ಕನ್ನಡ ಸುದ್ದಿ  /  ಜೀವನಶೈಲಿ  /  ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚಲು ಸಹಾಯ ಮಾಡುವ ಆಹಾರ ಪದಾರ್ಥಗಳಿವು; ವಿದ್ಯಾರ್ಥಿಗಳೇ, ಪರೀಕ್ಷೆ ಸಮಯದಲ್ಲಿ ಇವನ್ನು ಹೆಚ್ಚು ಸೇವಿಸಿ

ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚಲು ಸಹಾಯ ಮಾಡುವ ಆಹಾರ ಪದಾರ್ಥಗಳಿವು; ವಿದ್ಯಾರ್ಥಿಗಳೇ, ಪರೀಕ್ಷೆ ಸಮಯದಲ್ಲಿ ಇವನ್ನು ಹೆಚ್ಚು ಸೇವಿಸಿ

ಪರೀಕ್ಷಾ ಸಮಯ ಬಂದೇ ಬಿಟ್ಟಿದೆ. ಈ ಸಮಯದಲ್ಲಿ ವಿದ್ಯಾರ್ಥಿಗಳು ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಆದ್ಯತೆ ನೀಡಬೇಕು. ಅದಕ್ಕಾಗಿ ಈ ಕೆಲವು ಆಹಾರಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು. ಈ ಆಹಾರಗಳು ಮೆದುಳನ್ನು ಚುರುಕಾಗಿಸಿ, ಪರೀಕ್ಷೆಯಲ್ಲಿ ಯಶ ಗಳಿಸಲು ಸಹಾಯ ಮಾಡುತ್ತವೆ.

ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚಲು ಸಹಾಯ ಮಾಡುವ 11 ಆಹಾರ ಪದಾರ್ಥಗಳಿವು
ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚಲು ಸಹಾಯ ಮಾಡುವ 11 ಆಹಾರ ಪದಾರ್ಥಗಳಿವು

ಮಾರ್ಚ್‌, ಏಪ್ರಿಲ್‌ ತಿಂಗಳು ಎಂದರೆ ಪರೀಕ್ಷೆಗಳ ಕಾಲ. ಪರೀಕ್ಷೆ ಎಂದರೆ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಪೋಷಕರಿಗೂ ಆತಂಕ. ಈ ಸಮಯದಲ್ಲಿ ಚೆನ್ನಾಗಿ ಓದಿ, ಪರೀಕ್ಷೆ ಬರೆದರೆ ಮಾತ್ರ ಮಕ್ಕಳು ಉತ್ತಮ ಅಂಕ ಗಳಿಸಲು ಸಾಧ್ಯ. ಅದಕ್ಕಾಗಿ ನೆನಪಿನ ಶಕ್ತಿ ವೃದ್ಧಿಸಿಕೊಳ್ಳುವುದೂ ಮುಖ್ಯವಾಗುತ್ತದೆ. ಪರೀಕ್ಷೆ ಸಮಯದಲ್ಲಿ ಓದಿನ ಒತ್ತಡದ ಕಾರಣದಿಂದ ಸರಿಯಾದ ಸಮಯಕ್ಕೆ ಊಟ ಮಾಡದೇ ಇರುವುದು, ಹಸಿವಾಗದೇ ಇರುವುದು, ಹೊಟ್ಟೆಯ ಅಸ್ವಸ್ಥತೆ ಈ ಎಲ್ಲಾ ಕಾರಣಗಳಿಂದ ನಮ್ಮ ಮೆದುಳು ಏಕಾಗ್ರತೆ ಕಳೆದುಕೊಳ್ಳುವುದು ಸಹಜ. ಜೊತೆಗೆ ಆರೋಗ್ಯವೂ ಹದಗೆಡುತ್ತದೆ. ಅದಕ್ಕಾಗಿ ಆರೋಗ್ಯಕರ ಆಹಾರ ಸೇವನೆಗೆ ಒತ್ತು ನೀಡಬೇಕು. ಈ ಆಹಾರಗಳು ದೇಹಕ್ಕೆ ಶಕ್ತಿ ಹಾಗೂ ಪೋಷಕಾಂಶ ನೀಡುವುದು ಮಾತ್ರವಲ್ಲ, ಮೆದುಳನ್ನು ಚುರುಕಾಗಿಸುತ್ತವೆ. ಜೊತೆಗೆ ನೆನಪಿನ ಶಕ್ತಿ ಹೆಚ್ಚಲು ಕೂಡ ಸಹಕಾರಿ. ಅಂತಹ ಕೆಲವು ಆಹಾರಗಳ ಪಟ್ಟಿ ಇಲ್ಲಿದೆ. ಪರೀಕ್ಷೆ ಸಮಯದಲ್ಲಿ ಈ ಆಹಾರಗಳನ್ನು ನಿಮ್ಮ ಮಕ್ಕಳಿಗೆ ಹೆಚ್ಚು ಹೆಚ್ಚು ನೀಡಿ.

ಟ್ರೆಂಡಿಂಗ್​ ಸುದ್ದಿ

ನೆನಪಿನ ಶಕ್ತಿ ಹೆಚ್ಚಿಸುವ 11 ಆಹಾರ ಪದಾರ್ಥಗಳು

ಫ್ಯಾಟಿ ಫಿಶ್‌: ಒಮೆಗಾ 3 ಫ್ಯಾಟಿ ಆಸಿಡ್‌ ಅಂಶ ಇರುವ ಸಾಲ್ಮಾನ್‌ನಂತಹ ಮೀನುಗಳು ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಇದು ಮೆದುಳಿನ ಕಾರ್ಯವನ್ನು ವೃದ್ಧಿಸಿ, ನೆನಪಿನ ಶಕ್ತಿ ಹೆಚ್ಚಲು ನೆರವಾಗುತ್ತದೆ.

ಬ್ಲೂಬೆರಿ: ಆಂಟಿಆಕ್ಸಿಡೆಂಟ್‌ ಅಂಶ ಸಮೃದ್ಧವಾಗಿರುವ ಬ್ಲೂಬೆರಿ ಹಣ್ಣುಗಳು ಮೆದುಳಿನ ಕೋಶಗಳಿಗೆ ತೊಂದರೆಯಾಗುವುದನ್ನು ತಡೆಯುತ್ತದೆ. ಇದು ಉರಿಯೂತ ಹಾಗೂ ಆಕ್ಸಿಡೇಟಿವ್‌ ಒತ್ತಡವನ್ನು ನಿವಾರಿಸಲು ಸಹಕಾರಿ. ಇದು ಅರಿವಿನ ಸಾಮರ್ಥ್ಯ ವೃದ್ಧಿಸಲು ಗುಣ ಹೊಂದಿದೆ.

ಬ್ರೊಕೊಲಿ: ಆಂಟಿಆಕ್ಸಿಡೆಂಟ್‌ ಹಾಗೂ ವಿಟಮಿನ್‌ ಕೆ ಅಂಶ ಇರುವ ಬ್ರೊಕೊಲಿಯು ಮೆದುಳಿನ ಆರೋಗ್ಯ ವೃದ್ಧಿಸಲು ಸಹಾಯ ಮಾಡುತ್ತದೆ. ಇದು ದೇಹಕ್ಕೆ ಅಗತ್ಯ ಪೋಷಕಾಂಶವನ್ನೂ ಒದಗಿಸುತ್ತದೆ.

ಕುಂಬಳಕಾಯಿ ಬೀಜ: ಇದು ಚಿಕ್ಕ ಬೀಜವಾದರೂ ಇದರಲ್ಲಿ ಮೆಗ್ನೀಶಿಯಂ, ಕಬ್ಬಿಣಾಂಶ, ತಾಮ್ರ, ಸತುವಿನ ಅಂಶ ಸಮೃದ್ಧವಾಗಿದೆ. ಇದನ್ನು ಸಲಾಡ್‌ ರೂಪದಲ್ಲಿ ಮಕ್ಕಳಿಗೆ ನೀಡಬಹುದು.

ಡಾರ್ಕ್‌ ಚಾಕೊಲೇಟ್‌: ಡಾರ್ಕ್‌ ಚಾಕೊಲೇಟ್‌ನಲ್ಲಿ ಫ್ಲೇವನಾಯ್ಡ್‌ಗಳು, ಕೆಫಿನ್‌ ಹಾಗೂ ಉತ್ಕರ್ಷಣ ನಿರೋಧಕ ಅಂಶಗಳು ಸಮೃದ್ಧವಾಗಿದೆ. ಇದು ಅರಿವಿನ ಸಾಮರ್ಥ್ಯ ಹೆಚ್ಚಿಸುವ ಗುಣ ಹೊಂದಿದೆ.

ಒಣಹಣ್ಣು: ಒಮೆಗಾ 3 ಫ್ಯಾಟಿ ಆಸಿಡ್‌, ಆಂಟಿಆಕ್ಸಿಡೆಂಟ್‌, ವಿಟಮಿನ್‌ ಇಯಂತಹ ಪ್ರಮುಖ ಪೋಷಕಾಂಶಗಳಿಂದ ಸಮೃದ್ಧವಾಗಿರುವ ವಾಲ್‌ನಟ್‌, ಬಾದಾಮಿಯಂತಹ ಒಣಹಣ್ಣುಗಳನ್ನು ಮಕ್ಕಳಿಗೆ ಹೆಚ್ಚು ಹೆಚ್ಚು ನೀಡಬೇಕು. ಇದು ಕೂಡ ಅರಿವಿನ ಶಕ್ತಿ ಹೆಚ್ಚಲು ಸಹಾಯ ಮಾಡುತ್ತದೆ.

ಮೊಟ್ಟೆ: ಕೋಲಿನ್‌ನಲ್ಲಿ ಸಮೃದ್ಧವಾಗಿರುವ ಮೊಟ್ಟೆಯು ಮಕ್ಕಳ ಮನಸ್ಥಿತಿ ಸುಧಾರಣೆ ಹಾಗೂ ನೆನಪಿನ ಶಕ್ತಿ ಹೆಚ್ಚಲು ಸಹಾಯ ಮಾಡುತ್ತದೆ.

ಕಿತ್ತಳೆ: ಬೇಸಿಗೆ ಕಾಲದಲ್ಲಿ ಹೇರಳವಾಗಿ ಸಿಗುವ ಕಿತ್ತಳೆಹಣ್ಣು ವಿಟಮಿನ್‌ ಸಿಯಿಂದ ಸಮೃದ್ಧವಾಗಿರುತ್ತದೆ. ಇದು ಮೆದುಳಿನ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ. ಇದು ಮೆದುಳನ್ನು ಚುರುಕಾಗಿಸಲು ಕೂಡ ಸಹಕಾರಿ.

ಅರಿಸಿನ: ಅರಿಶಿನದಲ್ಲಿನ ಸಕ್ರಿಯ ಸಂಯುಕ್ತ, ಕರ್ಕ್ಯುಮಿನ್ ಅಂಶವಿದ್ದು, ಇದು ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಪ್ರಯೋಜನಗಳನ್ನು ಹೊಂದಿದೆ. ಇದು ಗಮನ ಶಕ್ತಿ ಹೆಚ್ಚಲು ಹಾಗೂ ಮೆದುಳಿನ ಆರೋಗ್ಯ ಸುಧಾರಣೆಗೆ ಸಹಾಯ ಮಾಡುತ್ತದೆ.

ಧಾನ್ಯಗಳು: ಗೋಧಿ, ಕಿನೋವಾ, ಓವ್ಸ್‌, ಕೆಂಪಕ್ಕಿಯಂತಹ ಧಾನ್ಯಗಳು ಮೆದುಳಿಗೆ ಶಕ್ತಿ ಒದಗಿಸುತ್ತವೆ. ಇದು ಮಕ್ಕಳು ಓದಿದ್ದನ್ನು ನೆನಪಿಡಲು ಸಹಾಯ ಮಾಡುತ್ತದೆ.

ನೀರು: ಪರೀಕ್ಷೆ ಸಮಯದಲ್ಲಿ ಮಕ್ಕಳು ದೇಹವನ್ನು ಹೈಡ್ರೇಟ್‌ ಆಗಿ ಇರಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಅದಕ್ಕಾಗಿ ಸಾಕಷ್ಟು ನೀರು ಕುಡಿಯಬೇಕು. ದೇಹದಲ್ಲಿನ ವಿಷಾಂಶಗಳು ಹೊರ ಹೋಗುವುದರಿಂದ ಸುಸ್ತು, ಬಳಲಿಕೆ ಕಡಿಮೆಯಾಗಿ ಮಕ್ಕಳು ಓದಿನ ಮೇಲೆ ಹೆಚ್ಚು ಗಮನ ನೀಡಲು ಸಾಧ್ಯವಾಗುತ್ತದೆ.