logo
ಕನ್ನಡ ಸುದ್ದಿ  /  ಜೀವನಶೈಲಿ  /  ಜೇನು ಪೆಟ್ಟಿಗೆಯಲ್ಲ, ಇದು ವಿನೂತನ ಅಕ್ಷರ ಸೇವೆಯ ಪುಟಾಣಿ ಗ್ರಂಥಾಲಯ; ಅಮೆರಿಕದ ಮಿನಿ ಲೈಬ್ರರಿ ಕುರಿತ ಶಿಶಿರ ಹೆಗಡೆ ಬರಹ

ಜೇನು ಪೆಟ್ಟಿಗೆಯಲ್ಲ, ಇದು ವಿನೂತನ ಅಕ್ಷರ ಸೇವೆಯ ಪುಟಾಣಿ ಗ್ರಂಥಾಲಯ; ಅಮೆರಿಕದ ಮಿನಿ ಲೈಬ್ರರಿ ಕುರಿತ ಶಿಶಿರ ಹೆಗಡೆ ಬರಹ

HT Kannada Desk HT Kannada

Jan 07, 2024 03:17 PM IST

ಅಮೆರಿಕದ ಬೀದಿಗಳಲ್ಲಿರುವ ಮಿನಿ ಗ್ರಂಥಾಲಯಗಳು

    • ಅಮೆರಿಕದ ಬೀದಿ ಬೀದಿಗಳಲ್ಲಿ, ಪಾರ್ಕ್‌ಗಳಲ್ಲಿ ಜೇನು ಪೆಟ್ಟಿಗೆಯಂತಹ ಗೂಡುಗಳು ಕಾಣ ಸಿಗುತ್ತವೆ. ಇವು ಖಂಡಿತ ಜೇನು ಪೆಟ್ಟಿಗೆಯಲ್ಲ, ಮಿನಿ ಲೈಬ್ರರಿಗಳು. ಅಮೆರಿಕನ್ನರ ಈ ವಿಶಿಷ್ಟ ಪ್ರಯತ್ನಕ್ಕೆ ಮುನ್ನುಡಿ ಬರೆದಿದ್ದು, ಪುಸ್ತಕ ಪ್ರೇಮಿ ಮಸ್ತರ್‌. ಅಮೆರಿಕದ ಮಿನಿ ಗ್ರಂಥಾಲಯಗಳ ಕುರಿತ ಶಿಶಿರ ಹೆಗಡೆ ಅವರ ಬರಹ ಇಲ್ಲಿದೆ. 
ಅಮೆರಿಕದ ಬೀದಿಗಳಲ್ಲಿರುವ ಮಿನಿ ಗ್ರಂಥಾಲಯಗಳು
ಅಮೆರಿಕದ ಬೀದಿಗಳಲ್ಲಿರುವ ಮಿನಿ ಗ್ರಂಥಾಲಯಗಳು (Shishir Hegde/Facebook)

ಅಮೆರಿಕನ್ನರ ಅಕ್ಷರ ಪ್ರೀತಿ ನಿಜಕ್ಕೂ ದೊಡ್ಡದು, ಇಲ್ಲಿ ಮನೆ ಮನೆಗಳ ಮುಂದೆ, ಪಾರ್ಕ್‌ನಲ್ಲಿ, ರಸ್ತೆ ಬದಿಗಳಲ್ಲಿ ಮಿನಿ ಗಂಥ್ರಾಲಯಗಳಿರುತ್ತವೆ. ಇಲ್ಲಿನ ಗ್ರಂಥಾಲಯಗಳಲ್ಲಿನ ಪುಸ್ತಕಗಳನ್ನು ಯಾರೂ ಬೇಕಾದರೂ ತೆಗೆದುಕೊಂಡು ಹೋಗಿ ಓದಬಹುದು. ಜೊತೆಗೆ ಆ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ತಂದು ಇರಿಸಬಹುದು. ಇದಕ್ಕೆ ಕಾವಲುಗಾರರೂ ಇಲ್ಲ. ಇದು ಅಮೆರಿಕನ್ನರ ವಿನೂತರ ಅಕ್ಷರ ಸೇವೆಗೆ ಸಾಕ್ಷಿ. ಈ ಬಗ್ಗೆ ಬರೆದಿದ್ದಾರೆ ಶಿಶಿರ ಹೆಗಡೆ. ಅಮೆರಿಕನ್ನರ ಪುಸ್ತಕ ಪ್ರೀತಿಯನ್ನು ಶಿಶಿರ ಅವರ ಬರಹದಲ್ಲೇ ಓದಿ.

ಟ್ರೆಂಡಿಂಗ್​ ಸುದ್ದಿ

ಪಾಯಸದಿಂದ ಕೇಸರಿಬಾತ್‌ವರೆಗೆ, ಬಾಯಲ್ಲಿ ನೀರೂರಿಸುವ ಮಾವಿನಹಣ್ಣಿನ ಸಾಂಪ್ರದಾಯಿಕ ತಿನಿಸುಗಳಿವು; ಈ ರೆಸಿಪಿಗಳನ್ನು ನೀವೂ ಟ್ರೈ ಮಾಡಿ

ನುಡಿಯ ನೇತಾರ ನಾಲಿಗೆ: ಉಪ್ಪು, ಹುಳಿ, ಸಿಹಿ ತಿಳಿಯುವ ಜಿಹ್ವೆಗೆ ಖಾರವೇಕೆ ಗೊತ್ತಾಗಲ್ಲ? ನಾಲಿಗೆ ಬಗ್ಗೆ ನಿಮಗೆಷ್ಟು ಗೊತ್ತು? -ಜ್ಞಾನ ವಿಜ್ಞಾನ

World Hypertension Day: ಸೈಲೆಂಟ್‌ ಕಿಲ್ಲರ್‌ ಆಗಿ ಕಾಡುತ್ತಿದೆ ಅಧಿಕ ರಕ್ತದೊತ್ತಡ; ಆರಂಭಿಕ ಹಂತದ ಈ ಚಿಹ್ನೆಗಳನ್ನ ನಿರ್ಲಕ್ಷ್ಯ ಮಾಡದಿರಿ

Personality Test: ಕರಡಿನಾ ಚಾಕುನಾ, ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು? ನಿಮ್ಮ ಸ್ವಭಾವ ಹೇಗೆ ತಿಳಿಸುತ್ತೆ ಈ ಚಿತ್ರ

ಶಿಶಿರ ಹೆಗಡೆ ಬರಹ ಇಲ್ಲಿದೆ

ಅಮೆರಿಕದ ಪಾರ್ಕುಗಳಲ್ಲಿ, ಬಡಾವಣೆಗಳಲ್ಲಿ, ರಸ್ತೆ ಬದಿಗಳಲ್ಲಿ ಜೇನುಗೂಡಿನಂತಹ ಚಿಕ್ಕ ಡಬ್ಬಿಗಳು ಅಲ್ಲಲ್ಲಿ ಕಾಣಿಸುತ್ತವೆ. ಈಗೀಗ ಎಲ್ಲಾ ಊರುಗಳಲ್ಲಿ ಅವು ಹೆಚ್ಚುತ್ತಿವೆ, ಅಣಬೆಯಂತೆ ಅಲ್ಲಲ್ಲಿ ತಲೆಯೆತ್ತುತ್ತಿವೆ. (ನಾಯಿಕೊಡೆಯನ್ನು ಒಳ್ಳೆಯದರ ಹೋಲಿಕೆಗೂ ಬಳಸಬಹುದಲ್ಲ!). ಇವು ಮಿನಿ ಲೈಬ್ರರಿಗಳು. ಇದರೊಳಕ್ಕೆ ಯಾರು ಬೇಕಾದರೂ ತಮ್ಮ ಸ್ವಂತದ ಪುಸ್ತಕವನ್ನು ತಂದು ಇಡಬಹುದು. ಸಾಮಾನ್ಯವಾಗಿ ಓದಿ ಮುಗಿದ ಪುಸ್ತಕಗಳು ಈ ಡಬ್ಬಿಯನ್ನು ಸೇರುತ್ತವೆ. ಯಾರು ಬೇಕಾದರೂ ಇದರಲ್ಲಿಂದ ಪುಸ್ತಕ ಓದಲು ಒಯ್ಯಬಹುದು. ಇಲ್ಲಿ ಯಾರು ಏನನ್ನು ಒಯ್ದರು, ಯಾರು ಏನನ್ನು ತಂದಿಟ್ಟರು ಎಂದು ಪಟ್ಟಿ ಬರೆದಿಟ್ಟುಕೊಳ್ಳುವುದೆಲ್ಲ ಇಲ್ಲ. ನಾಗರೀಕ ಸೌಜನ್ಯವೇ ಇಲ್ಲಿನ ಕಾವಲು-ಸಾಕ್ಷಿ.

ಕೆಲವರು ತಮ್ಮ ಮನೆಯೆದುರಿಗೆ ಇಂತಹ ಮಿನಿ ಲೈಬ್ರರಿ ತಾವೇ ನಿರ್ಮಿಸಿ ಇಡಲು ಶುರು ಮಾಡಿದ್ದಾರೆ. ಆದರೆ ಇದಕ್ಕೆ ಯಾರದೂ ಕಾವಲಿಲ್ಲ, ಮನೆಯವನದು ಕೂಡ. ಸಾಮಾನ್ಯವಾಗಿ ಆಚೀಚೆ ಓಡಾಡುವ ಮಕ್ಕಳು, ದೊಡ್ಡವರು ಇದನ್ನು ಕಂಡಲ್ಲಿ ನಿಲ್ಲುತ್ತಾರೆ, ಯಾವ ಪುಸ್ತಕವಿದೆ ಎಂದು ಕಣ್ಣಾಯಿಸುತ್ತಾರೆ, ಓದಬೇಕೆನಿಸಿದ್ದಲ್ಲಿ ಒಯ್ಯುತ್ತಾರೆ. ಓದಿಯಾದ ಮೇಲೆ ಮೇಲೆ ಇಲ್ಲಿಯೇ ತಂದಿಡುತ್ತಾರೆ. ಇಲ್ಲಿ ಸಾಮಾನ್ಯವಾಗಿ ಒಳ್ಳೊಳ್ಳೆ ಪುಸ್ತಕಗಳೇ ಇರುತ್ತವೆ. ತಾವು ಓದಿದ ಒಳ್ಳೆಯ ಪುಸ್ತಕವನ್ನು ಇನ್ನೊಬ್ಬರು ಓದಲಿ ಎಂಬ ಇಚ್ಛೆ ಹಲವರಿಗಿರುತ್ತದೆ. ಕೆಲವರು ಈ ಪುಸ್ತಕ ನಮಗೇಕೆ ಇಷ್ಟವಾಯಿತು ಎಂದು ಚಿಕ್ಕದೊಂದು ಒಕ್ಕಣೆ ಬರೆದು ಇಡುವುದೂ ಇದೆ.

ಇಂದು ಅಮೆರಿಕದಲ್ಲಿ ಸುಮಾರು ಮೂರು ಕೋಟಿ ಪುಸ್ತಕಗಳು ಈ ಮಿನಿ ಲೈಬ್ರರಿಯ ಮೂಲಕ ಕೈ ಬದಲಾಗುತ್ತವೆ ಎಂಬುದು ಅಂದಾಜು. ನನಗನಿಸಿದಂತೆ ಈ ಸಂಖ್ಯೆ ಅದಕ್ಕಿಂತ ದೊಡ್ಡದು.

ಮಿನಿ ಲೈಬ್ರರಿಯಲ್ಲಿ ಬರೆದಿಟ್ಟ ನೋಟ್‌( ಎಡಚಿತ್ರ), ಶಿಶಿರ ಹೆಗಡೆ (ಬಲಚಿತ್ರ)

Little Free Library ಎಂಬ ಲಾಭಾಪೇಕ್ಷೆಯಿಲ್ಲದ ಸಂಸ್ಥೆ ಇಂತಹ ಮಿನಿ ಲೈಬ್ರರಿಗಳನ್ನು ಮೊದಲು ಸ್ಥಾಪಿಸಲು ಶುರುಮಾಡಿದ್ದು. ಅನಂತರದಲ್ಲಿ ಸ್ಕೌಟ್, ಕಮ್ಯುನಿಟಿ ಸೆಂಟರ್‌ಗಳು, ಶಾಲೆ, ಕ್ಲಬ್ ಮತ್ತು ಸ್ವತಃ ಸರ್ಕಾರಿ ಲೈಬ್ರರಿಗಳು ಕೂಡ ಅಲ್ಲಲ್ಲಿ ಇದನ್ನು ಈಗೀಗ ಸ್ಥಾಪಿಸುತ್ತಿವೆ. ಅಮೆರಿಕದಾದ್ಯಂತ ಈ Little Free Library ಎಂಬ ಸಂಸ್ಥೆಯೊಂದೇ ಸುಮಾರು ಒಂದೂವರೆ ಲಕ್ಷಕ್ಕೂ ಮೀರಿ ಇಂತಹ ಮಿನಿ ಲೈಬ್ರರಿಗಳನ್ನು ರಸ್ತೆಗಳ ಬದಿಯಲ್ಲಿ ಸ್ಥಾಪಿಸಿದೆ. ಇದು ಸ್ವಯಂ ಸೇವಕರಿಂದಲೇ ನಡೆಯುವ ಸಂಸ್ಥೆ. ಸುಮಾರು ಅರವತ್ತು ಸಾವಿರ ಸ್ವಯಂ ಸೇವಕರು ಈ ಸಂಸ್ಥೆಯ ಜೊತೆ ಕೈಜೋಡಿಸಿ ಒಂದು ಚಂದದ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಾರೆ. ಯಾರು ಬೇಕಾದರೂ ಇಲ್ಲಿ ಸ್ವಯಂ ಸ್ವಯಂಸೇವಕರಾಗಬಹುದು.

ಅದೆಲ್ಲದಕ್ಕಿಂತ ಹೆಚ್ಚಾಗಿ ಅಮೆರಿಕನ್ನರು ಇಂತಹ ವ್ಯವಸ್ಥೆಯನ್ನು ಹಾಳು ಮಾಡುವುದಿಲ್ಲ. ಅದನ್ನು ಅತ್ಯಂತ ಜತನದಿಂದ ನೋಡಿಕೊಳ್ಳುತ್ತಾರೆ. ಅದರಲ್ಲಿ ನೀರು ಸೋರಿದರೆ ಸರಿಪಡಿಸುತ್ತಾರೆ. ಈ ಮಿನಿ ಲೈಬ್ರರಿಯ ಬಾಗಿಲು ತೆರೆದಿದ್ದರೆ, ಗಾಳಿಗೆ ತೆಗೆದುಕೊಂಡರೆ ಅದನ್ನು ನೋಡಿ, ಕಾರು ನಿಲ್ಲಿಸಿ ಬಾಗಿಲು ಮುಚ್ಚಿ ಮುಂದಕ್ಕೆ ಹೋಗುತ್ತಾರೆ.

ಇದೇನು ಅನಾದಿ ಕಾಲದ ವ್ಯವಸ್ಥೆಯಲ್ಲ. ತೀರಾ ಇತ್ತೀಚೆ 2009ರಲ್ಲಿ Mr. Todd Bol ಎಂಬ ಪುಸ್ತಕ ಪ್ರೇಮಿ ಮಸ್ತರ್ ತನ್ನ ತಾಯಿಯ ನೆನಪಿಗೆ ಹುಟ್ಟು ಹಾಕಿದ ವ್ಯವಸ್ಥೆ, ಸಂಸ್ಥೆ ಇದು. ಮೊದಲ ಕೆಲವು ಡಬ್ಬಗಳನ್ನು ಇವರೇ ಖುದ್ದು ತಮ್ಮ ಮನೆಯಲ್ಲಿ, ಸ್ವಂತ ಖರ್ಚಲ್ಲಿ ತಯಾರಿಸಿ ನೆಟ್ಟದ್ದು. Mr Todd Bol 2018 ರಲ್ಲಿ ಪಾಂಕ್ರಿಯಾಟಿಸ್ ಕ್ಯಾನ್ಸರ್‌ನಿಂದ ಮೃತರಾದರು. ಅದಕ್ಕಿಂತ ಮೊದಲು ಈ ವ್ಯವಸ್ಥೆ ಜಗತ್ತಿನ ಉಳಿದ ದೇಶಗಳಿಗೆ ಹರಡುವಂತೆ ರೂಪರೇಷೆ ನಿರ್ಮಿಸಿ ಹೋದರು. ಅದರ ಪರಿಣಾಮ ಇಂದು ಈ ವ್ಯವಸ್ಥೆ 88 ದೇಶಗಳಿಗೆ ಹರಡಿದೆ. ಹೀಗೊಂದು ವಿನೂತನ ಅಕ್ಷರ ಸೇವೆಗೆ ಸಾಕ್ಷಿಯಾಗಿದೆ. ಒಂದು ಒಳ್ಳೆಯ ಯೋಚನೆ ರೂಪ ಪಡೆಯುವಾಗ ಸಮಾಜ ಅದರ ಜೊತೆ ಕೈಜೋಡಿಸಿದರೆ ನಾವೆಲ್ಲರೂ ಇಷ್ಟಪಡುವ, ಹೆಮ್ಮೆ ಪಡುವ ವ್ಯವಸ್ಥೆಯೊಂದು ನಿರ್ಮಾಣವಾಗುತ್ತದೆ ಎಂಬುದಕ್ಕೆ ಇದುವೇ ಸಾಕ್ಷಿ.

    ಹಂಚಿಕೊಳ್ಳಲು ಲೇಖನಗಳು