AAP in Gujarat: ಚೊಚ್ಚಲ ಸ್ಪರ್ಧೆಯಲ್ಲೇ ಆಪ್ ಯಶಸ್ವಿ; ಕೇಜ್ರಿವಾಲ್ ಪಕ್ಷವೀಗ 'ರಾಷ್ಟ್ರೀಯ ಪಕ್ಷ'
Dec 20, 2022 10:46 AM IST
ರೋಡ್ ಶೋನಲ್ಲಿ ಅರವಿಂದ್ ಕೇಜ್ರಿವಾಲ್
- “ನಮ್ಮದು ರಾಷ್ಟ್ರೀಯ ಪಕ್ಷವಾಗಿದ್ದಕ್ಕೆ, ಆಮ್ ಆದ್ಮಿ ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ಮತ್ತು ಎಲ್ಲಾ ದೇಶವಾಸಿಗಳಿಗೆ ಅಭಿನಂದನೆಗಳು” ಎಂದು ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಆ ಮೂಲಕ ತಮ್ಮದು ಪ್ರಬಲ ಪಕ್ಷಗಳಿಗೆ ಕಠಿಣ ಸ್ಪರ್ಧೆಯೊಡ್ಡುವ ರಾಷ್ಟ್ರ ಪಕ್ಷ ಎಂದು ಸಮರ್ಥಿಸಿಕೊಂಡಿದ್ದಾರೆ.
ಭರ್ಜರಿ ಬಹುಮತ ಪಡೆದಿರುವ ಬಿಜೆಪಿಯು, ಗುಜರಾತ್‌ನಲ್ಲಿ ದಾಖಲೆಯ ಏಳನೇ ಅವಧಿಗೆ ಅಧಿಕಾರ ಉಳಿಸಿಕೊಂಡಿದೆ. ಕಳೆದ ಬಾರಿಯ ಚುನಾವಣೆಗಿಂತಲೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿ, ರಾಜ್ಯದಲ್ಲಿ ಅಜೇಯ ಪಕ್ಷವಾಗಿ ಮುನ್ನಡೆಯುತ್ತಿದೆ. ಅತ್ತ ಕಾಂಗ್ರೆಸ್ ಪಕ್ಷದ ಸ್ಥಾನಗಳಲ್ಲಿ ಕುಸಿತ ಕಂಡರೆ, ಎಎಪಿಯು ಚೊಚ್ಚಲ ಸಾಧನೆ ಮಾಡಿದೆ.
ಇದೇ ಮೊದಲ ಬಾರಿಗೆ ಗುಜರಾತ್ ಚುನಾವಣಾ ಅಖಾಡಕ್ಕೆ ಧುಮುಕಿದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ (ಎಎಪಿ)ಯು ಸದ್ಯ ನಾಲ್ಕು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಮತ್ತೊಂದು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಈ ಕ್ಷೇತ್ರವನ್ನು ಗೆಲ್ಲುವ ಸಾಧ್ಯತೆ ಹೆಚ್ಚಿದೆ. ವಿಶೇಷವೆಂದರೆ, ಗೆಲುವು ನಾಲ್ಕು ಕ್ಷೇತ್ರದಲ್ಲಿ ಮಾತ್ರವಿದ್ದರೂ, ಕೇಜ್ರಿವಾಲ್ ಪಕ್ಷ ಪಡೆದ ಮತದ ಪಾಲು ಶೇಕಡಾ 13ರ ಸನಿಹವಿದೆ. ಚೊಚ್ಚಲ ಸ್ಪರ್ಧೆಯಲ್ಲೇ ಪಕ್ಷದ ಈ ಸಾಧನೆ ನಿಜಕ್ಕೂ ಹೆಚ್ಚು. ಅಲ್ಲದೆ, ಮೊದಲ ಸ್ಪರ್ಧೆಯಲ್ಲಿ ಕಠಿಣ ಸ್ಪರ್ಧೆ ನೀಡಿದ ಆಪ್, ಮುಂದಿನ ಚುನಾವಣೆಗಳಲ್ಲಿ ಪ್ರಬಲ ರಾಷ್ಟ್ರೀಯ ಪಕ್ಷಗಳಿಗೆ ಸವಾಲಾಗಲಿದೆ ಎನ್ನುವುದಂತೂ ಖಚಿತ.
“ನಮ್ಮದು ರಾಷ್ಟ್ರೀಯ ಪಕ್ಷವಾಗಿದ್ದಕ್ಕೆ, ಆಮ್ ಆದ್ಮಿ ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ಮತ್ತು ಎಲ್ಲಾ ದೇಶವಾಸಿಗಳಿಗೆ ಅಭಿನಂದನೆಗಳು” ಎಂದು ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಆ ಮೂಲಕ ತಮ್ಮದು ಪ್ರಬಲ ಪಕ್ಷಗಳಿಗೆ ಕಠಿಣ ಸ್ಪರ್ಧೆಯೊಡ್ಡುವ ರಾಷ್ಟ್ರ ಪಕ್ಷ ಎಂದು ಸಮರ್ಥಿಸಿಕೊಂಡಿದ್ದಾರೆ.
2017ರ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿಗೆ ಕಾಂಗ್ರೆಸ್ ಪ್ರಬಲ ಪೈಪೋಟಿ ನೀಡಿತ್ತು. ಇದೇ ಪೈಪೋಟಿ ನೀಡುವ ಉದ್ದೇಶದೊಂದಿಗೆ ಈ ಬಾರಿಯೂ ಕಣಕ್ಕಿಳಿದಿತ್ತು. ಆದರೆ, ಈ ಬಾರಿ ಇಲ್ಲಿ ಎಎಪಿ ಕೂಡಾ ಪೈಪೋಟಿ ನಡೆಸಿದ್ದು, ಮತ ವಿಭಜನೆಯಾಗಿದೆ. ಆ ಮೂಲಕ ಕೇಜ್ರಿವಾಲ್ 2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿಗೆ ಪ್ರಮುಖ ಸವಾಲಾಗಲಿದ್ದಾರೆ. ಈಗಾಗಲೇ ದೆಹಲಿ ಬಳಿಕ, ಪಂಜಾಬ್‌ನಲ್ಲೂ ಎಎಪಿ ಅಧಿಕಾರ ವಹಿಸಿಕೊಂಡಿದೆ. ಗುಜರಾತ್‌ನಲ್ಲೂ ಕಾಲಿಟ್ಟಿದೆ. ಮುಂದೆ ಮತ್ತಷ್ಟು ರಾಜ್ಯಗಳನ್ನು ವ್ಯಾಪಿಸಿ ಮತ್ತಷ್ಟು ರಾಜ್ಯಗಳಲ್ಲಿ ಗೆಲುವು ಸಾಧಿಸಲು ಪಕ್ಷವು ಹೋರಾಟ ನಡೆಸಲಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ಗುಜರಾತ್‌ನಲ್ಲಿ ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳು. ಆದರೆ, ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಅದಕ್ಕೆ ಅನುಗುಣವಾಗಿ ಎಎಪಿ ಭರ್ಜರಿ ಪ್ರಚಾರವನ್ನೂ ನಡೆಸಿತ್ತು. ಇದೇ ವೇಳೆಗೆ ದೆಹಲಿ ಮಹಾನಾಗರ ಪಾಲಿಕೆ ಚುನಾವಣೆಯ ಫಲಿತಾಂಶದಲ್ಲೂ ಆಪ್ ಗೆಲುವಿನ ನಗೆ ಬೀರಿದ್ದು, ತನ್ನ ಕಲ್ಯಾಣ ನೀತಿಯನ್ನು ಗುಜರಾತ್‌ನಲ್ಲಿ ಜನರು ಒಪ್ಪಿಕೊಳ್ಳುತ್ತಾರೆ ಎಂದು ಭಾವಿಸಿತ್ತು. ಆದರೆ, ಸಂಪೂರ್ಣ ಯಶಸ್ವಿಯಾಗದಿದ್ದರೂ ಭಾಗಶಃ ಯಶಸ್ವಿ ಗಳಿಸಿದೆ.
ಅಮಿತ್ ಶಾ ಮಾತನ್ನು ಸುಳ್ಳಾಗಿಸಿದ ಆಪ್
ಗುಜರಾತ್ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೂ ಮುಂಚಿತವಾಗಿ ಫಲಿತಾಂಶದ ಬಗ್ಗೆ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಗುಜರಾತ್‌ನಲ್ಲಿ ಆಮ್ ಆದ್ಮಿ ಪಕ್ಷ ಖಾತೆ ತೆರೆಯುವುದಿಲ್ಲ ಎಂದು ಹೇಳಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಇನ್ನೂ ಪ್ರಮುಖ ಪ್ರತಿಪಕ್ಷವಾಗಿದೆ. ನಮ್ಮ ಪೈಪೋಟಿ ಏನಿದ್ದರೂ ಕಾಂಗ್ರೆಸ್ ವಿರುದ್ಧ. ಗುಜರಾತ್ ಜನರ ಮನಸ್ಸಿನಲ್ಲಿ ಆಮ್ ಆದ್ಮಿ ಪಕ್ಷ ಇಲ್ಲ. ಆಮ್ ಆದ್ಮಿ ಪಕ್ಷ ರಾಜ್ಯದಲ್ಲಿ ಖಾತೆಯನ್ನೇ ತೆರೆಯಲ್ಲ. ಚುನಾವಣೆ ಫಲಿತಾಂಶಗಳಿಗಾಗಿ ನಿರೀಕ್ಷಿಸಿ, ಬಹುಶಃ ಗೆಲ್ಲುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಎಎಪಿಯ ಹೆಸರು ಇರುವುದಿಲ್ಲ ಎಂದು ಶಾ ಹೇಳಿದ್ದರು. ಆದರೆ ಈ ಮಾತನ್ನು ಕೇಜ್ರವಾಲ್ ಪಕ್ಷ ಸುಳ್ಳಾಗಿಸಿದೆ.
2017ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು 99 ಕ್ಷೇತ್ರಗಳಲ್ಲಿ ಜಯಭೆರಿ ಬಾರಿಸಿತ್ತು. ಕಾಂಗ್ರೆಸ್ 78 ಕ್ಷೇತ್ರಗಳಲ್ಲಿ ಜಯಿಸಿತ್ತು. ಆ ಬಾರಿ ಆಮ್ ಆದ್ಮಿ ಪಕ್ಷ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಇದೇ ಮೊದಲ ಬಾರಿಗೆ ಗುಜರಾತ್‌ನಲ್ಲಿ ಸ್ಪರ್ಧಿಸಿದ ಆಪ್, 4 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ತನ್ನದು ರಾಷ್ಟ್ರೀಯ ಪಕ್ಷ ಎಂಬುದನ್ನು ಸಾಬೀತುಪಡಿಸಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ದೇಶದ ಪ್ರಬಲ ಪಕ್ಷಗಳಿಗೆ ಕಠಿಣ ಪೈಪೋಟಿ ನೀಡುವ ಸೂಚನೆ ರವಾನಿಸಿದೆ.