Angkor wat Temple: ಭಾರತದಿಂದ ಕಾಂಬೋಡಿಯಾದಲ್ಲಿರುವ ಜಗತ್ತಿನ ಬೃಹತ್ ಹಿಂದೂ ದೇಗುಲದ ಜೀರ್ಣೋದ್ಧಾರ - ಜೈಶಂಕರ್ ಮಾಹಿತಿ
Dec 15, 2022 06:17 AM IST
Angkor wat Temple: India restoring largest religious monument on the planet
- ಕಾಂಬೋಡಿಯಾದಲ್ಲಿರುವ ಅಂಕೋರ್ ವಾಟ್ ಹಿಂದೂ ದೇಗುಲವಾಗಿದ್ದು ಸುಮಾರು 402 ಎಕರೆಗಳಲ್ಲಿ ಹರಡಿಕೊಂಡಿದೆ. ಇದನ್ನು ಚಕ್ರವರ್ತಿ 2ನೇ ಸೂರ್ಯವರ್ಮನ್‌ನ ಆಳ್ವಿಕೆಯಲ್ಲಿ ನಿರ್ಮಿಸಲಾಗಿದೆ ಎನ್ನಲಾಗಿದೆ.
ವಾರಣಾಸಿ: ಭಾರತವು ಕಾಂಬೋಡಿಯಾದಲ್ಲಿರುವ ಜಗತ್ತಿನ ಬೃಹತ್ ಹಿಂದೂ ದೇಗುಲವೆಂಬ ಖ್ಯಾತಿಯ ಅಂಕೋರ್ ವಾಟ್ ದೇವಾಲಯವನ್ನು ಪುನರ್‌ನಿರ್ಮಾಣ ಮಾಡುತ್ತಿದೆ. ಈ ಕುರಿತು ಇತ್ತೀಚೆಗೆ ವಿದೇಶಾಂಗ ಸಚಿವರ ಎಸ್. ಜೈಶಂಕರ್ ಮಾಹಿತಿ ನೀಡಿದ್ದಾರೆ. "ನಮ್ಮ ನಾಗರಿಕತೆಯು ಭಾರತಕ್ಕೆ ಸೀಮಿತವಾಗಿಲ್ಲ. ಅದು ಹಲವು ದೇಶಗಳಲ್ಲಿ ಹರಡಿದೆ. ಇದೇ ಕಾರಣಕ್ಕೆ ಭಾರತವು ಕಾಂಬೋಡಿಯಾದ ಅಂಕೋರ್ ವಾಟ್ ದೇಗುಲವನ್ನು ಪುನರ್‌ಸ್ಥಾಪಿಸುತ್ತಿದೆʼʼ ಎಂದು ಅವರು ಹೇಳಿದ್ದಾರೆ.
ವಾರಣಾಸಿಯಲ್ಲಿ ಇತ್ತೀಚೆಗೆ ನಡೆದ ಕಾಶಿ ತಮಿಳು ಸಂಗಮ ಕಾರ್ಯಕ್ರಮದಲ್ಲಿ ನಡೆದ "ಸಮಾಜಕ್ಕೆ ದೇಗುಲಗಳ ಕೊಡುಗೆ ಮತ್ತು ರಾಷ್ಟ್ರ ನಿರ್ಮಾಣʼʼ ವಿಷಯದ ಕುರಿತು ಮಾತನಾಡುವಾಗ ಈ ಮಾಹಿತಿ ನೀಡಿದ್ದಾರೆ. "ಭಾರತದಲ್ಲಿ ಮಾತ್ರವಲ್ಲ, ಭಾರತ ಉಪಖಂಡದಲ್ಲಿ ಮಾತ್ರವಲ್ಲ, ಆಚೆಗಿನ ಹಲವು ದೇಶಗಳಲ್ಲಿಯೂ ಹಿಂದೂ ದೇಗುಲಗಳಿವೆʼʼ ಎಂದು ಅವರು ಹೇಳಿದ್ದಾರೆ.
"ನಾನು ಉಪರಾಷ್ಟ್ರಪತಿಯವರ ಜತೆ ಜಗತ್ತಿನ ಬೃಹತ್ ದೇವಾಲಯವಾದ ಅಂಗೋರ್ ವಾಟ್‌ಗೆ ಹೋಗಿದ್ದೆ. ಈಗ ನಾವು ಅಂಕೋರ್ ವಾಟ್ ದೇವಾಲಯದ ಸಂಕೀರ್ಣವನ್ನು ಜೀರ್ಣೋದ್ಧಾರ ಮಾಡುತ್ತಿದ್ದೇವೆ ಮತ್ತು ನವೀಕರಣ ಕಾರ್ಯಗಳನ್ನು ಮಾಡುತ್ತೇವೆ. ಭಾರತದ ನಾಗರಿಕತೆಯು ಭಾರತದಾಚೆಗೆ ಹೋಗಿದ್ದು, ಅದಕ್ಕೆ ನಮ್ಮ ಕೊಡುಗೆಗಳನ್ನು ನೀಡುತ್ತೇವೆʼʼ ಎಂದು ಅವರು ಹೇಳಿದ್ದಾರೆ.
"ಭಾರತೀಯ ನಾಗರಿಕತೆಯನ್ನು ಪುನರ್‌ನಿರ್ಮಾಣ ಮಾಡುವ ಸಂದರ್ಭದಲ್ಲಿ ನಮ್ಮ ಕಾರ್ಯವು ಭಾರತದಲ್ಲಿ ಮಾತ್ರವಲ್ಲ, ಜಗತ್ತಿನಾದ್ಯಂತ ಇದೆ ಎನ್ನುವುದನ್ನು ಗಮನಿಸಬೇಕು. ಭಾರತೀಯರು ಜಗತ್ತಿನ ವಿವಿಧೆಡೆ ಹೋದಾಗ ತಮ್ಮ ನಂಬಿಕೆ, ಪರಂಪರೆಗಳನ್ನೂ ತೆಗೆದುಕೊಂಡು ಹೋಗಿರುತ್ತಾರೆʼʼ ಎಂದು ಅವರು ಹೇಳಿದ್ದಾರೆ.
"ನಾನು ಚೀನಾದಲ್ಲಿ ರಾಯಭಾರಿಯಾಗಿದ್ದೆ. ಚೀನಾದ ಪೂರ್ವ ಕರಾವಳಿಯಲ್ಲಿ ಹಿಂದೂ ದೇವಾಲಯಗಳ ಅವಶೇಷಗಳನ್ನು ನೋಡಿದ್ದೇನೆ. ಅಯೋಧ್ಯೆ ಮತ್ತು ಕೊರಿಯಾ ನಡುವೆ ವಿಶೇಷವಾದ ಸಂಬಂಧವಿದೆ. ಇವೆಲ್ಲವೂ ಈ ಹಿಂದೆ ನಮ್ಮ ಪೂರ್ವಿಕರು ಹೊರದೇಶಗಳಲ್ಲಿ ನಿರ್ಮಿಸಿದ ದೇವಾಲಯಗಳಾಗಿವೆ. ಆದರೆ, ನಾವು ಯುಎಇಯದಲ್ಲಿ ಹಿಂದೂ ದೇವಾಲಯ ನಿರ್ಮಿಸುತ್ತಿದ್ದೇವೆ. ಬಹ್ರೇನ್‌ನಲ್ಲಿ ಹಿಂದೂ ದೇವಾಲಯ ನಿರ್ಮಿಸಲು ಅನುಮತಿ ಪಡೆದಿದ್ದೇವೆ. ಅಮೆರಿಕದಲ್ಲಿ ಸಾವಿರಾರು ದೇಗುಲಗಳಿವೆ. ನಾವು ನಮ್ಮ ಮೌಲ್ಯಗಳು, ನಮ್ಮ ತತ್ತ್ವಶಾಸ್ತ್ರ, ನಮ್ಮ ಜೀವನ ವಿಧಾನವನ್ನು ಹೊರಜಗತ್ತಿನೊಂದಿಗೆ ಹಂಚಿಕೊಳ್ಳುತ್ತಿದ್ದೇವೆʼʼ ಎಂದು ಅವರು ಹೇಳಿದ್ದಾರೆ.
"ನೇಪಾಳದಲ್ಲಿ ರಾಮಾಯಣ ಸರ್ಕ್ಯೂಟ್ ನಿರ್ಮಿಸಲು 200 ಕೋಟಿ ರೂ. ನೀಡುವ ವಾಗ್ದಾನವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ. ಶ್ರೀಲಂಕಾದಲ್ಲಿರುವ ತಿರುಕೇತೀಶ್ವರಂ ದೇವಾಲಯವನ್ನು ಪುನರ್‌ಸ್ಥಾಪಿಸುತ್ತಿದ್ದೇವೆ. ಈ ದೇಗುಲ ಹನ್ನೆರಡು ವರ್ಷಗಳಿಂದ ಮುಚ್ಚಲಾಗಿತ್ತು. 2002ರಲ್ಲಿ ಈ ದೇಗುಲ ತೆರೆಯಲಾಗಿತ್ತು. 2015ರ ಭೂಕಂಪದ ಸಮಯದಲ್ಲಿ ನೇಪಾಳದ ಹಲವು ದೇಗುಲ ಹಾನಿಗೊಂಡಿವೆ. ಅವುಗಳ ಮರುಸ್ಥಾಪನೆಗೂ 50 ದಶಲಕ್ಷ ಡಾಲರ್ ನೀಡಲು ಬದ್ಧರಾಗಿದ್ದೇವೆʼʼ ಎಂದು ಅವರು ಹೇಳಿದ್ದಾರೆ.
ಕಾಂಬೋಡಿಯಾದಲ್ಲಿರುವ ಅಂಕೋರ್ ವಾಟ್ ಹಿಂದೂ ದೇಗುಲವಾಗಿದ್ದು ಸುಮಾರು 402 ಎಕರೆಗಳಲ್ಲಿ ಹರಡಿಕೊಂಡಿದೆ. ಇದನ್ನು ಚಕ್ರವರ್ತಿ 2ನೇ ಸೂರ್ಯವರ್ಮನ್‌ನ ಆಳ್ವಿಕೆಯಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ.