logo
ಕನ್ನಡ ಸುದ್ದಿ  /  ಜೀವನಶೈಲಿ  /  Forest Tales: ಅರಣ್ಯ ಇಲಾಖೆಯಲ್ಲಿ ಅರ್ಜುನ ಅಮರ: ಪರಿವರ್ತನೆ ಕಂಡ ಆನೆಯ ದುರಂತ ಅಂತ್ಯದ ಕಥೆ

Forest Tales: ಅರಣ್ಯ ಇಲಾಖೆಯಲ್ಲಿ ಅರ್ಜುನ ಅಮರ: ಪರಿವರ್ತನೆ ಕಂಡ ಆನೆಯ ದುರಂತ ಅಂತ್ಯದ ಕಥೆ

Umesha Bhatta P H HT Kannada

Dec 05, 2023 09:11 AM IST

ಕರ್ನಾಟಕ ಅರಣ್ಯ ಇಲಾಖೆ ಆಸ್ತಿಯಂತಿದ್ದ ಅರ್ಜುನ ಆನೆ ಇನ್ನು ನೆನಪು ಮಾತ್ರ.

    • Dasara Elephant Arjuna Death: ಮೈಸೂರು ಅಂಬಾರಿ ಹೊತ್ತಿದ್ದ ಅರ್ಜುನ ಆನೆ ದುರಂತ ಅಂತ್ಯ ಕಂಡಿದೆ. ಪರಿವರ್ತನೆ ಎನ್ನುವುದು ಬರೀ ಮನುಷ್ಯನಿಗೆ ಮಾತ್ರವಲ್ಲ, ಅದು ಆನೆಗಳಿಗೂ ಸಾಧ್ಯ ಎನ್ನುವುದನ್ನು ಸಾಧಿಸಿ ತೋರಿಸಿದ್ದ ಅರ್ಜುನನ ಹಿರಿಮೆ, ದುರಂತ ಅಂತ್ಯ ಕಂಡ ದಸರಾ ಆನೆಗಳ ನೋವಿನ ಕಥೆ ಇಲ್ಲಿದೆ.
ಕರ್ನಾಟಕ ಅರಣ್ಯ ಇಲಾಖೆ ಆಸ್ತಿಯಂತಿದ್ದ ಅರ್ಜುನ ಆನೆ ಇನ್ನು ನೆನಪು ಮಾತ್ರ.
ಕರ್ನಾಟಕ ಅರಣ್ಯ ಇಲಾಖೆ ಆಸ್ತಿಯಂತಿದ್ದ ಅರ್ಜುನ ಆನೆ ಇನ್ನು ನೆನಪು ಮಾತ್ರ.

ಪುಂಡಾನೆಯೊಂದು ಮಾವುತನ ಮಾತಿಗೆ ಮಗುವಿನಂತೆ ಮೃದುವಾಯಿತು. ದಸರಾ ಅಂಬಾರಿ ಹೊತ್ತು ಮೆರೆದು ಜನರ ಮನಗೆದ್ದು ಇಡೀ ಕರ್ನಾಟಕದಲ್ಲಿ ಹೆಸರುವಾಸಿಯಾಯಿತು. ಆದರೆ ವಯಸ್ಸಾದ ಕಾಲದಲ್ಲಿ ಒಂಟಿ ಸಲಗದ ತಿವಿತಕ್ಕೆ ಜೀವ ಬಿಟ್ಟಿತು. ಒಂದು ಕಾಲದ ಪುಂಡಾನೆ. ಮಾವುತನ ಜೀವ ತೆಗೆದುಕೊಂಡಿದ್ದ ಕರಾಳ ಇತಿಹಾಸ. ಅನಂತರ ಮತ್ತೊಬ್ಬ ಮಾವುತನ ಮಹಿಮೆಯಿಂದ ಬದಲಾಗಿ ಅಂಬಾರಿ ಹೊತ್ತ ಹಿರಿಮೆ. ಆದರೆ ಕಾಡಾನೆ ತಿವಿತದಿಂದ ಜೀವ ಬಿಟ್ಟ ದುರಂತ ಕ್ಷಣ. - ಇದು ಮೈಸೂರು ದಸರಾದಲ್ಲಿ ಎಂಟು ಬಾರಿ ಅಂಬಾರಿ ಹೊತ್ತು, ಇಪ್ಪತ್ತಕ್ಕೂ ಹೆಚ್ಚು ಕಾಲ ದಸರೆಯಲ್ಲಿ ಭಾಗಿಯಾಗಿದ್ದ ಅರ್ಜುನ ಆನೆ ದಾರುಣ ಸಾವಿನ ಕಥೆ.

ಟ್ರೆಂಡಿಂಗ್​ ಸುದ್ದಿ

ಮಾವಿನಹಣ್ಣಿನಿಂದ ತಯಾರಿಸಬಹುದು ಒಂದಲ್ಲ, ಎರಡಲ್ಲ ಮೂರು ಬಗೆಯ ಪಾಯಸ; ಈ ಭಾನುವಾರ ನೀವೂ ಮನೆಯಲ್ಲಿ ಟ್ರೈ ಮಾಡಿ, ರೆಸಿಪಿ ಇಲ್ಲಿದೆ

Relationship tips: ವರ್ಷಗಳು ಸರಿದರೂ ದಾಂಪತ್ಯದಲ್ಲಿ ಪ್ರೀತಿಯ ತಾಜಾತನ ಉಳಿಬೇಕು ಅಂದ್ರೆ ಈ 4 ನಿಯಮಗಳನ್ನು ತಪ್ಪದೇ ಪಾಲಿಸಿ

Personality Test: ಚಿತ್ರವನ್ನು ಕಂಡಾಕ್ಷಣ ನಿಮಗೆ ಮೊದಲು ಕಂಡಿದ್ದೇನು? ನಿಮ್ಮ ವ್ಯಕ್ತಿತ್ವದ ಕುರಿತ ರಹಸ್ಯ ವಿಚಾರ ತಿಳಿಸುತ್ತೆ ಈ ಚಿತ್ರ

Brain Teaser: 212=25, 214=47 ಆದ್ರೆ, 215 = ಎಷ್ಟು? ಗಣಿತದಲ್ಲಿ ನೀವು ಜಾಣರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ತಿಂಗಳ ಹಿಂದೆಯಷ್ಟೇ ಎರಡು ತಿಂಗಳ ದಸರಾ ಸಡಗರದಲ್ಲಿ ಭಾಗಿಯಾಗಿ ಈ ಬಾರಿ ಜಂಬೂ ಸವಾರಿಯಲ್ಲಿ ನಿಶಾನೆ ಆನೆಯಾಗಿದ್ದ ಅರ್ಜುನ. ಮೂರು ವರ್ಷದಿಂದ ಈ ಕಾಯಕವನ್ನು ಯಶಸ್ವಿಯಾಗಿ ನಿಭಾಯಿಸಿದವ. ಈ ವರ್ಷದ ದಸರೆ ನೆನಪು ಮಾಸುವ ಮುನ್ನವೇ ಅರ್ಜುನ ಇಲ್ಲವಾಗಿದ್ದಾನೆ.

ಐದೂವರೆ ದಶಕದ ಹಿಂದೆ

ಅದು 1968ರಲ್ಲಿ ಮೈಸೂರು ಜಿಲ್ಲೆಯ ಕಾಕನಕೋಟೆಯಲ್ಲಿ ಖೆಡ್ಡಾ ಕಾರ್ಯಾಚರಣೆ ಸಕ್ರಿಯವಾಗಿದ್ದ ಕಾಲ. ಈ ವೇಳೆ ಖೆಡ್ಡಾ ಬಳಸಿ ಪುಂಡಾನೆಗಳನ್ನು ಸೆರೆ ಹಿಡಿಯಲಾಯಿತು. ಆಗ ಸೆರೆ ಹಿಡಿದ ಆನೆಯೇ ಅರ್ಜುನ.

ಸೆರೆ ಸಿಕ್ಕ ಆನೆ ಪಳಗಿ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಆಸ್ತಿಯಂತೆಯೇ ಇತ್ತು. ಎತ್ತರದ ನಿಲುವಿನ ಗಮನ ಸೆಳೆಯುವಂತಹ ಆನೆಯದು. ಇದರಿಂದಲೇ ಅದಕ್ಕೆ ಅರ್ಜುನ ಅಂತ ಹೆಸರಿಡಲಾಗಿತ್ತು.

ಶಿಬಿರಗಳಲ್ಲಿಯೇ ಇದ್ದುಕೊಂಡು ಮರ ಸಾಗಣೆ ಸಹಿತ ಇತರೆ ಕೆಲಸಗಳಲ್ಲಿ ಅರ್ಜುನ ಸಹಕರಿಸುತ್ತಿದ್ದ. ಆನೆಗಳ ಸೆರೆ ಕಾರ್ಯಾಚರಣೆಗೂ ಆತನನ್ನು ಕರೆದುಕೊಂಡು ಹೋಗುತ್ತಿದ್ದರು. ಆತನಿದ್ದರೆ ಆನೆ ಸೆರೆ ಹಿಡಿಯುವವರಿಗೂ ಏನೋ ಅಭಯ. ಅಷ್ಟರ ಮಟ್ಟಿಗೆ ಅರ್ಜುನ ಎಂದರೆ ವಿಶ್ವಾಸ.

ದಸರೆಯಿಂದ ಕೈ ಬಿಟ್ಟರು

ಅರ್ಜುನ ಗಾತ್ರ ಹಾಗೂ ಧೈರ್ಯವನ್ನು ನೋಡಿ ಅತನನ್ನು ದಸರಾಗೆ ಕರೆ ತರಲು ನಿರ್ಧರಿಸಲಾಯಿತು. ದ್ರೋಣನ ನಂತರ ಅರ್ಜುನ ಅಂಬಾರಿ ಹೊರಬಲ್ಲ ಎನ್ನುವ ವಿಶ್ವಾಸ ಆಗಿನ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪಶುವೈದ್ಯಾಧಿಕಾರಿಗಳಿಗೆ.

1990ರ ದಶಕದಲ್ಲಿ ದಸರಾಕ್ಕೆ ಬಂದ ಅರ್ಜುನ ಮೂರ್ನಾಲ್ಕು ವರ್ಷ ನಿಶಾನೆ ಕೆಲಸವನ್ನು ಮಾಡಿದ್ದ.ಅಂಬಾರಿ ಹೊರಿಸುವ ತಾಲೀಮು ಕೂಡ ಮಾಡಲಾಗಿತ್ತು. ಆ ವೇಳೆ ಹೆಲಿಕಾಪ್ಟರ್‌ನಿಂದ ಪುಷ್ಪಾರ್ಚನೆ ಮಾಡಿದಾಗ ಅರ್ಜುನ ಬೆದರಿದರೂ ಜಂಬೂ ಸವಾರಿ ಕೆಲಸ ಮುಗಿಸಿದ್ದ.

ಮರು ವರ್ಷ ಆತನನ್ನು ದಸರೆಗೆ ಕರೆ ತಂದಾಗ ಅನಾಹುತ ನಡೆದಿತ್ತು. ಆಗ ಬಹದ್ದೂರ್‌ ಎನ್ನುವ ಆನೆಯ ಮಾವುತ ಅಣ್ಣಯ್ಯ ಎಂಬಾತನನ್ನು ತುಳಿದು ಸಾಯಿಸಿದ್ದ ಇದೇ ಅರ್ಜುನ. ಇದಾದ ನಂತರ ಆತನ ಕೋಪದ ಕಾರಣಕ್ಕೆ ದಸರೆಗೆ ಕರೆ ತರುವುದನ್ನು ನಿಲ್ಲಿಸಿ ಕಾಡಿನಲ್ಲಿಯೇ ಉಳಿಸಲಾಯಿತು.

ಅಣ್ಣಯ್ಯ ಅನುಮತಿ

2001ರ ಸಮಯ, ನಾಗರಹೊಳೆ ಡಿಸಿಎಫ್‌ ಆಗಿದ್ದರು ಎ.ಎಂ.ಅಣ್ಣಯ್ಯ. ಈ ವೇಳೆ ದಸರಕ್ಕಾಗಿ ಆನೆಗಳ ಹುಡುಕಾಟ ಪ್ರತಿ ವರ್ಷದಂತೆ ನಡೆದಿತ್ತು. ಆಗ ಪಶುವೈದ್ಯಾಧಿಕಾರಿಗಳ ತಂಡ ಬಳ್ಳೆ ಶಿಬಿರಕ್ಕೆ ಹೋದಾಗ ಅರ್ಜುನನ್ನು ನೋಡಿದ್ದರು ಡಾ.ನಾಗರಾಜು. ಅರ್ಜುನನ ಹಿನ್ನೆಲೆ ಪಡೆದು ಆನಂತರ ಹೇಗಾದರೂ ಮಾಡಿ ಮತ್ತೆ ಮೈಸೂರು ದಸರಾಗೆ ತರುವ ಯೋಚನೆ ಮಾಡಿದರು. ಡಿಸಿಎಫ್‌ ಕೂಡ ಅನುಮತಿ ನೀಡಿದರು. ನಿಮ್ಮದೇ ಜವಾಬ್ದಾರಿ ಎಂದು ಬೇರೆ ಹೇಳಿದರು. ಬಳಿಕ ಆನೆಯನ್ನು ತರಲು ದಿಟ್ಟ ನಿರ್ಧಾರವನ್ನು ನಾಗರಾಜು ಕೈಗೊಂಡರು.

ದೊಡ್ಡ ಮಾಸ್ತಿ ಎಂಬ ಮಹಾಗುರು

ಆನೆಯನ್ನು ಮನುಷ್ಯನ ನಡುವಳಿಕೆಯಿಂದ ಪಳಗಿಸಬಲ್ಲ ಎನ್ನುವುದಕ್ಕೆ ಅರ್ಜುನನೇ ಸಾಕ್ಷಿ. ಆಗ ಇದ್ದ ಮಾವುತನ್ನು ಬದಲಿಸಿ ದೊಡ್ಡ ಮಾಸ್ತಿ ಎಂಬಾತನಿಗೆ ಈತನ ಹೊಣೆ ನೀಡಲಾಯಿತು. ಒಂದೂವರೆ ದಶಕದ ಅವಧಿಯಲ್ಲಿಯೇ ಅರ್ಜುನ ಎಷ್ಟು ಬದಲಾಗಿದ್ದ ಎಂದರೆ ಅರಣ್ಯ ಇಲಾಖೆ ಅಧಿಕಾರಿಗಳೇ ನಂಬುತ್ತಿರಲಿಲ್ಲ. ಆತನನ್ನು ಅಷ್ಟರ ಮಟ್ಟಿಗೆ ಪ್ರೀತಿಯಿಂದ ಪಳಗಿಸಿದ್ದ ದೊಡ್ಡ ಮಾಸ್ತಿ.

ಆತನನ್ನು ದಸರೆಗೆ ಕರೆದುಕೊಂಡು ಬರಲು ಅವಕಾಶ ನೀಡಿದರೆ ನಾನು ನಿಭಾಯಿಸುವೆ ಎನ್ನುವ ಅಭಯವನ್ನೂ ದೊಡ್ಡ ಮಾಸ್ತಿ ನೀಡಿದ್ದ. ಕೂಲ್‌ ಕ್ಯಾಪ್ಟನ್‌ ಬಲರಾಮನಿಗೆ ಪರ್ಯಾಯ ಹುಡುಕುತ್ತಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಅರ್ಜುನನಿಗಿಂತ ಆತನ ಮಾವುತ ದೊಡ್ಡಮಾಸ್ತಿಯನ್ನು ಹೆಚ್ಚು ನಂಬಿದರು. ಮತ್ತೆ ದಸರೆಗೆ ಬರಲಾರಂಭಿಸಿದ ಅರ್ಜುನ. ಒಂದೆರಡು ವರ್ಷದಲ್ಲಿ ಅಂಬಾರಿ ಹೊರುವ ತಾಲೀಮು ನೀಡಲಾಯಿತು. 2012ರಲ್ಲಿ ಅರ್ಜುನನಿಗೆ ಅಂಬಾರಿ ಹೊರಿಸಲಾಯಿತು. ಆದರೆ ಎಲ್ಲರ ನಿರೀಕ್ಷೆ ಮೀರಿ ಆತ ಅದನ್ನು ನಿಭಾಯಿಸಿದ್ದ. ಅರ್ಜುನನ ಜತೆಗೆ ದೊಡ್ಡ ಮಾಸ್ತಿಗೂ ಮೆಚ್ಚುಗೆ ಸಿಕ್ಕಿತ್ತು. ಸತತ ಎಂಟು ವರ್ಷ ಅಂಬಾರಿ ಹೊತ್ತಿದ್ದ ಅರ್ಜುನ. ಇದರ ಹಿಂದೆ ಇದ್ದವರು ಮಾವುತ ದೊಡ್ಡ ಮಾಸ್ತಿ ಹಾಗೂ ಆತನಿಗೆ ಆತ್ಮವಿಶ್ವಾಸ ತುಂಬಿದ್ದ ಆನೆ ವೈದ್ಯಾಧಿಕಾರಿ ಡಾ.ಡಿ.ಎನ್‌.ನಾಗರಾಜು.

ಅರ್ಜುನನಿಗೆ ಇನ್ನೂ ಅಂಬಾರಿ ಹೊರುವ ಶಕ್ತಿಯಿದ್ದರೂ ನ್ಯಾಯಾಲಯದ ಆದೇಶದಂತೆ 60 ವರ್ಷಕ್ಕೆ ಮಿತಿ ಹೇರಲಾಯಿತು. 2019ರಲ್ಲಿ ಅರ್ಜುನನ ಅಂಬಾರಿ ಹೊರುವ ಕಾಲ ಮುಗಿಯಿತು. 2020ರಲ್ಲಿ ಅರ್ಜುನನ ಬದಲು ಅಭಿಮನ್ಯುವಿಗೆ ಅಂಬಾರಿ ಹೊರುವ ಜವಾಬ್ದಾರಿ ನೀಡಲಾಯಿತು.

ತೀರಿಕೊಂಡ ಮಾವುತ

ಅರ್ಜುನನಿಗೆ ನಿಜವಾಗಿಯೂ ಗುರು, ಸ್ನೇಹಿತನಾಗಿದ್ದ ಮಾವುತ ದೊಡ್ಡ ಮಾಸ್ತಿ ಕೂಡ ಅರ್ಜುನ ಅಂಬಾರಿ ಹೊರುವ ಜವಾಬ್ದಾರಿ ಮುಗಿಸುವ ಹಿಂದೆಯೇ ನಿವೃತ್ತನಾಗಿದ್ದ. ಅನಂತರ ಯಾರಿಗೆ ಉಸ್ತುವಾರಿ ವಹಿಸುವುದು ಎನ್ನುವ ಪ್ರಶ್ನೆ ಎದುರಾದಾಗ ದೊಡ್ಡ ಮಾಸ್ತಿ ಮಗ ಮಹೇಶ್‌ಗೆ ಹೊಣೆ ನೀಡಲಾಗಿತ್ತು. ಆದರೂ ನನ್ನಂತೆ ಮಕ್ಕಳು ಆನೆ ನೋಡಿಕೊಳ್ಳುವುದಿಲ್ಲ ಎನ್ನುವ ಬೇಸರ ದೊಡ್ಡ ಮಾಸ್ತಿಗೆ ಇತ್ತು. ಆದರೂ ಎರಡು ವರ್ಷ ಮಗ ದಸರೆಗೆ ಹೋಗಿ ಬಂದಾಗ ಸಮಾಧಾನವಾಗಿತ್ತು. ಅನಾರೋಗ್ಯಕ್ಕೆ ಒಳಗಾಗಿದ್ದ ದೊಡ್ಡ ಮಾಸ್ತಿ ಎರಡು ವರ್ಷದ ಹಿಂದೆ ತೀರಿಕೊಂಡಿದ್ದ. ಬಳಿಕ ಮಾಸ್ತಿ ಮಗನನ್ನು ಅರ್ಜುನನ ಹೊಣೆಯಿಂದ ಬದಲಾಯಿಸಿ ವಿನು ಎಂಬಾತನಿಗೆ ಆನೆ ಉಸ್ತುವಾರಿ ನೀಡಲಾಯಿತು. ಇದು ಆಂತರಿಕ ಸಂಘರ್ಷಕ್ಕೂ ದಾರಿ ಮಾಡಿಕೊಟ್ಟಿತ್ತು. ಮಾವುತರ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವ ಹಾಗೆ ಆರ್ಜುನನಿಗೆ ದೊಡ್ಡ ಮಾಸ್ತಿ ಕಾಲದ ಆರೈಕೆ, ಪ್ರೀತಿ ದೊರೆಯದೇ ಹೋಯಿತು.

ಆನೆಗಳನ್ನು ಪಳಗಿಸುವುದು ಸುಲಭವಲ್ಲ. ಅದಕ್ಕೆ ವಿಶೇಷ ಕೌಶಲವೇ ಬೇಕು. ಆನೆ ಮನುಷ್ಯನೊಂದಿಗೆ ಒಡನಾಟ ಬಯಸುತ್ತದೆ. ಆತ ಹೇಗಿರುತ್ತಾನೋ ಹಾಗೆಯೇ ಆನೆಯೂ ಆತನೊಂದಿಗೆ ಪ್ರೀತಿಯಿಂದಲೇ ಇರುತ್ತದೆ. ಅದಕ್ಕೆ ಉದಾಹರಣೆ ಅರ್ಜುನ ಆನೆ. ಆತನಿಗೆ ಹಂತಕ ಪಟ್ಟಿ ಕಾಡಿಗೆ ಅಟ್ಟಿದಾಗ ಮತ್ತೆ ಮರು ಜೀವ ನೀಡಿದ್ದು ಇಲಾಖೆಯೇ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ದೊಡ್ಡ ಮಾಸ್ತಿ ಆರೈಕೆಯಲ್ಲಿ ಅರ್ಜುನ ಸರಿದಾರಿಗೆ ಬಂದಿದ್ದ. ಅದಕ್ಕೆ ಸಾಕ್ಷಿಯೇ ಆತ ಅಂಬಾರಿ ಹೊತ್ತು ಯಶಸ್ವಿಯಾದ ಎಂಟು ವರ್ಷಗಳ ಹಾದಿ. ನಿವೃತ್ತಿ ಬಳಿಕವೂ ದಸರಾದಲ್ಲಿ ಆತನ ಸೇವೆ ಮುಂದುವರಿದಿತ್ತು. ಇಂತಹ ದುರಂತ್ಯ ಕಂಡಿದ್ದು ಬೇಸರದಾಯಕವೇ ಎಂದು ಅರ್ಜುನ ಪರಿವರ್ತನೆ ಹಾದಿಯನ್ನು ಬಿಡಿಸಿಡುತ್ತಲೇ ನಿಟ್ಟುಸಿರು ಬಿಟ್ಟರು ಮೈಸೂರು ದಸರಾದಲ್ಲಿ ಎರಡು ದಶಕ ಕಾಲ ಆನೆ ಉಸ್ತುವಾರಿ ನೋಡಿಕೊಂಡಿರುವ, ಅರ್ಜುನ ಆನೆಗೆ ಹೊಸ ರೂಪ ನೀಡುವ ಹಿಂದೆ ಶಕ್ತಿಯಾಗಿದ್ದ ಪಶು ಇಲಾಖೆ ಹಿರಿಯ ಅಧಿಕಾರಿ ಡಾ.ಡಿ.ಎನ್‌.ನಾಗರಾಜು.

ಅಂಬಾರಿ ಆನೆಗಳ ದುರಂತ ಅಂತ್ಯ

ಗಂಧದ ಗುಡಿ ಚಿತ್ರದಲ್ಲಿ ಡಾ.ರಾಜ್‌ ಅವರೊಂದಿಗೆ ಕಂಡಿದ್ದ ರಾಜೇಂದ್ರ ಆನೆ ಕೂಡ ಮೂರ್ನಾಲ್ಕು ಬಾರಿ ಅಂಬಾರಿ ಹೊತ್ತಿತ್ತು. ಆನಂತರ ಅರಮನೆ ಸೇವೆಗೂ ಬಳಕೆಯಾಗುತಿತ್ತು. ಕೊನೆಗೆ ಇದೂ ನಾಗರಹೊಳೆ ಬಳ್ಳೆ ಶಿಬಿರದಲ್ಲಿತ್ತು. ಮತ್ತೊಂದು ಆನೆ ತಿವಿತದಲ್ಲಿ ಜೀವ ಬಿಟ್ಟಿತ್ತು. ಇದನ್ನು ಹಿರಿಯ ಅರಣ್ಯಾಧಿಕಾರಿ ಬಸಪ್ಪನವರ್‌ ಎಂಬುವವರು ತಮ್ಮ ಪುಸ್ತಕದಲ್ಲಿ ಇದನ್ನು ಉಲ್ಲೇಖಿಸಿದ್ಧಾರೆ.

ಅನಂತರದಲ್ಲಿ ಅಂಬಾರಿ ಹೊತ್ತ ಆನೆಗಳ ಸಾಲಿನಲ್ಲಿ ದ್ರೋಣನಿಗೆ ಪ್ರಮುಖ ಸ್ಥಾನ. ಭಾರೀ ಎತ್ತರದ ಆನೆ ದ್ರೋಣ. ದ್ರೋಣ 18 ವರ್ಷ ನಿರಂತರ ಅಂಬಾರಿ ಹೊತ್ತು ಸಾಗಿದ ಖ್ಯಾತಿ ಹೊಂದಿತ್ತು. ಜನಪ್ರಿಯ ಧಾರಾವಾಹಿ 'ದಿ ಸೋರ್ಡ್ ಆಫ್ ಟಿಪ್ಪುಸುಲ್ತಾನ್'ನ ಟಿಪ್ಪು ಪಾತ್ರಧಾರಿಯನ್ನು ಹೊತ್ತೂಯ್ದಆನೆ ದ್ರೋಣ. 1998ರಲ್ಲಿ ಕಾಡಿನಲ್ಲಿದ್ದಾಗ ಹೈ ಟೆನ್ಶನ್ ವಿದ್ಯುತ್ ತಗುಲಿ ದ್ರೋಣ ಸಾವನ್ನಪ್ಪಿತು.

ಇದಾದ ನಂತರ ಬಲರಾಮ ಕೂಡ ಹೆಚ್ಚು ಬಾರಿ ಅಂಬಾರಿ ಹೊತ್ತ ಕೂಲ್‌ ಆನೆ. ಪಿರಿಯಾಪಟ್ಟಣ ತಾಲ್ಲೂಕಿನ ಆನೆ ಶಿಬಿರದಲ್ಲಿದ್ದ ಬಲರಾಮ. ತೋಟವೊಂದರ ಬಳಿ ಮೇಯಲು ಹೋದಾಗ ಮಾಲೀಕ ಕಾಡಾನೆ ಎಂದು ಹಾರಿಸಿದ್ದ ಗುಂಡೇಟು ತಗುಲಿ ಬಲರಾಮ ಗಾಯಗೊಂಡಿದ್ದ. ಚೇತರಿಸಿಕೊಳ್ಳದೇ ಬಲರಾಮ ಕೂಡ ದುರಂತ ಅಂತ್ಯವನ್ನೇ ಕಂಡಿದ್ದ. ಅಂಬಾರಿ ಹೊರದೇ ಇದ್ದರೂ ದಸರಾದಲ್ಲಿ ಭಾಗಿಯಾಗಿದ್ದ ಶ್ರೀರಾಮ, ಗೋಪಾಲಸ್ವಾಮಿ ಆನೆಗಳು ಮತ್ತೊಂದು ಆನೆ ಹೊಡೆತದಿಂದಲೇ ಸಾವನ್ನಪ್ಪಿವೆ.

ಆದರೆ ಅರ್ಜುನ ಕೂಡ ದುರಂತ ನಾಯಕನಾಗಿ ನಂತರ ಬದಲಾವಣೆಯಾಗಿದ್ದವನು. ಲಕ್ಷಾಂತರ ಜನರ ಸಮ್ಮುಖದಲ್ಲಿ ಅಂಬಾರಿ ಹೊತ್ತು ಯಶಸ್ವಿಯೂ ಆಗಿದ್ದ ಅರ್ಜುನ ಕಾಡಾನೆಗಳ ಸೆರೆಯಲ್ಲೂ ನಿಸ್ಸೀಮನಾಗಿದ್ದ. ಆದರೆ ಸಾವು ಮಾತ್ರ ದುರಂತ ರೀತಿಯಲ್ಲಿಯೇ ಆಯಿತು. ಅಂಬಾರಿ ಹೊತ್ತ ಆನೆಗಳ ದುರಂತ ಸಾವಿನ ಪಟ್ಟಿಗೆ ಅರ್ಜುನನೂ ಸೇರಿ ಹೋದ. ಹುತಾತ್ಮ ಪಟ್ಟದೊಂದಿಗೆ ಅರ್ಜುನನ ಹೆಸರು ಅರಣ್ಯ ಇಲಾಖೆಯಲ್ಲಿನ್ನು ಅಮರ.

-ಕುಂದೂರು ಉಮೇಶಭಟ್ಟ

    ಹಂಚಿಕೊಳ್ಳಲು ಲೇಖನಗಳು