logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಕೇಂದ್ರ ಬಜೆಟ್‌ 2024; ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಲಿರುವ ಮಧ್ಯಂತರ ಬಜೆಟ್‌ನಲ್ಲಿ ನಿರೀಕ್ಷಿಸಬಹುದಾದ 10 ಅಂಶಗಳು

ಕೇಂದ್ರ ಬಜೆಟ್‌ 2024; ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಲಿರುವ ಮಧ್ಯಂತರ ಬಜೆಟ್‌ನಲ್ಲಿ ನಿರೀಕ್ಷಿಸಬಹುದಾದ 10 ಅಂಶಗಳು

Umesh Kumar S HT Kannada

Feb 01, 2024 09:24 AM IST

ಕೇಂದ್ರ ಬಜೆಟ್‌ 2024; ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಲಿರುವ ಮಧ್ಯಂತರ ಬಜೆಟ್‌ನಲ್ಲಿ 10 ಅಂಶಗಳನ್ನು ನಿರೀಕ್ಷಿಸಬಹುದು.

  • Union Budget 2024: ನಾರಿಶಕ್ತಿಗೆ ವಿಶೇಷ ಯೋಜನೆ, ಜನಸಾಮಾನ್ಯರ ಉಳಿತಾಯಕ್ಕೆ ಕೊಡುಗೆ, ಸೇರಿ ಪ್ರಮುಖ 10 ಅಂಶಗಳನ್ನು ಇಂದು (ಫೆ.1) ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಮಧ್ಯಂತರ ಬಜೆಟ್‌ನಲ್ಲಿ ನಿರೀಕ್ಷಿಸಬಹುದು. ಲೋಕಸಭೆ ಚುನಾವಣೆಗೆ ಮೊದಲು ಮಂಡನೆಯಾಗುವ ಬಜೆಟ್‌ ಇದಾಗಿದ್ದು, ಭಾರತದ ಅಭಿವೃದ್ಧಿಗೆ ಭವಿಷ್ಯದ ನೀತಿ ನಿರೂಪಣೆಯ ಅಂಶವೂ ಇರಲಿದೆ. 

ಕೇಂದ್ರ ಬಜೆಟ್‌ 2024; ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಲಿರುವ ಮಧ್ಯಂತರ ಬಜೆಟ್‌ನಲ್ಲಿ 10 ಅಂಶಗಳನ್ನು ನಿರೀಕ್ಷಿಸಬಹುದು.
ಕೇಂದ್ರ ಬಜೆಟ್‌ 2024; ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಲಿರುವ ಮಧ್ಯಂತರ ಬಜೆಟ್‌ನಲ್ಲಿ 10 ಅಂಶಗಳನ್ನು ನಿರೀಕ್ಷಿಸಬಹುದು. (HT)

ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಸಭೆಯಲ್ಲಿ ಇಂದು (ಫೆ.1) ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಐದು ಪೂರ್ಣ ಬಜೆಟ್ ಮತ್ತು ಈ ದಿನ ಮಂಡಿಸಲಿರುವ ಮಧ್ಯಂತರ ಬಜೆಟ್‌ ಸೇರಿ ಅವರು ಮಂಡಿಸುತ್ತಿರುವ 6ನೇ ಕೇಂದ್ರ ಬಜೆಟ್ ಇದು.

ಟ್ರೆಂಡಿಂಗ್​ ಸುದ್ದಿ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

ಈ ಮಧ್ಯಂತರ ಬಜೆಟ್‌ ಭಾರತದ ಅರ್ಥ ವ್ಯವಸ್ಥೆಯ ರಚನಾತ್ಮಕ ಸಮಸ್ಯೆಯನ್ನು ನಿಭಾಯಿಸುವ ನಿಟ್ಟಿನಲ್ಲಿ ಮಹತ್ವ ಪಡೆಯುತ್ತದೆ. ಅದೇ ರೀತಿ, ಕೇಂದ್ರ ಸರ್ಕಾರವು ಮೂಲಸೌಕರ್ಯದಲ್ಲಿ ಹೂಡಿಕೆ ಮಾಡುವ ಮೂಲಕ ಮಧ್ಯಮ ಅವಧಿಯ ನಿರಂತರ ಬೆಳವಣಿಗೆಗೆ ಹೇಗೆ ವೇದಿಕೆಯನ್ನು ಸಿದ್ಧಪಡಿಸಿದೆ ಎಂಬ ಚಿತ್ರಣವನ್ನು ನೀಡುವ ಸಾಧ್ಯತೆ ಇದೆ.

ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ (ಜ.31) ಬಜೆಟ್ ಅಧಿವೇಶನ ಶುರುವಾಗುವ ಮುನ್ನ ಸುದ್ದಿಗಾರರ ಜತೆಗೆ ಮಾತನಾಡುತ್ತ, ಗುರುವಾರ (ಫೆ.1) ಸೀತಾರಾಮನ್ ಅವರು ಮಂಡಿಸಲಿರುವ ಕೇಂದ್ರ ಬಜೆಟ್ ಒಂದು ಮಾರ್ಗದರ್ಶನ ಮತ್ತು ನಿರ್ದೇಶನವನ್ನು ನೀಡುತ್ತದೆ. ಚುನಾವಣೆಯ ನಂತರ ಪೂರ್ಣ ಬಜೆಟ್ ಮಂಡಿಸಲಾಗುವುದು ಎಂದು ಹೇಳಿದ್ದರು. ಅಷ್ಟೇ ಅಲ್ಲ, ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಮುಂದಿಟ್ಟು ನಾರಿಶಕ್ತಿಯನ್ನು ಕೊಂಡಾಡಿದ್ದರು. ಇದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಾಷಣದಲ್ಲೂ ಪ್ರತಿಧ್ವನಿಸಿದೆ. ಈ ಮೂಲಕ ಈ ಮಧ್ಯಂತರ ಬಜೆಟ್ ಹೇಗಿರಲಿದೆ ಎಂಬ ಸುಳಿವು ನೀಡಿದ್ದಾರೆ.

ಕೇಂದ್ರ ಬಜೆಟ್ ತಯಾರಿಕೆ ಪ್ರಕ್ರಿಯೆಯಲ್ಲಿ ತೊಡಗಿದ ಇಬ್ಬರು ನೀಡಿರುವ ಮಾಹಿತಿ ಪ್ರಕಾರ, ಬಿಜೆಪಿ ನೇತೃತ್ವದ ನ್ಯಾ‍ಷನಲ್ ಡೆಮಾಕ್ರಟಿಕ್ ಅಲಯನ್ಸ್ ಮತ್ತೊಮ್ಮೆ ಅಧಿಕಾರ ಚುಕ್ಕಾಣಿ ಹಿಡಿಯಲು ಬಯಸಿದೆ. ಹೀಗಾಗಿ ಈ ಸಲದ ಬಜೆಟ್‌ನಲ್ಲಿ ಸರ್ಕಾರದ ನೀತಿ ನಿರೂಪಣೆಯ ಆದ್ಯತಾ ಪಟ್ಟಿಯನ್ನು ಅದು ಸೇರಿಸಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡದ ಸೋದರ ತಾಣ ದ ಲೈವ್ ಮಿಂಟ್ ವರದಿ ಮಾಡಿದೆ.

ಈ ದಿನ (ಫೆ.1) ಮಂಡನೆಯಾಗಲಿರುವ ಕೇಂದ್ರ ಬಜೆಟ್‌ನಲ್ಲಿ ಕೌಶಲ, ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಹೂಡಿಕೆ ಇರಲಿದೆ. ಅದೇ ರೀತಿ, ಮಹಿಳೆಯರಿಗೆ ಹೆಚ್ಚಿನ ಉದ್ಯೋಗಾವಕಾಶ, ಹಿಂದುಳಿದ ಜಿಲ್ಲೆಗಳನ್ನು ಮುಖ್ಯವಾಹಿನಿಗೆ ತರುವುದು ಸೇರಿ ಹಲವು ವಿಚಾರಗಳು ಆದ್ಯತಾ ವಲಯದಲ್ಲಿದೆ.

ಇಂದು ಮಂಡನೆಯಾಗಲಿರುವ ಕೇಂದ್ರ ಮಧ್ಯಂತರ ಬಜೆಟ್‌ನಲ್ಲಿ ನಿರೀಕ್ಷಿಸಬಹುದಾದ 10 ಅಂಶಗಳು

1) ಈಡೇರಿದ ಭರವಸೆ ಮತ್ತು ಭವಿಷ್ಯದ ನೀತಿ ನಿಯಮ

ಬಜೆಟ್ ಅಧಿವೇಶನದ ಶುರುವಿನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೇಂದ್ರ ಸರ್ಕಾರದ ಈವರೆಗಿನ ಸಾಧನೆಗಳನ್ನು ಉಲ್ಲೇಖಿಸಿದ್ದರು. ಭವಿಷ್ಯದ ಗುರಿಗಳ ಸುಳಿವನ್ನೂ ನೀಡಿದ್ದರು. ನೀತಿ ಆಯೋಗದ ಪ್ರಕಾರ, ಕಳೆದ 10 ವರ್ಷಗಳ ಅವಧಿಯಲ್ಲಿ 25 ಕೋಟಿ ಜನ ಬಹುಆಯಾಮದ ಬಡತನದಿಂದ ಹೊರಬಂದಿದ್ದಾರೆ. 2019 ರಿಂದೀಚೆಗೆ ರೈತರ ಖಾತೆಗೆ 3 ಲಕ್ಷ ಕೋಟಿ ರೂಪಾಯಿ ವರ್ಗಾವಣೆ ಆಗಿದೆ. ಬಡವರಿಗಾಗಿ 4 ಕೋಟಿ ಮನೆಗಳ ನಿರ್ಮಾಣವಾಗಿದೆ, ಆಯುಷ್ಮಾನ್ ಭಾರತದ ಮೂಲಕ 6 ಕೋಟಿ ಜನರಿಗೆ ಆರೋಗ್ಯ ವಿಮಾ ರಕ್ಷಣೆ ಸಿಕ್ಕಿದೆ. ಈ ರೀತಿ ಸಾಧನೆಗಳ ಪಟ್ಟಿ ಮತ್ತು ಭವಿಷ್ಯದ ನೀತಿ, ಗುರಿಗಳ ವಿವರ ಇರಲಿದೆ.

2) ಮಹಿಳೆಯರಿಗಾಗಿ ನಿರ್ದಿಷ್ಟ ಯೋಜನೆಗಳು

ಮಹಿಳಾ-ನಿರ್ದಿಷ್ಟ ಯೋಜನೆಗಳು ಮತ್ತು ಅಸ್ತಿತ್ವದಲ್ಲಿರುವ ಯೋಜನೆಗಳ ವಿಸ್ತರಣೆ ಕೂಡ ಈ ಮಧ್ಯಂತರ ಬಜೆಟ್ ಪ್ರಸ್ತಾಪಗಳ ಭಾಗವಾಗಿರಲಿದೆ. ನವೆಂಬರ್‌ನಲ್ಲಿ, ಮಹಿಳಾ ಸ್ವಸಹಾಯ ಗುಂಪುಗಳಿಗೆ ಜೀವನೋಪಾಯಕ್ಕಾಗಿ ಡ್ರೋನ್‌ಗಳನ್ನು ನೀಡುವ ಯೋಜನೆಗೆ ಸರ್ಕಾರ ಅನುಮತಿ ನೀಡಿತ್ತು. ಈ ಸಲದ ಪ್ರಜಾಪ್ರಭುತ್ವದಿನದ ಸಂಭ್ರಮದಲ್ಲೂ ನಾರಿಶಕ್ತಿಯನ್ನೆ ಬಂಬಿಸಲಾಗಿದೆ. ನಿನ್ನೆ(ಜ.31) ಬಜೆಟ್ ಅಧಿವೇಶನದ ಮೊದಲ ದಿನವೂ ನಾರಿಶಕ್ತಿಯನ್ನೇ ಹೈಲೈಟ್ ಮಾಡಲಾಗಿದೆ. ಹೀಗಾಗಿ ದೇಶದ ಕಾರ್ಮಿಕ ಬಲಕ್ಕೆ ಹೆಚ್ಚಿನ ಮಹಿಳೆಯರನ್ನು ಸೇರಿಸುವ ಸರ್ಕಾರದ ಕ್ರಮ ಬಜೆಟ್‌ನಲ್ಲಿ ಪ್ರತಿಫಲನ ಕಾಣಬಹುದು. ಖಾಸಗಿ ಕಂಪನಿಗಳಿಗೂ ಸಿಬ್ಬಂದಿ ಪೈಕಿ ಮಹಿಳೆಯ ಪಾಲನ್ನು ಹೆಚ್ಚಿಸಲು ಸೂಚಿಸಬಹುದು.

3) ಹಣಕಾಸಿನ ಬಲವರ್ಧನೆಯ ಮಾರ್ಗಸೂಚಿ

ಮಧ್ಯಂತರ ಬಜೆಟ್‌ನಲ್ಲಿ ಹಣಕಾಸಿನ ಬಲವರ್ಧನೆಯ ಮಾರ್ಗಸೂಚಿಯು ಕೇಂದ್ರಬಿಂದುವಾಗಿರಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2022ರ ಬಜೆಟ್ ಭಾಷಣದಲ್ಲಿ ಕೇಂದ್ರ ಸರ್ಕಾರವು ಹಣಕಾಸು ವರ್ಷ 26ರ ವೇಳೆಗೆ ಒಟ್ಟು ಜಿಡಿಪಿಯ ಶೇಕಡ 4.5ರೊಳಗೆ ವಿತ್ತೀಯ ಕೊರತೆ ಇರಲಿದೆ ಎಂದು ಹೇಳಿದ್ದರು. ಕೋವಿಡ್ ಕಾರಣಕ್ಕೆ 2021ರ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆ ಶೇಕಡ 9.2ಕ್ಕೆ ಏರಿತ್ತು. ಇದೆಲ್ಲ ಇಂದಿನ ಬಜೆಟ್‌ನಲ್ಲಿ ಉಲ್ಲೇಖವಾಗಲಿದೆ.

4) ಕೊರತೆ ಸಮತೋಲದ ಕ್ರಮ

ಕೇಂದ್ರ ಸರ್ಕಾರ ಮಂಡಿಸುವ ಮಧ್ಯಂತರ ಬಜೆಟ್‌ನಲ್ಲಿ ಕೊರತೆ ನೀಗಿಸುವ, ಸಮತೋಲನಗೊಳಿಸುವ ಕ್ರಮ ಕಾಣಲಿದೆ. ಮೂಲ ಸೌಕರ್ಯಗಳಿಗೆ ವಿಶೇಷವಾಗಿ ರಸ್ತೆಗಳು ಮತ್ತು ಹೆದ್ದಾರಿಗಳನ್ನು ನಿರ್ಮಿಸಲು ಮತ್ತು ದೇಶದಲ್ಲಿ ರೈಲ್ವೇ ಜಾಲವನ್ನು ವೇಗವನ್ನು ಸೇರಿಸಲು ಮತ್ತು ವಿಸ್ತರಿಸಲು ಹೆಚ್ಚಿನ ಅನುದಾನ ಒದಗಿಸುವ ಕ್ರಮ ಮುಂದುವರಿಸುವ ನಿರೀಕ್ಷೆ ಇದೆ.

5) ಭಾರತದ ಆರ್ಥಿಕ ಸಾಧನೆ ಮತ್ತು ಅರ್ಥ ವ್ಯವಸ್ಥೆಯ ಆರೋಗ್ಯ

ಕೇಂದ್ರ ಬಜೆಟ್ ಭಾರತದ ಆರ್ಥಿಕ ಕಾರ್ಯಕ್ಷಮತೆ ಮತ್ತು ಹಣಕಾಸಿನ ಆರೋಗ್ಯವನ್ನು ಎತ್ತಿ ತೋರಿಸಲಿದೆ. ಆರೋಗ್ಯ, ಶಿಕ್ಷಣ ಮತ್ತು ಜೀವನಮಟ್ಟದ ಆಧಾರದ ಮೇಲೆ ಅಳೆಯಲಾದ ಆದಾಯದ ಅಸಮಾನತೆ ಮತ್ತು 'ಬಹು ಆಯಾಮದ ಬಡತನ'ವನ್ನು ಕಡಿಮೆ ಮಾಡಲು ಉದ್ದೇಶಿತ ಸಾಮಾಜಿಕ ವರ್ಗಾವಣೆಗಳು ಹೇಗೆ ಸಹಾಯ ಮಾಡಿದೆ ಎಂಬುದನ್ನು ವಿವರಿಸಲಿದೆ.

6) ರೈತರ ಯೋಜನೆಗಳಿಗೆ ಮೀಸಲಾದ ಅನುದಾನ ಹೆಚ್ಚಳ

ಈ ಹಣಕಾಸು ವರ್ಷದಲ್ಲಿ ಅನಿಯತ ಮಾನ್ಸೂನ್‌ ಕಾರಣ ಕೃಷಿ ವಲಯವು ಪ್ರಭಾವಿತವಾಗಿರುವುದು ವಾಸ್ತವ. ಸಾಂಖ್ಯಿಕ ಸಚಿವಾಲಯದ ಅಂಕಿ ಅಂಶಗಳೂ ಇದನ್ನೇ ಸೂಚಿಸುತ್ತಿದ್ದು, 2024ರ ಹಣಕಾಸು ವರ್ಷದಲ್ಲಿ ಶೇಕಡ 1.8 ಉತ್ಪಾದನೆಯ ಬೆಳವಣಿಗೆಯನ್ನು ಮುನ್ನಂದಾಜಿಸಿದೆ. 2023ರ ಹಣಕಾಸು ವರ್ಷದಲ್ಲಿ ಶೇಕಡ 4 ಬೆಳವಣಿಗೆ ಕಡಿಮೆಯಾಗಿದೆ. ಆದ್ದರಿಂದ ಬಜೆಟ್‌ನಲ್ಲಿ ರೈತರಿಗಾಗಿ ಮೀಸಲಾದ ಯೋಜನೆಗಳಿಗೆ ಅನುದಾನ ಹಂಚಿಕೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ.

7) ಎಂಎಸ್‌ಎಂಇಗಳಿಗೆ ಹೆಚ್ಚಿನ ಬಲ ತುಂಬಲಿದೆ ಬಜೆಟ್

ಕಿರು, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಮೇಲಿನ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಈ ಸಲದ ಮಧ್ಯಂತರ ಬಜೆಟ್ ಗಮನಹರಿಸಲಿದೆ. ಅವುಗಳ ಬೆಳವಣಿಗೆಗೆ ಪೂರಕವಾದ ಉಪಕ್ರಮಗಳನ್ನು, ಅನುದಾನ ಹೆಚ್ಚಳವನ್ನು ಘೋ‍ಷಿಸಲಿದೆ.

8) ಜನಸಾಮಾನ್ಯರ ಉಳಿತಾಯಕ್ಕೆ ಬೆಂಬಲ

ಭಾರತದ ಅರ್ಥವ್ಯವಸ್ಥೆಗೆ ಬಲ ತುಂಬಲು ವ್ಯಾಪಾರೋದ್ಯಮಗಳಿಗೆ ಉತ್ತೇಜನ ನೀಡುವ ಅದೇ ರೀತಿ, ಜನಸಾಮಾನ್ಯರ ಉಳಿತಾಯದ ಕಡೆಗೂ ಕೇಂದ್ರ ಸರ್ಕಾರ ಗಮನಹರಿಸಲಿದೆ. ಇದಕ್ಕೆ ಬೇಕಾದ ಉಪಕ್ರಮಗಳನ್ನು ಈ ಮಧ್ಯಂತರ ಬಜೆಟ್‌ನಲ್ಲಿ ಘೋಷಿಸಬಹುದು.

9) ಸಾಮಾಜಿಕ, ಸಾಂಸ್ಕೃತಿಕ, ವ್ಯೂಹಾತ್ಮಕ ಬಲಗಳು ಸಮವಾಗಿ ಮುಖ್ಯ

ವಿಕಸಿತ ಭಾರತದ ದೃಷ್ಟಿ ಕೇವಲ ಆರ್ಥಿಕ ಸಮೃದ್ಧಿಗೆ ಸೀಮತವಲ್ಲ. ಸಾಮಾಜಿಕ, ಸಾಂಸ್ಕೃತಿಕ ಮತ್ತು ಕಾರ್ಯತಂತ್ರದ ಶಕ್ತಿಗಳಿಗೆ ಸಮಾನ ಪ್ರಾಮುಖ್ಯತೆಯನ್ನು ನೀಡುತ್ತಿದ್ದೇವೆ ಎಂಬುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಿನ್ನೆ (ಜ.31) ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡುವಾಗ ಹೇಳಿದ್ದರು. ಈ ಅಂಶವೂ ಬಜೆಟ್‌ನ ಭಾಗವಾಗಿರಲಿದೆ.

10) 2047ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶ ಭಾರತ

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 100 ವರ್ಷ ತುಂಬುವ ಹೊತ್ತಿಗೆ ಅಂದರೆ 2047ರ ಹೊತ್ತಿಗೆ ಅಭಿವೃದ್ಧಿ ಹೊಂದಿದ ದೇಶವಾಗಿರಬೇಕು ಎಂಬ ಗುರಿಯೊಂದಿಗೆ ಕೇಂದ್ರ ಸರ್ಕಾರ ಮುನ್ನಡೆಯುತ್ತಿದೆ. ಇದಕ್ಕೆ ಪೂರಕವಾದ ವಿಚಾರಗಳು ಬಜೆಟ್‌ ಭಾಷಣದಲ್ಲಿ ಇರಲಿದೆ. ನಿನ್ನೆ (ಜ.31) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದಲ್ಲೂ ಇದು ವ್ಯಕ್ತವಾಗಿದೆ.

ಪೂರ್ಣ ಓದಿಗೆ - Top things to expect from today's interim budget

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ