logo
ಕನ್ನಡ ಸುದ್ದಿ  /  ಜೀವನಶೈಲಿ  /  Yugadi 2024: ಯುಗಾದಿ ಹಬ್ಬದಂದು ದೇವರ ನೈವೇದ್ಯಕ್ಕೆ ಮಾಡಿ ಬಗೆ ಬಗೆ ಕೋಸಂಬರಿ; ಇಲ್ಲಿದೆ 2 ವಿಧದ ಕೋಸಂಬರಿ ರೆಸಿಪಿ

Yugadi 2024: ಯುಗಾದಿ ಹಬ್ಬದಂದು ದೇವರ ನೈವೇದ್ಯಕ್ಕೆ ಮಾಡಿ ಬಗೆ ಬಗೆ ಕೋಸಂಬರಿ; ಇಲ್ಲಿದೆ 2 ವಿಧದ ಕೋಸಂಬರಿ ರೆಸಿಪಿ

Reshma HT Kannada

Apr 07, 2024 07:30 AM IST

ಕೋಸಂಬರಿ

    • ಸಾಮಾನ್ಯವಾಗಿ ಹಬ್ಬಗಳಲ್ಲಿ ದೇವರಿಗೆ ನೈವೇದ್ಯಕ್ಕೆ ಕೋಸಂಬರಿ ಮಾಡುವುದು ರೂಢಿ. ಅದರಲ್ಲೂ ಹೆಸರುಬೇಳೆ ಕೋಸಂಬರಿಯಂತೂ ಎಲ್ಲರಿಗೂ ಇಷ್ಟ. ಆದರೆ ಅದರ ಜೊತೆಗೆ ಕಡಲೆಬೇಳೆ ಕೋಸಂಬರಿಯನ್ನು ತಯಾರಿಸಿ ನೋಡಿ. ಹೇಗೆ ತಯಾರಿಸೋದೂ ಅನ್ನೋರಿಗೆ ಇಲ್ಲಿದೆ ಮಾಡುವ ಕ್ರಮ.
ಕೋಸಂಬರಿ
ಕೋಸಂಬರಿ

ಕರ್ನಾಟಕದಲ್ಲಿ ಯಾವುದೇ ಹಬ್ಬ, ವಿಶೇಷ ಕಾರ್ಯಕ್ರಮಗಳಿರಲಿ, ಬಾಳೆಎಲೆಯ ತುದಿಯಲ್ಲಿ ಒಂದು ಖಾದ್ಯ ಇರಲೇಬೇಕು, ಅದುವೇ ಕೋಸಂಬರಿ. ಕೋಸಂಬರಿ ಇಲ್ಲದೇ ಊಟ, ಅಡುಗೆ ಪರಿಪೂರ್ಣವಾಗಲು ಸಾಧ್ಯವೇ ಇಲ್ಲ. ಅದರಲ್ಲೂ ಯಗಾದಿ ಹಬ್ಬಕ್ಕೆ ಕೋಸಂಬರಿ ಇಲ್ಲ ಎಂದರೆ ಹೇಗೆ ಹೇಳಿ. ಕೋಸಂಬರಿ ಸೇವನೆಯಿಂದ ಹಬ್ಬದ ಖುಷಿ ಹೆಚ್ಚುವುದು ಮಾತ್ರವಲ್ಲ, ಇದರಿಂದ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳಿವೆ. ಪ್ರೊಟೀನ್‍ಗಳಿಂದ ಸಮೃದ್ಧವಾಗಿದ್ದು, ತೂಕ ಕಡಿಮೆ ಮಾಡಲು ಬಯಸುವವರಿಗೆ ಬೆಸ್ಟ್‌. ಜೊತೆಗೆ ಬಿಸಿಲ ಬೇಗೆಯಿಂದ ಶರೀರವನ್ನು ತಂಪಾಗಿಸಲು ಮನೆಯಲ್ಲೇ ಬಹಳ ಸುಲಭವಾಗಿ ಕೋಸಂಬರಿಯನ್ನು ತಯಾರಿಸಿಕೊಳ್ಳಬಹುದು.

ಟ್ರೆಂಡಿಂಗ್​ ಸುದ್ದಿ

ಪ್ರತಿನಿತ್ಯ ಕೇವಲ 10 ನಿಮಿಷ ಧ್ಯಾನ ಮಾಡಿದ್ರೆ ಸಾಕು, ನಿಮಗೆ ಈ 10 ರೀತಿಯ ಆರೋಗ್ಯ ಲಾಭಗಳು ಸಿಗಲಿದೆ

Mango Recipe: ಇಲ್ಲಿದೆ ಮ್ಯಾಂಗೋ ಮಲೈ ಖಾಂಡ್ವಿ ರೋಲ್‌ ರೆಸಿಪಿ; ಹೆಸರಷ್ಟೇ ಅಲ್ಲ ಈ ತಿಂಡಿಯ ರುಚಿಯೂ ಡಿಫ್ರೆಂಟ್‌

ಗಂಡು ಹೆಣ್ಣಿನ ಲಿಂಗ ತಾರತಮ್ಯ ನಿವಾರಣೆಗೆ ಪೋಷಕರ ವ್ಯಕ್ತಿತ್ವ, ಆಲೋಚನಾ ಕ್ರಮ ಹೇಗಿರಬೇಕು? ಮಕ್ಕಳ ಉತ್ತಮ ಮನಸ್ಥಿತಿಗೆ ಅಗತ್ಯ ವಿಧಾನಗಳಿವು

ಹಾಲು-ಮೀನು, ಪಾಲಕ್‌-ಪನೀರ್‌ ಆಯುರ್ವೇದದ ಪ್ರಕಾರ ಯಾವೆಲ್ಲಾ ಪದಾರ್ಥಗಳನ್ನು ಒಟ್ಟಿಗೆ ಸೇವಿಸಬಾರದು, ಇದರ ಪರಿಣಾಮ ಏನಾಗುತ್ತೆ ನೋಡಿ

ಇಂತಹ ಆರೋಗ್ಯಕರ ಕೋಸಂಬರಿಯನ್ನು ಹಬ್ಬಗಳ ಸಂದರ್ಭದಲ್ಲಿ ದೇವರಿಗೆ ನೈವೇದ್ಯಕ್ಕೆ ಮಾತ್ರವಲ್ಲದೆ ಪ್ರಸಾದ ವಿತರಣೆಗಾಗಿಯೂ ತಯಾರಿಸುವುದಿದೆ. ರುಚಿಕರ, ಆರೋಗ್ಯಕರವಾದ ಹೆಸರುಬೇಳೆ-ಸೌತೇಕಾಯಿ ಕೋಸಂಬರಿಯನ್ನು ಬಹು ಬೇಗನೆ ತಯಾರಿಸಿಕೊಳ್ಳಬಹುದು. ಹೆಸರುಬೇಳೆ ಕೋಸಂಬರಿಯನ್ನೇ ತಿಂದು ಬೇಸರವೆನ್ನಿಸಿದರೆ, ಕಡ್ಲೆಬೇಳೆ ಕೋಸಂಬರಿಯನ್ನೂ ಈ ಬಾರಿ ಯುಗಾದಿ ಹಬ್ಬದಂದು ತಯಾರಿಸಿ ತಿಂದು ನೋಡಿ. ಕೋಸಂಬರಿ ತಯಾರಿಸುವ ವಿಧಾನವನ್ನು ನಾವು ತಿಳಿಸಿಕೊಡುತ್ತೇವೆ.

ಹೆಸರುಬೇಳೆ ಕೋಸಂಬರಿ

ಬೇಕಾಗುವ ಸಾಮಗ್ರಿಗಳು: ಹೆಸರುಬೇಳೆ - ಅರ್ಧ ಕಪ್‌, ಸಣ್ಣಗೆ ಹೆಚ್ಚಿಕೊಂಡ ಸೌತೆಕಾಯಿ - ಮುಕ್ಕಾಲು ಕಪ್‌, ತೆಂಗಿನಕಾಯಿ ತುರಿ - ಕಾಲು ಕಪ್‌, ಕ್ಯಾರೆಟ್‌ ತುರಿ - 4 ಚಮಚ, ಕೊತ್ತಂಬರಿ ಸೊಪ್ಪು - ಸ್ವಲ್ಪ, ಹಸಿಮೆಣಸಿನಕಾಯಿ - 1, ನಿಂಬೆಹಣ್ಣಿನ ರಸ - 1 ಚಮಚ, ಕಾಳುಮೆಣಸಿನ ಪುಡಿ - ಸ್ವಲ್ಪ, ಉಪ್ಪು - ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ: ಹೆಸರುಬೇಳೆಯನ್ನು ಚೆನ್ನಾಗಿ ತೊಳೆದುಕೊಂಡು ಸ್ವಲ್ಪ ಉಪ್ಪು ಸೇರಿಸಿ ನೀರಿನಲ್ಲಿ 1 ಗಂಟೆಗಳ ಕಾಲ ನೆನೆಯಲು ಬಿಡಿ. ನಂತರ ಆ ನೀರನ್ನು ಸೋಸಿಕೊಳ್ಳಿ. ಈಗ ಒಂದು ಪಾತ್ರೆಗೆ ತೊಳೆದಿಟ್ಟ ಹೆಸರುಬೇಳೆ, ಸಣ್ಣಗೆ ಹೆಚ್ಚಿಕೊಂಡ ಸೌತೆಕಾಯಿ ಹಾಗೂ ತೆಂಗಿನಕಾಯಿ ತುರಿ, ಕ್ಯಾರೆಟ್‌ ತುರಿ, ಹಸಿಮೆಣಸಿನ ಕಾಯಿ ಹಾಗೂ ನಿಂಬೆಹಣ್ಣಿನ ರಸವನ್ನು ಹಾಕಿ ಮಿಶ್ರ ಮಾಡಿಕೊಳ್ಳಿ. ಈ ಮಿಶ್ರಣಕ್ಕೆ ಕರಿಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಳ್ಳಿ. ಬೇಕಿದ್ದಲ್ಲಿ ಸಾಸಿವೆ, ಉದ್ದಿನಬೇಳೆ ಹಾಗೂ ಇಂಗಿನ ಒಗ್ಗರಣೆ ಮಾಡಿಕೊಳ್ಳಬಹುದು. ಇದು ನಿಮ್ಮ ಆಯ್ಕೆಗೆ ಬಿಟ್ಟಿದ್ದು.

ಕಡ್ಲೆಬೇಳೆ ಹಾಗೂ ಸೌತೆಕಾಯಿ ಕೋಸಂಬರಿ

ಬೇಕಾಗುವ ಸಾಮಗ್ರಿಗಳು: ಕಡ್ಲೆಬೇಳೆ - ಅರ್ಧ ಕಪ್‌, ಸಣ್ಣಗೆ ಹೆಚ್ಚಿಕೊಂಡ ಸೌತೆಕಾಯಿ - ಮುಕ್ಕಾಲು ಕಪ್‌, ಕಾಲು ಕಪ್‌ - ತೆಂಗಿನಕಾಯಿ ತುರಿ, ಕೊತ್ತಂಬರಿ ಸೊಪ್ಪು - ಸ್ವಲ್ಪ, ಹಸಿಮೆಣಸಿನಕಾಯಿ - 1, ನಿಂಬೆಹಣ್ಣಿನ ರಸ - 1 ಚಮಚ, ಉಪ್ಪು - ರುಚಿಗೆ ತಕ್ಕಷ್ಟು,

ತಯಾರಿಸುವ ವಿಧಾನ: ಮೊದಲಿಗೆ ಕಡ್ಲೆಬೇಳೆಯನ್ನು ಎರಡು ಬಾರಿ ಚೆನ್ನಾಗಿ ತೊಳೆದುಕೊಂಡು, ಸ್ವಲ್ಪ ಉಪ್ಪು ಸೇರಿಸಿ ನೀರಿನಲ್ಲಿ 1 ಗಂಟೆಗಳ ಕಾಲ ನೆನೆಯಲು ಬಿಡಿ. ನಂತರ ನೆನೆಸಿಟ್ಟ ಕಡ್ಲೆಬೇಳೆಯಿಂದ ನೀರನ್ನು ಸೋಸಿಕೊಂಡು ಅದಕ್ಕೆ ಹೆಚ್ಚಿಕೊಂಡಿರುವ ಸೌತೆಕಾಯಿ, ತೆಂಗಿನತುರಿ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ. ಇದಕ್ಕೆ 1 ಚಮಚ ನಿಂಬೆಹಣ್ಣಿನ ರಸವನ್ನು ಸೇರಿಸಿ, ಬೇಕಿದ್ದಲ್ಲಿ ಸಾಸಿವೆ ಒಗ್ಗರಣೆ ಕೊಟ್ಟರೆ ರುಚಿಕರವಾದ ಕಡ್ಲೆಬೇಳೆ ಸೌತೆಕಾಯಿ ಕೋಸಂಬರಿ ಸವಿಯಲು ಸಿದ್ಧವಾಗುತ್ತದೆ.

ಒಟ್ಟಿನಲ್ಲಿ ಆರೋಗ್ಯಕರವಾದ ಹೆಸರುಬೇಳೆ ಹಾಗೂ ಕಡ್ಲೆಬೇಳೆ ಕೋಸಂಬರಿಗಳನ್ನು ಈ ಬಾರಿ ಯುಗಾದಿ ಹಬ್ಬಕ್ಕೆ ಮನೆಯಲ್ಲೇ ತಯಾರಿಸಿಕೊಂಡು ನೋಡಿ. ಮನಸ್ಸು ಮತ್ತೆ ಮತ್ತೆ ಕೋಸಂಬರಿ ತಿನ್ನುವಂತೆ ಒತ್ತಾಯಿಸದಿರದು.

ಬರಹ: ಭಾಗ್ಯ ದಿವಾಣ

    ಹಂಚಿಕೊಳ್ಳಲು ಲೇಖನಗಳು