logo
ಕನ್ನಡ ಸುದ್ದಿ  /  ಜೀವನಶೈಲಿ  /  Kannada Rajyotsava Essay: ಕನ್ನಡ ರಾಜ್ಯೋತ್ಸವದ ಬಗ್ಗೆ ಪ್ರಬಂಧ ಬರೆಯಲು ಇಲ್ಲಿದೆ ಸಾಕಷ್ಟು ಮಾಹಿತಿ

Kannada Rajyotsava Essay: ಕನ್ನಡ ರಾಜ್ಯೋತ್ಸವದ ಬಗ್ಗೆ ಪ್ರಬಂಧ ಬರೆಯಲು ಇಲ್ಲಿದೆ ಸಾಕಷ್ಟು ಮಾಹಿತಿ

Meghana B HT Kannada

Oct 30, 2023 10:59 AM IST

68ನೇ ಕನ್ನಡ ರಾಜ್ಯೋತ್ಸವ

    • ಕನ್ನಡ ರಾಜ್ಯೋತ್ಸವದ ಪ್ರಬಂಧ ಹೇಗಿರಬೇಕೆಂದು ನಾವು ನಿಮಗೆ ಒಂದು ಮಾದರಿ ತೋರಿಸುತ್ತಿದ್ದೇವೆ. ಕೇವಲ ಸ್ಪರ್ಧೆಗಾಗಿ ಅಲ್ಲ, ಪ್ರತಿಯೊಬ್ಬ ಕನ್ನಡಿಗರು ಇದರಲ್ಲಿರುವ ಮಾಹಿತಿ ತಿಳಿದುಕೊಳ್ಳುವುದು ಒಳಿತು.
68ನೇ ಕನ್ನಡ ರಾಜ್ಯೋತ್ಸವ
68ನೇ ಕನ್ನಡ ರಾಜ್ಯೋತ್ಸವ

ಕನ್ನಡಿಗರು ಕಾತುರದಿಂದ ಕಾಯುತ್ತಿರುವ ಕನ್ನಡ ರಾಜ್ಯೋತ್ಸವ ಬಂದೇ ಬಿಟ್ಟಿದೆ. ಕನ್ನಡ ಹಬ್ಬ "ಕನ್ನಡ ರಾಜ್ಯೋತ್ಸವ" ಆಚರಣೆಗೆ ನಾವೆಲ್ಲಾ ತುದಿಗಾಲಿನಲ್ಲಿ ನಿಂತಿದ್ದೀವಿ. ಈ ದಿನದ ಅಂಗವಾಗಿ ಶಾಲಾ-ಕಾಲೇಜುಗಳಲ್ಲಿ ಭಾಷಣ ಮತ್ತು ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. "ಎಚ್​ಟಿ ಕನ್ನಡ" ಈಗಾಗಲೇ ಕನ್ನಡ ರಾಜ್ಯೋತ್ಸವದ ಕುರಿತು ಭಾಷಣ ಸಿದ್ಧಪಡಿಸಿತ್ತು. ಅದರ ಲಿಂಕ್​​ ಅನ್ನು ಈ ವರದಿಯ ಕೊನೆಯಲ್ಲಿ ನೀಡಲಾಗಿದೆ. ಇದೀಗ ಕನ್ನಡ ರಾಜ್ಯೋತ್ಸವದ ಪ್ರಬಂಧ ಹೇಗಿರಬೇಕೆಂದು ನಾವು ನಿಮಗೆ ಒಂದು ಮಾದರಿ ತೋರಿಸುತ್ತಿದ್ದೇವೆ. ಕೇವಲ ಸ್ಪರ್ಧೆಗಾಗಿ ಅಲ್ಲ, ಪ್ರತಿಯೊಬ್ಬ ಕನ್ನಡಿಗರು ಇದರಲ್ಲಿರುವ ಮಾಹಿತಿ ತಿಳಿದುಕೊಳ್ಳುವುದು ಒಳಿತು.

ಟ್ರೆಂಡಿಂಗ್​ ಸುದ್ದಿ

ಪಾಯಸದಿಂದ ಕೇಸರಿಬಾತ್‌ವರೆಗೆ, ಬಾಯಲ್ಲಿ ನೀರೂರಿಸುವ ಮಾವಿನಹಣ್ಣಿನ ಸಾಂಪ್ರದಾಯಿಕ ತಿನಿಸುಗಳಿವು; ಈ ರೆಸಿಪಿಗಳನ್ನು ನೀವೂ ಟ್ರೈ ಮಾಡಿ

ನುಡಿಯ ನೇತಾರ ನಾಲಿಗೆ: ಉಪ್ಪು, ಹುಳಿ, ಸಿಹಿ ತಿಳಿಯುವ ಜಿಹ್ವೆಗೆ ಖಾರವೇಕೆ ಗೊತ್ತಾಗಲ್ಲ? ನಾಲಿಗೆ ಬಗ್ಗೆ ನಿಮಗೆಷ್ಟು ಗೊತ್ತು? -ಜ್ಞಾನ ವಿಜ್ಞಾನ

World Hypertension Day: ಸೈಲೆಂಟ್‌ ಕಿಲ್ಲರ್‌ ಆಗಿ ಕಾಡುತ್ತಿದೆ ಅಧಿಕ ರಕ್ತದೊತ್ತಡ; ಆರಂಭಿಕ ಹಂತದ ಈ ಚಿಹ್ನೆಗಳನ್ನ ನಿರ್ಲಕ್ಷ್ಯ ಮಾಡದಿರಿ

Personality Test: ಕರಡಿನಾ ಚಾಕುನಾ, ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು? ನಿಮ್ಮ ಸ್ವಭಾವ ಹೇಗೆ ತಿಳಿಸುತ್ತೆ ಈ ಚಿತ್ರ

ಕನ್ನಡ ರಾಜ್ಯೋತ್ಸವದ ಬಗ್ಗೆ ಪ್ರಬಂಧ ಹೀಗಿದೆ:

"ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು. ಕನ್ನಡವೇ ಸತ್ಯ, ಕನ್ನಡವೇ ನಿತ್ಯ" - ಇದು ರಾಷ್ಟ್ರಕವಿ, ಮಹಾಕವಿ ಕುವೆಂಪು ಅವರು ರಚಿಸಿದ ಗೀತೆಯ ಮೊದಲ ಸಾಲುಗಳು. ನಾವು ಎಲ್ಲೇ ಹೋದ್ರೂ, ಎಲ್ಲೇ ಇದ್ರೂ, ಯಾವತ್ತಿಗೂ ಕೂಡ ಕನ್ನಡವನ್ನು ಬಿಟ್ಟುಕೊಡಬಾರದು ಎಂಬುದನ್ನು ಈ ಸಾಲು ಒತ್ತಿ ಹೇಳುತ್ತದೆ. ಕೇವಲ ಭಾಷೆಯಾಗದೆ ಭಾವನೆಯೂ ಆಗಿದೆ ಕನ್ನಡ. ಬನ್ನಿ ಕನ್ನಡ ರಾಜ್ಯೋತ್ಸವದ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.

ಕರ್ನಾಟಕ ರಾಜ್ಯಕ್ಕೆ ಮೊದಲು ಇದ್ದ ಹೆಸರು ಮೈಸೂರು ರಾಜ್ಯ ಎಂದು. 1950 ರಲ್ಲಿಭಾರತವು ಗಣರಾಜ್ಯವಾಯಿತು. ಆ ಬಳಿಕ ನಿರ್ದಿಷ್ಟ ಪ್ರದೇಶದಲ್ಲಿ ಮಾತನಾಡುವ ಭಾಷೆಯ ಆಧಾರದ ಮೇಲೆ ದೇಶದಲ್ಲಿ ವಿವಿಧ ರಾಜ್ಯಗಳು ರಚನೆಯಾಗಲು ಆರಂಭವಾಯಿತು. ಅಂತೆಯೇ 1956ರ ನವೆಂಬರ್‌ 1ರಂದು ವಿವಿಧ ಪ್ರದೇಶಗಳಲ್ಲಿ ಕನ್ನಡ ಮಾತನಾಡುತ್ತಿದ್ದ ಜನರನ್ನು ಒಗ್ಗೂಡಿಸಿ ಮೈಸೂರು ರಾಜ್ಯ ರಚನೆಯಾಯಿತು. 1973ರ ನವೆಂಬರ್‌ 1ರಂದು ರಾಜ್ಯದ ಹೆಸರನ್ನು ಕರ್ನಾಟಕ ಎಂದು ಬದಲಾಯಿಸಲಾಯಿತು.

ಕರ್ನಾಟಕ ಏಕೀಕರಣ ಚಳುವಳಿ ಮತ್ತು ರಾಜ್ಯೋತ್ಸವದ ಇತಿಹಾಸ

ತುಂಬಾ ಸುಲಭವಾಗಿ ಕನ್ನಡಿರನ್ನು ಒಂದುಗೂಡಿಸಿ ಕರ್ನಾಟಕ ರಾಜ್ಯ ರಚನೆಯಾಗಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಎಷ್ಟೋ ವರ್ಷಗಳ ಮೊದಲೇ ಹೋರಾಟ ಶುರುವಾಗಿತ್ತು. 1890ರಲ್ಲಿ ಧಾರವಾಡದಲ್ಲಿ ಆರ್.ಎಚ್.ದೇಶಪಾಂಡೆ ಅವರು ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ರಚಿಸಿದ್ದರು. 1905 ರಲ್ಲಿ ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟರಾವ್‌, ಕರ್ನಾಟಕ ಏಕೀಕರಣ ಚಳುವಳಿಯನ್ನು ಪ್ರಾರಂಭಿಸಿದರು. ಹರಿದು ಹಂಚಿಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳನ್ನು 1956ರಲ್ಲಿ ಒಂದುಗೂಡಿಸಲಾಯಿತು. ಕುವೆಂಪು, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎ ಎನ್‌ ಕೃಷ್ಣ ರಾವ್ ಮತ್ತು ಬಿ ಎಂ ಶ್ರೀ ಕಂಠಯ್ಯ ಸೇರಿದಂತೆ ಹಲವು ಮಹನೀಯರು ಕರ್ನಾಟಕ ಏಕೀಕರಣಕ್ಕೆ ಕಾರಣರಾದರು. ಕನ್ನಡ ಎಂದಾಕ್ಷಣ ಇವರ ಹೆಸರುಗಳನ್ನು ನಾವು ಎಂದಿಗೂ ಸ್ಮರಿಸಲೇಬೇಕು. ಉತ್ತರ ಕರ್ನಾಟಕದ ಜನರ ತರ್ಕ ಮಾನ್ಯತೆಗಾಗಿ ನವೆಂಬರ್‌ 1, 1973 ರಂದು ಮೈಸೂರು ಹೆಸರನ್ನು ಕರ್ನಾಟಕ ಎಂದು ಬದಲಾಯಿಸಲಾಯಿತು. ಈ ಮಹತ್ವದ ನಿರ್ಧಾರ ತೆಗೆದುಕೊಳ್ಳುವಾಗ ದೇವರಾಜ ಅರಸ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಕರ್ನಾಟಕ ರಾಜ್ಯ ರೂಪುಗೊಂಡಾಗ ಒಟ್ಟು 19 ಜಿಲ್ಲೆಗಳಿತ್ತು. ಇದೀಗ ಕರ್ನಾಟಕದಲ್ಲಿ 31 ಜಿಲ್ಲೆಗಳಿವೆ.

1956ರ ನವೆಂಬರ್​ 1 ರಿಂದ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿಕೊಂಡು ಬರಲಾಗಿದ್ದು, ಈ ಬಾರಿ ನಾವು 68ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಎಲ್ಲೆಲ್ಲೂ ಕನ್ನಡ ಬಾವುಟ ಹಾರಾಡಲಿದೆ. ನಾಡಗೀತೆ ಮೊಳಗಲಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಕನ್ನಡದ ಸಾಧಕರಿಗೆ ಕರ್ನಾಟಕ ಸರ್ಕಾರ ಇಂದು ಪ್ರಶಸ್ತಿ ಪ್ರಕಟಿಸುತ್ತದೆ, ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಕರ್ನಾಟಕ ಮಾತ್ರವಲ್ಲದೇ ಬೇರೆ ರಾಜ್ಯ, ಬೇರೆ ದೇಶಗಳಲ್ಲಿರುವ ಕನ್ನಡಿಗರು ಈ ದಿನವನ್ನು ಹಬ್ಬದಂತೆ ಆಚರಿಸುತ್ತಾರೆ.

ಕರ್ನಾಟಕದ ಬಾವುಟ

ನಮ್ಮ ಕರ್ನಾಟಕವನ್ನು ಕನ್ನಡ ನಾಡು, ಕರುನಾಡು, ಶ್ರಿಗಂಧದ ನಾಡು ಎಂದೂ ಕರೆಯಲಾಗುತ್ತದೆ. ನಮ್ಮ ನಾಡ ದೇವಿ ಭುವನೇಶ್ವರಿ. ಕುವೆಂಪು ರಚನೆಯ 'ಜಯ ಭಾರತ ಜನನೀಯ ತನುಜಾತೆ. ಜಯಹೇ ಕರ್ನಾಟಕ ಮಾತೆ' ಗೀತೆಯು ನಮ್ಮ ನಾಡಗೀತೆಯಾಗಿದೆ. ನಮ್ಮ ರಾಜ್ಯದ ಬಾವುಟ ಹಳದಿ ಮತ್ತು ಕೆಂಪು ಬಣ್ಣದಿಂದ ಕೂಡಿದೆ. ಕನ್ನಡ ಹೋರಾಟಗಾರ ಎಂ ರಾಮಮೂರ್ತಿ ಅವರು ಹಳದಿ ಹಾಗೂ ಕೆಂಪು ಬಣ್ಣದಿಂದ ಕೂಡಿದ ಬಾವುಟವನ್ನು ಸಿದ್ದಪಡಿದ್ದರು. ಹಳದಿ ಬಣ್ಣವು ಶಾಂತಿ ಮತ್ತು ಸೌಹಾರ್ದತೆ ಸೂಚಿಸುತ್ತದೆ. ಕೆಂಪು ಬಣ್ಣವು ಕ್ರಾಂತಿಯ ಸಂಕೇತವಾಗಿದೆ. ಹಾಗೆಯೇ ಇದು ಕನ್ನಡಾಂಬೆ ಭುವನೇಶ್ವರಿಯ ಅರಿಶಿನ-ಕುಂಕುಮದ ಸಂಕೇತವೂ ಆಗಿದೆ.

ಇತ್ತೀಚಿನ ವರ್ಷಗಳಲ್ಲಿ ಕನ್ನಡದ ಸ್ಥಿತಿಗತಿ ಬದಲಾಗಿದೆ. ಕನ್ನಡದ ಮೇಲೆ ಇತರೆ ಭಾಷಿಕರ ದಬ್ಬಾಳಿಕೆ ಹೆಚ್ಚಾಗಿದೆ. ಕನ್ನಡಿಗರಿಗೆ ಉದ್ಯೋಗ ದೊರಕುವುದು ಕಷ್ಟವಾಗಿದೆ. ಇಂತಹ ಸಮಯದಲ್ಲಿ ಕನ್ನಡದ ಅಸ್ಮಿತೆಗಾಗಿ ಎಲ್ಲರೂ ಹೋರಾಡಬೇಕಾಗಿದೆ. ಕೇವಲ ಈ ದಿನ ಮಾತ್ರ ಕನ್ನಡ ರಾಜ್ಯೋತ್ಸವ ಆಚರಿಸಿದರೆ ಕನ್ನಡ ಉಳಿಸಿದಂತೆ ಆಗುವುದಿಲ್ಲ. ಕನ್ನಡ ನಮ್ಮ ಉಸಿರಾಗಿರಬೇಕು. ಎಂತಹ ಸಂದರ್ಭದಲ್ಲೂ ಕನ್ನಡ ಬಿಟ್ಟುಕೊಡಬಾರದು. ಬೇರೆ ಭಾಷೆಗಳನ್ನು ಕಲಿಯುವುದು ಖಂಡಿತ ತಪ್ಪಲ್ಲ. ಆದರೆ ಬೇರೆ ಭಾಷೆ ಕಲಿತು ಕನ್ನಡ ಮರೆಯುವುದು ತಪ್ಪು. ಈ ಸುಂದರ ಸಂಭ್ರಮದ ದಿನದಂದು ನಾವೆಲ್ಲರೂ ನಮ್ಮ ನೆಲ, ಜಲ, ಭಾಷೆ ಉಳಿವಿಗಾಗಿ ಪಣ ತೊಡಬೇಕಾಗಿದೆ.

    ಹಂಚಿಕೊಳ್ಳಲು ಲೇಖನಗಳು