logo
ಕನ್ನಡ ಸುದ್ದಿ  /  Nation And-world  /  Investor Rakesh Jhunjhunwala Dies At The Age Of 62 In Mumbai

Rakesh Jhunjhunwala: ʼಹೂಡಿಕೆ ಚತುರʼ ರಾಕೇಶ್ ಝುಂಝುನ್‌ವಾಲಾ ಇನ್ನಿಲ್ಲ!

Nikhil Kulkarni HT Kannada

Aug 14, 2022 10:12 AM IST

ರಾಕೇಶ್‌ ಝುಂಝುನ್‌ವಾಲಾ (ಸಂಗ್ರಹ ಚಿತ್ರ)

    • ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಹೂಡಿಕೆ ಚತುರ ಎಂದೇ ಕರೆಯಲ್ಪಡುತ್ತಿದ್ದ ದೇಶದ ಖ್ಯಾತ ಹೂಡಿಕೆದಾರ ಮತ್ತು ಉದ್ಯಮಿ ರಾಕೇಶ್ ಝುಂಝುನ್‌ವಾಲಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮುಮಬಯಿನ ಖಾಸಗಿ ಆಸ್ಪತ್ರೆಯಲ್ಲಿ 62 ವರ್ಷದ ರಾಕೇಶ್ ಝುಂಝುನ್‌ವಾಲಾ ಕೊನೆಯುಸಿರೆಳೆದಿದ್ದಾರೆ. ರಾಕೇಶ್ ಝುಂಝುನ್‌ವಾಲಾ ಅವರ ನಿಧನಕ್ಕೆ ಪ್ರಧಾನಿ ಮೋದಿ ತೀವ್ರ ಸಂತಾಪ ಸೂಚಿಸಿದ್ದಾರೆ.
ರಾಕೇಶ್‌ ಝುಂಝುನ್‌ವಾಲಾ (ಸಂಗ್ರಹ ಚಿತ್ರ)
ರಾಕೇಶ್‌ ಝುಂಝುನ್‌ವಾಲಾ (ಸಂಗ್ರಹ ಚಿತ್ರ) (REUTERS)

ನವದೆಹಲಿ: ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಹೂಡಿಕೆ ಚತುರ ಎಂದೇ ಕರೆಯಲ್ಪಡುತ್ತಿದ್ದ ದೇಶದ ಖ್ಯಾತ ಹೂಡಿಕೆದಾರ ಮತ್ತು ಉದ್ಯಮಿ ರಾಕೇಶ್ ಝುಂಝುನ್‌ವಾಲಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮುಮಬಯಿನ ಖಾಸಗಿ ಆಸ್ಪತ್ರೆಯಲ್ಲಿ 62 ವರ್ಷದ ರಾಕೇಶ್ ಝುಂಝುನ್‌ವಾಲಾ ಕೊನೆಯುಸಿರೆಳೆದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Tik Tok Star Murder: ಖ್ಯಾತ ಟಿಕ್‌ ಟಾಕ್‌ ಸ್ಟಾರ್‌ ಓಂ ಫಹಾದ್‌ ಭೀಕರ ಹತ್ಯೆ, ಕಾರಣವೇನು

Gold Rate: ಬಡವರಿಗೆ ಗಗನ ಕುಸುಮವಾಯ್ತು ಚಿನ್ನ; ಮತ್ತಷ್ಟು ಹೆಚ್ಚಾಯ್ತು ಬೆಳ್ಳಿ , ಬಂಗಾರದ ಬೆಲೆ

ಇವಿಎಂ ವಿವಿಪ್ಯಾಟ್ ಪ್ರಕರಣ; ಅಡ್ಡ ಪರಿಶೀಲನೆ ಮಾಡಿ ಎಂದವರ ವಿರುದ್ಧ ಸುಪ್ರೀಂ ಕೋರ್ಟ್ ಗರಂ, ಎಲ್ಲಾ ಅರ್ಜಿಗಳು ವಜಾ

ರಸ್ತೆ ಮೇಲೆ ಕಾಣಸಿಕ್ತು ತಲೆಕೆಳಗಾದ ಕಾರು, ಅಪಘಾತವಾಗಿಲ್ಲ, ಪಲ್ಟಿಯಾಗಿಲ್ಲ, ಕುತೂಹಲ ಕೆರಳಿಸಿದೆ ಈ ವೈರಲ್ ವಿಡಿಯೋ

ಇಂದು(ಆ.14-ಭಾನುವಾರ) ಬೆಳಗ್ಗೆ ಹೃದಯಾಘಾತಕ್ಕೊಳಗಾದ ರಾಕೇಶ್ ಝುಂಝುನ್‌ವಾಲಾ ಅವರನ್ನು ಮುಂಬಯಿನ ಪ್ರತಿಷ್ಠಿತ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಗೆ ಕರೆತರುವ ಮೊದಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ವೈದ್ಯರು ಖಚಿತಪಡಿಸಿದ್ದಾರೆ.

ರಾಕೇಶ್ ಝುಂಝುನ್‌ವಾಲಾ ಮಾಲೀಕತ್ವದ ಹೊಸ ವಿಮಾನಯಾನ ಸಂಸ್ಥೆ 'ಆಕಾಶ್ ಏರ್' ಕೆಲವು ದಿನಗಳ ಹಿಂದಷ್ಟೇ ತನ್ನ ವಾಣಿಜ್ಯ ಕಾರ್ಯಾಚರಣೆ ಆರಂಭಿಸಿತ್ತು. ಈ ಸಂಸ್ಥೆ ಹುಟ್ಟುಹಾಕುವಲ್ಲಿ ರಾಕೇಶ್ ಝುಂಝುನ್‌ವಾಲಾ ಅವರ ಶ್ರಮ ಅನುಕರಣೀಯವಾಗಿತ್ತು. ಆದರೆ ತಮ್ಮ ಕನಸಿನ ವಿಮಾನಯಾನ ಸಂಸ್ಥೆ ಕಾರ್ಯಾಚರಣೆ ಆರಂಭಿಸಿ ಒಂದು ವಾರದೊಳಗೆ ಅವರು ಇಹಲೋಕ ತ್ಯಜಿಸಿರುವುದು ನೋವಿನ ಸಂಗತಿ.

ಪ್ರಧಾನಿ ಸಂತಾಪ:

ಇನ್ನು ದೇಶದ ಖ್ಯಾತ ಉದ್ಯಮಿ ರಾಕೇಶ್ ಝುಂಝುನ್‌ವಾಲಾ ಅವರ ನಿಧನಕ್ಕೆ ಪ್ರಧಾನಿ ಮೋದಿ ತೀವ್ರ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ, ಓರ್ವ ಅದಮ್ಯ ಆತ್ಮವಿಶ್ವಾಸಿ, ಚತುರ ಹೂಡಿಕೆದಾರ ಮತ್ತು ಆರ್ಥಿಕ ಜಗತ್ತಿಗೆ ಅಳಿಸಲಾಗದ ಕೊಡುಗೆಯನ್ನು ನೀಡಿದ್ದ ರಾಕೇಶ್ ಝುಂಝುನ್‌ವಾಲಾ ಅವರ ನಿಧನ ನಿಜಕ್ಕೂ ಆಘಾತಕಾರಿ ಎಂದು ಕಂಬನಿ ಮಿಡಿದಿದ್ದಾರೆ.

ದಲಾಲ್‌ ಸ್ಟ್ರೀಟ್(ಷೇರು ಮಾರುಕಟ್ಟೆ)ನ ʼಬಿಗ್‌ ಬುಲ್‌ʼ ಎಂದೇ ಖ್ಯಾತನಾಮರಾಗಿದ್ದ ರಾಕೇಶ್ ಝುಂಝುನ್‌ವಾಲಾ, ಹೂಡಿಕೆ ಕ್ಷೇತ್ರದಲ್ಲಿ ಅಪಾರ ಜ್ಞಾನವನ್ನು ಹೊಂದಿದ್ದರು. ಫೋರ್ಬ್ಸ್‌ ಪಟ್ಟಿಯಲ್ಲಿ ಉಲ್ಲೇಖಿಸಿದಂತೆ, ರಾಕೇಶ್ ಝುಂಝುನ್‌ವಾಲಾ ಸುಮಾರು 5.5 ಬಿಲಿಯನ್‌ ಅಮೆರಿಕನ್‌ ಡಾಲರ್‌ ಆಸ್ತಿಯ ಒಡೆಯರಾಗಿದ್ದರು.

ರಾಕೇಶ್ ಝುಂಝುನ್‌ವಾಲಾ ಅವರನ್ನು ಭಾರತದ ವಾರೆನ್ ಬಫೆಟ್‌ ಎಂದೂ ಕರೆಯಲಾಗುತ್ತಿತ್ತು. ಷೇರು ಮಾರುಕಟ್ಟೆ ಬಗ್ಗೆ ಅವರು ಹೊಂದಿದ್ದ ಅಪಾರ ಜ್ಞಾನ ಅವರನ್ನು ದೇಶ-ವಿದೇಶಗಳಲ್ಲೂ ಖ್ಯಾತನಾಮರನ್ನಾಗಿಸಿತ್ತು.

ಜುಲೈ 5, 1960ರಂದು ಹೈದರಾಬಾದ್‌ನಲ್ಲಿ ಜನಿಸಿದ್ದ ರಾಕೇಶ್‌ ಝುಂಝುನ್‌ವಾಲಾ, ವಾಣಿಜ್ಯ ರಾಜಧಾನಿ ಮುಂಬಯಿನಲ್ಲಿ ಬೆಳೆದಿದ್ದರು. ʼRAREʼ ಎಂಟರ್‌ಪ್ರೈಸಸ್ʼ ಎಂಬ ಖಾಸಗಿ ಒಡೆತನದ ಷೇರು ವ್ಯಾಪಾರ ಸಂಸ್ಥೆಯನ್ನು ನಡೆಸುತ್ತಿದ್ದ ರಾಕೇಶ್‌ ಝುಂಝುನ್‌ವಾಲಾ, ಷೇರು ಮಾರುಕಟ್ಟೆಯ ಬಗ್ಗೆ ಆಳವಾದ ಜ್ಞಾನವನ್ನು ಸಂಪಾದಿಸಿದ್ದರು.

ರಾಕೇಶ್‌ ಝುಂಝುನ್‌ವಾಲಾ ಅವರು ಷೇರು ಮಾರುಕಟ್ಟೆ ಹೂಡಿಕೆದಾರರಾಗಿದ್ದ ರೇಖಾ ಝುಂಝುನ್‌ವಾಲಾ ಅವರನ್ನು ವಿವಾಹವಾಗಿದ್ದರು. ಸದ್ಯ ರಾಕೇಶ್‌ ಝುಂಝುನ್‌ವಾಲಾ ಅವರ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಉದ್ಯಮದ ಖ್ಯಾತ ಗಣ್ಯರು ಹಾಗೂ ಚಿತ್ರರಂಗದ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು