Gardening Tips: ಮನೆಯಲ್ಲೇ ಚೆರ್ರಿ ಟೊಮೆಟೊಗಳನ್ನು ಬೆಳೆಯಲು ಇದು ಸೂಕ್ತ ಸಮಯ: ಉತ್ತಮ ಇಳುವರಿ ಪಡೆಯಲು ಇಲ್ಲಿವೆ ಸಲಹೆಗಳು
Mar 04, 2024 09:00 AM IST
ಮನೆಯಲ್ಲಿ ಚೆರ್ರಿ ಟೊಮೆಟೊ ಹಣ್ಣುಗಳನ್ನು ಬೆಳೆಯಲು ಟಿಪ್ಸ್
Gardening Tips: ನಿಮಗೆ ಮನೆಯಲ್ಲಿ ತರಕಾರಿಗಳನ್ನು ಬೆಳೆದು ತಿನ್ನುವುದು ಇಷ್ಟ ಎಂದಾದರೆ ಚೆರ್ರಿ ಟೊಮೆಟೊಗಳನ್ನು ಬೆಳೆಯಬಹುದಾಗಿದೆ. ಇವುಗಳನ್ನು ನೆಟ್ಟು ಉತ್ತಮ ಇಳುವರಿ ಪಡೆಯಲು ಏನು ಮಾಡಬೇಕು ಎಂಬುದಕ್ಕೆ ಸಲಹೆಗಳು ಇಲ್ಲಿವೆ ನೋಡಿ.
Gardening Tips: ಕೆಲವರಿಗೆ ಪ್ರಾಣಿಗಳನ್ನು ಸಾಕುವುದು ಇಷ್ಟದ ಕೆಲಸವಾಗಿದ್ದರೆ ಇನ್ನೂ ಕೆಲವರಿಗೆ ಮನೆಯಲ್ಲಿ ತಮ್ಮದೇ ಆದ ಒಂದು ಕೈತೋಟ ಇರಬೇಕು ಎಂಬ ಆಸೆ ಇರಯತ್ತದೆ. ಅನೇಕರು ತಮ್ಮ ಮನೆಯಲ್ಲಿಯೇ ವಿವಿಧ ತರಕಾರಿಗಳನ್ನು ಬೆಳೆಯುತ್ತಾರೆ. ಇದೇ ರೀತಿ ಹೋಮ್ ಗಾರ್ಡನ್‌ನಲ್ಲಿ ಅತ್ಯಂತ ಸುಲಭವಾಗಿ ಬೆಳೆಸಬಹುದಾದ ತರಕಾರಿ ಎಂದರೆ ಅದು ಚೆರ್ರಿ ಟೊಮೆಟೋ. ಈ ಗಿಡಗಳನ್ನು ಬೆಳೆಯಲು ಫೆಬ್ರವರಿ ಹಾಗೂ ಮಾರ್ಚ್ ಸೂಕ್ತವಾದ ಸಮಯ.
ಹೀಗಾಗಿ ಮನೆಯಲ್ಲಿ ಅತ್ಯಂತ ಸುಲಭವಾಗಿ ಚೆರ್ರಿ ಟೊಮೆಟೋಗಳನ್ನು ಬೆಳೆದು ಇಳುವರಿ ಪಡೆಯುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ
1. ಮಾಗಿದ ಚೆರ್ರಿ ಟೊಮೆಟೋ ತೆಗೆದುಕೊಳ್ಳಿ. ಇವುಗಳಿಂದ ಬೀಜವನ್ನು ತೆಗೆಯಿರಿ.
2. ಈ ಬೀಜಗಳನ್ನು ಮಣ್ಣಿನಲ್ಲಿ ಹಾಕಿ. ಬೀಜ ನೆಟ್ಟ ಜಾಗದಲ್ಲಿ ಪ್ರತಿ ದಿನ ನೀರನ್ನು ಚಿಮುಕಿಸುತ್ತಿರಿ. ಒಂದು ವಾರಗಳಲ್ಲಿ ಈ ಬೀಜ ಚಿಗುರಲು ಆರಂಭಿಸುತ್ತದೆ. ಮುಂದಿನ 15 ರಿಂದ 20 ದಿನಗಳಲ್ಲಿ ಚಿಗುರಿದ ಗಿಡಗಳನ್ನು ಕಾಣಬಹುದಾಗಿದೆ.
3. ಈಗ ಟೊಮೆಟೊ ಗಿಡಕ್ಕೆ ಸ್ವಲ್ಪ ಬೇವಿನ ಹಿಂಡಿ ಸೇರಿದಂತೆ ವಿವಿಧ ರಸಗೊಬ್ಬರಗಳನ್ನು ನೀವು ಹಾಕಬೇಕು. ಇದು ಟೊಮೆಟೊ ಗಿಡಕ್ಕೆ ಯಾವುದೇ ಕಾಯಿಲೆ ಬಾರದಂತೆ ನೋಡಿಕೊಳ್ಳುವುದರ ಜೊತೆಗೆ ಗಿಡಕ್ಕೆ ಉತ್ತಮ ಪೋಷಣೆಯನ್ನೂ ನೀಡುತ್ತದೆ.
4. ನೀವು 12 ರಿಂದ 18 ಇಂಚು ಆಳದ ಕುಂಡದಲ್ಲಿ ಟೊಮೆಟೊ ಗಿಡವನ್ನು ನೆಡಬಹುದಾಗಿದೆ.
5. ಟೊಮೆಟೊ ಗಿಡಗಳಿಗೆ ಎಷ್ಟು ಬೇಕೋ ಅಷ್ಟೇ ನೀರನ್ನು ಹಾಕಿ. ಅತಿಯಾದ ನೀರು ಹಾಕಿದರೆ ಗಿಡವನ್ನು ಕೊಳೆಯುವಂತೆ ಮಾಡಬಹುದು.
6. ಗಿಡಗಳು ಸ್ವಲ್ಪ ಬೆಳವಣಿಗೆ ಹೊಂದುತ್ತಿದ್ದಂತೆಯೇ ಗಿಡಕ್ಕೆ ಬೇರೆ ಕೋಲಿನ ಸಹಾಯದಿಂದ ಆಧಾರ ನೀಡಿ. ಚೆರ್ರಿ ಟೊಮೆಟೋ ಗಿಡಗಳಿಗೆ ಇದರಿಂದ ಬೆಳವಣಿಗೆ ಹೊಂದುವುದು ಸಾಧ್ಯವಾಗುತ್ತದೆ.
ಜೂನ್‌ನಲ್ಲಿ ಉತ್ತಮ ಇಳುವರಿ ಪಡೆಯಬೇಕು ಎಂದರೆ ನೀವು ಚೆರ್ರಿ ಟೊಮೆಟೋಗಳನ್ನು ಒಳ್ಳೆಯ ಸೂರ್ಯನ ಬೆಳಕು ಬೀಳುವಲ್ಲಿ ನೆಡಬೇಕು. ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲೂ ಚೆರ್ರಿ ಗಿಡಗಳನ್ನು ಬೆಳೆಯಬಹುದಾಗಿದೆ. ಸೂರ್ಯನ ಬೆಳಕಿನ ಕೊರೆತೆಯಿಂದಾಗಿ ಚೆರ್ರಿ ಟೊಮೆಟೊಗಳ ಗಾತ್ರ ಇನ್ನಷ್ಟು ಚಿಕ್ಕದಾಗುವ ಸಾಧ್ಯತೆ ಇರುತ್ತದೆ.
ಟೊಮೆಟೊಗಳನ್ನು ನೀವು ವಿವಿಧ ಕೀಟಗಳ ದಾಳಿಯಿಂದ ರಕ್ಷಿಸಿಕೊಳ್ಳಲು ಬೇವಿನ ಎಣ್ಣೆಯನ್ನು ಬಳಕೆ ಮಾಡಬೇಕು. ಲಿಕ್ವಿಡ್ ಸೋಪ್‌ನೊಂದಿಗೆ ಬೇವಿನ ಎಣ್ಣೆ ಮಿಶ್ರಣ ಮಾಡಿ ಗಿಡಕ್ಕೆ ಸಿಂಪಡಣೆ ಮಾಡುವುದರಿಂದ ನೀವು ಕೀಟಗಳ ದಾಳಿಯಿಂದ ಪಾರಾಗಲು ಸಾಧ್ಯವಿದೆ.