Saving Tips: ಹಣ ಉಳಿತಾಯ ಮಾಡಲು ಮಹಿಳೆಯರಿಗೆ ಇಲ್ಲಿದೆ ಉತ್ತಮ ಸಲಹೆಗಳು
Jan 14, 2024 04:36 PM IST
ಹಣ ಉಳಿತಾಯ (ಪ್ರಾತಿನಿಧಿಕ ಚಿತ್ರ)
- Money Saving Tips For Women: ಮಹಿಳೆಯರು ಆರ್ಥಿಕವಾಗಿ ಸ್ವಂತತ್ರರಾಗಿ ಇರುವುದು ತುಂಬಾನೇ ಮುಖ್ಯವಾಗಿದೆ. ಈಗಲೇ ನೀವು ಸರಿಯಾದ ರೀತಿಯಲ್ಲಿ ಹಣ ಉಳಿತಾಯ ಮಾಡುವುದನ್ನು ಕಲಿತಲ್ಲಿ ಭವಿಷ್ಯದಲ್ಲಿ ಯಾರ ಮೇಲೂ ಅವಲಂಬನೆಗೊಳಗಾಗುವ ಅಗತ್ಯವಿರುವುದಿಲ್ಲ. ಹೀಗಾಗಿ ಮಹಿಳೆಯರು ಭವಿಷ್ಯದ ದೃಷ್ಟಿಯಿಂದ ಹಣ ಉಳಿತಾಯ ಮಾಡಲು ಏನು ಮಾಡಬೇಕು ಎಂಬುದಕ್ಕೆ ಸಲಹೆ ಇಲ್ಲಿದೆ..
ಪ್ರತಿಯೊಂದು ಹಣಕಾಸಿನ ನಿರ್ಧಾರವು ನಿಮ್ಮ ಭವಿಷ್ಯದ ಆರ್ಥಿಕ ಸ್ಥಿತಿಯನ್ನು ರೂಪಿಸಬಹುದು. ಈ ಪ್ರಾಯೋಗಿಕ ಮತ್ತು ಕಾರ್ಯತಂತ್ರದ ಸಲಹೆಗಳು ನಿಮಗೆ ಹಣಕಾಸಿನ ಅಡೆತಡೆಗಳನ್ನು ನಿವಾರಿಸಲು ಮತ್ತು ನಿಮ್ಮನ್ನು ಸಬಲಗೊಳಿಸಲು ಸಹಾಯ ಮಾಡುತ್ತದೆ. ಬಜೆಟ್ ಮತ್ತು ಉಳಿತಾಯದಿಂದ ಪ್ರಜ್ಞಾಪೂರ್ವಕವಾಗಿ ಹೂಡಿಕೆ ಮಾಡುವವರೆಗೆ, ಅಂತಹ ಅಭ್ಯಾಸಗಳು ನಿಮ್ಮನ್ನು ಮಹಿಳೆಯರನ್ನು ಆರ್ಥಿಕವಾಗಿ ಜವಾಬ್ದಾರರನ್ನಾಗಿ ಮಾಡಬಹುದು ಮತ್ತು ನಿರ್ಣಾಯಕ ಸಮಯದಲ್ಲಿ ನೀವು ಎತ್ತರವಾಗಿ ನಿಲ್ಲಲು ಸಹಾಯ ಮಾಡುತ್ತದೆ.
ನಿಮ್ಮ ಹಣಕಾಸಿನ ವ್ಯವಹಾರಗಳನ್ನು ನೀವೇ ನಿಭಾಯಿಸಲು ತಿಳಿದುಕೊಳ್ಳುವುದು ಪ್ರಮುಖ ಕೌಶಲ್ಯವೆನಿಸಿದೆ. ಅವೆಲ್ಲದಕ್ಕಿಂತ ಹೆಚ್ಚಾಗಿ ಈಗಿನ ಆಧುನಿಕ ಯುಗದಲ್ಲಿ ಮಹಿಳೆಯರು ಕೂಡ ಯಾರಲ್ಲಿಯೂ ಕೈಚಾಚದೇ ತಮ್ಮ ಆರ್ಥಿಕ ನಿರ್ವಹಣೆಯನ್ನು ತಾವೇ ನೋಡಿಕೊಳ್ಳುವುದು ಕೂಡ ತುಂಬಾನೇ ಮುಖ್ಯ. ಯಾವಾಗ ನೀವು ಹಣಕಾಸಿನ ಸವಾಲುಗಳನ್ನು ಎದುರಿಸಲು ಸಶಕ್ತರಾಗುತ್ತಿರೋ ಆಗ ನಿಮಗೆ ಯಾರ ಮೇಲೂ ಅವಲಂಭನೆಯಾಗಬೇಕಾದ ಅನಿವಾರ್ಯತೆ ಬೀಳುವುದಿಲ್ಲ.
ನಿಮ್ಮ ಹಣಕಾಸು ವ್ಯವಹಾರಗಳು ಹೇಗಿರಬೇಕು..? ಭವಿಷ್ಯದ ದೃಷ್ಟಿಯಿಂದ ಮಹಿಳೆಯರು ಎಲ್ಲೆಲ್ಲ ಹೂಡಿಕೆ ಮಾಡಬಹುದು..? ನಿಮ್ಮ ಆರ್ಥಿಕ ಜೀವನವನ್ನು ಯಾವ ರೀತಿಯಲ್ಲಿ ನಿಭಾಯಿಸಬೇಕು..? ಎಲ್ಲದರ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಇಲ್ಲಿರುವ ಸಲಹೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಮಹಿಳೆಯರು ಹಣ ಉಳಿತಾಯವನ್ನು ಮಾಡಬಹುದಾಗಿದೆ.
ಹಣ ಏಕೆ ಮುಖ್ಯ.. ?
ಈಗ ಕಾಲ ಬದಲಾಗಿದೆ. ಪುರುಷರಂತೆ ಮಹಿಳೆಯರು ಸಹ ತಮ್ಮ ಹಣವನ್ನು ತಾವೇ ಸಂಪಾದಿಸುತ್ತಿದ್ದಾರೆ. ಆದರೆ ಹಣ ಸಂಪಾದನೆ ಮಾಡಿದರಷ್ಟೇ ಸಾಲದು. ಮಹಿಳೆಯರು ಸಂಪಾದಿಸಿದ ಹಣವನ್ನು ತಮ್ಮ ಭವಿಷ್ಯಕ್ಕಾಗಿ ಉಳಿಸಿಕೊಳ್ಳುವುದಕ್ಕೂ ಆದ್ಯತೆ ನೀಡಬೇಕು. ಆಗ ಮಾತ್ರ ಮಹಿಳೆಯರು ಆರ್ಥಿಕ ಸ್ವಾತಂತ್ರ್ಯವನ್ನು ಹೊಂದಲು ಸಾಧ್ಯವಿದೆ. ತುರ್ತು ಸಂದರ್ಭಗಳಲ್ಲಿ ಅಥವಾ ಇನ್ಯಾವುದೇ ಅಗತ್ಯದ ಸಮಯದಲ್ಲಿ ನಿಮಗೆ ನೀವೇ ಆಧಾರವಾಗಿ ನಿಲ್ಲಬಹುದು. ಇನ್ನೊಬ್ಬರ ಎದುರು ಕೈಚಾಚುವ ಅವಶ್ಯಕತೆ ಕೂಡ ನಿಮಗೆ ಇರುವುದಿಲ್ಲ. ಹಣಕಾಸಿನ ಸ್ವಾತಂತ್ರ್ಯವನ್ನು ಪಡೆದುಕೊಳ್ಳಲು ನಿಮ್ಮ ಹಣವನ್ನು ನೀವು ಸೂಕ್ತ ರೀತಿಯಲ್ಲಿ ಉಳಿತಾಯ ಮಾಡುವುದನ್ನು ಕಲಿತುಕೊಳ್ಳುವುದು ಉತ್ತಮ.
ಯಾವಾಗಲೋ ಒಮ್ಮೆ ಅನಿರೀಕ್ಷಿತವಾಗಿ ವೈದ್ಯಕೀಯ ತುರ್ತು ಪರಿಸ್ಥಿತಿ ಬಂದೊದಗಿತು ಎಂದುಕೊಳ್ಳೋಣ. ಆಗ ನೀವು ಹಣ ಉಳಿತಾಯ ಮಾಡಿಕೊಂಡಿದ್ದರೆ ನಿಮಗೆ ಆರ್ಥಿಕ ಭದ್ರತೆ ಎನ್ನುವುದು ಸಿಗಲಿದೆ. ಉಳಿತಾಯದ ಹಣವು ನಿಮಗೆ ತುರ್ತು ಸಂದರ್ಭಗಳಲ್ಲಿ ಆಪ್ತರಕ್ಷಕನಂತೆ ಕಾರ್ಯ ನಿರ್ವಹಿಸುತ್ತವೆ. ಹಣ ಗಳಿಕೆಯ ಆರಂಭದ ಹಂತದಿಂದಲೇ ನೀವು ಉಳಿತಾಯ ಮಾಡುವ ಕಡೆಗೆ ಗಮನಹರಿಸಬೇಕು. ಆಗ ನಿಮಗೆ ಭವಿಷ್ಯದಲ್ಲಿ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ವಿಚಲಿತರಾಗಬೇಕಾಗಿ ಬರುವುದಿಲ್ಲ. ಉನ್ನತ ಶಿಕ್ಷಣದಿಂದ ಹಿಡಿದು ಹೊಸ ಮನೆ ಖರೀದಿಯವರೆಗೂ ಉಳಿತಾಯದ ಹಣವೇ ನಿಮಗೆ ನೆರವಾಗಲಿದೆ ಎಂಬುದನ್ನು ನೀವು ಮರೆಯುವಂತಿಲ್ಲ.
ಹಣ ಉಳಿತಾಯ ಮಾಡಲು ಮಹಿಳೆಯರಿಗೆ ಇಲ್ಲಿದೆ ಸಲಹೆಗಳು :
ಬಜೆಟ್ ರಚಿಸಿ : ನೀವು ಗಳಿಸುತ್ತಿರುವ ಆದಾಯ ಹಾಗೂ ಆಗುತ್ತಿರುವ ಖರ್ಚು ಈ ಅನುಪಾತದಲ್ಲಿ ಸಮತೋಲನ ಕಾಪಾಡಿಕೊಳ್ಳಲು ನೀವು ಯತ್ನಿಸಬೇಕು. ಈ ರೀತಿ ಮಾಡಿದಾಗ ಮಾತ್ರ ನೀವು ಹಣಕಾಸು ನಿರ್ವಹಣೆಯನ್ನು ಸೂಕ್ತ ರೀತಿಯಲ್ಲಿ ಮಾಡಲು ಸಾಧ್ಯವಿದೆ. ಬಂದ ಹಣದಲ್ಲಿ ಖರ್ಚುಗಳನ್ನು ಕಳೆದು ಉಳಿತಾಯದ ಹಣ ನಿಮ್ಮಲ್ಲಿ ಉಳಿದರೆ ಮಾತ್ರ ನೀವು ಭವಿಷ್ಯದಲ್ಲಿಯೂ ಆರ್ಥಿಕವಾಗಿ ಸದೃಢರಿರಲು ಸಾಧ್ಯವಿದೆ.
ನಿಮ್ಮ ಪ್ರತಿ ತಿಂಗಳ ಆದಾಯವನ್ನು ಲೆಕ್ಕಾಚಾರ ಹಾಕಿ. ನಿಮ್ಮ ಪ್ರತಿ ತಿಂಗಳ ಬಾಡಿಗೆ ಖರ್ಚು, ಮನೆ ಖರ್ಷು, ಮನರಂಜನೆಗಾಗಿ ನೀವು ಮಾಡುವ ಖರ್ಚು ಇವೆಲ್ಲದರ ಮೇಲೆ ಹಿಡಿತ ಇರಲಿ. ನೀವು ತಿಂಗಳಿಗೆ ಎಷ್ಟು ಹಣ ಖರ್ಚು ಮಾಡುತ್ತಿದ್ದೀರಿ ಹಾಗೂ ದುಂದು ವೆಚ್ಚ ಎಲ್ಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳಲು ಈ ವಾಸ್ತವಿಕ ಬಜೆಟ್ ನಿಮಗೆ ಸಹಕಾರಿಯಾಗಲಿದೆ. ನಿಮ್ಮ ಆದಾಯ ಹಾಗೂ ವೆಚ್ಚಗಳನ್ನು ಅಂದಾಜು ಮಾಡಿ, ನಿಮ್ಮ ಆದಾಯದ ಒಂದು ನಿರ್ದಿಷ್ಟ ಮೊತ್ತವನ್ನು ಉಳಿತಾಯಕ್ಕೆ ವಿನಿಯೋಗಿಸುವ ಬಗ್ಗೆ ಯೋಚಿಸಿ. ವಾರ್ಷಿಕ ಇಎಂಐಗಳು ಹಾಗೂ ವಿಮಾ ಯೋಜನೆಯ ಒಟ್ಟು ಮೊತ್ತವನ್ನು 12 ರಿಂದ ಭಾಗಿಸಿ.ಈ ಮೊತ್ತವನ್ನು ನಿಮ್ಮ ತಿಂಗಳ ಖರ್ಚಿನ ವಿಭಾಗದಲ್ಲಿ ಸೇರಿಸಿ. ಈ ರೀತಿ ಮಾಡುವ ಮೂಲಕ ನೀವು ನಿಮ್ಮ ಬಜೆಟ್ನ್ನು ನೀವೇ ತಯಾರಿಸಿಕೊಳ್ಳಬಹುದಾಗಿದೆ.
ತುರ್ತು ಪರಿಸ್ಥಿತಿಗಾಗಿ ಉಳಿತಾಯ ಮಾಡಿ : ಅನಿರೀಕ್ಷಿತ ಘಟನೆಗಳು ಯಾವಾಗ ಬೇಕಿದ್ದರೂ ಸಂಭವಿಸಬಹುದು. ಹೀಗಾಗಿ ಆರ್ಥಿಕ ಭದ್ರತೆಯೊಂದು ಇರಲೇಬೇಕು. ಹೀಗಾಗಿ ಹೆಚ್ಚು ಹಣ ಉಳಿತಾಯ ಮಾಡಲು ನೀವು ರೂಢಿಸಿಕೊಳ್ಳಬೇಕು. ಇದಕ್ಕಾಗಿ ನೀವು ವಿವಿಧ ತಂತ್ರಗಳನ್ನು ಮಾಡುವುದು ಬುದ್ಧಿವಂತ ಮಹಿಳೆಯ ಲಕ್ಷಣವಾಗಿದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನೀವು ಇಂದು ಉಳಿತಾಯ ಮಾಡಿದ ಹಣವೇ ನಿಮ್ಮ ಸಹಾಯಕ್ಕೆ ಬರಲಿದೆ ಎಂಬುದನ್ನು ನೀವು ಮರೆಯುವಂತಿಲ್ಲ.
ತುರ್ತು ಪರಿಸ್ಥಿತಿಗಾಗಿ ಹಣ ಹೊಂದಿಸಲು ನೀವು ಸಣ್ಣ ಸಣ್ಣ ಮೊತ್ತವಾದರೂ ಸರಿ ಅವುಗಳನ್ನು ಉಳಿತಾಯ ಮಾಡುವುದನ್ನು ಕಲಿತುಕೊಳ್ಳಬೇಕು. ಕಂಪನಿಗಳಲ್ಲಿ ನಿಮಗೆ ಸಿಗುವ ಬೋನಸ್ ಹಣವನ್ನೆಲ್ಲ ನೀವು ಉಳಿತಾಯದ ನಿಧಿಗೆ ಸೇರಿಸುವ ಕ್ರಮವನ್ನು ರೂಢಿಸಿಕೊಳ್ಳಬೇಕು.
ಬುದ್ಧಿವಂತಿಕೆಯಿಂದ ಹಣ ವಿನಿಯೋಗಿಸಿ : ಮಹಿಳೆಯರಿಗೆಂದೇ ಸಾಕಷ್ಟು ಉಳಿತಾಯ ಯೋಜನೆಗಳಿವೆ. ಅದು ವಿಮಾ ಯೋಜನೆಯಾಗಿರಬಹುದು ಅಥವಾ ಮುಚ್ಯೂವಲ್ ಫಂಡ್, ಸ್ಟಾಕ್ ಮಾರ್ಕೆಟ್ ಹೀಗೆ ಯಾವುದೇ ಇರಬಹುದು. ಇಲ್ಲಿ ನೀವು ಯಾವುದರಲ್ಲಿ ಹಣ ವಿನಿಯೋಗ ಮಾಡಿದರೆ ನಿಮಗೆ ಹೆಚ್ಚು ಲಾಭ ಸಿಗಲಿದೆ ಎಂಬುದನ್ನು ನೀವು ತಿಳಿದುಕೊಂಡು ಬಳಿಕ ವಿನಿಯೋಗಿಸಬೇಕು.
ತೆರಿಗೆ ಲಾಭವನ್ನು ಪಡೆದುಕೊಳ್ಳಿ : ಖರ್ಚಿನಲ್ಲಿ ಕಡಿಮೆ ಮಾಡಿ ಉಳಿತಾಯದ ಮೊತ್ತವನ್ನು ಜಾಸ್ತಿ ಮಾಡಿಕೊಳ್ಳುವುದು ಒಳ್ಳೆಯದೇ. ಆದರೆ ಇವೆಲ್ಲ ನಿಮಗೆ ಹೆಚ್ಚಿನ ಲಾಭ ತಂದುಕೊಡಲಾರದು. ನೀವು ಹಣ ಉಳಿತಾಯಕ್ಕೆ ಸ್ಮಾರ್ಟ್ ತಂತ್ರಗಳನ್ನು ಬಳಸಿಕೊಳ್ಳಬೇಕು. ಆದಷ್ಟು ನಿಮ್ಮ ತೆರಿಗೆ ಪಾವತಿಯ ಮೊತ್ತದಲ್ಲಿ ಹಣ ಹೂಡಿಕೆ ಮಾಡುವ ಐಡಿಯಾಗಳನ್ನು ಕಂಡುಕೊಳ್ಳಿ.
ಕ್ರೆಡಿಟ್ ಬಳಕೆಯಲ್ಲಿ ಜಾಗರೂಕತೆಯಿರಲಿ : ತುರ್ತು ಸಂದರ್ಭಗಳಲ್ಲಿ ಕ್ರೆಡಿಟ್ ಕಾರ್ಡ್ಗಳು ರಕ್ಷಕನಂತೆ ಕಾರ್ಯ ನಿರ್ವಹಿಸುತ್ತದೆ ನಿಜ. ಹಾಗಂತ ಅದೇ ಅಭ್ಯಾಸವಾಗಿಬಿಡಬಾರದು. ಅತಿಯಾಗಿ ಕ್ರೆಡಿಟ್ ಕಾರ್ಡ್ಗಳ ಬಳಕೆ ನಿಮ್ಮ ಕ್ರೆಡಿಟ್ ಸ್ಕೋರ್ಗೆ ಹಾನಿಯುಂಟು ಮಾಡಲಿದೆ ಎಂಬುದು ನಿಮ್ಮ ಅರಿವಿನಲ್ಲಿ ಇರಲಿ.
ಪ್ರತಿಯೊಬ್ಬ ಮಹಿಳೆಯು ಈ ಉಳಿತಾಯದ ಸಲಹೆಗಳನ್ನು ಪಾಲಿಸಿ ಅದರಂತೆ ತಮ್ಮ ಆರ್ಥಿಕ ಸ್ಥಿತಿಯನ್ನು ನಿಭಾಯಿಸಲು ಕಲಿತುಕೊಂಡಲ್ಲಿ. ಆರ್ಥಿಕವಾಗಿ ಸ್ವಾತಂತ್ರ್ಯವನ್ನು ಹೊಂದಲು ಸಾಧ್ಯವಿದೆ.