logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gst On Gangajal: ಗಂಗಾಜಲಕ್ಕೆ ಶೇಕಡ 18 ಜಿಎಸ್‌ಟಿ, ಕಾಂಗ್ರೆಸ್ ಆರೋಪ ಏನು, ಕೇಂದ್ರದ ವಿವರಣೆ, 5 ಅಂಶಗಳಲ್ಲಿ ವಿದ್ಯಮಾನದ ವಿವರ

GST on Gangajal: ಗಂಗಾಜಲಕ್ಕೆ ಶೇಕಡ 18 ಜಿಎಸ್‌ಟಿ, ಕಾಂಗ್ರೆಸ್ ಆರೋಪ ಏನು, ಕೇಂದ್ರದ ವಿವರಣೆ, 5 ಅಂಶಗಳಲ್ಲಿ ವಿದ್ಯಮಾನದ ವಿವರ

Umesh Kumar S HT Kannada

Oct 12, 2023 07:40 PM IST

ಗಂಗಾಜಲಕ್ಕೆ ಶೇಕಡ 18 ಜಿಎಸ್‌ಟಿ ವಿವಾದ (ಸಾಂಕೇತಿಕ ಚಿತ್ರ)

  • ಪವಿತ್ರ ಗಂಗಾಜಲಕ್ಕೆ ಶೇಕಡ 18 ಜಿಎಸ್‌ಟಿಯನ್ನು ಕೇಂದ್ರ ಸರ್ಕಾರ ವಸೂಲಿ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ಇಂದು (ಅ.12) ಕೇಂದ್ರ ಸರ್ಕಾರದ ಮೇಲೆ ತೀವ್ರ ಟೀಕಾ ಪ್ರಹಾರ ನಡೆಸಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಪ್ರತಿ ಟೀಕೆ ಮಾಡಿದೆ. ಈ ನಡುವೆ, ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ ಸ್ಪಷ್ಟೀಕರಣ ನೀಡಿದೆ.

ಗಂಗಾಜಲಕ್ಕೆ ಶೇಕಡ 18 ಜಿಎಸ್‌ಟಿ ವಿವಾದ (ಸಾಂಕೇತಿಕ ಚಿತ್ರ)
ಗಂಗಾಜಲಕ್ಕೆ ಶೇಕಡ 18 ಜಿಎಸ್‌ಟಿ ವಿವಾದ (ಸಾಂಕೇತಿಕ ಚಿತ್ರ)

ನವದೆಹಲಿ: ಗಂಗಾಜಲಕ್ಕೆ ಶೇಕಡ 18 ಜಿಎಸ್‌ಟಿ (18% GST on Gangajal ) ವಿಧಿಸಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಇದಕ್ಕೆ ಬಿಜೆಪಿ ನಾಯಕರು ಪ್ರತಿಕ್ರಿಯಿಸಿದ್ದಾರೆ. ಅದೇ ರೀತಿ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ ಕೂಡ ಸ್ಪಷ್ಟೀಕರಣ ನೀಡಿದೆ.

ಟ್ರೆಂಡಿಂಗ್​ ಸುದ್ದಿ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

ಗಂಗಾಜಲದ ಮೇಲೆ (ಪವಿತ್ರ ಗಂಗಾ ನದಿಯ ನೀರು) ಜಿಎಸ್‌ಟಿ ವಿಧಿಸಲಾಗಿದೆ ಎಂಬ ವದಂತಿಗಳಿಗೆ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಗುರುವಾರ ಸ್ಪಷ್ಟನೆ ನೀಡಿದ್ದು, ಗಂಗಾಜಲವು ‘ಪೂಜಾ ಸಾಮಗ್ರಿ’ (ಪ್ರಾರ್ಥನಾ ವಸ್ತು) ಆಗಿರುವುದರಿಂದ ಅದು ಜಿಎಸ್‌ಟಿ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗುರುವಾರ (ಅ.12) ಟ್ವೀಟ್‌ ಮಾಡಿ ಗಂಗಾಜಲಕ್ಕೆ ಶೇಕಡ 18 ಜಿಎಸ್‌ಟಿ ವಿಧಿಸುತ್ತಿರುವ ವಿಚಾರದ ಕಡೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಗಮನಸೆಳೆಯಲು ಪ್ರಯತ್ನಿಸಿದ್ದರು. ಇದಕ್ಕೆ ಅವರು ಗಂಗಾ ನದಿಯ ಮೇಲೆ ಶೇಕಡ 18 ಸಂಖ್ಯೆ ಬರೆದು, ಮೋದಿ ಸರ್ಕಾರ ಗಂಗಾ ಜಲಕ್ಕೆ ಇಷ್ಟು ಜಿಎಸ್‌ಟಿ ವಿಧಿಸಿದೆ ಎಂಬ ಗ್ರಾಫಿಕ್ ಚಿತ್ರವನ್ನೂ ಬಳಸಿದ್ದರು.

1. ಗಂಗಾಜಲಕ್ಕೆ ಶೇಕಡ 18 ಜಿಎಸ್‌ಟಿ- ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ

ಮೋದಿ ಜೀ, ಒಬ್ಬ ಸಾಮಾನ್ಯ ಭಾರತೀಯನ ಹುಟ್ಟಿನಿಂದ ತನ್ನ ಜೀವನದ ಕೊನೆಯವರೆಗೂ, ಮೋಕ್ಷದಾಯಿ ಗಂಗಾ ಮಾತೆಗೆ ಹೆಚ್ಚಿನ ಮಹತ್ವವಿದೆ. ನೀವು ಇಂದು ಉತ್ತರಾಖಂಡದಲ್ಲಿ ಇರುವುದನ್ನು ಪ್ರಶಂಸಿಸೋಣ. ಆದರೆ ನಿಮ್ಮ ಸರ್ಕಾರವು ಪವಿತ್ರ ಗಂಗಾ ಜಲದ ಮೇಲೆಯೇ 18 ಪ್ರತಿಶತ ಜಿಎಸ್‌ಟಿ ವಿಧಿಸಿದೆ. ಗಂಗಾಜಲವನ್ನು ತಮ್ಮ ಮನೆಗಳಿಗೆ ಪೂರೈಸುವವರಿಗೆ ಏನು ಹೊರೆಯಾಗುತ್ತದೆ ಎಂದು ಒಮ್ಮೆಯೂ ಯೋಚಿಸಲಿಲ್ಲ. ಇದು ನಿಮ್ಮ ಸರ್ಕಾರದ ಲೂಟಿ ಮತ್ತು ಬೂಟಾಟಿಕೆಯ ಪರಮಾವಧಿ ಎಂದು ಮಲ್ಲಿಕಾರ್ಜುನ ಖರ್ಗೆ ಟ್ವೀಟ್‌ನಲ್ಲಿ ಟೀಕಿಸಿದ್ದಾರೆ.

2. ಗಂಗಾಜಲಕ್ಕೆ ಜಿಎಸ್‌ಟಿ ವಿವಾದ: ಹಿಂದೂಗಳನ್ನು ವಂಚಿಸಬೇಡಿ, ತೀವ್ರಗೊಂಡ ಕಾಂಗ್ರೆಸ್ ಟೀಕಾ ಪ್ರಹಾರ

ಗಂಗಾಜಲ ಪೂಜಾ ಸಾಮಗ್ರಿ ಆದ ಕಾರಣ ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿದೆ ಎಂದು ಸ್ಪಷ್ಟಪಡಿಲಾಗುತ್ತಿದೆಯಾದರೂ, ವಾಸ್ತವ ಆ ರೀತಿ ಇಲ್ಲ ಎಂದು ಕಾಂಗ್ರೆಸ್ಸಿಗರು ಟೀಕಾ ಪ್ರಹಾರ ತೀವ್ರಗೊಳಿಸಿದ್ದಾರೆ.

ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯ ವೆಬ್‌ಸೈಟ್‌ನಲ್ಲಿ ಜಿಎಸ್‌ಟಿ ತೆರಿಗೆ ವಿನಾಯಿತಿ ಪಟ್ಟಿಯ ಪೂಜಾ ಸಾಮಗ್ರಿಗಳ ಪೈಕಿ ಗಂಗಾಜಲದ ಉಲ್ಲೇಖ ಇಲ್ಲ ಎಂಬುದನ್ನು ತೋರಿಸುವ ಸ್ಕ್ರೀನ್ ಶಾಟ್‌ ಅನ್ನು ಕೂಡ ಲಗತ್ತಿಸಿ ಟೀಕಾ ಪ್ರಹಾರ ಮಾಡಿದ್ದಾರೆ.

3. ಗಂಗಾಜಲಕ್ಕೆ ಜಿಎಸ್‌ಟಿ ವಿವಾದ, ಅದು ‘ಪೂಜಾ ಸಾಮಗ್ರಿ’ ಆದ್ದರಿಂದ ಜಿಎಸ್‌ಟಿ ವ್ಯಾಪ್ತಿಯಲ್ಲಿಲ್ಲ

ಸರಕು ಮತ್ತು ಸೇವಾ ತೆರಿಗೆಯನ್ನು ಪರಿಚಯಿಸಿದ ಅಂದಿನಿಂದ (2017ರ ಜುಲೈ 1) ಪೂಜಾ ಸಾಮಗ್ರಿಗಳಿಗೆ, ಪ್ರಾರ್ಥನೆಯ ವಸ್ತುಗಳಿಗೆ ಎಂದಿಗೂ ಜಿಎಸ್‌ಟಿ ಅನ್ವಯಿಸಲಾಗಿಲ್ಲ ಎಂದು ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಹೇಳಿದೆ.

“ದೇಶದಾದ್ಯಂತ ಬಹುತೇಕ ಪ್ರತಿ ಮನೆಯವರು ಪೂಜೆಗೆ ಗಂಗಾಜಲವನ್ನು ಬಳಸುತ್ತಾರೆ. ಪೂಜಾ ಸಾಮಾಗ್ರಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆ. ಜಿಎಸ್‌ಟಿ ಕೌನ್ಸಿಲ್‌ನ ಸಭೆ 2017ರ ಮೇ 18/19 ಮತ್ತು ಜೂನ್ 3ರಂದು ನಡೆದಾಗ ಆ ಸಭೆಗಳಲ್ಲಿ ಪೂಜಾ ಸಾಮಾಗ್ರಿ ಮೇಲೆ ಜಿಎಸ್‌ಟಿ ವಿಧಿಸುವ ವಿಚಾರ ವಿಸ್ತಾರವಾಗಿ ಚರ್ಚಿಸಲಾಗಿತ್ತು. ಆ ಚರ್ಚೆಯ ಬಳಿಕ ಅವುಗಳನ್ನು ವಿನಾಯಿತಿ ಪಟ್ಟಿಯಲ್ಲಿ ಇರಿಸಲು ನಿರ್ಧರಿಸಲಾಯಿತು. ಆದ್ದರಿಂದ, ಜಿಎಸ್‌ಟಿ ಜಾರಿಯಾದ ಅಂದಿನಿಂದಲೂ ಈ ಎಲ್ಲ ವಸ್ತುಗಳಿಗೆ ವಿನಾಯಿತಿ ನೀಡಲಾಗಿದೆ" ಎಂದು ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಎಕ್ಸ್‌ನಲ್ಲಿ ವಿವರಿಸಿದೆ.

4. ಸರ್ಕಾರಿ ವೆಬ್‌ಸೈಟ್‌ಗಳಲ್ಲೂ ಗಂಗಾಜಲಕ್ಕೆ ಶೇಕಡ 18 ತೆರಿಗೆ, ಸ್ಕ್ರೀನ್ ಶಾಟ್ ಶೇರ್ ಮಾಡಿದ ಕಾಂಗ್ರೆಸ್ಸಿಗರು

ಗಂಗಾಜಲಕ್ಕೆ ಶೇಕಡ 18 ತೆರಿಗೆ ವಿಚಾರವನ್ನೆ ಇಂದು ಕೇಂದ್ರ ಸರ್ಕಾರದ ವಿರುದ್ಧ ದಾಳಿಗೆ ಬಳಸಿಕೊಂಡ ಕಾಂಗ್ರೆಸ್‌ ನಾಯಕರು, ಕೇಂದ್ರ ಸರ್ಕಾರದ ವೆಬ್‌ಸೈಟ್‌ಗಳಲ್ಲೂ ಗಂಗಾಜಲಕ್ಕೆ ಶೇಕಡ 18 ತೆರಿಗೆ ವಿಧಿಸುತ್ತಿರುವುದನ್ನು ದೃಢೀಕರಿಸುವುದಕ್ಕೆಂದು ಅಂಚೆ ಇಲಾಖೆಯ ಸ್ಕ್ರೀನ್ ಶಾಟ್ ಶೇರ್ ಮಾಡಿದರು.

ಆದರೆ, ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ ಇದಕ್ಕೆ ಪ್ರತಿಕ್ರಿಯಿಸಿದ್ದು, ಅಂಚೆ ಇಲಾಖೆ ವಿಧಿಸಿರುವ ಶೇಕಡ 18 ತೆರಿಗೆ ಪೋಸ್ಟಲ್ ಸೇವೆ/ ಕೊರಿಯರ್ ಸೇವೆಗೆ ವಿಧಿಸಿರುವಂಥದ್ದು. ಅದು ಗಂಗಾಜಲಕ್ಕೆ ಶೇಕಡ 18 ಜಿಎಸ್‌ಟಿ ಅಲ್ಲ ಎಂದು ಸ್ಪಷ್ಟಪಡಿಸಿದೆ.

5. ಗಂಗಾಜಲಕ್ಕೆ ಜಿಎಸ್‌ಟಿ ವಿವಾದ: ನೀರಿಗೆ ಜಿಎಸ್‌ಟಿ ಇಲ್ಲ ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ಇದೆ ಎಂದ ಅಮಿತ್ ಮಾಳವೀಯ

ಜಿಎಸ್‌ಟಿ ಅಧಿಸೂಚನೆ 2017/2ರ 99ನೇ ಅಂಶದ ಪ್ರಕಾರ ನೀರಿಗೆ ಜಿಎಸ್‌ಟಿ ಇಲ್ಲ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. 2022ರ ಜೂನ್ 28-29ರಂದು ನಡೆದ 47ನೇ ಸಭೆಯಲ್ಲಿ ಕೂಡ ಇದನ್ನು ಇನ್ನಷ್ಟು ಸ್ಪಷ್ಟವಾಗಿ ವಿವರಿಸಲಾಗಿದೆ ಎಂದು ಬಿಜೆಪಿ ನಾಯಕ ಅಮಿತ್ ಮಾಳವೀಯ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಟೀಕೆಗೆ ಪ್ರತ್ಯುತ್ತರ ನೀಡಿದೆ.

2017 ರಲ್ಲಿ ಜಿಎಸ್‌ಟಿ ಪ್ರಾರಂಭವಾದಾಗಿನಿಂದ "ಪೂಜಾ ಸಮಗ್ರಿ" ಜಿಎಸ್‌ಟಿ-ಮುಕ್ತವಾಗಿದೆ. ಇತ್ತೀಚಿನ ಯಾವುದೇ ಅಧಿಸೂಚನೆಗಳು ಪ್ಯಾಕ್ ಮಾಡಿದ ನೀರಿನ ಬಾಟಲಿಗಳು ಅಥವಾ ಗಂಗಾಜಲ್ ಮೇಲಿನ ಜಿಎಸ್‌ಟಿ ದರದಲ್ಲಿ ಬದಲಾವಣೆಗಳನ್ನು ಸೂಚಿಸಿಲ್ಲ ಎಂದು ಮಾಳವೀಯ ಹೇಳಿದ್ದಾರೆ.

ಕಾಂಗ್ರೆಸ್‌ ಪಕ್ಷದ ನಾಯಕರು ಈ ಸತ್ಯಗಳನ್ನು ಮರೆಮಾಚಿ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಇದು ಉದ್ದೇಶ ಪೂರ್ವಕವಾದ ಅಪಪ್ರಚಾರ. ಚುನಾವಣಾ ಸಮಯದ ಹಿಂದು ಓಲೈಕೆಯ ಪಕ್ಷ, ಇಂಡಿಯಾ ಮೈತ್ರಿಕೂಟದ ಡಿಎಂಕೆ ನಾಯಕರು ಸನಾತನ ಧರ್ಮವನ್ನು ಅವಹೇಳನ ಮಾಡಿದಾಗ ಅದನ್ನು ಖಂಡಿಸುವ ಬದಲು ಸಮರ್ಥಿಸಿಕೊಂಡರು ಎಂದು ಮಾಳವೀಯ ಟೀಕಿಸಿದರು.

‘ಎಚ್‌ಟಿ ಕನ್ನಡ' ವಾಟ್ಸಾಪ್ ಚಾನೆಲ್‌

“ತಾಜಾ ಸುದ್ದಿ, ಜ್ಯೋತಿಷ್ಯ, ಮನರಂಜನೆ, ಕ್ರೀಡೆ ಸೇರಿದಂತೆ ನಿಮ್ಮಿಷ್ಟದ ವಿಷಯಗಳ ತ್ವರಿತ ಅಪ್‌ಡೇಟ್ ಪಡೆಯಲು 'ಎಚ್‌ಟಿ ಕನ್ನಡ' ವಾಟ್ಸಾಪ್ ಚಾನೆಲ್‌ 🚀 ಫಾಲೊ ಮಾಡಿ. ಮರೆಯದಿರಿ, ಇದು ಪಕ್ಕಾ ಲೋಕಲ್” ಕ್ಲಿಕ್ ಮಾಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ