logo
ಕನ್ನಡ ಸುದ್ದಿ  /  ಜೀವನಶೈಲಿ  /  Kannada Rajyotsava Speech: ಕನ್ನಡ ರಾಜ್ಯೋತ್ಸವಕ್ಕೆ ಶಾಲಾ ಮಕ್ಕಳಿಗಾಗಿ ಇಲ್ಲಿದೆ ಭಾಷಣ

Kannada Rajyotsava Speech: ಕನ್ನಡ ರಾಜ್ಯೋತ್ಸವಕ್ಕೆ ಶಾಲಾ ಮಕ್ಕಳಿಗಾಗಿ ಇಲ್ಲಿದೆ ಭಾಷಣ

Meghana B HT Kannada

Oct 27, 2023 06:00 AM IST

ಕನ್ನಡ ರಾಜ್ಯೋತ್ಸವ

    • Kannada Rajyotsava Speech 2023: ನವೆಂಬರ್‌ 1ರಂದು ಕನ್ನಡ ರಾಜ್ಯೋತ್ಸವ ಹಿನ್ನೆಲೆ ಸಾಮಾನ್ಯವಾಗಿ ಶಾಲಾ-ಕಾಲೇಜುಗಳಲ್ಲಿ ಭಾಷಣವನ್ನು ಏರ್ಪಡಿಸಲಾಗಿರುತ್ತದೆ. ಭಾಷಣ ಸ್ಫರ್ಧೆಗಳನ್ನೂ ನಡೆಸಲಾಗುತ್ತದೆ. ಶಾಲಾ ಮಕ್ಕಳಿಗಾಗಿ ನಾವಿಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಒಂದು ಮಾದರಿಯ ಭಾಷಣ ಸಿದ್ಧಪಡಿಸಿದ್ದೇವೆ. ಹೀಗಿದೆ ಭಾಷಣ..
ಕನ್ನಡ ರಾಜ್ಯೋತ್ಸವ
ಕನ್ನಡ ರಾಜ್ಯೋತ್ಸವ

ಕನ್ನಡದ ಕಂಪು ಬೀರಲು, ಕನ್ನಡದ ಹಬ್ಬ ಮಾಡಲು ಕರ್ನಾಟಕ ಸಿದ್ಧವಾಗುತ್ತಿದೆ. ಹೌದು, ಕನ್ನಡ ರಾಜ್ಯೋತ್ಸವಕ್ಕೆ ಬೆರಳೆಣಿಕೆಯಷ್ಟು ದಿನಗಳಿವೆ. ರಾಜ್ಯದ ಶಾಲಾ-ಕಾಲೇಜುಗಳಲ್ಲಿ, ಸರ್ಕಾರಿ-ಖಾಸಗಿ ಕಚೇರಿಗಳಲ್ಲಿ, ಸಂಘಸಂಸ್ಥೆಗಳಲ್ಲಿ ಮಾತ್ರವಲ್ಲ ಗಲ್ಲಿ-ಗಲ್ಲಿಗಳಲ್ಲೂ ನಮ್ಮ ಕನ್ನಡಿಗರು ಇದನ್ನು ಹಬ್ಬದಂತೆ ಆಚರಿಸುತ್ತಾರೆ. ಕನ್ನಡ ಭಾಷೆಯ ಮಹತ್ವವನ್ನು ಜಗತ್ತಿಗೆ ಸಾರುವ ದಿನವಿದು. ಕನ್ನಡಕ್ಕಾಗಿ ದುಡಿದವರ ನೆನೆಯುವ ದಿನವಿದು. ಕನ್ನಡಕ್ಕಾಗಿ ಮಿಡಿಯುವ ಹೃದಯಗಳ ವಿಶೇಷ ದಿನವಿದು.

ಟ್ರೆಂಡಿಂಗ್​ ಸುದ್ದಿ

ಪಾಯಸದಿಂದ ಕೇಸರಿಬಾತ್‌ವರೆಗೆ, ಬಾಯಲ್ಲಿ ನೀರೂರಿಸುವ ಮಾವಿನಹಣ್ಣಿನ ಸಾಂಪ್ರದಾಯಿಕ ತಿನಿಸುಗಳಿವು; ಈ ರೆಸಿಪಿಗಳನ್ನು ನೀವೂ ಟ್ರೈ ಮಾಡಿ

ನುಡಿಯ ನೇತಾರ ನಾಲಿಗೆ: ಉಪ್ಪು, ಹುಳಿ, ಸಿಹಿ ತಿಳಿಯುವ ಜಿಹ್ವೆಗೆ ಖಾರವೇಕೆ ಗೊತ್ತಾಗಲ್ಲ? ನಾಲಿಗೆ ಬಗ್ಗೆ ನಿಮಗೆಷ್ಟು ಗೊತ್ತು? -ಜ್ಞಾನ ವಿಜ್ಞಾನ

World Hypertension Day: ಸೈಲೆಂಟ್‌ ಕಿಲ್ಲರ್‌ ಆಗಿ ಕಾಡುತ್ತಿದೆ ಅಧಿಕ ರಕ್ತದೊತ್ತಡ; ಆರಂಭಿಕ ಹಂತದ ಈ ಚಿಹ್ನೆಗಳನ್ನ ನಿರ್ಲಕ್ಷ್ಯ ಮಾಡದಿರಿ

Personality Test: ಕರಡಿನಾ ಚಾಕುನಾ, ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು? ನಿಮ್ಮ ಸ್ವಭಾವ ಹೇಗೆ ತಿಳಿಸುತ್ತೆ ಈ ಚಿತ್ರ

ಈ ದಿನದಂದು ಸಾಮಾನ್ಯವಾಗಿ ಶಾಲಾ-ಕಾಲೇಜುಗಳಲ್ಲಿ ಭಾಷಣವನ್ನು ಏರ್ಪಡಿಸಲಾಗಿರುತ್ತದೆ. ಭಾಷಣ ಸ್ಫರ್ಧೆಗಳನ್ನೂ ನಡೆಸಲಾಗುತ್ತದೆ. ಶಾಲಾ ಮಕ್ಕಳಿಗಾಗಿ ನಾವಿಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಒಂದು ಮಾದರಿಯ ಭಾಷಣ ಸಿದ್ಧಪಡಿಸಿದ್ದೇವೆ. ಹೀಗಿದೆ ಭಾಷಣ..

"ಸನ್ಮಾನ್ಯ ಸಭಾಧ್ಯಕ್ಷರೇ, ವೇದಿಕೆಯಲ್ಲಿ ಆಸೀನರಾದ ಅತಿಥಿಗಳೇ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರೇ ಹಾಗೂ ನನ್ನ ಸಹಪಾಠಿಗಳೇ.. ಎಲ್ಲರಿಗೂ 68ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

ಕನ್ನಡಿಗರಾದ ನಾವು ಕಾತುರದಿಂದ ಕಾಯುತ್ತಿದ್ದ ದಿನ ಬಂದೇ ಬಿಟ್ಟಿದೆ. ಇಂದು ನವೆಂಬರ್‌ 1. ಅಂದರೆ ಜಾತಿ-ಧರ್ಮದ ಬೇಧಭಾವವಿಲ್ಲದೇ ಕನ್ನಡಿಗರೆಲ್ಲಾ ಹಬ್ಬ ಆಚರಿಸುವ ದಿನ. ಅದೇ ಕನ್ನಡ ರಾಜ್ಯೋತ್ಸವದ ದಿನ. ಇಂದು ನಾವು 68ನೇ ಕನ್ನಡ ರಾಜ್ಯೋತ್ಸವ ಆಚರಿಸಲು ಇಲ್ಲಿ ಸೇರಿದ್ದೇವೆ.

ಈಗಿನ ಕರ್ನಾಟಕವು ಮೊದಲು ಮೈಸೂರು ರಾಜ್ಯವಾಗಿತ್ತು. ಇದು 1956ರ ನವೆಂಬರ್‌ 1ರಂದು ನಿರ್ಮಾಣವಾಯಿತು. ಮೈಸೂರು ಸಂಸ್ಥಾನ, ಮುಂಬೈ ಕರ್ನಾಟಕ, ಹೈದರಾಬಾದ್‌ ಕರ್ನಾಟಕ ಹಾಗೂ ಮದ್ರಾಸ್‌ ಕರ್ನಾಟಕ ಎಂದು ನಾಲ್ಕು ಭಾಗಗಳಾಗಿದ್ದ ಕನ್ನಡ ನಾಡು ಈ ದಿನ ರಾಜಕೀಯವಾಗಿ ಒಂದಾಯಿತು. ದಕ್ಷಿಣ ಭಾರತದ ಕನ್ನಡ ಭಾಷೆ ಮಾತನಾಡುವ ಎಲ್ಲ ಪ್ರದೇಶಗಳನ್ನು ವಿಲೀನಗೊಲೀಸಿ ಒಂದು ರಾಜ್ಯವಾಗಿ ಘೋಷಣೆ ಮಾಡಿದ ಈ ದಿನವನ್ನು ಕನ್ನಡ ರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ.

ಕನ್ನಡದ ಕುಲಪುರೋಹಿತ ಎಂದು ಬಿರುದು ಪಡೆದ ಆಲೂರು ವೆಂಕಟರಾವ್‌ ಅವರು 1905 ರಲ್ಲಿ ಕರ್ನಾಟಕ ಏಕೀಕರಣ ಚಳುವಳಿಯನ್ನು ಪ್ರಾರಂಭಿಸಿದರು. 1950ರಲ್ಲಿ, ಭಾರತವು ಗಣರಾಜ್ಯವಾದ ನಂತರ ಭಾರತದ ವಿವಿಧ ಪ್ರಾಂತ್ಯಗಳು, ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ರೂಪುಗೊಂಡವು. ಈ ಹಿಂದೆ ರಾಜರ ಆಳ್ವಿಕೆಯಲ್ಲಿ ದಕ್ಷಿಣ ಭಾರತದಲ್ಲಿ ಹಲವಾರು ಸಂಸ್ಥಾನಗಳನ್ನು ಒಳಗೊಂಡಂತೆ ರಾಜ್ಯಗಳು ರೂಪುಗೊಂಡಿದ್ದವು. ಕನ್ನಡ ಮಾತನಾಡುವ ಪ್ರಾಂತ್ಯಗಳು ಸೇರಿ, ಮೈಸೂರು ರಾಜ್ಯವು ಉದಯವಾಯಿತು. ಮೈಸೂರು ರಾಜ್ಯವು ಬಳಿಕ ಕರ್ನಾಟಕ ಎಂಬ ಹೆಸರು ಪಡೆಯಿತು.

ಕುವೆಂಪು, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎ ಎನ್‌ ಕೃಷ್ಣ ರಾವ್ ಮತ್ತು ಬಿ ಎಂ ಶ್ರೀ ಕಂಠಯ್ಯ ಸೇರಿದಂತೆ ಹಲವು ಮಹನೀಯರು ಕರ್ನಾಟಕ ಏಕೀಕರಣಕ್ಕೆ ಕಾರಣರಾದರು. ಅವರೆಲ್ಲರನ್ನೂ ಇಂದು ಸ್ಮರಿಸಬೇಕಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಕನ್ನಡದ ಸ್ಥಿತಿಗತಿ ಬದಲಾಗಿದೆ. ಕನ್ನಡದ ಮೇಲೆ ಇತರೆ ಭಾಷಿಕರ ದಬ್ಬಾಳಿಕೆ ಹೆಚ್ಚಾಗಿದೆ. ಕನ್ನಡಿಗರಿಗೆ ಉದ್ಯೋಗ ದೊರಕುವುದು ಕಷ್ಟವಾಗಿದೆ. ಇಂತಹ ಸಮಯದಲ್ಲಿ ಕನ್ನಡದ ಅಸ್ಮಿತೆಗಾಗಿ ಎಲ್ಲರೂ ಹೋರಾಡಬೇಕಾಗಿದೆ. ಕೇವಲ ಈ ದಿನ ಮಾತ್ರ ಕನ್ನಡ ರಾಜ್ಯೋತ್ಸವ ಆಚರಿಸಿದರೆ ಕನ್ನಡ ಉಳಿಸಿದಂತೆ ಆಗುವುದಿಲ್ಲ. ಕನ್ನಡ ನಮ್ಮ ಉಸಿರಾಗಿರಬೇಕು. ಎಂತಹ ಸಂದರ್ಭದಲ್ಲೂ ಕನ್ನಡ ಬಿಟ್ಟುಕೊಡಬಾರದು. ಬೇರೆ ಭಾಷೆಗಳನ್ನು ಕಲಿಯುವುದು ಖಂಡಿತ ತಪ್ಪಲ್ಲ. ಆದರೆ ಬೇರೆ ಭಾಷೆ ಕಲಿತು ಕನ್ನಡ ಮರೆಯುವುದು ತಪ್ಪು. ಈ ಸುಂದರ ಸಂಭ್ರಮದ ದಿನದಂದು ನಾವೆಲ್ಲರೂ ಕನ್ನಡದ ಉಳಿವಿಗಾಗಿ ಪಣ ತೊಡಬೇಕಾಗಿದೆ.

ಎಲ್ಲಾದರು ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು.. ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂಬ ಕುವೆಂಪು ಅವರ ಸಾಲುಗಳನ್ನು ನೆನೆಯುತ್ತಾ ನನ್ನ ಈ ಪುಟ್ಟ ಭಾಷಣ ಮುಗಿಸುತ್ತಿದ್ದೇನೆ. ಜೈ ಕರ್ನಾಟಕ ಮಾತೆ.."

    ಹಂಚಿಕೊಳ್ಳಲು ಲೇಖನಗಳು