logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Tipu Sultan Controversy: ಟಿಪ್ಪು ಸುಲ್ತಾನ್‌ ಪೋಸ್ಟ್‌ ವಿವಾದ; ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಉದ್ವಿಗ್ನತೆ, ಪ್ರತಿಭಟನೆ, ಕಲ್ಲು ತೂರಾಟ

Tipu Sultan controversy: ಟಿಪ್ಪು ಸುಲ್ತಾನ್‌ ಪೋಸ್ಟ್‌ ವಿವಾದ; ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಉದ್ವಿಗ್ನತೆ, ಪ್ರತಿಭಟನೆ, ಕಲ್ಲು ತೂರಾಟ

HT Kannada Desk HT Kannada

Jun 07, 2023 05:36 PM IST

google News

ಕೊಲ್ಲಾಪುರ ಜಿಲ್ಲೆಯಲ್ಲಿ ಟಿಪ್ಪು ಸುಲ್ತಾನ್ ಅವರ ಚಿತ್ರವನ್ನು ಒಳಗೊಂಡ ಆಕ್ಷೇಪಾರ್ಹ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಹಿಂಸಾಚಾರವಾಗಿದ್ದು, ಭದ್ರತಾ ಸಿಬ್ಬಂದಿ ಜನರನ್ನು ಚದುರಿಸಿದರು.

  • Tipu Sultan controversy: ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಹಿಂಸಾಚಾರ ನಡೆದ ಕಾರಣ ಬುಧವಾರ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಟಿಪ್ಪು ಸುಲ್ತಾನ್‌ಗೆ ಸಂಬಂಧಿಸಿದ ಸೋಷಿಯಲ್‌ ಮೀಡಿಯಾ ಪೋಸ್ಟ್‌ ಇದಕ್ಕೆ ಕಾರಣ. ಬಲಪಂಥೀಯ ಸಂಘಟನೆಗಳು ಇದನ್ನು ವಿರೋಧಿಸಿ ಪ್ರತಿಭಟನೆ, ಕೊಲ್ಲಾಪುರ ಬಂದ್‌ಗೂ ಕರೆ ನೀಡಿವೆ. ಇದರ ವಿವರ ಇಲ್ಲಿದೆ.

ಕೊಲ್ಲಾಪುರ ಜಿಲ್ಲೆಯಲ್ಲಿ ಟಿಪ್ಪು ಸುಲ್ತಾನ್ ಅವರ ಚಿತ್ರವನ್ನು ಒಳಗೊಂಡ ಆಕ್ಷೇಪಾರ್ಹ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಹಿಂಸಾಚಾರವಾಗಿದ್ದು, ಭದ್ರತಾ ಸಿಬ್ಬಂದಿ  ಜನರನ್ನು ಚದುರಿಸಿದರು.
ಕೊಲ್ಲಾಪುರ ಜಿಲ್ಲೆಯಲ್ಲಿ ಟಿಪ್ಪು ಸುಲ್ತಾನ್ ಅವರ ಚಿತ್ರವನ್ನು ಒಳಗೊಂಡ ಆಕ್ಷೇಪಾರ್ಹ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಹಿಂಸಾಚಾರವಾಗಿದ್ದು, ಭದ್ರತಾ ಸಿಬ್ಬಂದಿ ಜನರನ್ನು ಚದುರಿಸಿದರು. (PTI)

ಮೈಸೂರು ಪ್ರಾಂತ್ಯದ 18ನೇ ಶತಮಾನದ ದೊರೆ ಟಿಪ್ಪು ಸುಲ್ತಾನ್‌ ಕುರಿತಾದ ಸೋಷಿಯಲ್‌ ಮೀಡಿಯಾ ಪೋಸ್ಟ್‌ ಕಾರಣ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿದೆ.

ಸೋಷಿಯಲ್‌ ಮೀಡಿಯಾಗಳಲ್ಲಿ ಟಿಪ್ಪು ಸುಲ್ತಾನ್‌ ಫೋಟೋ ಮತ್ತು ಅದರ ಜತೆಗೆ ಆಕ್ಷೇಪಾರ್ಹ ಆಡಿಯೋ ಸಂದೇಶವನ್ನು ಹಲವರು ತಮ್ಮ ಪ್ರೊಫೈಲ್‌ಗಳಲ್ಲಿ ಹಾಕಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ ಎಂದು ಪಿಟಿಯ ವರದಿ ಮಾಡಿದೆ.

ಟಿಪ್ಪು ಸುಲ್ತಾನ್ ಚಿತ್ರವನ್ನು ಆಕ್ಷೇಪಾರ್ಹ ‘ಆಡಿಯೋ’ ಸಂದೇಶದೊಂದಿಗೆ ತಮ್ಮ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳಲ್ಲಿ ಬಳಸಿರುವ ಸ್ಥಳೀಯರ ವಿರುದ್ಧ ಪ್ರತಿಭಟಿಸಿ ಕೆಲವು ಸಂಘಟನೆಗಳು ‘ಕೊಲ್ಹಾಪುರ ಬಂದ್’ಗೆ ಕರೆ ನೀಡಿದ್ದವು. ಹಿಂದೂಸ್ತಾನ್ ಟೈಮ್ಸ್‌ ಕನ್ನಡ (HT ಕನ್ನಡ) ಸಹೋದರ ವೆಬ್‌ಸೈಟ್ ಲೈವ್ ಹಿಂದೂಸ್ತಾನ್‌ನ ಮತ್ತೊಂದು ವರದಿಯ ಪ್ರಕಾರ ಸ್ಥಳೀಯರು ಮೊಘಲ್ ಚಕ್ರವರ್ತಿ ಔರಂಗಜೇಬ್ ಅನ್ನು ಬೆಂಬಲಿಸುವ ಪೋಸ್ಟ್‌ಗಳನ್ನು ಹಾಕಿರುವುದು ವಿವಾದದ ಕಿಡಿಗೆ ತುಪ್ಪ ಸುರಿದಂತಾಗಿದೆ.

ಹಿಂಸಾಚಾರ ಯಾಕೆ ಸಂಭವಿಸಿತು; ಪೊಲೀಸ್‌ ಹೇಳಿಕೆ ಇದು

ಇದನ್ನೆಲ್ಲ ಖಂಡಿಸಿ ಶಿವಾಜಿ ಚೌಕ್‌ಗೆ ಆಗಮಿಸಿದ ಕೆಲವು ಬಲಪಂಥೀಯ ಕಾರ್ಯಕರ್ತರು ತಮ್ಮ ಪ್ರತಿಭಟನೆ ಮಾಡಿದರು. ಪೊಲೀಸರ ಪ್ರಕಾರ, ಪ್ರತಿಭಟನೆ ಮುಗಿದ ನಂತರ ಗುಂಪು ಚದುರಿದಾಗ ಅವರ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಕೊಲ್ಲಾಪುರ ಪೊಲೀಸ್ ವರಿಷ್ಠಾಧಿಕಾರಿ ಮಹೇಂದ್ರ ಪಂಡಿತ್ ಪಿಟಿಐಗೆ ತಿಳಿಸಿದ್ದಾರೆ.

ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಿಸುವ ಸಲುವಾಗಿ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಈ ಘರ್ಷಣೆಗೆ ಸಂಬಂಧಿಸಿ ಈವರೆಗೆ 21 ಮಂದಿಯನ್ನು ಬಂಧಿಸಲಾಗಿದೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪಂಡಿತ್ ಎಎನ್‌ಐಗೆ ತಿಳಿಸಿದ್ದಾರೆ.

ಪಿಟಿಐ ಹಂಚಿಕೊಂಡ ವಿಡಿಯೋದಲ್ಲಿ, ಗುಂಪನ್ನು ಚದುರಿಸಲು ಪೊಲೀಸ್ ಸಿಬ್ಬಂದಿ ಬಲ ಪ್ರಯೋಗಿಸುತ್ತಿರುವುದು ಕಂಡುಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಟಿಪ್ಪು ಸುಲ್ತಾನ್ ಚಿತ್ರವನ್ನು ಬಳಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಮಹಾರಾಷ್ಟ್ರ ಉಸ್ತುವಾರಿ ಸಚಿವ ದೀಪಕ್ ಕೇಸರ್ಕರ್ ತಿಳಿಸಿದ್ದಾರೆ.

ಶಾಂತಿ ಕಾಪಾಡಲು ಮುಖ್ಯಮಂತ್ರಿ ಮನವಿ


ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು, ಕಾನೂನು ಕೈಗೆ ತೆಗೆದುಕೊಳ್ಳಬಾರದು. ಶಾಂತಿ ಕಾಪಾಡಬೇಕು ಎಂದು ಜನರಲ್ಲಿ ಮನವಿ ಮಾಡಿದ್ದಾರೆ. ಕಾನೂನನ್ನು ಕೈಗೆ ತೆಗೆದುಕೊಳ್ಳುವ ಯಾರನ್ನೂ ಬಿಡಲಾಗುವುದಿಲ್ಲ. ಸ್ಥಳೀಯ ಆಡಳಿತದೊಂದಿಗೆ ಸಂಪರ್ಕದಲ್ಲಿದ್ದೇನೆ. ಅಗತ್ಯ ನಿರ್ದೇಶನಗಳನ್ನು ನೀಡಲಾಗಿದೆ. ಸಾಮಾನ್ಯ ಜನರ ಕಲ್ಯಾಣವು ನಮ್ಮ ಮೊದಲ ಆದ್ಯತೆ ಎಂದು ಮುಖ್ಯಮಂತ್ರಿ ಶಿಂಧೆ ಹೇಳಿದರು.

ಹಿಂಸಾಚಾರದ ಕಾಕತಾಳೀಯವಲ್ಲ; ಪ್ರಕರಣ ಗಂಭೀರ ಎಂದ ಡಿಸಿಎಂ ಫಡ್ನವೀಸ್


ಕೆಲವು ರಾಜಕಾರಣಿಗಳು ಗಲಭೆಯಂತಹ ಪರಿಸ್ಥಿತಿಗೆ ಹೆದರುತ್ತಾರೆ ಮತ್ತು ನಿರ್ದಿಷ್ಟ ಸಮುದಾಯದ ಒಂದು ವರ್ಗದ ಜನರು ಮೊಘಲ್ ಚಕ್ರವರ್ತಿ ಔರಂಗಜೇಬ್ ಮತ್ತು ಟಿಪ್ಪು ಸುಲ್ತಾನ್ ಅವರನ್ನು ವೈಭವೀಕರಿಸುವುದು ಕೇವಲ ಕಾಕತಾಳೀಯವಾಗಿರಲು ಸಾಧ್ಯವಿಲ್ಲ ಎಂದು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.

ಗೃಹ ಖಾತೆಯನ್ನು ಹೊಂದಿರುವ ಫಡ್ನವಿಸ್, ಈ ವಾರದ ಆರಂಭದಲ್ಲಿ ಅಹ್ಮದ್‌ನಗರದಲ್ಲಿ ನಡೆದ ಮೆರವಣಿಗೆಯಲ್ಲಿ ಔರಂಗಜೇಬ್‌ನ ಫೋಟೋಗಳನ್ನು ಪ್ರದರ್ಶಿಸಿದ ಕೆಲವು ಯುವಕರ ವಿರುದ್ಧ ಪೊಲೀಸ್ ಕ್ರಮವನ್ನು ಉಲ್ಲೇಖಿಸಿದರು.

ನಿರ್ದಿಷ್ಟ ಸಮುದಾಯದ ಯುವಕರು ಔರಂಗಜೇಬನ ಚಿತ್ರಗಳನ್ನು ಪ್ರದರ್ಶಿಸಿದರು. ಅವರು ಔರಂಗಜೇಬ್ ಮತ್ತು ಟಿಪ್ಪು ಸುಲ್ತಾನ್ ಅನ್ನು ವೈಭವೀಕರಿಸಿದರು. ಇದು ಕೇವಲ ಕಾಕತಾಳೀಯವಾಗಿರಲು ಸಾಧ್ಯವಿಲ್ಲ. ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಲ್ಲಿ ಇದ್ದಕ್ಕಿದ್ದಂತೆ ಈ ಚಿತ್ರಗಳನ್ನು ಏಕೆ ಪ್ರದರ್ಶಿಸಲಾಗಿದೆ? ಸುಲಭವಾಗಿ ಅಥವಾ ಸ್ವಯಂಚಾಲಿತವಾಗಿ ಅದು ಸಂಭವಿಸುವುದಿಲ್ಲ. ಇದು ಕೇವಲ ಕಾಕತಾಳೀಯವಾಗಿರುವುದೂ ಸಾಧ್ಯವಿಲ್ಲ. ಹೀಗಾಗಿ ನಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಉಪಮುಖ್ಯಮಂತ್ರಿ ಹೇಳಿದರು.

ರಾಜ್ಯವನ್ನು ಆಳುವವರು ಕಾನೂನು ಮತ್ತು ಸುವ್ಯವಸ್ಥೆಯನ್ನು ಸ್ಥಾಪಿಸಲು ಜವಾಬ್ದಾರರು ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಫಡ್ನವೀಸ್ ಈ ಹೇಳಿಕೆ ನೀಡಿದರು.

(ಪಿಟಿಐ ಮತ್ತು ಎಎನ್‌ಐ ಮಾಹಿತಿ ಒಳಗೊಂಡ ವರದಿ)

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ