logo
ಕನ್ನಡ ಸುದ್ದಿ  /  ಜೀವನಶೈಲಿ  /  Thousand Pillar Temple: ತೆಲಂಗಾಣದಲ್ಲಿದೆ ಸಾವಿರ ಕಂಬಗಳ ದೇಗುಲ; ಬೆರಗುಗೊಳಿಸದೆ ಇರದು ಕಾಕತೀಯರ ವಾಸ್ತುಶಿಲ್ಪ

Thousand Pillar Temple: ತೆಲಂಗಾಣದಲ್ಲಿದೆ ಸಾವಿರ ಕಂಬಗಳ ದೇಗುಲ; ಬೆರಗುಗೊಳಿಸದೆ ಇರದು ಕಾಕತೀಯರ ವಾಸ್ತುಶಿಲ್ಪ

Meghana B HT Kannada

Jan 15, 2024 09:31 PM IST

google News

ಸಾವಿರ ಕಂಬಗಳ ದೇಗುಲ (left pic-twitter/@smileysnaps)

    • Thousand Pillar Temple in Telangana: ಪುರಾತನ ಕಾಲದ ದೇಗುಲಗಳಿಗೆ ಭೇಟಿ ನೀಡುವುದು, ಅಲ್ಲಿನ ವಾಸ್ತುಶಿಲ್ಪಗಳನ್ನು ನೋಡಿ ಮೈಮರೆಯುವವರ ಪೈಕಿ ನೀವೂ ಒಬ್ಬರಾಗಿದ್ದರೆ ಇಲ್ಲೊಂದು ಹೊಸ ಆಯ್ಕೆ ಇದೆ. 12ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟ ಈ ದೇಗುಲವು ಬರೋಬ್ಬರಿ 1000 ಕಂಬಗಳನ್ನು ಹೊಂದಿದೆ ಮಾತ್ರವಲ್ಲದೇ ಪ್ರತಿ ದೇವರಿಗೂ ಮೂರು ಗರ್ಭಗುಡಿ ಇರುವುದು ಮತ್ತೊಂದು ವಿಶೇಷ .
ಸಾವಿರ ಕಂಬಗಳ ದೇಗುಲ (left pic-twitter/@smileysnaps)
ಸಾವಿರ ಕಂಬಗಳ ದೇಗುಲ (left pic-twitter/@smileysnaps)

ಹೊಸ ವರ್ಷದ ಹೊಸ ತಿಂಗಳಲ್ಲಿ ಯಾವುದಾದರೂ ಹೊಸ ಧಾರ್ಮಿಕ ಜಾಗಕ್ಕೆ ಪ್ರವಾಸ ಕೈಗೊಳ್ಳಬೇಕು ಎಂದುಕೊಂಡಿದ್ದರೆ ನಿಮಗೊಂದು ಬೆಸ್ಟ್​ ಆಯ್ಕೆ ಇಲ್ಲಿದೆ. ತೆಲಂಗಾಣದ ಎರಡನೇ ಅತೀದೊಡ್ಡ ನಗರ ಎನಿಸಿಕೊಂಡಿರುವ ವರಂಗಲ್​ ಪ್ರದೇಶವು ಪುರಾತನ ದೇವಾಲಯಗಳು ಹಾಗೂ ಇತಿಹಾಸವನ್ನು ಸಾರುವ ಸಾಕಷ್ಟು ಸ್ಮಾರಕಗಳನ್ನು ಹೊಂದಿವೆ. ಈ ಪ್ರದೇಶದಲ್ಲಿರುವ ಇತಿಹಾಸದ ಶ್ರೀಮಂತಿಕೆಯು ಕಲಾ ಪ್ರೇಮಿಗಳನ್ನು ಹಾಗೂ ವಾಸ್ತುಶಿಲ್ಪ ಪ್ರಿಯರನ್ನು ಆಕರ್ಷಿಸದೇ ಇರದು. ವಾರಂಗಲ್​ನಲ್ಲಿರುವ ಅತ್ಯಂತ ಪ್ರಸಿದ್ಧವಾದ ಐತಿಹಾಸಿಕ ವಿನ್ಯಾಸವೆಂದರೆ ಅದು ಸಾವಿರ ಕಂಬಗಳ ದೇವಾಲಯ.

ಸಾವಿರ ಕಂಬಗಳ ದೇಗುಲದ ಇತಿಹಾಸ :

ಸಾವಿರ ಕಂಬಗಳ ದೇಗುಲ ಎಂದು ಪ್ರಸಿದ್ಧಿ ಪಡೆದ ರುದ್ರೇಶ್ವರ ಸ್ವಾಮಿ ದೇವಾಲಯವು ತೆಲಂಗಾಣದ ವಾರಂಗಲ್​ ಬಳಿ ಇರುವ ಹನುಮಕೊಂಡ ಬೆಟ್ಟದ ಬುಡದಲ್ಲಿದೆ. 12ನೇ ಶತಮಾನದಲ್ಲಿ ಕಾಕತೀಯ ದೊರೆಯಾದ ರುದ್ರದೇವನು ಕ್ರಿ.ಶ 1163ರಲ್ಲಿ ಸಾವಿರ ಕಂಬಗಳ ದೇವಾಲಯವನ್ನು ನಿರ್ಮಿಸಿದ ಎಂದು ಇತಿಹಾಸ ಹೇಳುತ್ತದೆ. ಈ ದೇವಾಲಯವು ಸಂಪೂರ್ಣ ಕಾಕತೀಯ ವಾಸ್ತುಶಿಲ್ಪವನ್ನು ಹೊಂದಿದೆ. ಡಾಲೋಮಿಟಿಕ್​ ಬಂಡೆಗಳು ಹಾಗೂ ಕಪ್ಪು ಗ್ರಾನೈಟ್​ಗಳಿಂದ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಈ ಸಾವಿರ ಕಂಬಗಳ ದೇಗುಲವು ಪೂರ್ಣಗೊಳ್ಳಲು ಬರೋಬ್ಬರಿ 72 ವರ್ಷಗಳ ಸಮಯವನ್ನು ತೆಗೆದುಕೊಂಡಿತು ಎನ್ನಲಾಗಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಈ ದೇವಾಲಯದ ಜೀರ್ಣೋದ್ಧಾರಕ್ಕಾಗಿ ಬರೋಬ್ಬರಿ 9.90 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ.

ಪ್ರವಾಸಿಗರು ವಾರಂಗಲ್​ಗೆ ಭೇಟಿ ನೀಡುವ ಪ್ರಮುಖ ಕಾರಣವೇ ಈ ದೇವಾಲಯಕ್ಕೆ ಭೇಟಿ ನೀಡುವುದಾಗಿದೆ. ಅಷ್ಟರ ಮಟ್ಟಿಗೆ ತೆಲಂಗಾಣದಲ್ಲಿ ಈ ದೇವಾಲಯವು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಈ ದೇವಾಲಯವು ಒಟ್ಟು ಸಾವಿರ ಕಂಬಗಳನ್ನು ಹೊಂದಿರುವುದರಿಂದ ಇದಕ್ಕೆ ಸಾವಿರ ಕಂಬಗಳ ದೇಗುಲ ಎಂಬ ಹೆಸರು ಬಂದಿದೆ. ಹನುಮಕೊಂಡ ಕ್ರಾಸ್​ರೋಡ್ಸ್​ನಿಂದ 400 ಮೀಟರ್​ ದೂರದಲ್ಲಿರುವ ಹನುಮಕೊಂಡ ಬೆಟ್ಟದ ಮೇಲೆ ಈ ದೇಗುಲವಿದೆ.

ಯಾವ ದೇವರಿದೆ..?

ಈ ಸಾವಿರ ಕಂಬಗಳ ದೇವಾಲಯದಲ್ಲಿ ಭಗವಾನ್​ ವಿಷ್ಣು, ಶಿವ, ಸೀರ್ಯ , ರುದ್ರೇಶ್ವರ ಸ್ವಾಮಿಗಳನ್ನು ಪೂಜಿಸಲಾಗುತ್ತದೆ. ಅಲ್ಲದೇ ಈ ದೇವಾಲಯದಲ್ಲಿ ಪ್ರತಿ ದೇವರಿಗೆ ಮೂರು ದೇವಾಲಯವನ್ನು ಇಟ್ಟಿರುವುದು ಮತ್ತೊಂದು ವಿಶೇಷ .

ವಾಸ್ತುಶಿಲ್ಪ :

ಈ ದೇವಾಲಯವನ್ನು ನಕ್ಷತ್ರದ ಆಕಾರದಲ್ಲಿ ನಿರ್ಮಿಸಲಾಗಿದೆ. ಸಾವಿರ ಕಂಬಗಳನ್ನು ಹೊಂದಿದ್ದರೂ ಸಹ ಪ್ರತಿಯೊಂದು ಕಂಬದಲ್ಲಿಯೂ ಅತ್ಯಂತ ಸೂಕ್ಷ್ಮವಾದ ಕೆತ್ತನೆಗಳನ್ನು ಮಾಡಲಾಗಿದೆ. ಕಾಕತೀಯ ವಾಸ್ತುಶಿಲ್ಪಕ್ಕೆ ಈ ದೇವಾಲಯವು ಒಂದು ಶ್ರೇಷ್ಠ ಉದಾಹರಣೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ದೇಗುಲದ ಸುತ್ತ ಹಚ್ಚ ಹಸಿರಾದ ಪ್ರಕೃತಿಯಿದ್ದು ದೇವಾಲಯದ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ದೇಗುಲದ ಪ್ರತಿಯೊಂದು ದ್ವಾರವು ಅತ್ಯಂತ ಆಕರ್ಷಕವಾಗಿದೆ. ಮೇಲ್ಛಾವಣಿಗಳಲ್ಲಿ ಶಾಸನಗಳನ್ನು ಕಾಣಬಹುದಾಗಿದೆ. ದೇವಾಲಯದ ಪ್ರತಿಯೊಂದು ಕಂಬಕ್ಕೂ ಕಪ್ಪು ಕಲ್ಲುಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ.

.ಇನ್ನು ಈ ಸಂಪೂರ್ಣ ದೇವಾಲಯ ಹಾಗೂ ಕಲ್ಯಾಣ ಮಂಟಪವನ್ನು ಸ್ಯಾಂಡ್​ಬಾಕ್ಸ್​ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿದೆ. ಬೃಹತ್​ ಬಂಡೆಗಳ ಮೇಲೆ ಕಂಬಗಳನ್ನು ನಿರ್ಮಿಸಲಾಗಿದೆ. ಕಂಬಗಳ ಮೇಲೆ ಸೂಕ್ಷ್ಮ ಕೆತ್ತನೆಗಳನ್ನು ಮಾಡಲಾಗಿದೆ. ದೇಗುಲದಲ್ಲಿರುವ ನಂದಿ ಶಿಲ್ಪವು ಕೂಡ ಆಕರ್ಷಣೀಯವಾಗಿದೆ. ದೇವಾಲಯದಲ್ಲಿ ಕಲ್ಲಿನ ಆನೆಗಳು ಸೇರಿದಂತೆ ವಿವಿಧ ಬೆರಗುಗೊಳಿಸುವ ಕೆತ್ತನೆಗಳಿವೆ .

ಕಕ್ಷಾಸನ ಎಂದು ಕರೆಯಲ್ಪಡುವ ಮುಖಮಂಟಪಗಳಿವೆ. ದೇವರಿಗೆ ಸುತ್ತು ಹಾಕಲು ಭಕ್ತರಿಗೆ ವಿಶಾಲವಾದ ಜಾಗವನ್ನು ನೀಡಲಾಗಿದೆ. ಮುಖಮಂಟಪಗಳು ನೆಲ ಮಟ್ಟದಿಂದ 9.5 ಮೀಟರ್​ ಎತ್ತರವನ್ನು ಹೊಂದಿವೆ. ಅಡಿಪಾಯವು ಮರಳಿನಲ್ಲಿ ಆರು ಮೀಟರ್​ ಆಳದಲ್ಲಿದೆ. ಈ ದೇಗುಲದಲ್ಲಿ 2560 ಶಿಲ್ಪಗಳಿವೆ. 132 ಕಂಬಗಳನ್ನು ಹೊಂದಿದ್ದ ಕಲ್ಯಾಣ ಮಂಟಪವು ದುರ್ಬಲಗೊಂಡಿದ್ದ ಹಿನ್ನೆಲೆಯಲ್ಲಿ ಅದನ್ನು ತೆಗೆದು ಹಾಕಲಾಗಿದೆ.

ಎಲ್ಲಿ ಉಳಿದುಕೊಳ್ಳಬಹುದು..?

ನಿಮಗೆ ಉಳಿದುಕೊಳ್ಳಲು ಐಷಾರಾಮಿ ವ್ಯವಸ್ಥೆ ಬೇಕು ಎಂದಾದಲ್ಲಿ ತಾಜ್​ ಗೇಟ್​ ವೇ ಹೋಟೆಲ್​​ನಲ್ಲಿ ಉಳಿದುಕೊಳ್ಳಬಹುದು. ಇಲ್ಲಿ ನಿಮಗೆ ಅತ್ಯುತ್ತಮ ಸೌಕರ್ಯಗಳು ಸಿಗಲಿವೆ. ಮಧ್ಯಮ ಶ್ರೇಣಿಯ ವಾಸ್ತವ್ಯಕ್ಕಾಗಿ ನೀವು ಸುಪ್ರಭಾ ಹೋಟೆಲ್​ ಅಥವಾ ಹೋಟೆಲ್​ ಅಶೋಕವನ್ನು ಆಯ್ಕೆ ಮಾಡಿಕೊಳ್ಳಬಹುದು . ಇದನ್ನು ಹೊರತುಪಡಿಸಿಯೂ ಹನುಮಕೊಂಡದಲ್ಲಿ ಉಳಿದುಕೊಳ್ಳಲು ನಿಮಗೆ ಅನೇಕ ಆಯ್ಕೆಗಳು ಸಿಗಲಿವೆ. ಬಜೆಟ್​ ಸ್ನೇಹಿ ಪ್ರವಾಸಿಗರು ಹೋಟೆಲ್​ ಶ್ರೇಯಾ ಅಥವಾ ಹೋಟೆಲ್​ ವೈಸ್ರಾಯ್​ಗೆ ತೆರಳಬಹುದು.

ಹತ್ತಿರದಲ್ಲಿ ಇನ್ನೂ ಯಾವ್ಯಾವ ಸ್ಥಳಗಳಿವೆ..?

ವಾರಂಗಲ್​ ಕೋಟೆ : ಈ ಐತಿಹಾಸಿಕ ಕೋಟೆಗೆ ನೀವು ಒಮ್ಮೆಯಾದರೂ ಭೇಟಿ ನೀಡಲೇಬೇಕು. ಪ್ರಭಾವಿ ವಾಸ್ತುಶಿಲ್ಪ ಹಾಗೂ ಇಲ್ಲಿನ ಐತಿಹಾಸಿಕ ಶ್ರೀಮಂತಿಕೆಯು ಕಣ್ತುಂಬಿಕೊಳ್ಳುವಂತಿದೆ.

ಭದ್ರಕಾಳಿ ದೇಗುಲ : ಧಾರ್ಮಿಕವಾಗಿ ಹಾಗೂ ವಾಸ್ತುಶಿಲ್ಪದ ಕಾರಣದಿಂದಾಗಿ ಈ ದೇಗುಲ ಕೂಡ ಬಹಳ ಸುದ್ದಿಯಲ್ಲಿದೆ.

ಕಾಕತೀಯ ಮ್ಯೂಸಿಕಲ್ ಗಾರ್ಡನ್: ವಾರಂಗಲ್‌ನಲ್ಲಿರುವ ಈ ಉದ್ಯಾನದಲ್ಲಿ ಸಂಗೀತ ಕಾರಂಜಿ ಪ್ರದರ್ಶನಗಳು ಮನಮೋಹಕವಾಗಿರುತ್ತದೆ .

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ