logo
ಕನ್ನಡ ಸುದ್ದಿ  /  ಜೀವನಶೈಲಿ  /  ಪ್ರವಾಸದ ವೇಳೆ ಮಕ್ಕಳನ್ನು ಕಾಡುವ ಹೊಟ್ಟೆಯ ಸಮಸ್ಯೆಗೆ ಇಲ್ಲಿದೆ ತಜ್ಞರ ಪರಿಹಾರ, ಬೇಸಿಗೆಯಲ್ಲಿ ಪ್ರಯಾಣ ಮಾಡುವಾಗ ಈ ಕ್ರಮ ಪಾಲಿಸಿ

ಪ್ರವಾಸದ ವೇಳೆ ಮಕ್ಕಳನ್ನು ಕಾಡುವ ಹೊಟ್ಟೆಯ ಸಮಸ್ಯೆಗೆ ಇಲ್ಲಿದೆ ತಜ್ಞರ ಪರಿಹಾರ, ಬೇಸಿಗೆಯಲ್ಲಿ ಪ್ರಯಾಣ ಮಾಡುವಾಗ ಈ ಕ್ರಮ ಪಾಲಿಸಿ

Reshma HT Kannada

Mar 28, 2024 05:51 PM IST

google News

ಪ್ರವಾಸದ ವೇಳೆ ಮಕ್ಕಳನ್ನು ಕಾಡುವ ಹೊಟ್ಟೆಯ ಸಮಸ್ಯೆಗೆ ಇಲ್ಲಿದೆ ತಜ್ಞರ ಪರಿಹಾರ

    • ಮಕ್ಕಳೊಂದಿಗೆ ಪ್ರವಾಸಕ್ಕೆ ಹೊರಡುವ ವಿಚಾರಕ್ಕೆ ಬಂದರೆ ಪೋಷಕರು ಸಾಕಷ್ಟು ಚಿಂತಿಸುತ್ತಾರೆ. ಅದಕ್ಕೆ ಕಾರಣಕ್ಕೆ ಮಕ್ಕಳಲ್ಲಿ ಉಂಟಾಗುವ ಹೊಟ್ಟೆಯ ಸಮಸ್ಯೆ. ಹೊಟ್ಟೆ ನೋವು, ವಾಕರಿಕೆ, ಅಜೀರ್ಣದಂತಹ ಸಮಸ್ಯೆಗಳು ಪ್ರವಾಸದ ಖುಷಿಯನ್ನು ಹಾಳು ಮಾಡುತ್ತವೆ. ಇದನ್ನು ತಡೆಯುವ ಪ್ರವಾಸವನ್ನು ಎಂಜಾಯ್‌ ಮಾಡಲು ಪೋಷಕರಿಗೆ ಇಲ್ಲಿದೆ ಸಲಹೆ. (ಬರಹ: ಪ್ರಿಯಾಂಕ ಗೌಡ)
ಪ್ರವಾಸದ ವೇಳೆ ಮಕ್ಕಳನ್ನು ಕಾಡುವ ಹೊಟ್ಟೆಯ ಸಮಸ್ಯೆಗೆ ಇಲ್ಲಿದೆ ತಜ್ಞರ ಪರಿಹಾರ
ಪ್ರವಾಸದ ವೇಳೆ ಮಕ್ಕಳನ್ನು ಕಾಡುವ ಹೊಟ್ಟೆಯ ಸಮಸ್ಯೆಗೆ ಇಲ್ಲಿದೆ ತಜ್ಞರ ಪರಿಹಾರ

ಕಳೆದ ಮೂರ್ನಾಲ್ಕು ವರ್ಷಗಳ ಕಾಲ ಕೊರೊನಾ ಸಾಂಕ್ರಾಮಿಕದ ಭೀತಿ ಇರುವ ಕಾರಣ ಹಲವರು ಪ್ರವಾಸ, ಪಿಕ್ನಿಕ್‌ಗಳಿಗೆ ತಾತ್ಕಾಲಿಕ ಬ್ರೇಕ್‌ ಹಾಕಿದ್ದರು. ಇದೀಗ ಪ್ರಪಂಚದಾದ್ಯಂತ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ್ದು, ತಮ್ಮ ಬಕೆಟ್‌ ಲಿಸ್ಟ್‌ನಲ್ಲಿರುವ ತಾಣಗಳಿಗೆ ಪ್ರವಾಸ ಹೊರಡಲು ಸಜ್ಜಾಗಿದ್ದಾರೆ. ಯಂಗ್‌ಸ್ಟರ್ಸ್‌ಗಳು ಮಾತ್ರವಲ್ಲ, ಮಕ್ಕಳಿರುವ ದಂಪತಿ ಕೂಡ ಪ್ರವಾಸ ಹೊರಡಲು ಸಜ್ಜಾಗಿದ್ದಾರೆ. ಅದಕ್ಕೆ ಕಾರಣ ಬೇಸಿಗೆ ರಜೆ.

ಆದರೆ ಮಕ್ಕಳಿರುವ ಪೋಷಕರು ಪ್ರವಾಸಕ್ಕೆ ಹೊರಡುವ ಮುನ್ನ ಸಾಕಷ್ಟು ಚಿಂತಿಸುತ್ತಾರೆ. ಯಾಕೆಂದರೆ ಪ್ರಯಾಣದ ವೇಳೆ ಮಕ್ಕಳು ಹೆಚ್ಚಾಗಿ ಹೊಟ್ಟೆಯ ಸಮಸ್ಯೆ ಅಂದರೆ ಹೊಟ್ಟೆ ನೋವು, ವಾಕರಿಕೆಯಂತಹ ಸಮಸ್ಯೆಗಳು ಎದುರಾಗಬಹುದು. ಇದರಿಂದ ಪ್ರವಾಸದ ವೇಳೆ ಮಕ್ಕಳೂ, ಪೋಷಕರು ಇಬ್ಬರೂ ತೊಂದರೆ ಅನುಭವಿಸುತ್ತಾರೆ. ಈ ಕಾರಣಕ್ಕೆ ಮಕ್ಕಳೊಂದಿಗೆ ಪ್ರವಾಸಕ್ಕೆ ಹೋಗಲು ಪೋಷಕರು ಸಾಕಷ್ಟು ಯೋಚಿಸುತ್ತಾರೆ.

ಪ್ರವಾಸ ಎಂದರೆ ಮಕ್ಕಳು ಖುಷಿಯಿಂದ ಹೊರಡುವುದು ಸಹಜ. ಆದರೆ, ಅತಿಸಾರ, ಮಲಬದ್ಧತೆ, ವಾಂತಿ ಮತ್ತು ಅಜೀರ್ಣದಂತಹ ಹೊಟ್ಟೆಯ ಸಮಸ್ಯೆ ಅವರನ್ನು ಬಳಲುವಂತೆ ಮಾಡುತ್ತದೆ. ವಯಸ್ಕರಿಗಿಂತ ಮಕ್ಕಳಿಗೆ ಈ ಸಮಸ್ಯೆ ಹೆಚ್ಚು ಕಾಡುತ್ತದೆ. ಪ್ರಯಾಣವು ಮಕ್ಕಳ ಜೀರ್ಣಕ್ರಿಯೆ ಸೇರಿದಂತೆ ದೇಹದ ಅನೇಕ ನೈಸರ್ಗಿಕ ಲಯಗಳನ್ನು ಅಡ್ಡಿಪಡಿಸುತ್ತದೆ. ಮಕ್ಕಳ ಕರುಳು ತುಂಬಾ ಸೂಕ್ಷ್ಮವಾಗಿರುವುದರಿಂದ ಬದಲಾದ ಆಹಾರದ ವೇಳಾಪಟ್ಟಿಗಳು, ನಿದ್ರಾಹೀನತೆಯಂತಹ ಸಮಸ್ಯೆಗಳು ಹೆಚ್ಚು ಕಾಡುತ್ತವೆ ಎಂದು ತಜ್ಞರು ಹೇಳುತ್ತಾರೆ.

ಸಾಮಾನ್ಯವಾಗಿ ಪ್ರಯಾಣದ ಸಮಯದಲ್ಲಿ ವಯಸ್ಕರಲ್ಲಿ ಕಂಡುಬರುವ ವಾಕರಿಕೆ ಮತ್ತು ವಾಂತಿಗಿಂತ ಹೆಚ್ಚಾಗಿ ಮಕ್ಕಳಲ್ಲಿ ಆಯಾಸ, ಕಿರಿಕಿರಿ, ಚಡಪಡಿಕೆ, ತಲೆತಿರುಗುವುದು, ಅತಿಯಾದ ಆಕಳಿಕೆ ಸೇರಿದಂತೆ ಹಲವು ರೋಗಲಕ್ಷಣಗಳು ವಿಭಿನ್ನವಾಗಿ ವ್ಯಕ್ತವಾಗಬಹುದು. ಹೀಗಾಗಿ ಮಕ್ಕಳು ತಮ್ಮ ಪ್ರಯಾಣದಲ್ಲಿ ಮುಖ್ಯವಾಗಿ ಹೊಟ್ಟೆನೋವಿನ ಸಮಸ್ಯೆಗಳಿಂದ ಬಳಲುತ್ತಾರೆ.

ಈ ರೋಗಲಕ್ಷಣವನ್ನು ನಿರ್ವಹಿಸುವುದು ಹೇಗೆ?

ಪ್ರಯಾಣದ ವೇಳೆ ಹೊಟ್ಟೆನೋವಿನ ಸಮಸ್ಯೆಯಿಂದ ಬಳಲುವ ಮಕ್ಕಳನ್ನು ನಿರ್ವಹಿಸಲು ಪೋಷಕರು ಹೆಣಗಾಡುತ್ತಿರುತ್ತಾರೆ. ಕೆಲವು ಮಕ್ಕಳಿಗೆ ವಾಂತಿ ಸಮಸ್ಯೆ ಕಾಡಿದರೆ ಇನ್ನೂ ಕೆಲ ಮಕ್ಕಳಿಗೆ ಬೇಧಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆಯನ್ನು ನಿರ್ವಹಿಸುವುದು ಹೇಗೆ ಎಂಬುದಕ್ಕೆ ಇಲ್ಲಿದೆ ಪೋಷಕರಿಗೆ ಸಲಹೆ.

- ವಾಹನದಲ್ಲಿ ಉತ್ತಮ ವಾತಾಯನ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

- ಮಕ್ಕಳನ್ನು ವಾಹನದ ಕಿಟಕಿಯಿಂದ ಹೊರಗೆ ನೋಡಲು ಮತ್ತು ದೂರದಲ್ಲಿರುವ ಸ್ಥಿರ ಬಿಂದುವನ್ನು ಕೇಂದ್ರೀಕರಿಸುವಂತೆ ಪ್ರೋತ್ಸಾಹಿಸಿ.

- ಪ್ರಯಾಣದ ಸಮಯದಲ್ಲಿ ಮೊಬೈಲ್ ವೀಕ್ಷಣೆ ಅಥವಾ ಓದುವಿಕೆಯನ್ನು ಮಿತಿಗೊಳಿಸಿ.

- ಮಕ್ಕಳಿಗೆ ಶುಂಠಿ ಮಿಶ್ರಣವಾಗಿರುವ ತಿಂಡಿಗಳು ಅಥವಾ ಪಾನೀಯಗಳನ್ನೇ ನೀಡಿ. ಏಕೆಂದರೆ ಶುಂಠಿಯು ವಾಕರಿಕೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ

- ಪ್ರಯಾಣದ ಸಮಯದಲ್ಲಿ ನಿರಂತರ ದೀರ್ಘ ಪ್ರಯಾಣ ಮಾಡದೆ ಮಧ್ಯೆ ಮಧ್ಯೆ ನಿಲ್ಲಿಸಿ, ಆಗಾಗ ವಿಶ್ರಾಂತಿ ಪಡೆಯುತ್ತಾ ಸಾಗಿ.

- ಆಗಾಗ ಕೈಗಳನ್ನು ತೊಳೆಯುವ ಮೂಲಕ ಉತ್ತಮ ನೈರ್ಮಲ್ಯವನ್ನು ಅಭ್ಯಾಸ ಮಾಡುವುದು ಪ್ರಯಾಣದ ವೇಳೆ ಅತಿಸಾರವನ್ನು ತಪ್ಪಿಸಲು ಉತ್ತಮ ಮಾರ್ಗವಾಗಿದೆ. ವಿಶೇಷವಾಗಿ ಸ್ನಾನಗೃಹವನ್ನು ಬಳಸಿದ ನಂತರ ಮತ್ತು ಆಹಾರವನ್ನು ಸೇವಿಸುವ ಮುನ್ನ ಕೈಗಳನ್ನು ಸೋಪು ಹಾಗೂ ಬೆಚ್ಚಗಿನ ನೀರಿನಿಂದ ತೊಳೆಯಬೇಕು.

- ಮಕ್ಕಳನ್ನು ಚೆನ್ನಾಗಿ ಹೈಡ್ರೇಟೆಡ್ ಆಗಿರುವಂತೆ ನೋಡಿಕೊಳ್ಳಿ. ನಿರ್ಜಲೀಕರಣವಾಗದಂತೆ ನೋಡಿಕೊಳ್ಳಿ. ನಿಂಬೆಹಣ್ಣಿನ ಪಾನಕ, ನೀರು ಅಥವಾ ನೀರಿನ ಅಂಶವಿರುವ ಹಣ್ಣು, ತರಕಾರಿಗಳನ್ನೇ ಹೆಚ್ಚಾಗಿ ನೀಡಿ.

- ಆಹಾರ ಮತ್ತು ಪಾನೀಯಗಳನ್ನು ಸೇವಿಸುವ ಮುನ್ನ ಎಚ್ಚರಿಕೆಯಿಂದ ಆರಿಸಿ. ಸರಿಯಾಗಿ ಬೇಯಿಸಿದ ಮತ್ತು ಬಿಸಿಯಾಗಿ ಬಡಿಸುವ ಆಹಾರವನ್ನು ಮಾತ್ರ ಸೇವಿಸಿ. ಹಣ್ಣುಗಳು ಮತ್ತು ತರಕಾರಿಗಳನ್ನು ಶುದ್ಧ ನೀರಿನಲ್ಲಿ ತೊಳೆದ ನಂತರವೇ ಸೇವಿಸುವುದು ಒಳಿತು.

ಸಾಮಾನ್ಯವಾಗಿ ಮಕ್ಕಳು ಪ್ರಯಾಣದ ವೇಳೆ ವಾಕರಿಕೆ ಅಥವಾ ವಾಂತಿಯನ್ನು ಅನುಭವಿಸುವುದು ಸಹಜ. ಆದರೆ, ಮಕ್ಕಳಲ್ಲಿ ರೋಗಲಕ್ಷಣಗಳು ವಿಭಿನ್ನವಾಗಿರಬಹುದು. ಹೀಗಾಗಿ ಸರಿಯಾಗಿ ಗಮನಿಸಿ ರೋಗನಿರ್ಣಯ ಮಾಡಬೇಕಾಗುತ್ತದೆ.

ಪ್ರಯಾಣದ ಮೊದಲು ತೆಗೆದುಕೊಳ್ಳಬೇಕಾದ ಕ್ರಮಗಳು

- ಮಕ್ಕಳಲ್ಲಿ ಪ್ರಯಾಣದ ವೇಳೆ ಉಂಟಾಗುವ ತೊಂದರೆಗಳನ್ನು ನಿವಾರಿಸುವ ಬಗ್ಗೆ ಆರ್ಟೆಮಿಸ್ ಆಸ್ಪತ್ರೆಯ ವೈದ್ಯ ಪಿ. ವೆಂಕಟ ಕೃಷ್ಣನ್ ಅವರು ಈ ಕೆಳಗಿನ ಕ್ರಮಗಳನ್ನು ಸೂಚಿಸಿದ್ದಾರೆ..

- ಮಗು ಚೆನ್ನಾಗಿ ವಿಶ್ರಾಂತಿ ಪಡೆದಿರುವ ಸಮಯದಲ್ಲಿ ಪ್ರವಾಸಗಳನ್ನು ಯೋಜಿಸಿ.

- ಹೊರಡುವ ಮೊದಲು ಮಕ್ಕಳಿಗೆ ಲಘು ಆಹಾರ ನೀಡಿ.

- ಪ್ರಯಾಣದ ಮೊದಲು ಮತ್ತು ಪ್ರಯಾಣದ ವೇಳೆ ಜಿಡ್ಡಿನ ಆಹಾರ ತಿನ್ನದಂತೆ ನೋಡಿಕೊಳ್ಳಿ.

- ದೀರ್ಘ ಉಸಿರಾಟದಂತಹ ಯೋಗ ತಂತ್ರಗಳನ್ನು ಮಕ್ಕಳಿಗೆ ಕಲಿಸಿ.

- ದೀರ್ಘ ಪ್ರಯಾಣಕ್ಕೂ ಮುನ್ನ ಕುಟುಂಬ ವೈದ್ಯರನ್ನು ಸಂಪರ್ಕಿಸಿ, ಅವರು ಹೇಳುವ ಔಷಧಿಗಳನ್ನು ಒಯ್ಯಿರಿ.

ಪ್ರಯಾಣದ ವೇಳೆ ನೀವು ನಿಯಮಿತ ವೇಳಾಪಟ್ಟಿಯನ್ನು ಇಟ್ಟುಕೊಳ್ಳದಿದ್ದರೆ ಮಲಬದ್ಧತೆ ಸಂಭವಿಸುತ್ತದೆ. ದೀರ್ಘಾವಧಿಯ ವಿಮಾನ ಮತ್ತು ರೈಲು ಅಥವಾ ಬಸ್ ಪ್ರಯಾಣದ ಸಮಯದಲ್ಲಿ ಗಂಟೆಗಳ ಕಾಲ ಕುಳಿತುಕೊಳ್ಳುವುದು ಮತ್ತು ಸಾಮಾನ್ಯ ಆಹಾರಕ್ರಮ ಬದಲಾಗುವುದು ಸಹ ಮಕ್ಕಳಲ್ಲಿ ಈ ಸಮಸ್ಯೆ ಕಾಡಲು ಕಾರಣವಾಗಿದೆ. ಹೀಗಾಗಿ ಮಕ್ಕಳಲ್ಲಿ ಉಂಟಾಗಬಹುದಾದ ಸಮಸ್ಯೆಯನ್ನು ಅರಿತು ಮುಂಜಾಗ್ರತೆಯಾಗಿ ಕ್ರಮ ತೆಗೆದುಕೊಂಡರೆ, ಈ ತೊಂದರೆಗಳಿಂದ ಪಾರಾಗಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ