಎದುರು ನೋಡುತ್ತಿದೆ. 

Dec 08, 2022 08:46 AM IST

ಗುಜರಾತ್ ಸಿಎಂಗೆ ಮುನ್ನಡೆ

ಗುಜರಾತ್ ಚುನಾವಣಾ ಫಲಿತಾಂಶ 2022 ಲೈವ್: ಭೂಪೇಂದ್ರ ಪಟೇಲ್, ಹಾರ್ದಿಕ್ ಪಟೇಲ್, ಇಸುಡಾನ್ ಆರಂಭದಲ್ಲೇ ಮುನ್ನಡೆಯಲ್ಲಿದ್ದಾರೆ. 

Dec 08, 2022 08:08 AM IST

ಗುಜರಾತ್, ಹಿಮಾಚಲ ಪ್ರದೇಶ ಚುನಾವಣಾ ಮತಎಣಿಕೆ ಆರಂಭ

ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ಮತಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ. ಮೊದಲಿಗೆ ಅಂಚೆ ಮತಗಳನ್ನು ಪರಿಗಣಿಸಲಾಗುತ್ತದೆ.

Dec 08, 2022 07:55 AM IST

5 ರಾಜ್ಯಗಳ 6 ವಿಧಾನಸಭೆ, 1 ಲೋಕಸಭಾ ಕ್ಷೇತ್ರಗಳ ಫಲಿತಾಂಶ ಇದೇ ಪ್ರಕಟ

ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಫಲಿತಾಂಶದ ಜೊತೆಗೆ ಇಂದು 5 ರಾಜ್ಯಗಳ ಆರು ವಿಧಾನಸಭೆಗಳು ಹಾಗೂ ಉತ್ತರ ಪ್ರದೇಶದ 1 ಲೋಕಸಭಾ ಕ್ಷೇತ್ರದ ಉಪ ಚುನಾವಣಾ ಫಲಿತಾಂಶ ಕೂಡ ಇದೇ ಹೊರಬೀಳಲಿದೆ. 

Dec 08, 2022 07:44 AM IST

ಬೆಳಗ್ಗೆ 8 ರಿಂದ ಮತಎಣಿಕೆ ಆರಂಭ

ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಬೆಳಗ್ಗೆ 7.30ಕ್ಕೆ ಸ್ಟ್ರಾಂಟ್ ರೂಮ್ ಗಳನ್ನು ತರೆಯಲಾಗಿದೆ. ಬೆಳಗ್ಗೆ 8 ರಿಂದ ಮತಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ. ಮೊದಲಿಗೆ ಅಂಚೆ ಮತಗಳನ್ನು ಪರಿಗಣಿಸಲಾಗುತ್ತದೆ. 

Dec 08, 2022 07:41 AM IST

ಕೆಲಸ ಮಾಡಿದವರು ಮುಂದೆ ಆಡಳಿತಕ್ಕೆ ಬರುತ್ತೆ - ಹಾರ್ದಿಕ್ ಪಟೇಲ್

ಸರ್ಕಾರ ಮಾಡಿರುವ ಕೆಲಸದ ಆಧಾರದ ಮೇಲೆ ಮುಂದಿನ ಸರ್ಕಾರ ರಚನೆಯಾಗುತ್ತಿದೆ. ಕಳೆದ 20 ವರ್ಷಗಳಲ್ಲಿ ಇಲ್ಲಿ ಯಾವುದೇ ಗಲಭೆಗಳು/ಭಯೋತ್ಪಾದಕ ದಾಳಿಗಳು ನಡೆದಿಲ್ಲ. ಬಿಜೆಪಿ ಜನರ ನಿರೀಕ್ಷೆಗಳನ್ನು ಈಡೇರಿಸಿದೆ ಎಂದು ಅವರಿಗೆ ತಿಳಿದಿದೆ. ಬಿಜೆಪಿ ಅಡಿಯಲ್ಲಿ ತಮ್ಮ ಭವಿಷ್ಯವು ಸುರಕ್ಷಿತವಾಗಿರುತ್ತದೆ ಎಂದು ಅವರು 'ಕಮಲ' ಒತ್ತಿದ್ದಾರೆ. ಇದು ಉತ್ತಮ ಆಡಳಿತದ ನಂಬಿಕೆಯನ್ನು ಬಲಪಡಿಸಿದೆ ಎಂದು ಬಿಜೆಪಿ ಅಭ್ಯರ್ಥಿ ಹಾರ್ದಿಕ್ ಪಟೇಲ್ ತಿಳಿಸಿದ್ದಾರೆ. 

Dec 08, 2022 07:08 AM IST

ಇಂದು ಗುಜರಾಜ್, ಹಿಮಾಚಲ ಚುನಾವಣಾ ಫಲಿತಾಂಶ; ಮಧ್ಯಾಹ್ನದ ವೇಳೆ ಸ್ಪಷ್ಟ ಚಿತ್ರಣ

ಪ್ರಧಾನಿ ನರೇಂದ್ರ ಮೋದಿ ಮತ್ತು ಸಚಿವ ಅಮಿತ್ ಶಾ ಅವರು ತವರು ರಾಜ್ಯ ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭೆಗಳ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದೆ. ಮಧ್ಯಾಹ್ನದ ವೇಳೆಗೆ ಸ್ಪಷ್ಟ ಫಲಿತಾಂಶ ಹೊರಬೀಳಲಿದೆ.

Dec 08, 2022 07:08 AM IST

ಮಧ್ಯಾಹ್ನ 1 ಗಂಟೆಗೆ ರಾಜ್ಯ ಸಚಿವ ಸಂಪುಟ ಸಭೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವವದಲ್ಲಿಂದು ವಿಧಾನಸೌಧದ ಸಚಿವ ಸಂಪುಟ ಸಭಾಂಗಣದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಹಲವು ಯೋಜನೆಗಳಿಗೆ ಅನುದಾನ ಬಿಡುಗಡೆ ಸೇರಿ ಮಹತ್ವದ ವಿಷಯಗಳು ಚರ್ಚೆಗೆ ಬರಲಿವೆ ಎಂದು ಹೇಳಲಾಗಿದೆ. ಮಧ್ಯಾಹ್ನ 1 ಗಂಟೆಗೆ ಸಚಿವ ಸಂಪುಟ ಸಭೆ ನಡೆಯಲಿದೆ. 

Dec 08, 2022 07:07 AM IST

ತಮಿಳುನಾಡಿನಲ್ಲಿಂದು ಭಾರಿ ಮಳೆ ನಿರೀಕ್ಷೆ; ರಾಜ್ಯಕ್ಕೆ ಎಂಟ್ರಿ ಸಾಧ್ಯತೆ

ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಚಂಡಮಾರುತವಾಗಿ ಪರಿವರ್ತನೆಯಾಗಿರುವ ಕಾರಣ ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಕರಾವಳಿಗೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹೀಗಾಗಿ ಇಂದು ತಮಿಳುನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ರಾಜ್ಯದ ಕೆಲ ಪ್ರದೇಶಗಳಲ್ಲಿ ಮಳೆ ಬೀಳುವ ಮುನ್ಸೂಚನೆ ಇದೆ.

Dec 08, 2022 07:06 AM IST

ಚಿನ್ನದ ಬೆಲೆ ಇಂದೂ ಕಡ ಏರಿಕೆ

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಇಂದು ಕೂಡ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 200 ರೂಪಾಯಿ ಏರಿಕೆಯ ಬಳಿಕ 49,550 ಹಾಗೂ 24 ಕ್ಯಾರೆಟ್ 10 ಗ್ರಾಂ ಚಿನ್ನದ ಮೇಲೆ 220 ರೂಪಾಯಿ ಹೆಚ್ಚಳದ ಬಳಿಕ 54,050 ರೂಪಾಯಿಗೆ ಬಂದು ನಿಂತಿವೆ. 1 ಕೆಜಿ ಬೆಳ್ಳಿ ಬೆಲೆಯಲ್ಲಿ 200 ರೂಪಾಯಿ ಏರಿಕೆ ನಂತರ 71,000 ರೂಪಾಯಿ ಇದೆ.

    ಹಂಚಿಕೊಳ್ಳಲು ಲೇಖನಗಳು